(ಬೊಗಳೂರು ಶ್ವಾನ ಬ್ಯುರೋದಿಂದ)
ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ.
ನಾಯಿಗಳು ಮಾನವರಿಗಿಂತ ಹೆಚ್ಚು ಪ್ರಬಲವಾದ ಆಘ್ರಾಣ ಶಕ್ತಿ ಹೊಂದಿವೆ ಎಂಬುದು ಸರ್ವವಿದಿತ ಸತ್ಯ. ಆದರೆ ಹೊಸ ಅಧ್ಯಯನವೊಂದು ಈ ವಿಷಯವನ್ನು ಬಹುತೇಕ ಸುಳ್ಳಾಗಿಸಲು ಹೊರಟಿದೆ.
ಉನ್ನತ ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರು, ಅಧಿಕಾರಿವರ್ಗವು ಹಗರಣ ಎಂಬ ಪ್ರಜಾಪ್ರಭುತ್ವದ ಅತ್ಯುನ್ನತ ಮೌಲ್ಯವನ್ನು ಎತ್ತಿಹಿಡಿಯಲು ಅಷ್ಟು ಸುಲಭವಾಗಿ ಹೇಗೆ ಯಶಸ್ವಿಯಾಗುತ್ತಿದ್ದಾರೆ ಎಂಬುದರ ಹಿಂದಿನ ರಹಸ್ಯವೂ ಬಯಲಾಗಿದ್ದು, ಅವರ ವಾಸನಾ ಸಾಮರ್ಥ್ಯವೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆಯಾಗಿದೆ.
ಅಂದರೆ, ನಾಯಿಗಳಿಗಿರುವ ಆಘ್ರಾಣ ಸಾಮರ್ಥ್ಯವನ್ನು ಕೆಲವೊಂದಿಷ್ಟು ತರಬೇತಿ/ ಅಭ್ಯಾಸದ ಮೂಲಕ ಮನುಷ್ಯರೂ ಪಡೆಯಬಹುದು ಎಂಬುದನ್ನು ವಿಜ್ಞಾನಿಗಳು ಇಲ್ಲಿ ಪತ್ತೆ ಹಚ್ಚಿದ್ದರು. ಈ ಪ್ರಯೋಗದ ಫಲಿತಾಂಶವನ್ನು ರಾಜಕಾರಣಿಗಳು ಸಮರ್ಥವಾಗಿ ಬಳಸಿಕೊಂಡ ಪರಿಣಾಮವೇ ಈ ದೇಶದಲ್ಲಿ ಹಗರಣಗಳ ಸಾಲು ಸಾಲು ಆಂದೋಲನಗಳೇ ನಡೆದುಹೋದವು ಎಂದು ತಿಳಿದುಬಂದಿದೆ.
ಘಟಾನುಘಟಿ ರಾಜಕಾರಣಿಗಳ ಆಘ್ರಾಣ ಸಾಮರ್ಥ್ಯದ ಹಿಂದೆ ಬೊಗಳೆ ರಗಳೆ ಬ್ಯುರೋ ಬಿದ್ದಾಗ, ವಿಜ್ಞಾನಿಗಳು ಈ ಸಂಶೋಧನಾ ವರದಿ ನೀಡಿದ್ದೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆ ಹಚ್ಚಲಾಯಿತು.
ಸರಕಾರದ ಯಾವ್ಯಾವ ಯೋಜನೆಗಳಲ್ಲಿ ಎಲ್ಲಿ ಎಷ್ಟರ ಮಟ್ಟಿಗೆ ಗಂಟು ಸಿಗುತ್ತದೆ, ಎಷ್ಟನ್ನು ಮೇಯಬಹುದು, ಉದಾರ ಕೊಡುಗೆಯಾಗಿ ಮತದಾರರ ಮೂಗಿಗೆ ತುಪ್ಪ ಸವರುವಂತಹ ಮೇಲ್ನೋಟದ ಯೋಜನೆಗಳನ್ನು ಅರ್ಪಿಸಲು ಎಷ್ಟನ್ನು ಉಳಿಸಬಹುದು ಎಂಬುದೆಲ್ಲಾ ಈ ರಾಜಕಾರಣಿಗಳ ಮೂಗಿಗೆ ತಕ್ಷಣವೇ ಗೊತ್ತಾಗಿಬಿಡುತ್ತಿತ್ತು.
ರಾಜಕಾರಣಿಗಳು ಮಾತ್ರವಲ್ಲದೆ ಅಧಿಕಾರಿವರ್ಗ ಕೂಡ ಎಲ್ಲಿಯೇ ಗಂಟಿದ್ದರೂ ಅದರ ನಂಟು ಬಿಡದಂತೆ ಆಘ್ರಾಣಿಸುತ್ತಿದ್ದಾರೆ. ಇವರೆಲ್ಲ ಏನಿದ್ದರೂ ತಮ್ಮ ಮೂಗಿನ ನೇರಕ್ಕೇ ಕೆಲಸ ಮಾಡುವುದರಿಂದ ಈ ಮೂಗಿಗೆ ಮತ್ತಷ್ಟು ಕೆಲಸ ಕೊಡುವುದು ಸುಲಭ. ಯಾರ ಜೇಬಿನಲ್ಲಿ, ಯಾರ ಮನೆಯಲ್ಲಿ, ಯಾರ್ಯಾರ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಗಂಟು ಇದೆ ಎಂಬುದನ್ನೆಲ್ಲಾ ಕ್ಷಣಮಾತ್ರದಲ್ಲಿ ಮೂಸಿ ಪತ್ತೆ ಹಚ್ಚುವಂತಾಗಲು ಈ ಕುರಿತು ತರಬೇತಿ ಪಡೆದು ಅಭ್ಯಾಸನಿರತರಾಗಿದ್ದಾರೆ ಎಂದು ತಿಳಿಯಲಾಗಿದೆ.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನುಜ ಪ್ರಾಣಿಗಳ ನಾಯಿ ಬುದ್ಧಿ... ಕ್ಷಮಿಸಿ... ಶ್ವಾನಬುದ್ಧಿ ಹೆಚ್ಚಾಗುತ್ತಿರುವುದರಿಂದ ಇದಕ್ಕೊಂದು ಹೊಸ ಸೇರ್ಪಡೆಯನ್ನು ಈ ವಿಜ್ಞಾನಿಗಳು ಕೊಡುಗೆಯಾಗಿ ನೀಡಿದ್ದು, ಮನುಜಮತವನ್ನು ವಿಶ್ವಪಥದತ್ತ ಕೊಂಡೊಯ್ಯಲು ವೇದಿಕೆ ರೂಪಿಸಿದ್ದಾರೆ. ನಾಯಿಯು ಮಾನವನ ಆತ್ಮೀಯ ಮತ್ತು ನಂಬಿಕಸ್ಥ ಮಿತ್ರನೂ ಆಗಿರುವುದರಿಂದಾಗಿ ಅದನ್ನು ಸುಲಭವಾಗಿ ಮಂಗ ಮಾಡಬಹುದು ಮತ್ತು ಶ್ವಾನರ (ಶ್ವಾನ-ನರ) ಸಂ-ಬಂಧವನ್ನು ಮತ್ತಷ್ಟು ಬಲಪಡಿಸಬಹುದು ಎಂಬುದು ಅವರ ಅನಿಸಿಕೆಯಾಗಿದೆ.
ಮಾನವರೆಲ್ಲರೂ ಇದೀಗ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಣಿಗಳಾಗಹೊರಟ ಸುದ್ದಿ ಬೊಗಳೆ ರಗಳೆಯಲ್ಲಿ ಪ್ರಕಟಗೊಂಡಿರುವುದರ ಬೆನ್ನಿಗೇ, ಬೊಗಳೆ ರಗಳೆ ಬ್ಯುರೋ ಯಾವತ್ತೂ ನಂಬಿರುವ ತತ್ವಾದರ್ಶಗಳು ಪೊಳ್ಳಾಗದಂತಾಗಲು ಈ ವರದಿ ಪ್ರಕಟಿಸಲಾಗಿದೆ.
2 ಕಾಮೆಂಟ್‌ಗಳು
bogaLe paTugaLe,
ಪ್ರತ್ಯುತ್ತರಅಳಿಸಿnimma naayi burOdavaru idakkella moogu tooorisuvudEke?
bogaLe paTugaLe,
ಪ್ರತ್ಯುತ್ತರಅಳಿಸಿnimma naayi burOdavaru idakkella moogu tooorisuvudEke?
ಏನಾದ್ರೂ ಹೇಳ್ರಪಾ :-D