ಬೊಗಳೆ ರಗಳೆ

header ads

ಆರ್ಕಿಮಿಡೀಸ್ ತತ್ವಕ್ಕೆ ಹೊಸ ವ್ಯಾಖ್ಯಾನ

(ಬೊಗಳೂರು ಕುಡುಕರ ಬ್ಯುರೋದಿಂದ)
ಬೊಗಳೂರು, ಡಿ.18- ದೇಶವು ಜಾಗತೀಕರಣಗೊಳ್ಳುತ್ತಿರುವ ಪರಿಣಾಮ ಇದರ ಬಿಸಿ ಯುವ ಜನಾಂಗವನ್ನೂ ತಟ್ಟಿದ್ದು, ಕುಡಿತದ ಚಟ ಹತ್ತುವ ವಯಸ್ಸು 20ಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಮದ್ಯ ಕುಡಿಸುವವರ ಸಂಘ ಶ್ಲಾಘಿಸಿದೆ.
 
ಜಾಗತೀಕರಣ ಎಂಬ ಬಲೂನಿನಲ್ಲಿ ಬಿಸಿ ಗಾಳಿ ತುಂಬಿದರೆ ಸುಲಭವಾಗಿ ಮೇಲಕ್ಕೆ ಹಾರುವ ಮಾದರಿಯಲ್ಲೇ, ಯುವ ಜನಾಂಗಕ್ಕೂ ಬಿಸಿ ಗಾಳಿಯ ಬಿಸಿ ಏರಿಸಬಲ್ಲ ಮದ್ಯ ಸುರಿಯಲು ಸಾಕಷ್ಟು ಪ್ರಮಾಣದಲ್ಲಿ ಯತ್ನಿಸಲಾಗುತ್ತದೆ. ಹಾಗಾಗಿ ಬೆಂಗಳೂರು ಈಗ ಪಬ್‌ಗಳೂರು ಆಗಿಬಿಟ್ಟಿದೆ ಎಂದು ಈ ಸಂಘವು ಚೀಯರ್ಸ್ ಎಂಬ ತಲೆಬರಹದಡಿಯಲ್ಲಿ ಹೇಳಿಕೆ ನೀಡಿದೆ.
 
ವರ್ಷ ಕಳೆದಂತೆ ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ, ಕುಡಿತದ ಚಟ ಹತ್ತುವ ವಯಸ್ಸು ಕಡಿಮೆಯಾಗುತ್ತದೆ ಎಂಬುದಾಗಿ ಆರ್ಕಿಮಿಡೀಸ್ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನ ನೀಡಿದ ಕ್ರಮವನ್ನು ವೈಜ್ಞಾನಿಕ ಸಂಶೋಧಕರು ಸ್ವಾಗತಿಸಿದ್ದು, ಯುರೇಕಾ ಎನ್ನುತ್ತಲೇ ಬಾಟಲಿಗಳನ್ನು ತಮ್ಮ ಟೇಬಲಿನ ಮುಂದಿರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 
ಈ ಮದ್ಯದ ಮಧ್ಯೆ, ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತಲೂ, ಮದ್ಯಸೇವನೆಯ ದುಷ್ಪರಿಣಾಮದ ಪರಿಹಾರ ಕಾರ್ಯಕ್ರಮಗಳಿಗೆ ಸರಕಾರ ಖರ್ಚು ಮಾಡುತ್ತಿದೆ ಎಂಬಲ ವರದಿಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿರುವ ಮದ್ಯ ಕುಡಿಯುವವರ ಸಂಘ, ಇದು ನಮ್ಮ ಮೇಲೆ ಹುಳಿ ಮದ್ಯ ಸುರಿಯುವ ತಂತ್ರ ಎಂದು ಟೀಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಕುಡಿದವರೆಲ್ಲರೂ ಬಲೂನಿನಂತೆ ಹಾರುತ್ತಾರಾ? ಹಾಗಿದ್ರೆ ಪಬ್ಬೇಶ್ವರರು ಅಂದ್ರೆ ಯಾರು? ಹಾರುವವರಾ?

    ಮದ್ಯ ಯಾಕೆ ಹುಳಿ ಇರತ್ತೆ. ಅದಕ್ಕೆ ಸಕ್ಕರೆ ಬೆರೆಸಿದರೂ ಹುಳಿ ಇರತ್ತಾ?

    ಪ್ರತ್ಯುತ್ತರಅಳಿಸಿ
  2. ಶ್ರೀನಿವಾಸರೆ,
    ಕುಡಿದವರೆಲ್ಲರೂ ಹಾರಾಡಲು ಕೂಡ ಆರ್ಕಿಮಿಡೀಸ್ ತತ್ವವೇ ಕಾರಣ.

    ಎಷ್ಟು ಗಾತ್ರದ ಗುಂಡು ಒಳಗೆ ಸೇರುತ್ತದೋ ಅದಕ್ಕೆ ತಕ್ಕಂತೆ ಅವರು ಹಾರಾಡುವ ವೇಗವೂ ಹೆಚ್ಚುತ್ತದೆ.

    ಮದ್ಯದಲ್ಲಿ ಹುಳದ ಸ್ತ್ರೀರೂಪ ಇರೋದರಿಂದ ಹುಳಿ ಎಂದಿರಬಹುದೇ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D