(ಬೊಗಳೂರು ಅಂತಿಮ ಕ್ಷಣ ಬ್ಯುರೋದಿಂದ)
ಬೊಗಳೂರು, ಡಿ.31- ಇರಾಕ್ ಸರ್ವಾಧಿಕಾರಿ ಮುದ್ದಾಂ ಹುಸೇನ್‌ಗೆ ಮರಣ ದಂಡನೆ ವಿಧಿಸಿರುವುದು ವಿಶ್ವಾದ್ಯಂತ ಅಗ್ರ-ಉಗ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ, ಅವನನ್ನು ಗಲ್ಲಿಗೇರಿಸಿಯೇ ಕೊಂದಿದ್ದೇಕೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.ಮುದ್ದಾಂ ಮರಣ ದಂಡನೆಗೆ ಒಳಗಾದಾಗ ವಿಶ್ವದ ದೊಡ್ಡಣ್ಣನಾಗಲು ಶತಾಯಗತಾಯ ಯತ್ನಿಸುತ್ತಿರುವ ಲಾರ್ಜ್ ಬುಷ್ ಗಾಢ ನಿದ್ದೆಯಲ್ಲಿದ್ದು, ಅವರು ಬೊಗಳೆ ರಗಳೆ ಬ್ಯುರೋಗೆ ನಿದ್ದೆಯಲ್ಲೇ ವಿಶೇಷ ಸಂದರ್ಶನ ನೀಡಿ, ಇದರ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.
ಇರಾಕಿನ ಮೇಲೆ ಹಿಡಿತ ಸಾಧಿಸಲು ದಶಕದಿಂದ ತಮ್ಮ ಪಡೆಗಳು ಯತ್ನಿಸುತ್ತಿದ್ದರೂ ಯಾವುದೇ ಯಶಸ್ಸು ಇದುವರೆಗೆ ಸಿಗಲಿಲ್ಲ. ಹಿಂಸಾಚಾರ ಯಥಾಪ್ರಕಾರ ಮುಂದುವರಿದಿದೆ. ಮಾತ್ರವಲ್ಲ ಮತ್ತಷ್ಟು ಹೆಚ್ಚಾಗಿಬಿಟ್ಟಿದೆ. ಹಾಗಾಗಿ ತಮ್ಮ ಇರಾಕ್ ನೀತಿ ವಿಫಲವಾಗಿದೆ ಎಂಬ ಟೀಕೆಗಳು ವಿಶ್ವಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ಇಲ್ಲೊಂದು ಮೈಲಿಗಲ್ಲು ನೆಡಲು ತಾವು ಉದ್ದೇಶಿಸಿರುವುದಾಗಿ ಸ್ಪಷ್ಟಪಡಿಸಿರುವ ಲಾರ್ಜ್ ಬುಷ್, ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮೈಲಿಗಲ್ಲು ನೆಡಲಾಗಿರಲಿಲ್ಲ ಎಂದು ವಿವರಿಸಿದ್ದಾರೆ.
ಈ ಕಾರಣಕ್ಕಾಗಿ, ಮುದ್ದಾಂನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದರೆ ಮಾತ್ರವೇ ಮೈಲಿ-ಗಲ್ಲು ಸ್ಥಾಪಿಸಿದಂತಾಗುತ್ತದೆ ಎಂಬುದು ತಮ್ಮ ನಿರ್ಧಾರವಾಗಿತ್ತು ಎಂದವರು ಸ್ಪಷ್ಟಪಡಿಸಿದ್ದಾರೆ.
ಅದೂ ಅಲ್ಲದೆ, ಮುದ್ದಾಂಗಾಗಿ ಭಾರತದಲ್ಲಿ ಸಿಂಹಾಸನವೊಂದು ಸಿದ್ಧವಾಗುತ್ತಿದ್ದು, ಆತ ಅದನ್ನು ಏರಿಬಿಟ್ಟಾನು, ಮತ್ತೆ ಇರಾಕಿನಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿ ಸ್ಕಡ್ ಕ್ಷಿಪಣಿಗಳಿಂದ ಅಮೆರಿಕಕ್ಕೆ ಪ್ರಬಲ ಪ್ರತಿರೋಧ ಒಡ್ಡಿಯಾನು ಎಂಬ ಭೀತಿಯೂ ಈ ಅವಸರದ ಗಲ್ಲು ಶಿಕ್ಷೆಗೆ ಕಾರಣವಾಗಿತ್ತು ಎಂಬುದು ಬ್ಯುರೋ ಕಂಡುಕೊಳ್ಳದ ಸತ್ಯ.
ಒಂದೇ ಗಲ್ಲು ಶಿಕ್ಷೆಯೇ?: ಈ ಮಧ್ಯೆ, ನೂರಾರು ಮಂದಿಯ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಮುದ್ದಾಂಗೆ ಕೇವಲ ಒಂದೇ ಮರಣ ದಂಡನೆ ವಿಧಿಸಿರುವುದು ಎಲ್ಲರ ಹುಬ್ಬೇರಿಸಿದೆ. ಗಲ್ಲು ಶಿಕ್ಷೆ ತಪ್ಪು ಎಂದು ಮುದ್ದಾಂ ಅಭಿಮಾನಿಗಳು ವಿಶ್ವಾದ್ಯಂತ ಬೀದಿಗಿಳಿದಿದ್ದರೆ, ಮುದ್ದಾಂಗೆ ಮತ್ತಷ್ಟು ಉಗ್ರ ಶಿಕ್ಷೆ ವಿಧಿಸಬೇಕು, ಇನ್ನಷ್ಟು ಮರಣದಂಡನೆ ವಿಧಿಸಬೇಕು ಎಂದು ಮುದ್ದಾಂ ವಿರೋಧಿಗಳು ಆಗ್ರಹಿಸುತ್ತಾ ಪ್ರತಿಭಟನೆ ಆರಂಭಿಸಿದ್ದು, ಇರಾಕಿನಲ್ಲಿ ಹಿಂಸಾಚಾರ ಮೇರೆ ಮೀರಲು ವೇದಿಕೆ ಸಿದ್ಧವಾಗುತ್ತಿದೆ ಎಂದು ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.
(ಕೆಡುಕಿನ ಅಂತ್ಯವಾಗಲಿ, ಒಳಿತಿಗೆ ಯಶಸ್ಸಾಗಲಿ ಎಂಬ ಹಾರೈಕೆಯೊಡನೆ ಬೊಗಳೆ ರಗಳೆ ಬ್ಯುರೋ 2006ನೇ ವರ್ಷಕ್ಕೆ ವಿದಾಯ ಹಾಡುತ್ತಿದೆ. ಮುಂದಿನ ವರ್ಷ ಭೇಟಿಯಾಗೋಣ. -ಸಂ)
3 ಕಾಮೆಂಟ್‌ಗಳು
nimagu saha hosavarshada subhashayagaLu....
ಪ್ರತ್ಯುತ್ತರಅಳಿಸಿಹೊಸ ವರ್ಷಕ್ಕೆ ಪಾರ್ಟಿಗೆ ಬನ್ನಿ ಮಹಾಂತೇಶರೇ,
ಪ್ರತ್ಯುತ್ತರಅಳಿಸಿಶುಭಾಶಯಗಳು
ಸದ್ದಾಂ ಮಾಡಿದ ಸಾಮೂಹಿಕ ಹತ್ಯೆಗಳು,ಅವನ ಕಾಲದಲ್ಲಿ ನಡೆದ ನಿರಂಕುಶು ಆಡಳಿತ ನಡೆಸಿದ ಅವನಿಗೆ ಕಠಿಣ ಶಿಕ್ಷೆ ಕಾದಿತ್ತೇನೋ..ಆದರೆ ಮರಣದಂಡನೆ?? ಗೊತ್ತಿಲ್ಲಾ..
ಪ್ರತ್ಯುತ್ತರಅಳಿಸಿಇದು ಅಮೇರಿಕಾದ ಬಗೆಗಿನ ವಿರೋಧಿ ಆಲೆಗೆ ಇನ್ನೂ ಹೆಚ್ಚು ಬಲ ತರುತ್ತೆ ಅನಿಸುತ್ತೆ..
ಏನಾದ್ರೂ ಹೇಳ್ರಪಾ :-D