(ಬೊಗಳೂರು ಮದಿರಾ ಬ್ಯುರೋದಿಂದ)
ಬೊಗಳೂರು, ಡಿ.28- ಮದ್ಯ ಸೇವನೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ಪತ್ತೆ ಹಚ್ಚಿರುವ ವಿಜ್ಞಾನಿಗಳು ಒಂದು ವಿಷಯವನ್ನು ಬಿಟ್ಟಿದ್ದರಿಂದಾಗಿ ಅಸತ್ಯಾನ್ವೇಷಿಯು ಇದರ ಸಂಶೋಧನೆಗೆ ಹೊರಟಾಗ ಗಾಳಿಯಲ್ಲೇ ತೇಲಿದ ಅನುಭವವಾಗಿತ್ತು ಎಂದು ವರದಿಯಾಗಿದೆ.ಆಲ್ಕೋಹಾಲ್ ಸೇವನೆಯಿಂದ ರಾತ್ರಿಯ ಎರಡನೇ ಜಾವದಲ್ಲಿನ ನಿದ್ದೆಗೆ ಕೊರತೆಯಾಗುತ್ತದೆ ಎಂದು ವೈಜ್ಞಾನಿಕ ವರದಿ ಹೇಳಿದೆಯೇ ಹೊರತು, ಯಾರ ನಿದ್ದೆಗೆ ತೊಂದರೆಯಾಗುತ್ತದೆ ಎಂದು ಹೇಳದಿರುವುದು ಬೊಗಳೆ ರಗಳೆ ಬ್ಯುರೋದ ಹುಬ್ಬೇರಿಸಲು ಕಾರಣವಾಗಿತ್ತು. ಇದರ ಹಿಂದೆ ಏನೋ ಸಂಚು ಇರಬೇಕು ಎಂಬ ಸಂದೇಹದ ಹಿನ್ನೆಲೆಯಲ್ಲಿ ರಾತೋರಾತ್ರಿ ನಿದ್ದೆಗೆಟ್ಟು ಹೊಂಚು ಹಾಕಿ ತಪಾಸಣೆಗೆ ತೆರಳಿತ್ತು.
ಬ್ಯುರೋ ಸಿಬ್ಬಂದಿ ನೀಡಿದ ವರದಿ ಪ್ರಕಾರ, ಅತಿಯಾಗಿ ಮದ್ಯಪಾನ ಮಾಡಿದರೆ ನಿದ್ದೆಗೆ ತೊಂದರೆಯಾಗುವುದು ಕುಡಿದವರಿಗಲ್ಲ, ಪಕ್ಕದ ಮನೆಯವರಿಗೆ ಎಂಬ ಅಮೂಲ್ಯವಾದ ಸಂಶೋಧನೆಯೊಂದು ಹೊರಬಿದ್ದಿದೆ.
ಅತಿಯಾಗಿ ಮದ್ಯಸೇವನೆಯು ಸೇವಿಸಿದವರ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಮದ್ಯ ಪಾನ ಮಾಡಿದವರು ಯಾವತ್ತೂ ಸಂತೋಷದಲ್ಲಿ ತೇಲಾಡುತ್ತಾ ಇರುತ್ತಾರೆ. ಹಾಗಾಗಿ ಉಲ್ಲಸಿತರಾಗಿರುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಎಂಬೆಲ್ಲಾ ಸಿದ್ಧಾಂತಗಳು ಪತ್ತೆಯಾಗಿವೆ. ಹಾಗಾಗಿ ಅವರು ನಿದ್ದೆ ಬಾರದೇ ಇದ್ದರೂ ಸುಖವಾಗಿ ನಿದ್ದೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ತೊಂದರೆಯಾಗುವುದು ಮಾತ್ರ ಪಕ್ಕದ ಮನೆಯವರಿಗೆ.
ಅತಿಯಾಗಿ ಮದ್ಯಪಾನ ಮಾಡಿದವರು ಸುಖದ ಅಮಲಿನಲ್ಲಿ ತೇಲುತ್ತಾ ಮಾತಾಡುತ್ತಲೇ ಇರುತ್ತಾರೆ. ಅದನ್ನು ಮಾದಕ ಕನಸು ಎಂದು ಕರೆಯಬಹುದಾಗಿದ್ದು, ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾರೆ ಆದರೂ ಅವರಿಗೆ ಕೇಳಿಸುವುದಿಲ್ಲ. ಮತ್ತು ಯಾರೊಡನೆಯೋ ಜಗಳವಾಡುತ್ತಾರಾದರೂ ಅವರಿಗೆ ತಿಳಿದಿರುವುದಿಲ್ಲ.
ಇದೆಲ್ಲವೂ ಬಾಹ್ಯ ಪ್ರಪಂಚಕ್ಕೆ ಮಾತ್ರವೇ ಗೊತ್ತಾಗುವುದರಿಂದಾಗಿ ಪಕ್ಕದ ಮನೆಯವರು ಮದ್ಯ ಸೇವಿಸದಿದ್ದರೂ ಮರುದಿನ ಬೆಳಗ್ಗೆ ಏಳುವಾಗ ಮದಿರೆಯ ಅಂದರೆ ನಿದಿರೆಕೊರತೆಯ ಮನಸ್ಥಿತಿಯಲ್ಲೇ ಇರುತ್ತಾರೆ. ಕಚೇರಿಯಲ್ಲಿ ಬಂದರೂ ಕಂಪ್ಯೂಟರ್ ಎದುರು ಅಮಲಿನಿಂದ ವಾಲುತ್ತಿರುತ್ತಾರೆ.
ಇನ್ನೊಂದು ವಾದದ ಪ್ರಕಾರ, ನೆರೆಮನೆಯವರು ಕೂಡ ಈ ರೀತಿ 'ಸುಖದ ಸುಪ್ಪತ್ತಿಗೆ'ಯಲ್ಲಿ ತೇಲಾಡುವುದು ನಿದಿರೆ ಕೊರತೆಯಿಂದಲೋ ಅಥವಾ ಕದ್ದುಮುಚ್ಚಿ ಸ್ವಯಂ ಮದಿರಾ ಸೇವನೆಯಿಂದಲೋ ಎಂಬುದು ತಡವಾಗಿ ಬೆಳಕಿಗೆ ಬರಬೇಕಿದೆ.
( ಸೂಚನೆ : ಗಡಗಡ ನಡುಗಿಸಿದ ಇಂದುವಿನ ಊರಿನಲ್ಲಿ ಎರಡು ತಿಂಗಳ ಅಜ್ಞಾತವಾಸ ಮುಗಿಸಿ ಮರಳಿ ಸ್ವಯಂ ಕಾರಸ್ಥಾನಕ್ಕೆ ಮರಳಿರುವ ಬೊಗಳೆ ರಗಳೆ ಬ್ಯುರೋ, ತನ್ನ ಕಛೇರಿಯಲ್ಲಿ ಧೊಪ್ಪನೆ ಬಂದು ಬಿದ್ದ ಪರಿಣಾಮವಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ಪ್ರಕಟವಾಗಿರಲಿಲ್ಲ. ಈ ದಿನಗಳಲ್ಲಿ ಓದುಗರಿಗಾದ ಅನುಕೂಲಕ್ಕೆ ವಿಷಾದಿಸುತ್ತೇವೆ. ಆದರೆ ಇದು ಮದಿರೆಯ ಪ್ರಭಾವ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಎಂದಿನಂತೆ ಚಂದಾದಾರರ ಹಣ ಮರಳಿಸದೆ, ಅದನ್ನು ಗುಳುಂಕರಿಸಲಾಗುತ್ತಿದೆ.- ಸಂ )
11 ಕಾಮೆಂಟ್‌ಗಳು
ಅನ್ವೇಷಿಗಳೇ, ಈಚೆಗೆ ನಿಮ್ಮ ಬೊಗಳೆಯಲ್ಲಿ ಮದ್ಯದ ವರದಿಗಳು ಸಿಕ್ಕಾಪಟ್ಟೆ ಹೆಚ್ಚಾಗಿರುವುದರಿಂದ ನೀವು ಮದ್ಯವಯಸ್ಸು ಸಮೀಪಿಸಿರಬಹುದೆಂದು ನನ್ನ ಊಹೆ. ಸರಿಯೇ?
ಪ್ರತ್ಯುತ್ತರಅಳಿಸಿಬೊಗಳೆ ಪಂಡಿತರು ತಮ್ಮ ಅಸತ್ಯ ಅನ್ವೇಷಣೆಯಲ್ಲಿ ಮತ್ತೆ ನಿರತರಾಗಿರುವುದು ಖುಷಿಯ ವಿಷಯ. ಅಂದರೆ ಮತ್ತೇರಿಸುವಂತಹ ವರದಿಗಳನ್ನು ಮತ್ತೆ ನಿರೀಕ್ಷಿಸಬಹುದು.
ಪ್ರತ್ಯುತ್ತರಅಳಿಸಿಮದಿರೆಯ ಪ್ರಭಾವದಿಂದಲ್ಲದಿದ್ದರೂ ಇಂದು ಊರಿನಿಂದ ಹಿಂದಿರುಗಿ
ಪ್ರತ್ಯುತ್ತರಅಳಿಸಿಬರುವಾಗ ಚಂದಿರೆಯ ಕಾಟದಿಂದಾಗಿ - ಬೊ-ರ ಪತ್ರಿಕೆ ತಡವಾಯ್ತು ಅಂತ
ನಮ್ಮ ಬಾತ್ಮಿದಾರರು ಹೇಳ್ತಿದ್ದಾರೆ. ಇದರಲ್ಲಿ ಹುರುಳಿಲ್ಲ ಅಲ್ವೇ?
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಮದಿರಯ ಮದದಲ್ಲಿ ಪಕ್ಕದ ಮನೆಯವರು ಇದ್ದರೆ ಆಗ ಎನೂ ತೊಂದರೆ ಅಗುವುದಿಲ್ಲವಲ್ಲಾ.ಆದ್ದರಿಂದ ಎಲ್ಲರೂ ಮದಿರೆ ಸ್ಪೀಕರಿಸಿದರೆ ಆಗ ಯಾರಿಗೂ ನಿದ್ದೆಗೆಟ್ಟ ಅನುಭವವೇ ಅಗೋಲ್ಲ.
ಇಂದುವಿನ ಊರಿಂದ ಬಂದು ಬಿದ್ದ ನಂತರ ಅಸತ್ಯಿಗಳ ಆರೋಗ್ಯ ಹೇಗಿದೆ..ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಅನ್ವೇಷಿಗಳೆ,
ಪ್ರತ್ಯುತ್ತರಅಳಿಸಿನಾವು ಮಾಡಬೇಕಾದ ಕೆಲಸವನ್ನು ನೀವೇ ಮಾಡುತ್ತಿದ್ದೀರಲ್ಲಾ? ಇದು ಸರಿಯೇ?
ಅಂದ ಹಾಗೆ ನಿಮ್ಮಿಂದ ಮೊದಲೇ ವಿಶ್ವಕನ್ನಡದ ವರದಿಗಾರರು ಶ್ರೇಷ್ಠ ಅಸತ್ಯವನ್ನು ಪತ್ತೆ ಹಚ್ಚಿ ಬಿಟ್ಟಿದ್ದಾರಲ್ಲಾ?
ಶ್ರೀ ತ್ರೀ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಊಹೆ ನಮಗೂ ಬಂದಿದೆ. ಆದರೆ ಇದು ಮುಂದುವರಿದ ಯುಗವಾಗಿರುವುದರಿಂದ ಮದ್ಯ ವಯಸ್ಸು ಎಂಬುದರ ಬದಲು ಕ್ವಾರ್ಟರ್ ವಯಸ್ಸು, ಸಿಕ್ಸ್‌ಟಿ, ನೈಂಟಿ ಎಂಬ ನೈಜ ಪದಗಳೇ ಹೆಚ್ಚು ಚಾಲ್ತಿಯಲ್ಲಿವೆ.
ಸುಶ್ರುತರೆ,
ಪ್ರತ್ಯುತ್ತರಅಳಿಸಿಮತ್ತೇರಿಸುವುದನ್ನೇ ನೀವು ಮತ್ತು ಮತ್ತೂ ನಿರೀಕ್ಷಿಸುತ್ತಿರುವುದು, ಅದು ಕೂಡ ಹೊಸ ವರ್ಷದ ಪಾರ್ಟಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲೇ ಹೆಚ್ಚು ಹೆಚ್ಚು ಹಪಹಪಿಸುತ್ತಿರುವುದು ಬರಲಿರುವ ನವ ವರುಷವು ನವ ನವ ಉಲ್ಲಾಸದಲ್ಲಿ ನಿಮ್ಮನ್ನು ಪೂರ್ತಿಯಾಗಿ ತೇಲಾಡಿಸುತ್ತದೆ ಮತ್ತು ಓಲಾಡಿಸುತ್ತದೆ ಎಂಬುದರ ಸ್ಪಷ್ಟ ಸೂಚನೆ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನೀವು ಯಾವತ್ತೂ ಸತ್ಯ-ಸಂದೇಹಪಟುಗಳಾಗಿರುವುದರಿಂದಾಗಿಯೇ ಅಸತ್ಯಾನ್ವೇಷಿಯ ನಿದ್ದೆ ಕೆಡಿಸಿದ್ದು ಕೂಡ ಪತ್ರಿಕೆ ತಡವಾಗಲು ಪ್ರಮುಖ ಕಾರಣ ಎಂಬುದು ಇತ್ತೀಚೆಗೆ ತಿಳಿಯಿತು. ಅದರಲ್ಲೂ ಹುರುಳಿ ಹುಡುಕಲಾಗುತ್ತಿದೆ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಶಿವ್ ಅವರೆ,
ಪ್ರತ್ಯುತ್ತರಅಳಿಸಿನೀವು ಸಲಹೆ ನೀಡಿರುವಂತೆ ಎಲ್ಲರಿಗೂ ಒಂದೇ ತೆರನಾಗಿ ತೀರ್ಥ ಸೇವನೆಗೆ ಅವಕಾಶ ಮಾಡಿಕೊಟ್ಟರೆ "ವಸುಧೈವ ಕುಟುಂಬಕಂ" ಎಂಬ ನುಡಿಗೊಂದು ಅರ್ಥ ಬಂದಂತಾಗುತ್ತದೆ.
ಹೌದು. ಇಂದುವಿನ ಊರಿನಿಂದ ಧೊಪ್ಪನೆ ಬಂದು ಬಿದ್ದ ಪರಿಣಾಮವಾಗಿ ಏಳಲು ಕಷ್ಟವಾಗಿತ್ತು. ಏಳಲು ಹೋಗುವಷ್ಟರಲ್ಲಿ ಮತ್ತೆ ಮತ್ತೆ ಆಯ ತಪ್ಪಿದರೂ ಇದರಲ್ಲಿ ಮದ್ಯದ ಪ್ರಭಾವವಿರಲಿಲ್ಲ.
ನಿಮ್ಮ ಆರನೇ ಇಂದ್ರಿಯ ಸರಿಯಾಗಿ ಕೆಲಸ ಮಾಡುತ್ತಿದೆ ಅಂತಾಯಿತು. ಆರೋಗ್ಯ ಹದಗೆಟ್ಟಿದ್ದೇ ಬೊಗಳೆ ರಗಳೆ ಬ್ಯುರೋ ಕೆಲವು ದಿನದಿಂದ ಧೂಳು ಹಿಡಿಯಲು ಕಾರಣ. ಈಗ ಧೂಳು ಕೊಡವಲಾಗುತ್ತಿದೆ.
ಪಬ್ಬಿಗರೇ,
ಪ್ರತ್ಯುತ್ತರಅಳಿಸಿಓಹ್... ಒಂದು ವಿಷ್ಯ ಮರೆತುಹೋಗಿತ್ತು. (ಪಬ್ಬಿನ ಅಮಲಿರಬಹುದು). ಬೆಂಗಳೂರಿನಲ್ಲಿ ಈಗ ಪಬ್‌ವಯಸ್ಸಿಗೆ ಬಂದವರು ಹೆಚ್ಚಾಗುತ್ತಿರುವುದರಿಂದ ಬೆಂಗಳೂರು "ಮದ್ಯ"ರಾತ್ರಿ ಕಳೆದ ಬಳಿಕ ಶಾಂತವಾಗುತ್ತಿದೆ. ಅದಕ್ಕೆ ನಮ್ಮ ವರದಿಯೇ ಪ್ರೇರಣೆ.
ಏನಾದ್ರೂ ಹೇಳ್ರಪಾ :-D