ಬೊಗಳೆ ರಗಳೆ

header ads

Theft Tech. ಕೋರ್ಸ್ ಅಭ್ಯಾಸ

(ಬೊಗಳೂರು ಕಳ್ಳತನ ಬ್ಯುರೋದಿಂದ)
ಬೊಗಳೂರು, ನ.28- ತಾನು ದರೋಡೆ ಮಾಡಿಲ್ಲ ಎಂದು ಪೊಲೀಸನೊಬ್ಬ ಬೊಗಳೆ ರಗಳೆ ಬ್ಯುರೋ ಎದುರು ಬೊಗಳೆ ಬಿಟ್ಟಿದ್ದಾನೆ.
 
ದರೋಡೆ ಆರೋಪದಲ್ಲಿ ಮುಖ್ಯ ಕನಿಷ್ಠ ಬಿಲ್ಲೆ ಬಂಧನಕ್ಕೊಳಗಾದ ಪ್ರಕರಣ ಇಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠರ ರಕ್ಷಣೆಯ ನಿಟ್ಟಿನಲ್ಲಿ ಧಾವಿಸಿದ ನಿಕೃಷ್ಟ ಬ್ಯುರೋ ಸಿಬ್ಬಂದಿಗೆ ವಿಶೇಷ ಸಂದರ್ಶನ ನೀಡಿದ ಮಹಾನ್ ಕನಿಷ್ಠ ಬಿಲ್ಲೆ, ತಾನು ಕಳ್ಳರನ್ನು ಹಿಂಬಾಲಿಸುತ್ತಿದ್ದೆನಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
 
ಈಗಿನ ದಿನಗಳಲ್ಲಿ ಪೊಲೀಸ್ ಹುದ್ದೆಗಿಂತ ಕಳ್ಳರ ಹುದ್ದೆಯು ಮೇಲ್ಮಟ್ಟದ್ದಾಗಿದ್ದು, ಅವರಿಗೆ ಹೆಚ್ಚು ಸಂಪಾದನೆ ಇದೆ. ನಮಗೆ ಬೀದಿ ಬೀದಿಗಳಲ್ಲಿ ಕೈಯೊಡ್ಡುವಾಗ ಬರೇ ಹತ್ತಿಪ್ಪತ್ತು ರೂಪಾಯಿ ಕಮಾಯಿ ಆಗುತ್ತಿದೆ. ಹಾಗಾಗಿ ಭವ್ಯ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಳ್ಳತನದ ಕೋರ್ಸ್ ಮಾಡುತ್ತಿದ್ದೆ ಎಂದು ಸಂದರ್ಶನದಲ್ಲಿ ಅವರು ಉಗುಳಿದ್ದಾರೆ.
 
ತಾನು International Theft Technology ಕೋರ್ಸ್‌ಗೆ ಸೇರಿದ್ದೆ. ಇದರಲ್ಲಿ ಥಿಯರಿಗಿಂತಲೂ ಪ್ರಾಕ್ಟಿಕಲ್‌ಗೆ ಹೆಚ್ಚು ಆದ್ಯತೆ. ಹಾಗಾಗಿ ಪ್ರಯೋಗ ನಿರತನಾಗಿದ್ದಾಗ ತಾನು ಈ ಪ್ರಕರಣದಲ್ಲಿ ಅನ್ಯಾಯವಾಗಿ ಸಿಲುಕಿಹಾಕಿಕೊಂಡೆ ಎಂದವರು ಹೇಳಿದ್ದಾರೆ.
 
ಈ ಕಳ್ಳ ನನ್ಮಕ್ಳಿಗೆ ಸರಿಯಾಗಿ ಆಭರಣ ಹಿಡಿದುಕೊಳ್ಳುವುದು ಗೊತ್ತಿಲ್ಲ. ಆದುದರಿಂದ ಇಲ್ಲಿ ಸ್ವಲ್ಪ ಮಟ್ಟಿನಲ್ಲಿ ನನ್ನ ಪ್ರಯೋಗ ಯಶಸ್ವಿಯಾಗಿತ್ತು. ಆದರೆ ಅವರು ನಮ್ಮ ಠಾಣೆಗೇ ಮರಳಿ ಬಂದು ನಮ್ಮ ಮೇಲೆಯೇ ದೂರು ನೀಡುತ್ತಾರೆ ಎಂಬುದು ಯಾರಿಗೆ ತಿಳಿದಿತ್ತು ಎಂದು ಅವರು "ಎಡವಿದ್ದು ಎಲ್ಲಿ" ಎಂಬ ಮಾದರಿಯಲ್ಲಿ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದರು.
 
ಛೆ, ಇಂಥ ಕೋರ್ಸಿಗೆ ಸೇರಿದ್ರೆ ಪ್ರಯೋಗ ಮಾಡೋಕೂ ಜನಾ ಬಿಡ್ತಾ ಇಲ್ಲ. ನಾವು ನಮ್ಮ ಹೊಟ್ಟೆ ಪಾಡಿಗೆ ಇದನ್ನು ಕಲಿಯುತ್ತಾ ಇದ್ದೇವೆ. ಅವರಿಗೆಲ್ಲಾ ನಾವು ಹೆಚ್ಚು ಸಂಪಾದನೆ ಮಾಡುತ್ತೇವೆ ಎಂಬ ಬಗ್ಗೆ ಈರ್ಷ್ಯೆ ಇರಬೇಕು. ಇದಕ್ಕಾಗಿ ಅವರು ನಿಜವಾದ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಹ್ಹ..ಹ್ಹ...ಕಳ್ಳನ ದಾರಿ...ಕಳ್ಳನಿಗೇ ಗೊತ್ತು...!! ಆದರೆ ಪೋಲಿಸರು ಹೇಗೆ ಈ ನಕಲಿ ಕಳ್ಳನನ್ನು " ಹಿಡಿದರು"?? ಬಹುಶಃ " ಈ ಪೊಲೀಸ್ " ತಾನು ಕಳ್ಳತನ ಮಾಡಿದಿದುದರಲ್ಲಿ "ಮಾಮುಲ್" ಕೊಡಲಿಲ್ಲವೇನೋ?? ಅದಕ್ಕೆ "ನಿಜವಾದ" ಪೊಲೀಸರು ಇವನನ್ನು ಒಳಗೆ ತಳ್ಳಿದ್ದಾರೆ...ಆಮೇಲೆ ಗೊತ್ತಾಗಿರಬಹುದು...ಇವನು ನಮ್ಮವನೇ ಅಂತ....ಹೌದಲ್ಲವೇ ಅನ್ವೇಷಿಗಳೇ...??!!

    ಅಂತೂ ನನ್ನನ್ನು ಹಿಡಿದಿರಿ..!!

    ಪ್ರತ್ಯುತ್ತರಅಳಿಸಿ
  2. ಈ ಪ್ರಕರಣದಲ್ಲಿ ಕಾಣದ 'ಕೈ'ಗಳ 'ಕೈ'ವಾಡವಿದ್ದಂತಿದೆ. ಯಾವುದಕ್ಕೂ ಒಮ್ಮೆ ಸಿಬಿಐ ತನಿಖೆ ಆಗಿ ಬಿಡಲಿ.

    ಪ್ರತ್ಯುತ್ತರಅಳಿಸಿ
  3. nanna pc DamAr eMdide. pakkadavarige heccu toMdare mADalu iShTavilla. hAgAgi naMtara pratikriyisuve.

    asatyarE kShame irali

    ಪ್ರತ್ಯುತ್ತರಅಳಿಸಿ
  4. ಅನಾನಿಮಸ್ಗಿರಿಯವರೆ,

    ನಿಮ್ಮ ಹೇಳಿಕೆ ಸರಿ. ಮಾಮೂಲು ಕೊಡದಿರುವುದು ಈ ಪೊಲೀಸನಿಗೆ ಮಾಮೂಲು ಆಗಿದ್ದುದರಿಂದ ಸಿಕ್ಕಿಹಾಕಿಕೊಂಡ.

    ಕಳ್ಳನ ದಾರಿ ಕಳ್ಳನಿಗೇ ಗೊತ್ತು ಅಂದ್ರಲ್ಲ... ಹಾಗಾಗಿ ನಿಮ್ಮನ್ನು ಹಿಡಿದೆವು ಎಂದುಕೊಳ್ಳಲೇ?

    ಪ್ರತ್ಯುತ್ತರಅಳಿಸಿ
  5. ವೀರ ಕೇಸರಿಗೆ ಸ್ವಾಗತ.

    ಸಿಬಿಐಗೂ ಕೈಗೂ ನಂಟಿರುವುದರಿಂದ ಕೈ ಬಿಸಿ ಮಾಡಿದ್ರೆ ಮಾತ್ರ ನಿಮ್ಮ ಆಕಾಂಕ್ಷೆ ಫಲಿಸಬಹುದು.

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ,

    ನಿಮ್ಮ ಕಂಪ್ಯೂಟರ್ ಢಮಾರ್ ಆಗಿರುವುದರಲ್ಲಿ ನಮ್ಮ ಕೈವಾಡ ಇಲ್ಲ ಅಂತ ಸ್ಪಷ್ಟಪಡಿಸುತ್ತಿದ್ದೇವೆ.

    ಮತ್ತು ಕ್ಷಮೆ ಇರಲಿ ಅಂತ ನೀವೇ ನಮ್ಮ ಕೈಗೆ ಕ್ಷಮೆ ಕೊಟ್ಟಿದ್ದೀರಿ. ಅದನ್ನು ಇರಿಸಿಕೊಳ್ಳುತ್ತೇವೆ.

    ಪ್ರತ್ಯುತ್ತರಅಳಿಸಿ
  7. ಅನ್ವೇಷಿಗಳೆ,
    ನಾನು ಈ ಕೋರ್ಸ್ ಸೇರ್ಕೊಳ್ಳೊಣಾಂತ ಅರ್ಜಿ ಗುರಾಯಿಸಿದೆ, ಆದರೆ ಅದಕ್ಕೆ ದೊಡ್ಡ ವ್ಯಕ್ತಿಗಳ [ಕಳ್ಳರ ಅನ್ನಬಹುದು] ಶಿಫಾರಸ್ಸು ಬೇಕಾಗಿದೆ.
    ದಯವಿಟ್ಟು ಒಂದು ಶಿಫಾರಸ್ಸು ಪತ್ರ ಕೊಡ್ತೀರಾ ?
    ಕ್ಷಮಿಸಿ ನಿಮ್ಮ ಬಗ್ಗೆ ಬಹಳ ಕೇಳಿದ್ದೆ ಅದಕ್ಕೆ ನಿಮಗೆ ವಿನಂತಿಸಿಕೊಳ್ಲುತ್ತಿದ್ದೇನೆ.ನಿಮ್ಮ ಬಗ್ಗೆ ನನಗೆ ತಪ್ಪು ಕಲ್ಪನೆಯೆನೂ ಇಲ್ಲಾ.

    ಪ್ರತ್ಯುತ್ತರಅಳಿಸಿ
  8. Managing Director ಅವರೆ,

    ನಿಮ್ಮ ಅರ್ಜಿ ನಮ್ಮಲ್ಲಿಗೇ ನೇರವಾಗಿ ಬಂದಿದೆ. ಕಳ್ಳರ ಕೈಗೇ ಸಿಕ್ಕಿರುವುದರಿಂದ ಹೃದಯ ಕಳ್ಳರಿಗೆ ಯಾವುದೇ ತಲೆ ಬಿಸಿ ಬೇಕಾಗಿಲ್ಲ ಅಂತ ಸ್ಪಷ್ಟಪಡಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D