ಬೊಗಳೆ ರಗಳೆ

header ads

ತತ್ತರ ಪ್ರದೇಶ : ಮುಲಾಮು ಟ್ಯೂಬ್‌ಗೆ ಪಿನ್ ಚುಚ್ಚಿದ ಕಾಂ-guess!

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಜ.18- ಮಕ್ಕಳ ಮೂಳೆ ಮಾಂಸಗಳು ದೊರೆತು ತತ್ತರ ಪ್ರದೇಶವಾಗಿರುವ ಉತ್ತರ ಪ್ರದೇಶದಲ್ಲಿ, ಐದು ವರ್ಷಗಳ ಆಡಳಿತದ ಸವಿಯನ್ನು ಸಂಪೂರ್ಣವಾಗಿ ಸವಿದು, ತಿಂದು ತೇಗಿದ ಬಳಿಕ, ಶೀಘ್ರವೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಾವು ಮುಲಾಮು ಸಿಂಗ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವುದಾಗಿ ಸತ್ತವರ ಪ್ರದೇಶ ಕಾಂ-guess ಸಮಿತಿ ಸ್ಪಷ್ಟಪಡಿಸಿದೆ.

ಸದ್ಯಕ್ಕೆ ಮುಲಾಮು ಜತೆ ಗುರುತಿಸಿಕೊಂಡರೆ ಮತದಾರರು ತಮ್ಮ ಮೇಲೆ ಆಕ್ರೋಶಗೊಳ್ಳುತ್ತಾರೆ, ಈಗಾಗಲೇ ಮಕ್ಕಳ ತಲೆಬುರುಡೆಗಳು ಹಾಗೂ ಅಸ್ಥಿಪಂಜರಗಳು ಸಿಕ್ಕಿ ಮುಲಾಮು ಸರಕಾರಕ್ಕೆ ಮಸಣದ ದರ್ಶನವಾಗಿದೆ. ಇದು ಅಪಶಕುನವಾಗಿದ್ದು, ಇದರ ಕಳಂಕ ತಮಗೆ ತಟ್ಟಿದರೂ, ಅದನ್ನು ಇನ್ನೆರಡು ತಿಂಗಳೊಳಗೆ ಮತದಾರರ ಮನಸ್ಸಿನಿಂದ ಈ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಸಮಿತಿ ಅಧ್ಯಕ್ಷ ಖಲ್ಮಾನ್ ಸುರ್ಷಿದ್ ಹೇಳಿದ್ದಾರೆ.

ಅಧಿಕಾರಾವಧಿ ಹೇಗೂ ಮುಗಿದಿದೆ. ಇನ್ನು ಸರಕಾರದಲ್ಲಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿರುವ ಅವರು, ನಾವೇನೂ ಮುಲಾಮು ಜತೆಗಿನ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅದಕ್ಕೆ ಅನುಸಾರವಾಗಿ ನಮ್ಮ ನಿರ್ಧಾರ ಬದಲಿಸಲಾಗುತ್ತದೆ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಮುಲಾಮು ಸರಕಾರ ಇಷ್ಟು ವರ್ಷ ಭ್ರಷ್ಟಾಚಾರ, ದುರಾಡಳಿತಗಳಲ್ಲಿ ನಿರತವಾಗಿತ್ತು. ಈ ವಿಷಯಗಳೆಲ್ಲಾ ಇದುವರೆಗೆ ಅಧಿಕಾರದಲ್ಲಿದ್ದ ನಮಗೆ ಹೇಗೆ ಗಮನಕ್ಕೆ ಬಂದಿಲ್ಲ ಎಂಬುದೇ ತಿಳಿಯುತ್ತಿಲ್ಲ. ಈಗ ಚುನಾವಣೆಗಳು ಹತ್ತಿರ ಬಂದ ಕಾರಣದಿಂದಾಗಿ ನಮ್ಮ ಗಮನಕ್ಕೆ ಬಂದಿರುವುದು ನಮ್ಮ ಪೂರ್ವಜರು ಮಾಡಿದ ಪುಣ್ಯ. ಹಾಗಾಗಿ ಸದ್ಯಕ್ಕೆ ದೂರವಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿರುವ ಅವರು, ಇದೇನೂ ಶಾಶ್ವತ ಕಳಚಿಕೊಳ್ಳುವಿಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಫಲಿತಾಂಶ ಬಂದ ಮೇಲೆ ಮತ್ತೊಂದು ಪತ್ರಿಕಾಗೋಷ್ಠಿ ಕರೆದು ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗುತ್ತದೆ. ಅಲ್ಲಿವರೆಗೆ ನಮ್ಮ ನಿಲುವನ್ನು guess ಮಾಡಿ ಎಂದವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಕಾಂ-guess ಮಾಡುವುದು ತುಂಬಾ ಕಷ್ಟದ ಕೆಲಸ. ನಮ್ಮಿಂದಾಗದು ಅನ್ವೇಷಿಗಳೇ.

    ಪ್ರತ್ಯುತ್ತರಅಳಿಸಿ
  2. ರಾಜಕೀಯ ಸರ್ಕಸ್ ಮತ್ತೆ ಮತ್ತೆ ಪುನರಾವರ್ತಿಸುತ್ತಿದೆ. ಎಲ್ಲ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ. ಇದನ್ನು ತಪ್ಪು ಎಂದು ಅರ್ಥೈಸುವುದು ಸರಿಯಲ್ಲ. ಸಾಮಾನ್ಯ ಜನಗಳಿಗೆ ಜ್ಞಾನ ತುಂಬುವ ಮಹಾನ್ ಕಾರ್ಯ ಮಾಡುತ್ತಿರುವ ಜಾರಕಾರಣಿಗಳ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಇನ್ನಾದರೂ ತಮದಾರರು ತಮ್ಮ ಮಹತ್ವವನ್ನು ಅರ್ಥ ಮಾಡಿಕೊಂಡು, ಮುಲಾಮು, ಜುಲಾಮು, ಸಲಾಮುಗಳ ಟ್ಯೂಬ್‍ಗಳಗೂ ಮುಳ್ಳಿನಿಂದ ಚುಚ್ಚುವಂತಾಗಲಿ.

    ಪ್ರತ್ಯುತ್ತರಅಳಿಸಿ
  3. cong rats ಗಳಿಗೆ ತಿನ್ನಲು ಸಾಕಷ್ಟು ಸಿಗಲಿಲ್ಲ ಎಂಬ ಅಸಮಾಧಾನ ಇರಬೇಕು.

    -ಪವನಜ

    ಪ್ರತ್ಯುತ್ತರಅಳಿಸಿ
  4. ಶ್ರೀತ್ರಿ ಅವರೆ,
    ಅ-ರಾಜಕೀಯದಲ್ಲಿ ಏನು ಬೇಕಾದರೂ ಆಗುತ್ತದೆ ಎಂಬುದನ್ನು ಯಾರು ಬೇಕಾದರೂ ಏನನ್ನು ಬೇಕಾದರೂ guess ಮಾಡಬಹುದು. ಹಾಗಾಗಿ ನೀವು ಏನು guess ಮಾಡುತ್ತೀರೋ ಅದು ಸರಿಯಾಗಿಯೇ ಇರುತ್ತೆ.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,
    ನಿಮ್ಮ ಮಾತು ಸರಿ. ಏನೂ ತಿಳಿಯದ ಜನಸಾಮಾನ್ಯರಿಗೂ ರಾಜಕೀಯ ಹೇಗೆ ಮಾಡಬೇಕು ಮತ್ತು ಹೇಗೆ ಮಾಡಬಹುದು ಎಂಬುದನ್ನು ನಮ್ಮ ಜಾರಕಾರಣಿಗಳು ಕಲಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ.

    ಪ್ರತ್ಯುತ್ತರಅಳಿಸಿ
  6. ಪವನಜರೆ,
    ಬಿಲದಲ್ಲಿ ಬೆಚ್ಚಗೆ ತಿನ್ನುತ್ತಾ ಇದ್ದ cong-ratಗಳನ್ನು ಎಬ್ಬಿಸಿದ್ದು ಚುನಾವಣೆಯೇ ಆಗಿದ್ದು, ಫಲಿತಾಂಶ ಪ್ರಕಟವಾಗಿ ಹೊಸ ಸರಕಾರ ಬರುವವರೆಗೆ ತಿನ್ನುವುದಕ್ಕೆ ವಿರಾಮ. ಈ ಅವಧಿಯಲ್ಲಿ ಏನಿದ್ದರೂ (ಹಣ-ಹೆಂಡ) ಹಂಚುವಿಕೆ ಮಾತ್ರ.

    ಪ್ರತ್ಯುತ್ತರಅಳಿಸಿ
  7. ಮತದಾರ ಅನ್ನೋ ಬಡಪಾಯಿ ಈ ಪ್ರಹಸನವೆಲ್ಲಾ ನೋಡ್ತಾ ಇರ್ತಾನೆ ಅನ್ನೋದೇ ಮರೆತುಹೋದಂಗೆ ಇದೆ. ನೋಡಿದರೂ ಏನು ಮಾಡ್ತಾನೆ ಹೇಳಿ?

    ಮುಲಾಂಗೆ ಮುಲಾಮು ಹಚ್ಚುವ ದಿನಗಳು ದೂರವಿಲ್ಲ

    ಪ್ರತ್ಯುತ್ತರಅಳಿಸಿ
  8. ಶಿವ್ ಅವರೆ,
    ಜಾರಕಾರಣಿಗಳು ಮತದಾರರಿಗೆ ಮರೆಯುವ ಮದ್ದು ಅರೆಯಲು ಚೆನ್ನಾಗಿ ಕಲಿತಿದ್ದಾರೆ. ಅರೆದು ಅರೆದು ಓಟಿನ ಸೀಸನ್ ಬಂದಾಗಲೇ ಕುಡಿಸುತ್ತಾರವರು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D