ಬೊಗಳೆ ರಗಳೆ

header ads

ಸಂಸತ್ ದಾಳಿ : ಸರಕಾರಕ್ಕೇ ಶೌರ್ಯ ಪ್ರಶಸ್ತಿ !

(ಬೊಗಳೂರು ಅರಾಜಕ ಬ್ಯುರೋದಿಂದ)

ಬೊಗಳೂರು, ಡಿ.14- ದೇಶದ ಮಹೋನ್ನತ ಅಧಿಕಾರ ಕೇಂದ್ರವಾಗಿರುವ ಸಂಸತ್ತಿನ ಮೇಲೆ ದಾಳಿ ನಡೆದ ಐದನೇ ವರ್ಷವನ್ನು ದೇಶಾದ್ಯಂತ, ವಿಶೇಷವಾಗಿ ಸಂಸತ್ತಿರುವ ರಾಜಧಾನಿಯಲ್ಲಿ ಅತ್ಯಂತ ವೇದನೆಯಿಂದ ಆಚರಿಸಲಾಯಿತು.

ಸಂಸತ್ತಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಭದ್ರತಾ ಸಿಬ್ಬಂದಿಯ ಕುಟುಂಬಿಕರು, ಪ್ರಕರಣದ ಪ್ರಧಾನ ಆರೋಪಿ ಗುರುವಿನ ಬಗ್ಗೆ ತಳೆದಿರುವ ನಿಲುವನ್ನು ಶ್ಲಾಘಿಸಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮೆಡಲ್ ಸಹಿತ ಶೌರ್ಯ ಪ್ರಶಸ್ತಿ ವಿತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರವು ಕೂಡ, ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಸಾಕಷ್ಟು ವರ್ಷ ತಗುಲುತ್ತದೆ ಎಂದು ಭರವಸೆ ನೀಡಿತು ! ಈಗಾಗಲೇ ಗುರು ಹತ್ಯೆ ಮಹಾಪಾಪ ಎಂದು ಯಾರೋ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಯಾವಾಗಲೂ ಪಟಾಕಿ ಸಿಡಿಸುತ್ತಾ ದೀಪಾವಳಿಯನ್ನೇ ನೆನಪಿಸುತ್ತಿರುವ ಜಮ್ಮು ಕಾಶ್ಮೀರ ಕೂಡ ಎರಡು ದಿನಗಳ ಶೋಕ ಆಚರಿಸಿರುವುದಾಗಿ ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

ಈ ಮಧ್ಯೆ, ಭಯೋತ್ಪಾದಕರಿಗೆ ಸುಲಭದಲ್ಲಿ ಶಿಕ್ಷೆ ಆಗುವುದಿಲ್ಲ ಎಂದು ಉತ್ತೇಜನೆಗೊಂಡಿರುವ ಖ್ಯಾತ ಪಟಾಕಿ ಸಂಘಟನೆ ಅಲ್ ಖಾಯಿದಾ, ಗೋವಾದಲ್ಲೂ ಪಟಾಕಿ ಸಿಡಿಸುತ್ತೇವೆ ಎಂದು ಆತ್ಮೀಯ ಆಹ್ವಾನ ನೀಡಿರುವುದಾಗಿ ಇಲ್ಲಿ ವರದಿಯಾಗಿದೆ.

ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಮತ ಬ್ಯಾಂಕ್ ರಾಜಕಾರಣಕ್ಕೆ ಭರ್ಜರಿ ವಿಜಯವಾಗಲಿದೆ ಎಂದು ಬೊಗಳೆವಾಣಿ ಬ್ಯುರೋ ಭವಿಷ್ಯ ನುಡಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. http://oarjuna.blogspot.com/
    ಹೇಳದೆ ಕೇಳದೆ ಕೃಪೆ: ಅಸತ್ಯ ಅನ್ವೇಷಿ

    ಪ್ರತ್ಯುತ್ತರಅಳಿಸಿ
  2. ಇಷ್ಟೆಲ್ಲಾ ಸುದ್ದಿಯನ್ನು ಒಟ್ಟು ಮಾಡಿ ವದರಿದ ನೀವು ಒಂದು ಮುಖ್ಯ ವಿಷಯವನ್ನೇ ತಿಳಿಸಿಲ್ಲ. ಘನ ಸರಕಾರವು ಪಂಚವಾರ್ಷಿಕ ಯೋಜನೆಯ ಮಿತಿಯೊಳಗೆ ಈ ಆಚರಣೆಗಾಗಿ ವಿಶೇಷ ಧನರಾಶಿಯನ್ನು ತೆಗೆದಿಡಲು ನಿರ್ಣಯಿಸಿದೆ. ಅದೂ ಅಲ್ಲದೇ ಭಯ ಉತ್ಪಾದನೆಯ ಚಟುವಟಿಕೆಯಿಂದ ರಾಷ್ಟ್ರ ವಿಶ್ವ ಮಟ್ಟದಲ್ಲಿ ಹಾರಾಡುವುದೆಂಬ ಉದ್ದೇಶದಿಂದ ಈ ಉತ್ಪಾದನೆಗಾಗಿ ಸಹಕರಿಸುವ ಜಾರಕಾರಣಿಗಳಿಗೆ ವರ್ಷ ವರ್ಷವೂ ಇಂತಿಷ್ಟು ಮೊಬಲಗನ್ನು ಕೊಡಬೇಕೆಂದು ತೀರ್ಮಾನಿಸಲಾಗಿದೆ. ಎಷ್ಟು ಹೇಗೆ ಎಂಬುದನ್ನು ತಿಳಿಯಬೇಕೆನಿಸಿದರೆ, ನನ್ನನ್ನು ಪ್ರತ್ಯೇಕವಾಗಿ ಬಂದು ಕಾಣಿರಿ.

    ಪ್ರತ್ಯುತ್ತರಅಳಿಸಿ
  3. ಏಷ್ಯನ್ ಆಟೋಟಗಳಲ್ಲಿ ನಮ್ಮ ಕಲಿಗಳು ನಾಚಿಕೊಳ್ಳುತ್ತಿರುವ ಬಗ್ಗೆ ತಿಳಿದು ಬಂದಿದೆ

    ಪ್ರತ್ಯುತ್ತರಅಳಿಸಿ
  4. ನೀವು ಶೀರ್ಷಿಕೆ ಟೈಪು ಮಾಡುವಾಗ ತಪ್ಪು ಮಾಡಿದ್ದೀರಿ. ಅದು ಶೌರ್ಯ ಪ್ರಶಸ್ತಿ ಅಲ್ಲ. ನಿರ್ವೀರ್ಯ ಪ್ರಶಸ್ತಿ ಎಂದಾಗಬೇಕು.

    ಪ್ರತ್ಯುತ್ತರಅಳಿಸಿ
  5. ಕೇಸರಿಯವರೆ,
    ನಮ್ಮದು ಬರೇ ಬೊಗಳೆ. ಇದು ಯಾವುದೇ ದಾಖಲೆ ಆಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ. ನಿಮ್ಮಂಥ ಗಂಭೀರ ವಿಷಯಗಳ ಬ್ಲಾಗುಗಳಲ್ಲಿ ಇದನ್ನು ಪ್ರಕಟಿಸುವುದು ಸೂಕ್ತವಲ್ಲ. ಕ್ಷಮಿಸಿ.

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ,
    ಜಾರಕಾರಣಿಗಳಿಗೆ ಎಷ್ಟು ಕೊಡಬೇಕು ಎಂಬುದನ್ನು ನಾವು ತಿಳಿಯಬಯಸುತ್ತೇವೆ. ಇದು ನಾವಾಗಿಯೇ ಕೇಳುತ್ತಿರುವುದರಿಂದ ಅದನ್ನು ನೀವು ನಮಗೆ ಹೇಳಲು ಹೆಚ್ಚೇನೂ ಕೊಡಬೇಕಾಗಿಲ್ಲ ಎಂಬುದನ್ನೂ ಸ್ಪಷ್ಟೀಕರಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  7. ಕೇಸರಿಯವರೆ,
    ಏಷ್ಯನ್ ಆಟೋಟಗಳಲ್ಲಿ ನಾಚಿ ನೀರಾಗುತ್ತಿರುವುದರಿಂದ ಈಜುಕೊಳ ಸ್ಥಾಪಿಸಿ ಈಜು ಸ್ಪರ್ಧೆಗೆ ವಿಶೇಷ ಮಹತ್ವ ನೀಡಲು ನಿರ್ಧರಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  8. ಪಬ್ಬಿಗರೆ,
    ಪಬ್ಬಿನ ಮಬ್ಬಿನಲ್ಲಿ ಇದ್ದುಕೊಂಡು ಕೂಡ ನಿಮಗೆ ಶೀರ್ಷಿಕೆ ಕಂಡಿದ್ದು ಕೇಳಿ ಅಚ್ಚರಿಯಾಯಿತು. ಹಾಗಾಗಿ ನಮ್ಮ ಶೀರ್ಷಿಕೆಯ ಬಗ್ಗೆ ಬ್ಯುರೋ ಸಿಬ್ಬಂದಿಗೇ ಸಂದೇಹ ಬರಲಾರಂಭಿಸಿದೆ.

    ಪ್ರತ್ಯುತ್ತರಅಳಿಸಿ
  9. ಸಂಸತ್‍ ದಾಳಿ ನಂತರ ಇನ್ನೂ ಆರಾಮವಾಗಿ ಓಡಾಡಿ ಕೊಂಡಿರುವ ಗುರುವರ್ಯರಿಗೆ ನೋಬೆಲ್ ಶಾಂತಿಗೆ ಕೊಡಿಸಲು ಸರಕಾರದವರು ಪ್ರಯತ್ನ ಮಾಡುತ್ತಿದ್ದಾರಂತೆ..

    ಪ್ರತ್ಯುತ್ತರಅಳಿಸಿ
  10. ಶಿವ್ ಅವರೆ,
    ಆರಾಮವಾಗಿ ಓಡಾಡಿಕೊಂಡಿರೋರಿಗೆ ಓಲಾಡಿಕೊಳ್ಳುವಂತೆ ಮಾಡ್ತಾ ಇದ್ದಾರೆ. ಅವರು ಓಲಾಡಿದರಷ್ಟೇ ಓಟು ಸಿಕ್ಕಿ ಪ್ರಜೆಗಳು ಪ್ರಭುಗಳಾಗುತ್ತಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D