ಬೊಗಳೆ ರಗಳೆ

header ads

ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ

(ಬೊಗಳೂರು ವಿಫಲ ಪ್ರೇಮ ಬ್ಯುರೋದಿಂದ)
ಬೊಗಳೂರು, ಡಿ.6- ಪ್ರೇಮ ರೋಗ ಮತ್ತು ಪ್ರೇಮ ವೈಫಲ್ಯದಿಂದ ಬಳಲುತ್ತಾ ಹೃದಯ ಹಾಳು ಮಾಡಿಕೊಂಡವರಿಗೊಂದು ಸಿಹಿ ಸುದ್ದಿ. ಇದೇ ವೇಳೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಯುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೂ ಕಾರಣ ಪತ್ತೆ ಹಚ್ಚಲಾಗಿದೆ.

ಹಾಳಾದ ಹೃದಯವನ್ನು ಹುಟ್ಟುವ ಮೊದಲೇ ಸರಿಪಡಿಸಲಾಗುತ್ತದೆ ಎಂಬ ಸುದ್ದಿ ಇದಾದರೂ, ಈ ಜನ್ಮದಲ್ಲಿ ನಾವಿಬ್ಬರೂ ಒಂದಾಗಲಿಲ್ಲ, ಮುಂದಿನ ಜನ್ಮದಲ್ಲಾದರೂ ಒಂದಾಗೋಣ ಎನ್ನುತ್ತಾ ಹೃದಯ ಛಿದ್ರವಾಗಿ ಆತ್ಮಹತ್ಯೆಗೆ ಶರಣಾದವರು ಇದರಿಂದ ಭಾರೀ ಹರ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅವರು ಹರ್ಷಿತರಾಗಿ ಹೋದರೂ, ಈ ಲೋಕದಲ್ಲಿ ಪ್ರೇಮಿಗಳ ಆತ್ಮಹತ್ಯೆ ಪ್ರಮಾಣವೂ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ ಎಂಬ ಕಳವಳಕಾರಿ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಹುಟ್ಟುವ ಮೊದಲೇ ಹೃದಯ ಸರಿಪಡಿಸಿಕೊಳ್ಳಲು ಅವಕಾಶವಿರುವುದರಿಂದ, ಈ ಜನ್ಮದಲ್ಲಿ ಛಿದ್ರಗೊಂಡ ಹೃದಯವನ್ನು ಮರು ಜನ್ಮದಲ್ಲಿ ರಿಪೇರಿ ಮಾಡಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ತಂತ್ರಜ್ಞಾನದ ಸಂಶೋಧಕನಿಗೆ ಅತ್ಯುನ್ನತ ಪ್ರೇಮಿ ಪ್ರಶಸ್ತಿ ನೀಡಲು ಪ್ರೇಮಿಗಳು ನಿರ್ಧರಿಸಿದ್ದರೆ, ಆತನನ್ನು ಹಿಡಿದು ಚಚ್ಚಲು ಪ್ರೇಮಿಗಳ ಹೆತ್ತವರು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಪ್ರೇಮಿಗಳ ಹೃದಯ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತಿದ್ದರೆ, ಪ್ರೇಮಿಗಳ ಹೆತ್ತವರ ಹೃದಯ ಲಬೋ ಲಬೋ ಅಂತ ಮಾತ್ರವೇ ಬಡಿದುಕೊಳ್ಳುತ್ತಿರುವುದು ವಿಜ್ಞಾನ ರಂಗಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ವಿಜ್ಞಾನ ಇಷ್ಟು ಮುಂದುವರೆದಿದೆಯಾ? ಹುಟ್ಟುವ ಮೊದಲೇ ಹೃದಯ ರಿಪೇರಿ, ಹೃದಯದ ರೋಗ, ಅಂದರೆ ಹುಟ್ಟುವ ಮೊದಲೇ ಪ್ರೇಮ. ಹುಟ್ಟುವ ಮೊದಲೇ ಈ ಪ್ರೇಮ ಯಾರೊಂದಿಗೆ ಮಾಡುವುದು? ಸ್ವಲ್ಪ ದಿನಗಳು ನಾನು ನಿದ್ರೆ ಮಾಡಿದ್ದಕ್ಕೆ ಇಷ್ಟೆಲ್ಲಾ ಬದಲಾವಣೆಯೇ. ಓಫ್! ನನ್ನ ಸ್ನೇಹಿತರೊಬ್ಬರು ಎಂದಿಗೂ ಸತ್ಯವನ್ನೇ ಹೇಳ್ತಿರ್ತಾರೆ, 'ಬದಲಾವಣೆಯೇ ಜಗದ ನಿಯಮ'. ಆ ವ್ಯಕ್ತಿ ಎಂತಹ ದೂರಾಲೋಚನೆಯುಳ್ಳವರು, ಎಷ್ಟು ಮೇಧಾವಿಗಳು.

    ಪ್ರತ್ಯುತ್ತರಅಳಿಸಿ
  2. ಮಾವಿನ ಅರಸರೆ,

    ಸತ್ಯವಂತರಿಗಿದು ಕಾಲವಲ್ಲಾ....
    ನಿಮ್ಮ ದುರಾಲೋಚನೆಯುಳ್ಳ ಸ್ನೇಹಿತರು ಯಾವತ್ತೂ ಸತ್ಯವನ್ನೇ ಹೇಳೋದ್ರಿಂದ ಅವರಿಗಿಲ್ಲಿಲ್ಲ ಜಾಗ.
    ಅವರ ನರಮೇಧಾವಿತನಕ್ಕೆ ಜೈಲಾಗಲಿ!

    ಪ್ರತ್ಯುತ್ತರಅಳಿಸಿ
  3. ಹುಟ್ಟುವ ಮೊದಲೇ ಹೃದಯ ರಿಪೇರಿ! ಹುಟ್ಟುವ ಮೊದಲೇ ಸಾಯಿಸುವ ಸುದ್ದಿ ಕೇಳಿ ಬೇಸತ್ತವರಿಗೆ ಕೊನೆಗೂ ಒಂದು ಒಳ್ಳೆ ಸುದ್ದಿ ಸಿಕ್ಕಿತು!

    ಅನ್ವೇಷಿಗಳೇ, ನಿಮ್ಮ ವರದಿಗಾರ, ಈ ಸುದ್ದಿ ಸಂಗ್ರಹಕ್ಕೆ ನಮ್ಮೂರಿಗೆ ಬಂದಿದ್ದನೇ?

    ಪ್ರತ್ಯುತ್ತರಅಳಿಸಿ
  4. ಶ್ರೀತ್ರೀ ಅವರೆ,
    ಬೇ(ಗ)ಸತ್ತವರಿಗೆ ಒಳ್ಳೆಯ ಸುದ್ದಿ ಅಂತ ನೆನಪಿಸಿದ್ದಕ್ಕೆ ಧನ್ಯವಾದ.

    ನೀವು ಅಂದುಕೊಂಡಿದ್ದು ಸರಿಯಾಗಿದೆ. ಶಿಕಾಗೋಗೆ ನಮ್ಮ ಒದರಿಗಾರರು ಬಂದಾಗ ಅಲ್ಲೆಲ್ಲಾ ರಾಶಿ ರಾಶಿ ಭಗ್ನ ಹೃದಯಗಳಿದ್ದವು ಎಂದು ಗೊತ್ತಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D