ಬೊಗಳೆ ರಗಳೆ

header ads

ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗ

ಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗಮುಂದೆ ಹೋಗಬೇಕಿತ್ತು. "ಉಜ್ಜಯಿನಿ ದರ್ಶನ"ಕ್ಕೆ ಮೃಚ್ಛಕಟಿಕದವರು ಏನಾದರೂ ತೀರ್ಥ ಕುಡಿಸಿಬಿಟ್ಟರೆ ಎಂಬ ಆತಂಕದಿಂದ ಸಹವಾಸ ಬೇಡ ಅಂದುಕೊಂಡು ಒಬ್ಬ ಮುಸಲ್ಮಾನ ವ್ಯಕ್ತಿಯ ಮೂರು ಚಕ್ರದ ರಿಕ್ಷಾ ಏರಲಾಯಿತು. ಆತನ ಹೆಸರು ಶಕೀಲ್ ಅಬ್ಬಾಸ್. 250 ರೂಪಾಯಿಗೆ ಉಜ್ಜಯಿನಿ ದರ್ಶನ ಮಾಡಿಸುವುದಾಗಿ ಒಪ್ಪಿಕೊಂಡಾಗ ಮೂರು ಲೋಕದ ದರ್ಶನವಾದ ಅನುಭವವಾಯಿತು.

ಮೊದಲು ತೆರಳಿದ್ದು ಗಢಕಾಳಿಕಾ ದೇವಿಯ ಮಂದಿರಕ್ಕೆ. ಕಾಳಿದಾಸನಿಗೊಲಿದ ಮಹಾಕಾಳಿಯು ನೆಲೆನಿಂತ ತಾಣವಿದು. ಬಸ್ಸಿನಲ್ಲಿ ಧೂಳಿದಾಸನಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಬಂದಾಗಿದೆ, ಅಲ್ಲೇ ರಿಕ್ಷಾದಿಂದಿಳಿದು , ಕಾಲಿದೋಸೆ ಸೇವಿಸಿ ಕಾಳಿದಾಸನ ಕೋಟಿಯ ಒಂದು ಭಾಗದಷ್ಟು ಜ್ಞಾನವನ್ನಾದರೂ ಕೊಡು ತಾಯಿ ಎಂದು ಪ್ರಾರ್ಥಿಸಿದಾಗ, ಇದುವೇ ಕೋಲ್ಕತಾದ ಕಾಳಿಯ ಮೂಲ ಸ್ಥಾನ ಎಂಬ ವಿವರಣೆ ದೊರೆಯಿತು.


ಮುಂದೆ ಸಾಗಿದ್ದು, ಮದ್ಯ ಸೇವಿಸುವ ದೇವತೆಯಿರುವ ತಾಣ ಕಾಳಭೈರವ ಕ್ಷೇತ್ರಕ್ಕೆ. ಇಲ್ಲಿ ಬಾಟಲಿ ರಮ್ ವಿಸ್ಕಿಯೆಲ್ಲವನ್ನು ಕಾಳಭೈರವನ ಬಾಯಲ್ಲಿರಿಸಿದರೆ, ಅದು ಹರಿದುಹೋಗುತ್ತಿತ್ತು. ಮಹಾಕಾಳೇಶ್ವರನ ದರ್ಶನ ಮಾಡಿದವರು, ಶಿವ ಗಣವಾದ ಕಾಳಭೈರವನನ್ನೂ ಒಂದು ಕೈ ನೋಡಿಬರಬೇಕೆಂಬುದು ಪ್ರತೀತಿ ಅಂತ ಆ ಮುಸಲ್ಮಾನ ವಿವರಿಸಿದ. (ಎಡಚಿತ್ರ: ಗಢಕಾಳಿಕಾ ಮಂದಿರ)


ಖಂಡಿತವಾಗಿಯೂ ಇದೊಂದು ತೀರ್ಥಯಾತ್ರೆ ಎಂಬುದು ಖಚಿತವಾಯಿತು. ಸುತ್ತಮುತ್ತ ನೋಡಿದಾಗ ಕೆರ್ರ್.... ಎಂಬ ಕಿರುಚಾಟದೊಂದಿಗೆ ನನ್ನ ಕೈಯಲ್ಲಿದ್ದ ಪ್ರಸಾದದ ಗಂಟನ್ನು ಎಳೆದೊಯ್ದಿತು ನನ್ನ ಪ್ರೀತಿಯ ಮಂಗ! ಎಲ್ಲಿ ನೋಡಿದರಲ್ಲಿ ಈ ನಮ್ಮ ಸಂತಾನದವರು! ನಮ್ಮದೇ ಬುದ್ದಿ, ನಮ್ಮದೇ ತುಂಟಾಟ, ನಮ್ಮದೇ ನಗು... ಮರ್ಕಟ ಮನಸಿನ ನಮಗೂ ಅದಕ್ಕೂ ಎಷ್ಟೊಂದು ಹೋಲಿಕೆ! (ಬಲಚಿತ್ರ: ಕಾಲಭೈರವ ಮಂದಿರ ಎದುರು ಪ್ರವಾಸಿಗರನ್ನು "ಸುಲಿಯುವ" ಜಾತಿಬಾಂಧವರು!)


ಬಳಿಕ ಮಂಗಗಳ ಗ್ರಹದಲ್ಲಿರುವ ನಮ್ಮಂಥವರಿಗೆ ಮಂಗಳಕಾರಕನಾಗಿರುವ ಮಂಗಳನ ಉತ್ಪತ್ತಿ ಸ್ಥಾನ ಎಂದು ಕರೆಯಲಾಗುವ ಮಂಗಲನಾಥ ಮಂದಿರ. ಮಂಗಳ ಗ್ರಹ ಶಾಂತಿ ಇಲ್ಲಿ ವಿಶೇಷ. ಖಗೋಳಶಾಸ್ತ್ರೀಯವಾಗಿಯೂ ಈ ಸ್ಥಾನಕ್ಕೆ ಬಹಳ ಮಹತ್ವವಿದೆ. ಅಲ್ಲಿಂದ ರಾಮಘಾಟ್ ಎಂಬ ಸರೋವರ ತಟ. ಸುತ್ತ 1000 ಮಂದಿರಗಳಿವೆ ಎಂಬ ಮಾಹಿತಿ ದೊರೆಯಿತು ರಿಕ್ಷಾವಾಲ ಶಕೀಲ್‌ನಿಂದ.


ಮೂರು ಚಕ್ರದ ಗಾಡಿಯಲ್ಲಿ ಕುಳಿತಾಗ ಮೃಚ್ಛಕಟಿಕದ್ದೇ ನೆನಪು. ಮುಂದೆ ಸಾಗಿದೆವು. ಕ್ಷಿಪ್ರಾ ನದಿಯನ್ನು ಶಿಪ್ರಾ ನದಿಯೆಂದೂ ಇಲ್ಲಿ ಕರೆಯಲಾಗುತ್ತಿದ್ದು, ಇದು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತಾ ಚಂಬಲ್ ನದಿಯನ್ನು ಸೇರಿ ಆ ಮೂಲಕ ಸಮುದ್ರ ಪಾಲಾಗುತ್ತದೆ. ಮಧ್ಯಭಾರತದ ಗಂಗೆ ಎಂಬ ಹೆಗ್ಗಳಿಕೆಯ, ವಿಷ್ಣುವಿನ ಬೆರಳಿನಿಂದ ಹುಟ್ಟಿದ ಕ್ಷಿಪ್ರೆಯ ತಟದಲ್ಲಿಯೇ ವಿಕ್ರಮಾದಿತ್ಯನನ್ನು ಕಾಡಿದ ಬೇತಾಳ ನೇತುಕೊಂಡಿರುವ ವಟವೃಕ್ಷವಿದೆ. ಇದುವೇ ಸಿದ್ಧವಟ ಕ್ಷೇತ್ರ. ಇಲ್ಲಿ ಪಿತೃಗಳ ಮೋಕ್ಷಕ್ಕೆ ವಿಶೇಷ ಸೌಕರ್ಯವಿದೆ.


ಉತ್ತಮ ಮಾತುಗಾರ ಅರ್ಚಕರೊಬ್ಬರು ಎಲ್ಲಾ ಮಾಹಿತಿ ನೀಡಿದರು. ಆದರೆ ಬಲವಂತವಾಗಿ ಕೀಳುವುದಿಲ್ಲ ಎನ್ನಬಹುದು. ನಿಮ್ಮ ಶಕ್ತ್ಯಾನುಸಾರ ಕೊಡಿ, ಪಿತೃಗಳಿಗೆ ಮುಕ್ತಿ ದೊರಕಿಸುತ್ತೇವೆ ಎಂದರು.


ಮುಂದೆ ಹೊಕ್ಕಿದ್ದು ಎರಡು ಗುಹೆಗಳನ್ನು. ಅದರಲ್ಲೊಂದು ವಿಕ್ರಮಾದಿತ್ಯನ ಅಣ್ಣ ಭರ್ತೃಹರಿ ಅಲಿಯಾಸ್ ಭಟ್ಟಿ ತಪಸ್ಸು ಮಾಡಿದ ತಾಣ. ಅಲ್ಲಿ ಭಟ್ಟಿಯ ತಪಸ್ಸು ಹಾಳುಗೆಡಹಲು ಇಂದ್ರನು ಶಿಲೆಕಲ್ಲನ್ನು ಎಸೆದಾಗ, ಅದನ್ನು ಭಟ್ಟಿಯು ಭದ್ರವಾಗಿ ಎತ್ತಿ ಹಿಡಿದ. ಆಗ ಮೂಡಿದ ಆತನ ಕೈಯ ಪಡಿಯಚ್ಚು, ಮತ್ತು ಆ ಆಘಾತಕ್ಕೆ ತುಂಡಾದ ಶಿಲೆಯನ್ನು ಅದರೊಳಗಿರುವ ಮಹಾತ್ಮರು ತೋರಿಸಿದರು, ವಿವರಿಸಿದರು. ಭಟ್ಟಿಯ ಮೂರ್ತಿಯೂ ಅಲ್ಲಿತ್ತು. (ಎಡಚಿತ್ರ: ಭಟ್ಟಿ ತಪಸ್ಸು ಮಾಡಿದ ತಾಣ, ಭಟ್ಟಿಯ ಮೂರ್ತಿಯೂ ಇದೆ.)


ಸಮಯವಿಲ್ಲದ ಕಾರಣ, ಓಡೋಡಿದಾಗ ಸಾಗಿದ್ದು, ಶ್ರೀಕೃಷ್ಣ-ಬಲರಾಮ ಎಂಬ ಯಾದವ ಬ್ರದರ್ಸ್, LKG ವಿದ್ಯಾಭ್ಯಾಸ ಮಾಡಿದ ಮತ್ತು Friend ಸುದಾಮನ ಜತೆಗೆ ಆಟವಾಡಿದ ಸಾಂದೀಪನಿ ಆಶ್ರಮಕ್ಕೆ. ಅಲ್ಲಿರುವ ಗೋವುಗಳ ಮೈದಡವಿ ಸುಂದರ ವಾಸ್ತುಶಿಲ್ಪ ಕಲೆಯ ಚಾರ್‌ಧಾಮ ಮಂದಿರ, ಬಡೇ ಗಣೇಶ್‌ಜಿ, ಪಂಚಮುಖಿ ಹನುಮಾನ್, ವಿಕ್ರಮಾದಿತ್ಯನ ಆರಾಧ್ಯ ದೇವಿಯಾದ ಹರಸಿದ್ಧಿದೇವಿ ಮಂದಿರ ಇವೆಲ್ಲಕ್ಕೂ ಕಣ್ನೋಟ ಹರಿಸಿದಂತೆ ಸಾಗಿದ್ದು. ಯಾಕೆಂದರೆ ಅದಾಗಲೇ ಕತ್ತಲಾಗಿತ್ತು.


ಮತ್ತೆ ಕೊನೆಯ ನನ್ನ ಪ್ರಯತ್ನವೆಂದರೆ ವಿಕ್ರಮಾದಿತ್ಯನ ಬಹುನಿರೀಕ್ಷಿತ ಸಿಂಹಾಸನ ಏರಲು ಯತ್ನಿಸಿದ್ದು! ಆದರೆ ಇದು ಪ್ರತಿಕೃತಿಯಷ್ಟೇ. ಅವನ ಸಿಂಹಾಸನವೇರುವ ಅರ್ಹತೆಯುಳ್ಳವರು ಯಾರೂ ಈ ಜಗತ್ತಿನಲ್ಲಿ ಇಲ್ಲದಿರುವುರಿಂದ ಅದು ಪಾತಾಳಕ್ಕೆ ಹೋಯಿತು ಎಂಬ ಕಥೆ ಕೇಳಿಬರುತ್ತದೆ. ಹಾಗಾಗಿ ಸಿಂಹಾಸನ ಏರುವ ಚಪಲ ವಿಫಲವಾಗಿ ಮರಳಿ ಇಂದೋರಿಗೆ ಕತ್ತಲಲ್ಲಿ ತಡಕಾಡುತ್ತಾ ತೆರಳಿದಾಗ ಏನನ್ನೋ ಕಳೆದುಕೊಂಡ ಭಾವ. (ಮೇಲಿನಚಿತ್ರ: ಸಾಂದೀಪನಿ ಆಶ್ರಮದಲ್ಲಿ ಶಿವಲಿಂಗದೆದುರು ಎದ್ದು ನಿಂತಿರುವ ನಂದಿ. ಇದು ವಿಶೇಷವಿರಬಹುದು. ಬಲಚಿತ್ರ: ವಿಕ್ರಮಾದಿತ್ಯ ಸಿಂಹಾಸಾರೂಢ ವಿಕ್ರಮಾದಿತ್ಯ.)


ಬೆಂಬಿಡದಂತೆ ಕಾಡುವ ಆ ಮೃಚ್ಛಕಟಿಕ, ಬಸ್ಸು ತುಂಬಿದರೂ ಖಾಲಿ ಖಾಲಿ ಎನ್ನುತ್ತಾ ಪ್ರಯಾಣಿಕರನ್ನು ರಾಶಿ ಹಾಕುವ ಕಂಡಕ್ಟರುಗಳು ನೆನಪಾಗುವುದರೊಂದಿಗೆ ಕಾಳಿದಾಸ, ವಿಕ್ರಮಾದಿತ್ಯರು ಮನದಲ್ಲಿ ಅಚ್ಚಳಿಯದೆ ಕುಳಿತಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

14 ಕಾಮೆಂಟ್‌ಗಳು

  1. ಪ್ರವಾಸ ಕಥನ series ಸೂಪ್ಪರ್ರ್ ಸರ್ರ್... ಮಂಗಗಳನ್ನು 'ಜಾತಿ ಬಾಂಧವರು' ಅಂದದ್ದು ವಿಪರೀತ ನಗೆ ತರಿಸಿತು..!

    ಪ್ರತ್ಯುತ್ತರಅಳಿಸಿ
  2. ಸುಶ್ರುತ ಅವರೆ,

    ನೀವು ವಿಪರೀತಕ್ಕೆ ಹೋಗಿದ್ದು ಕೇಳಿ ವಿಷಾದವಾಯಿತು.

    ನಗೆಯನ್ನು ಕಾಯ್ದಿರಿಸಿ. ಯಾಕೆಂದರೆ ಎಲ್ಲದರಲ್ಲೂ ಉಳಿತಾಯ ಮಾಡಬೇಕು ಅಂದ ನಮ್ಮಜ್ಜ ಹೇಳ್ತಾ ಇದ್ರು.

    ಪ್ರತ್ಯುತ್ತರಅಳಿಸಿ
  3. ಕೋಳಿದಾಸನ ಮೂಲ ಹುಡುಕಿದ್ದಕ್ಕೆ ಮತ್ತು ಭಟ್ಟಿ ಇಳಿಸುವವರ ಮೂಲ ಪುರುಷನ ನೆಲೆ ನೋಡಿದ್ದಕ್ಕೆ ನಿಮಗೆ ಏಟುಗಳು. ಇವೆಲ್ಲಾ ಸಾರ್ವಜನಿಕವಾಗಿ ಹೇಳಬಾರದ ನಗ್ನಸತ್ಯಗಳು ಅಂತ ನಿಮಗನ್ನಿಸಲಿಲ್ಲವೇ? ಅಂತೂ ನನ್ನನ್ನು ಹೊರುವವನನ್ನು ನೋಡಿದ್ದೀರಿ ಅಂದ ಮೇಲೆ ನಿಮಗೆ ಧನ್ಯವಾದಗಳು ಹೇಳಲೇಬೇಕು. ಮಣ್ಣಿನ ಬಂಡಿಯ ಬಗ್ಗೆ ಇನ್ನೂ ಸ್ವಲ್ಪ ವಿಶದೀಕರಿಸುವಿರಾ (ಮುಂದಿನ ಅಧ್ಯಾಯದಲ್ಲಿ)?

    ಪ್ರತ್ಯುತ್ತರಅಳಿಸಿ
  4. ತುಂಬಾ ಚೆನ್ನಾಗಿತ್ತು!! ವಿಕ್ರಮಾದಿತ್ಯನನ್ನು ಕಾಡಿದ ಬೇತಾಳ ಬರೀ ಕಥೆಯಲ್ಲಿ ಮಾತ್ರ ಇದೇ ಅಂದುಕೊಂಡಿದ್ದೆ. ಹಾಗೆಯೇ ವಿಕ್ರಮಾದಿತ್ಯನ ಸಿಂಹಾಸನದ ಬಗ್ಗೆ ಕೂಡ.

    ಆದರೆ,ನೀವು ಹಾಕಿರುವ ಚಿತ್ರದಲ್ಲಿರುವ ವಿಕ್ರಮಾದಿತ್ಯನನ್ನು ನೋಡಿ ನಿರಾಸೆಯಾಯಿತು.


    ಮುಂದಿನ ತೀರ್ಥಯಾತ್ರೆ ಯಾವಾಗ ಹೋಗ್ತೀರಾ?

    ಪ್ರತ್ಯುತ್ತರಅಳಿಸಿ
  5. ಮೃಚ್ಛಕಟಿಕದವರು ತೀರ್ಥ ಕುಡಿಸಿಯಾರೆಂದು....ಮುಸಲ್ಮಾನರ ರಿಕ್ಷಾ ಏರಿದವರಿಗೆ....ಪದೇ ಪದೇ.. " ಮೃಚ್ಛಕಟಿಕದ ನೆನಪೇಕೋ??ಅನ್ಯಾಯವಾಗಿ " ತೀರ್ಥ" ಮಿಸ್ಸ್ ಆಯಿತಲ್ಲಾ ಎಂಬ ಬಾಧೆಯೋ??!!" ಒಟ್ಟಿನಲ್ಲಿ ನಮಗೂ "ಬಿಟ್ಟಿ ತೀರ್ಥ ಯಾತ್ರೆ" ಮಾಡಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ,
    ಇನ್ನೂ ಭಟ್ಟಿ ಇಳಿಸಿದ್ದನ್ನು ಜೀರ್ಣಿಸಿಕೊಂಡಿಲ್ಲ, ಅದಾಗಲೇ ನಿಮ್ಮ ಏಟು ಬಿದ್ದಿದೆ.
    ಇಷ್ಟೆಲ್ಲಾ ರಗಳೆ ಕೇಳಿಯೂ ಮಣ್ಣಿನ ಬಂಡಿಯೇ ಬೇಕು ಅನ್ನೋದರ ಹಿಂದೆ ಭಟ್ಟಿಯಲ್ಲಿ ಮಣ್ಣು ಹೊರುವವರ ಕೈವಾಡ ಇರಲೇ ಬೇಕು.

    ಪ್ರತ್ಯುತ್ತರಅಳಿಸಿ
  7. ಪಬ್ಬಿಗರೇ,

    ಈ ಪ್ರಯಾಸ ಕಥನದಲ್ಲಿ ಮೊದಲ ಮೂರು 1/4 ಭಾಗದಲ್ಲಿ ಉಜ್ಜಯಿನಿಗೆ ತೆರಳಿದ್ದನ್ನೇ ಕೊರೆದು, ಉಳಿದ ಕೇವಲ ಒಂದು ಭಾಗದಲ್ಲಿ ಇಡೀ ಉಜ್ಜಯಿನಿ ತಿರುಗಿಸಿದ್ದೇ ಅಸತ್ಯ ಅನ್ನೋದು ಗೊತ್ತಾಗಲಿಲ್ಲವೇ?

    ಪ್ರತ್ಯುತ್ತರಅಳಿಸಿ
  8. ಶ್ರೀ ತ್ರೀ ಅವರೆ,
    ಅಂದರೆ... ಅಂದರೆ...ನೀವು ಬೇತಾಳ ಕಾಡುತ್ತಿದ್ದುದು ಕಥೆಯಲ್ಲಿ ಮಾತ್ರ ಅಂದಿರಲ್ಲಾ... ನಿಮ್ಮ ಮಾತಿನರ್ಥ...
    ಬೊಗಳೆ ರಗಳೆಯಲ್ಲಿ ಅಸತ್ಯಾನ್ವೇಷಿ ಕಾಡುತ್ತಿದ್ದಾನೆಂದೇ????

    ಈಗ ತೀರ್ಥ ಯಾತ್ರೆಗೆ ಹೋಗಿದ್ದಾಗಿದೆ, ಅಲ್ಲಿಂದ ಬರೋದೇ ಮತ್ತೊಂದು "ದಂಡ" ಯಾತ್ರೆ ಆಗಲಿದೆ.

    ಪ್ರತ್ಯುತ್ತರಅಳಿಸಿ
  9. ಅನಾನಿಮಸರೆ,

    ಇಂಥದ್ದೊಂದು ಆರೋಪ ಹೊರಿಸಿ ಇದ್ದ ಅಲ್ಪಸ್ವಲ್ಪ ಮರ್ಯಾದೆ ಮೂರಾಬಟ್ಟೆ ಮಾಡಲು ಯತ್ನಿಸಿದ್ದಕ್ಕೆ, ಮತ್ತು ತೀರ್ಥ ಸೇವಿಸಿಯೂ ನೀವು ಈ ರೀತಿ ಪ್ರಜ್ಞೆ ತಪ್ಪದೆ ಇರುವುದಕ್ಕೆ ನಿಮಗೆ ಪ್ರತಿ-ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  10. ಅನ್ವೇಷಣೆ ಸತ್ಯಕ್ಕೆ ಹತ್ತಿರವಾಗಿಯೂ ಅಸತ್ಯವಾಗಿದೆ!? ಜೊತೆಗೆ, ಕಾಲಿದೋಸೆ ತಿಂದು, ಕಾಳಿದಾಸನ ಜ್ಞಾನದ ಕೋಟಿಯಲ್ಲೊಂದು ಪಾಲನ್ನು ಬೇಡಿ, ಕೋತಿಬುದ್ಧಿ ನೋಡಿ, ಅದರಲ್ಲೆಲ್ಲ ನಮಗೂ ಪಾಲು ಕೊಟ್ಟ ನಿಮಗೆ ಕಾಳಿಮಾತೆ `ವರ' ನೀಡುವಳೆಂದು ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  11. ಜ್ಯೋತಿಯವರಿಗೆ ನಮಸ್ಕಾರ,
    ಅನ್ವೇಷಣೆ ಅಸತ್ಯವಾಗಿದೆ ಅಂತ ಒಪ್ಪಿಕೊಂಡದ್ದು ಕೇಳಿ ತುಂಬಾ ಸಂತೋಷವಾಯಿತು.

    ಮತ್ತು ನಮ್ಮ ಕೋತಿಬುದ್ದಿಯಲ್ಲಿ ಎಲ್ಲರಿಗೂ ಪಾಲು ಕೊಟ್ಟಿದ್ದೇನೆಂಬ ಆರೋಪ ಮಾತ್ರ ಅಕ್ಷಮ್ಯ.

    ಬರುತ್ತಾ ಇರಿ.

    ಪ್ರತ್ಯುತ್ತರಅಳಿಸಿ
  12. ಅರ್ಚಕರ ದುಡ್ಡು ಕೀಳುವ ಕಾರ್ಯವನ್ನು ಚೆನ್ನಾಗಿ ಹೇಳಿದ್ದೀರಿ....

    ನಾನಿನ್ನೂ ಭೇಟಿ ನೀಡದ (ಎಂದು ನೋಡುತ್ತೇನೋ ಗೊತ್ತಿಲ್ಲ) ಸ್ಥಳಗಳ ವಿವರಗಳನ್ನು ನೀಡಿರುವುದಕ್ಕೆ ಧನ್ಯವಾದಗಳು :-)

    ಪ್ರತ್ಯುತ್ತರಅಳಿಸಿ
  13. ಅನ್ನಪೂರ್ಣ ಅವರೆ,
    ದಯವಿಟ್ಟು ಅರ್ಥ ಮಾಡಿಕೊಳ್ಳಿ.... ನಾನಿನ್ನೂ ಅರ್ಚಕರ ದುಡ್ಡು ಕೀಳುವ ಕಾಯಕ ಮಾಡಿಲ್ಲ. ;)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D