ಬೊಗಳೆ ರಗಳೆ

header ads

ಬೆತ್ತಲೆ ಪ್ರತಿಭಟನೆಯಲ್ಲ, Dog-Walk ಅಭ್ಯಾಸ !

(ಬೊಗಳೂರು ಫ್ಯಾಶನ್ ಬ್ಯುರೋದಿಂದ)
ಬೊಗಳೂರು, ಜ.30- ಶಾಲಾ ಮಕ್ಕಳನ್ನು ಬೆತ್ತಲೆಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೊಗಳೆ ರಗಳೆ ಬ್ಯುರೋ ಭೋಪಾಲಕ್ಕೆ ತೆರಳಿ ವರದಿಯ ಅನೈಜತೆಯೇನು ಎಂಬುದನ್ನು ಪರೀಕ್ಷಿಸಿ ಓದುಗರಿಗೆ ಅಸತ್ಯಾಂಶ ತಿಳಿಯಪಡಿಸಲು ನಿರ್ಧರಿಸಿತು.

ಈ ಪ್ರಕಾರವಾಗಿ ಭೋಪಾಲದ ನರ್ಮದಾ ಶಾಲೆಗೆ ಹೋದ ನಮ್ಮ ಒದರಿಗಾರ ಪ್ರಮುಖರಾದ ಅಸತ್ಯಾನ್ವೇಷಿಯು, ಅಲ್ಲಿ ತಮ್ಮ ಪ್ರಾಧ್ಯಾಪಕರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಅರೆಬೆತ್ತಲೆಯಾಗಿಯೇ ಶಾಲೆಗೆ ಬಂದು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಿರುವುದಾಗಿ ವರದಿ ಮಾಡಿದ್ದಾನೆ. ಇದರ ಸತ್ಯಾಸತ್ಯತೆಯನ್ನು ನಂತರ ಪರಿಶೀಲಿಸಲಾಗುತ್ತದೆ.

ಪ್ರತಿಭಟನಾಕಾರ ಹುಡುಗರಲ್ಲಿ ಕೇವಲ ಒಳಚಡ್ಡಿಯಲ್ಲಿ ನಿಂತಿದ್ದ ವಿದ್ಯಾರ್ಥಿಯೊಬ್ಬನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಇಂಟರ್ವ್ಯೂವಿಸಲಾಯಿತು. ಆತ ಈ ಪ್ರಕರಣದ ಹಿಂದಿನ ವಿವರವನ್ನು ಸಮಗ್ರವಾಗಿ ವಿವರಿಸಿದ್ದಾನೆ.

ಅದೆಂದರೆ, ನಮ್ಮ ಪ್ರಾಧ್ಯಾಪಕರೇನೂ ಕೆಟ್ಟವರಲ್ಲ. ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಹಾಲಿ ನಡೆದಿದ್ದೇನೆಂದರೆ, ಇಂದಿನ ಮಕ್ಕಳೇ ಮುಂದಿನ ಜನಾಂಗ ಆಗಿರುವಾಗ, ಈಗಾಗಲೇ ಬಿಚ್ಚೋಲೆ ಗೌರಮ್ಮರು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಮುಂದೊಂದು ದಿನ ಎಲ್ಲರಿಗೂ ಕೂಡ ಅರೆಬರೆ ಬಟ್ಟೆ ಅಥವಾ ಇಲ್ಲದ ಬಟ್ಟೆಯೇ ಫ್ಯಾಶನ್ ಆಗಬಹುದು. ಹಾಗಾಗಿ ಈ ಪ್ರಾಧ್ಯಾಪಕರು ನಮ್ಮ ಮೈಮೇಲಿದ್ದ ಬಟ್ಟೆಯನ್ನೂ ಕಳಚಿ, ಈ ಕುರಿತು ನಮ್ಮಲ್ಲಿ ಜಾಗೃತಿ ಮೂಡಿಸುವಂತೆ ಮತ್ತು ಆಧುನಿಕ ಸಂಸ್ಕೃತಿಗೆ ಒಗ್ಗುವಂತೆ Instruct ಮಾಡುತ್ತಿದ್ದರು ಎಂದು ಆ ಹುಡುಗ ವಿವರಿಸಿದ್ದಾನೆ.

ಹಾಗಿದ್ದರೆ ಈ ಪ್ರತಿಭಟನೆಯ ಮುಖವಾಡವೇಕೆ ಎಂದು ಪ್ರಶ್ನಿಸಿದಾಗ, ಅದೆಲ್ಲಾ ಸುಮ್ಮನೆ ಸ್ವಾಮೀ....ಫ್ಯಾಶನ್ ಪ್ರದರ್ಶನದಲ್ಲಿ ತರುಣಿಯರು ಅಷ್ಟೊಂದು ಜನರ ಮಧ್ಯೆ Cat walk ಮಾಡುತ್ತಾರೆ, ನಮಗೂ ಕೂಡ, ಅಷ್ಟೊಂದು ಜನರ ಮಧ್ಯೆ, ಬಹಿರಂಗವಾಗಿ ಆ ರೀತಿ ಮಾಡಲು ಮನೋಧೈರ್ಯ ಬರಬೇಕು. ಅದಕ್ಕಾಗಿ ಈಗಿಂದಲೇ ಪ್ರಾಕ್ಟೀಸ್ ಶುರು ಮಾಡಿದ್ದೇವೆ ಎಂದು ತಿಳಿಸಿದ ಆತ, ನಾವು ಹುಡುಗರು ಆದ ಕಾರಣ Dog walk ಪ್ರಯತ್ನಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾನೆ.

ಈ ನಡುವೆ, ಹುಡುಗರಿಗೆ ಬಟ್ಟೆ ಹಾಕಿಸುವ (ತೊಡಿಸುವ) ಯತ್ನಗಳು ಭರದಿಂದ ಸಾಗುತ್ತಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

  1. ಆ ಶಿಕ್ಷಕ 'ಮಾನವ ದೇಹವು ಮೂಳೆ ಮಾಂಸದ ...' ಅನ್ನೋ ಅಣ್ಣಾವ್ರ ಹಾಡನ್ನು ಹುಡುಗರಿಗೆ ಹೇಳಿಕೊಡೋಕೆ ಹೋಗಿದ್ದರಂತೆ..ಪಾಪ ಈ ಹುಡುಗು ಬುದ್ದಿವು ಹಿಂಗೆ ಮಾಡೋದೇ ?

    ಪ್ರತ್ಯುತ್ತರಅಳಿಸಿ
  2. ಆ ಮಕ್ಕಳ ಬಟ್ಟೆ ತೊಡಿಸುವಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವವರು ಯಾರು? ಶಾಲೆಯವರೋ ಅಥವಾ ಬೊ-ರ ವದರಿಗಾರರೋ? ಅದರಿಂದ ಅವರಿಗೆ ಸಿಗುವುದಾದರೂ ಏನು? ನಿಮ್ಮ ವದರಿಗಾರರು ಅಲ್ಲಿಗೆ ಹೋದಾಗ ಅವರು ಧರಿಸಿದ್ದ ಉಡುಗೆ ಏನು? ನಮ್ಮ ವದರಿಗಾರರ ಪ್ರಕಾರ ನಿಮ್ಮ ವದರಿಗಾರರು ಒಳ ಚಡ್ಡಿಯನ್ನು ಮಾತ್ರ ಧರಿಸಿ, ನಾಯಿ ನಡಿಗೆ ಅಭ್ಯಸಿಸಲು ಹೋಗಿದ್ದರಂತೆ. ನಿಮ್ಮ ನಾಯಿ ನಡಿಗೆಯನ್ನು ನೋಡಲು ಬಹಳ ಉತ್ಸುಕನಾಗಿದ್ದೇನೆ. ಅದರ ವಿಡಿಯೋ ಅಥವಾ ಆಡಿಯೋ ಇದ್ದರೆ ಈ ತಕ್ಷಣವೇ ಬೊ-ರದಲ್ಲಿ ಪ್ರಕಟಿಸತಕ್ಕದ್ದು. ಇಂದಿನ ಊರಿಗೆ ಇದೇ ಅನ್ವೇಷಣೆ ಮಾಡಲು ನೀವು ಹೋಗಿದ್ದಿರಿ, ಎಂಬ ಅನುಮಾನ ಬಹಳ ದಿನಗಳಿಂದ ನನ್ನ ಮನವನ್ನು ಕಾಡಿತ್ತು. ಈಗ ಸತ್ಯಾಪಿತವಾಯಿತು.

    ಅದೆಲ್ಲಾ ಇರಲಿ, ಈಗ ಬೆಂದ ಊರಿನಲ್ಲಿ ಯಾರೋ ದುಃಖಿತರಾಗಿದ್ದಾರೆಂದು ತಿಳಿಯಿತು. ಅದರ ಬಗ್ಗೆ ಸಮಗ್ರ ತನಿಖೆ ಮಾಡಿ ನಮ್ಮ ಮುಂದೆ ಪ್ರಸ್ತುತ ಪಡಿಸಿಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ. ಮುಂದಿನ ಒಂದು ವಾರದಲ್ಲಿ ಈ ಕೆಲಸವನ್ನು ನೀವೇನಾದರೂ ಮಾಡದಿದ್ದಲ್ಲಿ ನಿಮ್ಮ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗುವುದು. ಇದನ್ನು ಅಂತಿಮ ತಾಕೀತು ಎಂದು ತಿಳಿಯತಕ್ಕದ್ದು.

    ಪ್ರತ್ಯುತ್ತರಅಳಿಸಿ
  3. ಶಿವ್ ಅವರೆ,
    ನೀವು ಹೇಳಿದ್ದು ನೋಡಿದರೆ, ಈ ಶಿಕ್ಷಕ ಮಹಾಶಯರು ಮೂಳೆ ಮತ್ತು ಮಾಂಸ ತೋರಿಸುವುದಕ್ಕಾಗಿ ಮಕ್ಕಳಿಗೆ ಹೊಡೆದು-ಬಡಿದು, ಕುಯ್ಯಲು ಹೊರಟಿರಬಹುದು ಅಂತ ಅನಿಸುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು.

    ಪ್ರತ್ಯುತ್ತರಅಳಿಸಿ
  4. ಮಾವಿನ ಅರಸರೆ,
    ಹೊಸ ಫ್ಯಾಶನ್ ಪ್ರಕಾರ, ಮಕ್ಕಳಿಗೆ ಬಟ್ಟೆ ಬಿಚ್ಚಿದರೆ ಏನೂ ಸಿಗುವುದಿಲ್ಲ. ಯಾಕೆಂದರೆ ಬಿಚ್ಚಲು ಏನೂ ಇಲ್ಲದಷ್ಟು ಕನಿಷ್ಠ ಉಡುಗೆ ಇಂದಿನ ಮತ್ತು ಮುಂದಿನ ಫ್ಯಾಶನ್.

    ನಮ್ಮ ನಾಯಿಗೆ ನಡೆಯಲು ಬರುವುದಿಲ್ಲ, ಅದು ಓಡುತ್ತಾ ಇರುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಹಾಗಾಗಿ ನಮ್ಮ ನಾಯಿಯ ನಡಿಗೆಯನ್ನು ನೋಡುವುದು ಅಸಾಧ್ಯ.

    ಮತ್ತೆ, ಇಂದೂರಿನಿಂದ ನೊಂದುಬೆಂದೂರಿಗೆ ಬಂದಾಗಿದೆ. ದುಃಖವೇ ಆಸೆಗೆ ಮೂಲ ಎಂದು ನಾವು ತಿಳಿದವರು ನಾವು. ಅಂತಿಮ ತಾಕೀತು ಆದ ನಂತರ ಯಾವ ತಾಕೀತು ಬರುತ್ತದೆ ಎಂಬುದನ್ನು ನಾವು ತಿಳಿಯಬಯಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,
    ನಮ್ಮದು ದುಃಖವೇ ಆಸೆಗೆ ಮೂಲ ಅನ್ನೋ ವಾದ ಕಣ್ರೀ.
    ನಾವು ಪರಮಅಜ್ಞಾನಿಗಳು ಅನ್ನೋದಂತೂ ಖರೆ.
    ಹೃದಯಗಳು ಒಡೆದಷ್ಟೂ ಹೆಚ್ಚು ಹೆಚ್ಚು ಚೂರುಗಳು ಸಿಗುತ್ತವೆ. ಆಗ ಆದಾಯವೂ ಹೆಚ್ಚಾಗಬಹುದು. ಕಾದು ನೋಡೋಣ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D