ಬೊಗಳೆ ರಗಳೆ

header ads

ಮಕ್ಕಳಿಗೆ ಯಾವುದರ ಮೊಟ್ಟೆ, ಯಾವುದರ ಹಾಲು?

(ಬೊಗಳೂರು ಗೊಂದಲಮಯ ಬ್ಯುರೋದಿಂದ)
ಬೊಗಳೂರು, ಫೆ.2- ಕರ್ನಾಟಕದಲ್ಲಿ ಮಕ್ಕಳು ಮುಂದೆ ಬೆಳೆದು ದೊಡ್ಡವರಾದ ಬಳಿಕ ಬೊಗಳೆ ರಗಳೆ ಬ್ಯುರೋದಲ್ಲಿರುವ ಸಿಬ್ಬಂದಿಗಳಂತಾಗುವುದು ಬೇಡ ಎಂಬ ಕಾರಣಕ್ಕೆ ಸರಕಾರವು ಅವುಗಳಿಗೆ ಮೊಟ್ಟೆ, ಹಾಲು, ಬೆಣ್ಣೆ, ಬಾಳೆ ಹಣ್ಣು ಇತ್ಯಾದಿ ಕೊಡಬೇಕು ಎಂದು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಿತ್ರರೊಳಗೆ ಪರಸ್ಪರ ಕಾದಾಟ ಉಂಟಾಗಿತ್ತು. ಈ ಕಾದಾಟಕ್ಕೆ ಕಾಲು ಕೆರೆದು ಬರುವ ಕೆಲವು ಕೋಳಿಗಳು ಕಾವು ನೀಡಿದ ಕಾರಣ ಮೊಟ್ಟೆ ಒಡೆದು, ಹಾಲು ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂಬುದು ಇತ್ತೀಚಿನ ವರದಿ.

ಆದರೆ ಈ ಕಾದಾಟದ ನಡುವೆ ಒಳಗಿಂದೊಳಗೆ ಯಾವುದರ ಮೊಟ್ಟೆ ಕೊಡಬೇಕು, ಯಾವುದರ ಹಾಲು ನೀಡಬೇಕು ಎಂಬ ಕುರಿತಾಗಿ ಹಲವಾರು ಸಂಗತಿಗಳು ಘಟಿಸಿದವು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮಾನವರ ಮೊಟ್ಟೆಯನ್ನೇ ಮಕ್ಕಳಿಗೆ ಕೊಡಬೇಕು ಎಂಬುದನ್ನು ಕೆಲವರು ಬಲವಾಗಿಯೇ ಪ್ರತಿಪಾದಿಸಿ, ಅದನ್ನು ಇಲ್ಲಿ ಕಾರ್ಯರೂಪಕ್ಕೂ ಇಳಿಸಿದ ಕಾರಣ ಬೇಡಿಕೆಯೂ ಹೆಚ್ಚಾಯಿತು. ಇದಕ್ಕಾಗಿ ಆಂಧ್ರದಿಂದ ಮಾನವ ಮೊಟ್ಟೆ ತರಿಸುವ ವ್ಯವಸ್ಥೆ ಮಾಡಲಾಯಿತು ಎಂದೂ ಸಂಶೋಧನೆ ವೇಳೆ ತಿಳಿದುಬಂದಿದೆ.

ಕತ್ತೆ ಹಾಲು?

ಇನ್ನೊಂದೆಡೆ ಹಾಲು ಎಂಬ ಶಬ್ದ ಕೇಳಿದ ತಕ್ಷಣ ಎಚ್ಚೆತ್ತ ಬೊಗಳೆ ರಗಳೆ ಬ್ಯುರೋದ ಹಣೆ ಬರಹದಲ್ಲಿ (ಮೇಲೆ ನೋಡಿ) ಅರಚಾಡುತ್ತಿರುವ ಕತ್ತೆಗಳೂ ಕಣಕ್ಕಿಳಿದಿದ್ದು, ಮಕ್ಕಳಿದೆ ಕತ್ತೆ ಹಾಲೇ ಸೂಕ್ತ ಎಂಬ ಲಾಬಿ ಆರಂಭಿಸಿವೆ.

ರಾಜಕಾರಣಿಗಳು ತಮ್ಮ ತಮ್ಮೊಳಗೇ ಇಷ್ಟೆಲ್ಲಾ ರಾದ್ಧಾಂತ, ವಾದ ಮಾಡುತ್ತಲೇ ಇರುವಾಗ, ಬಾಳೆ ಹಣ್ಣು ಬೆಳೆಗಾರರು ತಮ್ಮ ಬಾಳೆ ಹಣ್ಣನ್ನೇ ಮಕ್ಕಳಿಗೆ ನೀಡಿ ಎಂದೂ, ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿಯನ್ನೇ ಪುಟಾಣಿಗಳಿಗೆ ತಿನಿಸಬೇಕೆಂದೂ, ಟೊಮೆಟೋ, ಈರುಳ್ಳಿ, ಆಲೂಗೆಡ್ಡೆ ಬೆಳೆಗಾರರು ತಮ್ಮ ಬೆಳೆಗಳನ್ನು ರಸ್ತೆಗೆ ಚೆಲ್ಲುವ ಬದಲು ಮಕ್ಕಳಿಗೆ ಉಣಿಸಬೇಕೆಂದೂ ವಾದ ಮಂಡಿಸಿದಂತೆಯೇ, ಮೆಣಸಿನ ಬೆಲೆ ಕುಸಿತದಿಂದ ಕಂಗಾಲಾದ ಮೆಣಸು ಬೆಳೆಗಾರರು, ಮಕ್ಕಳಿಗೆ ಸರಕಾರದ ಕಡೆಯಿಂದ ಪೋಷಕಾಂಶ ಕೊಡಿಸುವುದಾದರೆ, ಮೆಣಸನ್ನೇ ತಿನ್ನಿಸಬೇಕು ಎಂದು ವಾದಿಸತೊಡಗಿದ್ದು ಮತ್ತೊಂದು ಬೆಳವಣಿಗೆ.

ಮಕ್ಕಳಿಗೆ ಸಾರಾಯಿ ಲೇಸು ?

ಆ ರೀತ್ಯಾ ವಾದ ವಿವಾದಗಳು ಮೊಟ್ಟೆಯ ಕಾವೇರಿಸಿ ಮರಿಯಾಗತೊಡಗಿರುವಂತೆಯೇ, ಹಾಲು ಕುಡಿಸಬೇಕೆಂದು ವಾದಿಸುವವರಿಗೆ ನೀರು ಕುಡಿಸಲು ಮತ್ತೊಂದು ಲಾಬಿಯು ತೂರಾಡುತ್ತಾ ಬಿದ್ದರೂ ಎದ್ದುನಿಂತಿದೆ. ಮಕ್ಕಳಿಗೆ ಏನು ಬೇಕಿದ್ದರೂ ಮಾಡುವಂತೆ ದೈಹಿಕ ಬಲ ಮತ್ತು ಮನೋಬಲ ನೀಡಬಲ್ಲ ಅತ್ಯುತ್ತಮ ಪೋಷಕಾಂಶವಾದ ನೀರಾ ಕುಡಿಸಬೇಕು ಇಲ್ಲವೇ ಸಾರಾಯಿ ಕುಡಿಸಬೇಕು ಎಂದು ಅಖಿಲ ಕರ್ನಾಟಕ ಮದ್ಯ ಕುಡಿಸುವವರ ಸಂಘವು ವಾದ ಮಂಡಿಸುವಲ್ಲಿಗೆ ಪ್ರಕರಣವು ಒಂದು ಹಂತಕ್ಕೆ ಬಂದು ನಿಂತಿದೆ ಎಂದು ಪತ್ತೆ ಹಚ್ಚಲಾಗಿದೆ.

ಈ ಪ್ರಸ್ತಾಪಕ್ಕೆ ಕೆಲವು ಮಕ್ಕಳಿಂದ ಈಗಾಗಲೇ ಬೆಂಬಲವೂ ವ್ಯಕ್ತವಾಗಿದ್ದು, ಬೇಡಿಕೆಯ ಪ್ರಮಾಣ ಹೆಚ್ಚಾಗತೊಡಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಇದನ್ನು ನಮ್ಮ ಬ್ಯುರೋ ಕೂಡ ಬೆಂಬಲಿಸುತ್ತಿರುವುದೇಕೆ ಎಂಬುದನ್ನು ಇಲ್ಲಿ ಕಂಡುಕೊಳ್ಳಲಾಗಿತ್ತು. ಇದಕ್ಕೆ ಕುಡಿಸುವವರ ಸಂಘ ನೀಡುತ್ತಿರುವ ಸಮರ್ಥನೆಯನ್ನು ಬೊಗಳೆ ರಗಳೆ ಬ್ಯುರೋ ಮೊದಲೇ ಇಲ್ಲಿ ಸಂಶೋಧಿಸಿತ್ತು.

ಸೂ: ಮಕ್ಕಳಿಗೆ ನಮ್ಮ ಆಹಾರವೇ ಸೂಕ್ತ ಎಂದು ಮತ್ತೊಬ್ಬರು ಕಣಕ್ಕಿಳಿದಿದ್ದಾರೆ. ಈ ಬಗ್ಗೆ ಒಂದು ಪುಟ್ಟ ವರದಿ ನಾಳೆ ಕೊಡುವುದಾಗಿ ನಮ್ಮ ವದರಿಗಾರರು ತಿಳಿಸಿದ್ದಾರೆ.-ಸಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

  1. ಅಂಧ್ರದಿಂದ ಮೊಟ್ಟೆ ತರಿಸುವುದೇ...ಯಾಕೇ ಅಂತಾ ತಿಳಿಲಿಲ್ಲ?

    ಇದೀಗ ಬಂದ ಸುದ್ದಿಯಂತೆ...ಮಾವಿನಯನಸರು ಚಿಕ್ಕಗೌಡ್ರರ ಹತ್ತಿರ ಡೀಲ್ ಮಾಡಿ ಮಕ್ಕಳಿಗೆ ಮಾವಿನರಸವನ್ನೇ ಕೊಡುವಂತೆ ಮಾಡಿದ್ದಾರೆ ಅಂತೆ..

    ಹಂಗೆ ಶಾಲೆಗೆ ಹಾಜರಾಗದ ಮಕ್ಕಳಿಗೆ ವಿಶೇಷವಾಗಿ 'ಅನಾನಿ-(ಮ)ಸ್' ರಸವನ್ನು ಕೊಡುತ್ತಾರಂತೆ

    ಪ್ರತ್ಯುತ್ತರಅಳಿಸಿ
  2. ಮನುಷ್ಯರ ಮೊಟ್ಟೆ ಭಯಂಕರ ದುಬಾರಿ ಕಣ್ರೀ. ಅದರ ಬೆಲೆ ಸುಮಾರು ಎರಡೂವರೆ ಲಕ್ಷ ರೂಪಾಯಿ ಗೊತ್ತೆ?

    ಪ್ರತ್ಯುತ್ತರಅಳಿಸಿ
  3. ಶಿವ್ ಅವರೆ,
    ಆಂಧ್ರದಿಂದ ಮೊಟ್ಟೆ ತರಿಸೋವಾಗ ಅದರ ಲಿಂಕ್ ಕೆಳಗೆ ಬಿದ್ದು ಒಡೆದುಹೋಗಿತ್ತು. ಕಳ್ಳಸಾಗಾಣೆದಾರರು ಮೊಟ್ಟೆ ಇಡೋ ಯಂತ್ರಗಳು ಅಂತ ತಿಳ್ಕೊಂಡು ಸಾಗಿಸಿದ ವರದಿ ಇಲ್ಲಿದೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ನಮ್ಮ ವದರಿಗಾರರು ಈಗಾಗಲೇ ಮಂಡಿಸಿದ ಹಕ್ಕಿಗೆ ನೀವು ಕೂಡ ಹಕ್ಕು ಮಂಡಿಸಿದ್ದೀರಿ. ಇಬ್ಬರಿಗೂ ಸಿಗದಂತಾಗೋದು ಬೇಡ. ಹಾಗಾಗಿ ಮೊದಲು ನಮ್ಮ ವದರಿಗಾರರು ಸರಕಾರದಿಂದ ರಾಯಧನ ಪಡೆದುಕೊಳ್ಳಲಿ. ಬಳಿಕ ಅದರಲ್ಲಿ ನಿಮ್ಮ ವದರಿಗಾರರಿಗೆ 0.0000000000001 % ಪಾಲು ನೀಡಲಾಗುತ್ತದೆ ಎಂದು 100 % ಭರವಸೆ ನೀಡುತ್ತೇವೆ.

    ಪ್ರತ್ಯುತ್ತರಅಳಿಸಿ
  5. ಪಬ್ಬಿಗರೇ,

    ಅದು ಒರಿಜಿನಲ್ ಮೊಟ್ಟೆ ರೇಟು ಇರಬಹುದು. ಆದರೆ ನಕಲಿ ಮೊಟ್ಟೆಗಳು ಬಹಳ ಚೀಪ್ ಆಗಿ ಸಿಗುತ್ತವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D