ಬೊಗಳೆ ರಗಳೆ

header ads

ಬಡತನ ರೇಖೆ ಎಂದಿಗೂ ದಾಟೆವು!

(ಬೊಗಳೂರು ಬಡಪಾಯಿ ಬ್ಯುರೋದಿಂದ)
ಬೊಗಳೂರು, ಫೆ.7- ಕರನಾಟಕದಲ್ಲಿ ಜನತೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸರಕಾರಿ ಯೋಜನೆಗಳಲ್ಲಿ ಭಾಗಿಯಾಗುತ್ತಿರುವ ಸ್ವಾಗತಾರ್ಹ ಬೆಳವಣಿಗೆಯೊಂದು ಪತ್ತೆಯಾಗಿದೆ.

ಕರ್ನಾಟಕದಲ್ಲಿರುವ ಒಟ್ಟು ಜನಸಂಖ್ಯೆಗಿಂತಲೂ ಬಡತನ ರೇಖೆಗಿಂತ ಕೆಳಗಿರುವ (BPL) ಪ್ರಜೆಗಳ ಸಂಖ್ಯೆಯೇ ಹೆಚ್ಚಾಗಿರುವುದು ಇದಕ್ಕೆ ಕಾರಣ. ಕರನಾಟಕದಲ್ಲಿ ವಾಸ್ತವವಾಗಿ ಒಟ್ಟು 1.10 ಕೋಟಿ ಕುಟುಂಬಗಳಿದ್ದು, ಇದರಲ್ಲಿ "ಕೇವಲ" 1.28 ಕೋಟಿ ಕುಟುಂಬಗಳು "ಮಾತ್ರ" ಬಡತನ ರೇಖೆಗಿಂತ ಕೆಳಗಿದ್ದಾರೆ. ಇದು ಅವರ ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಮನಸ್ಥಿತಿಯನ್ನು ಎತ್ತಿ ತೋರಿಸಿದ್ದು, ಸರಕಾರಕ್ಕೆ ಹರ್ಷ ತಂದ ಸಂಗತಿಯಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ವರದಿ ಮಾಡಿದೆ.

ಸರಕಾರಿ ಯೋಜನೆಗಳ ಲಾಭವನ್ನು ಸಂಪೂರ್ಣಕ್ಕಿಂತಲೂ ಹೆಚ್ಚು ಹೆಚ್ಚು ತಮ್ಮದಾಗಿಸಿಕೊಳ್ಳುತ್ತಿರುವ ಜನತೆಯ ಕ್ರಮದಿಂದ ಸಂತೋಷದ ಕೊಡವು ತುಂಬಿ ತುಳುಕಾಡುತ್ತಿದೆ ಎಂದು ರಕ್ತ ರಹಿತ ಕ್ರಾಂತಿಯ ಮೂಲಕ ಅಧಿಕಾರಕ್ಕೇರಿ ಒಂದು ವರ್ಷ ಪೂರೈಸಿದ ಮುಖ್ಯಮಂತ್ರಿಯವರ ಪರವಾಗಿ ಅವರ ಮನೆ ಕೆಲಸದಾಳು (ಬಡತನ ರೇಖೆಗಿಂತ ಕೇವಲ ಒಂದು ಸೆಂಟಿಮೀಟರ್ ಕೆಳಗೆ) ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಅಲ್ಲದೆ ಈ ಹಿಂದೆ ಹಿಂ-ಬಾಲಕರಿಗೂ ಸೈಕಲ್ ಕೊಡಿಸುವ ಸರಕಾರೀ ಯೋಜನೆ ವಿಫಲವಾಗಿರುವ ಹಿನ್ನೆಲೆಯಲ್ಲ ಬಿಪಿಎಲ್ ಯೋಜನೆ ಸಫಲತೆ ಗಡಿ ಮೀರಿ ತುಳುಕಾಡಿದ್ದು ಸ್ವತಃ ಮುಖ್ಯಮಂತ್ರಿಗಳಿಗೆ ಆಶ್ಚರ್ಯಕ್ಕೂ, ಆಹ್ಲಾದಕ್ಕೂ ಕಾರಣವಾಗಿದೆ ಎಂದವರು ಯಾಹೂ ಮೆಸೆಂಜರ್ ಮೂಲಕ ಮುಖ್ಯಮಂತ್ರಿಯವರ ಜತೆ ಚಾಟಿಂಗ್ ನಡೆಸಿ ಸ್ಪಷ್ಟಪಡಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಬಾಲ ಅಲ್ಲಾಡಿಸಲು ಕೂಡ ಜಾಗದ ಕೊರತೆ ಇದೆ ಎಂಬ ಕುರಿತು ನಮ್ಮ ಬ್ಯುರೋ ಈ ಹಿಂದೆಯೇ ವರದಿ ಮಾಡಿ ಜನಜಾಗೃತಿ ಮೂಡಿಸಲು ಯತ್ನಿಸಿತ್ತು. ಇದೀಗ Below Poverty Line ನಿಂದ ಕೆಳಗಿರುವವರಲ್ಲಿ ಹೆಚ್ಚಿನವರು ರಾಜಧಾನಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ಅದರಲ್ಲೂ ಹೆಚ್ಚಿನವರು ವಿಧಾನ ಸೌಧದ ಸುತ್ತಮುತ್ತಲೇ ತಿರುಗಾಡುತ್ತಿರುತ್ತಾರೆ ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿ ಹಿಡಿದೆಳೆದು ವರದಿ ಮಾಡಿದೆ. ತಮ್ಮನ್ನು ಈ ರೇಖೆಯಿಂದ ಮಾರುದ್ದ ಕೆಳಗೆ ಇರುವಂತೆ ತಳ್ಳಿದ ರಾಜಕಾರಣಿಗಳಿಗೆ ಡೊಗ್ಗು ಸಲಾಂ ಹೊಡೆಯಬೇಕಾದ ಅನಿವಾರ್ಯತೆಯೇ ಕಾರಣ ಎಂಬುದು ಕೂಡ ತಿಳಿದುಬಂದಿದೆ.

ಬಡತನ ರೇಖೆ ಎಂಬುದು ರಾಮಾಯಣದ ಕಾಲದಲ್ಲೇ ಲಕ್ಷ್ಮಣ ಎಳೆದ ರೇಖೆಯಾಗಿದ್ದು, ಇದನ್ನು ನಾವೆಂದಿಗೂ ದಾಟಲಾರೆವು. ಶ್ರೀಮಂತಿಕೆಯೇನೂ ನಮಗೆ ಮುಖ್ಯವಲ್ಲ. ಈ ಲಕ್ಷ್ಮಣ ರೇಖೆ ದಾಟಿದರೆ ಪಾಪ ಬರುತ್ತದೆ, ಜನಸಂಖ್ಯೆಯ ಗಡಿ ದಾಟಲು ಪಾಪು ಬಂದರೂ ಪರವಾಗಿಲ್ಲ, ಬಡತನದ ರೇಖೆ ದಾಟಿ ಪಾಪ ಕಟ್ಟಿಕೊಳ್ಳಲಾರೆವು ಎಂದು ಕರನಾಟಕದ ಪ್ರಜೆಗಳು ಪಣ ತೊಟ್ಟಿರುವುದು ವಿಶ್ವಾದ್ಯಂತ ಶ್ಲಾಘನೆಗೆ ಕಾರಣವಾಗಿದ್ದು, ಕರನಾಟಕದ ಹೆಸರು ಚಿರಸ್ಥಾಯಿಯಾಗತೊಡಗಿದೆ.

ಬಿಪಿಎಲ್ ಪಟ್ಟಿಯಲ್ಲಿರುವವರ ಮನೆಗೆ ಬೊಗಳೆ ಬ್ಯುರೋ ವಿಶೇಷ ಪ್ರವಾಸ ಕೈಗೊಂಡಿತ್ತು. ಶೇ.100 ಮನೆಗಳಲ್ಲಿ 29 ಇಂಚಿನ ಕೇವಲ ಒಂದೊಂದೇ ಬಿಪಿಎಲ್ ಟಿವಿಗಳಿದ್ದವು. ಆದರೆ ಶೇ.90 ಮಂದಿಯ ಮನೆಗಳಲ್ಲಿ ಮಾತ್ರವೇ ಕಂಪ್ಯೂಟರ್ ಇದ್ದಿದ್ದು ತೀರಾ ಕಳವಳಕಾರಿ ಸಂಗತಿ ಎಂದು ನಮ್ಮ ಒದರಿಗಾರರು ಒದರಿದ್ದಾರೆ.

ಈ ಮಧ್ಯೆ, ತಮ್ಮ ಮನೆಯಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿರುವ ಅಡುಗೆಯವರು, ಬಟ್ಟೆ ಒಗೆಯುವವರು, ನೀರು ತರುವವರು, ಹಾಲು ಕರೆಯುವವರು ಮುಂತಾದವರನ್ನೂ ಈ ಪಟ್ಟಿಯಲ್ಲಿ ಸೇರಿಸಲು ತಮಗೆ ಸಾಧ್ಯವಾಗಲಿಲ್ಲವಲ್ಲಾ ಎಂದು ಬಹುತೇಕ ಬಿಪಿಎಲ್ ಮಂದಿ ಕೊರಗು ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಬಹುಷಃ ಕರುನಾಡಿನ ಜನ ಬೇರೆಯವರಿಗೆ ತಮ್ಮ ನೀರು-ನೆಲ-ಭಾಷೆ-ಸಂಸ್ಕೃತಿ ದಾನ ಮಾಡಿ ಮಾಡಿ ಹೀಗೆ ಬಿ.ಪಿ.ಎಲ್ ಕೆಳಗೆ ಬಂದಿರಬಹುದೇ ?

    ಪ್ರತ್ಯುತ್ತರಅಳಿಸಿ
  2. ಬಡವರು ಅಂದ್ರೆ..." ಯಾರು ಜಾಸ್ತಿ ಜನಕ್ಕೆ ಬಡಿತಾರೋ ಅವರಿಗೆ "ಬಡವರು" ಅಂತಾರಾ??

    ಪ್ರತ್ಯುತ್ತರಅಳಿಸಿ
  3. ಬಡವಾ ನೀನು ಮಡಗಿಧಂಗಿರು ಅಂದಂತೆ ಬಡತನ ರೇಖೆಯನ್ನು ತಮ್ಮ ಬಳಿಯೇ ಮಡಗಿಕೊಂಡು ಬೆಚ್ಚಗೆ ಕಂಬಳಿ ಹೊತ್ತು ಎಸಿ ಆನ್ ಮಾಡಿಕೊಂಡು ಮಲಗಿರುವ `ಭಡವರ' ಬಗ್ಗೆ ಅಸತ್ಯಪೂರ್ಣ, ಪಕ್ಷಪಾತದ, ಭಯ ಪೀಡಿತ ವರದಿಗಾಗಿ ರಗಳೆ ಬ್ಯೂರೋಗೆ ಅಭಿನಂದನೆಯ ಬೊಗಳೆ. `ಭಡವರು' ನಮ್ಮ ಬಡತನ ರೇಖೆ ತೆಳ್ಳಗಿದೆ , ಅವರದ್ದು ದಪ್ಪಗಿದೆ ನಮಗೆ ಅದನ್ನು ಬಿಟ್ಟು ಕೊಡುವಂತೆ ಹೇಳಿ ಅಂತ `ಕಾಏರಿ ನಿಯಾಯ ಮಂಡಳಿ' ಎದುರು ಫಿರ್ಯಾದು ಒಯ್ಯ ಬಹುದು ಜೋಕೆ!

    ಪ್ರತ್ಯುತ್ತರಅಳಿಸಿ
  4. ಶಿವ್ ಅವರೆ,
    ನಿಮ್ಮ ಸಂದೇಹ ನಿಜವಾಗಿರಲೂ ಬಹುದು. ಅವರಾಗಿಯೇ ಬಿಪಿಎಲ್ ಟಿವಿಯಡಿ ತೂರಿಕೊಂಡದ್ದು ಎಂಬ ಮಾತು ಸತ್ಯ.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,
    ನೀವಂತೂ ಭಾರತದ ಭೂಪಟ ನೋಡಿದರೆ ಬಡತನ ರೇಖೆ (ಇರುವ ಕರ್ನಾಟಕದ) ಮೇಲೆಯೇ ಇದ್ದೀರಿ.

    ಪ್ರತ್ಯುತ್ತರಅಳಿಸಿ
  6. ಅನಾನಿಮಸ್ಗಿರಿಯವರೆ,
    ನಿಮ್ಮ ವ್ಯಾಖ್ಯಾನ ಒಪ್ಪತಕ್ಕದ್ದು. ಆದರೊಂದು ಸಣ್ಣ ಕರೆಕ್ಷನ್. ಅದು ಭಡವರು ಎಂದಾಗಬೇಕಿತ್ತು.

    ಪ್ರತ್ಯುತ್ತರಅಳಿಸಿ
  7. ಬೊಗಳೆಗೆ ತತ್ತರಿಸಿದ ಸುಪ್ರೀತ್ ಅವರಿಗೆ ಸ್ವಾಗತ.
    ನೀವಾದರೂ ನಮ್ಮ ವರದಿಯನ್ನು ಅಸತ್ಯಪೂರ್ಣ, ಪಕ್ಷಪಾತದ ಎಂದು ಧಮಕಿ ಹಾಕಿದ್ದೀರಿ. ಹಾಗಾಗಿ ಮಹದಾನಂದವಾಗಿದೆ.
    ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D