(ಬೊಗಳೂರು ಚೆಂಡಾಟ ಬ್ಯುರೋದಿಂದ)
ಬೊಗಳೂರು, ನ.23- ನಗುವು ಪರಮೌಷಧ ಎಂದು ತಿಳಿದವರು ಹೇಳಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇದನ್ನು ಶಿರಸಾವಹಿಸಲು ನಿರ್ಧರಿಸಿದ ಪರಿಣಾಮ ನಿನ್ನೆಯ ಪಂದ್ಯದಲ್ಲಿ ಅತ್ಯಂತ ಗೌರವಾನ್ವಿತ ಸೋಲನ್ನಪ್ಪಿದೆ.ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ಅಂತ ಡಿವಿಜಿಯವರೂ ಹೇಳಿರುವುದರಿಂದ ಪ್ರೇರಣೆಗೊಂಡಿರುವ ಭಾರತೀಯ ಕ್ರಿಕೆಟ್ ತಂಡ, ನಿನ್ನೆಯ ಪಂದ್ಯದಲ್ಲಿ ನಗೆಪಾಟಲಿಗೀಡಾಗುವ ಮೂಲಕ ಭಾರತೀಯರು ಗಹಗಹಿಸಿ ನಗುವಂತೆ ಮಾಡಿದ್ದಾರಲ್ಲದೆ, ದಕ್ಷಿಣ ಆಫ್ರಿಕನ್ನರ ಮುಖದಲ್ಲೂ ಮಂದಹಾಸ ಮೂಡಿಸಲು ಕಾರಣರಾಗಿದ್ದಾರೆ.
ತಂಡವು ಕಡಿಮೆ ರನ್ನಿಗೆ ಆಲೌಟಾದರೆ ಎಲ್ಲರೂ ತಮ್ಮನ್ನು ನೋಡಿ ನಗುತ್ತಾರೆ ಎಂದು ಅರಿತುಕೊಂಡೇ ಕಣಕ್ಕಿಳಿದಿತ್ತು. ಇದೂ ಅಲ್ಲದೆ ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿ ಉಭಯ ದೇಶಗಳ ಮಧ್ಯೆ ಸಂಬಂಧ ಬಲಪಡಿಸಲು ಯತ್ನಿಸಿದ್ದರು. ಈ ಕಾರಣಕ್ಕೆ ದ.ಆಫ್ರಿಕಾದ ಮುಖದಲ್ಲಿ ಗೆಲುವು ಮೂಡಿಸಬೇಕಿದ್ದರೆ ನಾವು ಸೋಲಲೇಬೇಕು ಎಂಬ ಸಿದ್ಧಾಂತದೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವರ್ಧನೆಯಲ್ಲಿ ನಮ್ಮ ತಂಡವು ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಬೊಗಳೆ ರಗಳೆ ಬ್ಯುರೋಗಾಗಿ ಮಾತನಾಡಿಸಲಾಯಿತು. ಅದಕ್ಕೆ ಹೆಚ್ಚಿನವರಿಂದ ಬಂದ ಉತ್ತರ ಬಹುತೇಕ ಒಂದೇ ರೀತಿಯಾಗಿತ್ತು.
"ನಾವಿನ್ನೂ ಆಟ ಆರಂಭವಾಗಿಲ್ಲ ಎಂದೇ ಯೋಚಿಸಿ ಬ್ಯಾಟು ಹಿಡಿದು ನಿಂತಿದ್ದೆವು. ಅವರಿಗೆ ನಮಗೆ ಹೇಳದೆಯೇ ಚೆಂಡೆಸೆದರು. ಮನೆಯ ದೂರವಾಣಿ ಸಂಖ್ಯೆಯನ್ನು ನೆನಪಿಸಿಕೊಳ್ಳುತ್ತಿದ್ದ ನಮಗೆ ಚೆಂಡು ಬಂದದ್ದು ಗೊತ್ತೇ ಆಗಿಲ್ಲ. ಅಷ್ಟರಲ್ಲಾಗಲೇ ಅಂಪೈರು ಕೈ ಎತ್ತಿಯಾಗಿತ್ತು. ಏನನ್ಯಾಯ? ನೋಡಿದರೆ ಹಸಿರಂಗಿಯವರು ಎಸೆದದ್ದು ನೇರವಾಗಿ ವಿಕೆಟಿಗೇ!" ಎಂದವರು ತತ್ತರಿಸಿದರು.
ಅವರು ಹೇಳಿದ "ದೂರವಾಣಿ" ಸಂಖ್ಯೆ ಎಂಬ ಪದದ ಹಿಂದೆ ಬಿದ್ದಾಗ ತಿಳಿದುಬಂದ ಅಂಶವೆಂದರೆ, ಅವರೆಲ್ಲರೂ ಪರದೇಶದಲ್ಲಿರುವುದರಿಂದ Home sick ಆಗಿದ್ದಾರೆ. ಅವರಿಗೆ ಮನೆಗೆ ಫೋನ್ ಮಾಡಲೆಂದು ಮನೆಯ ದೂರವಾಣಿ ಸಂಖ್ಯೆಯನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ಎಷ್ಟೇ ಯೋಚನೆ ಮಾಡಿದರೂ ಒಂದು ಅಂಕಿ ಮಾತ್ರವೇ ನೆನಪಾಗುತ್ತಿತ್ತು. ಆ ಅಂಕಿಯ ಮೇಲೆಯೇ ಗಮನ ಕೇಂದ್ರೀಕರಿಸಿದ ಕಾರಣ ಎಲ್ಲರೂ ಅಷ್ಟೇ ಸಂಖ್ಯೆಯ ರನ್ ಗಳಿಸಿದರು.
ಎಲ್ಲಾ ಅಂಕಿಗಳನ್ನು ಒಟ್ಟುಗೂಡಿಸಿದಾಗ ಎಸ್‌ಟಿಡಿ ಕೋಡ್ ಸಹಿತದ ಒಂದು ದೂರವಾಣಿ ಸಂಖ್ಯೆ ಲಭಿಸಿತು. ಇದೊಂದು ಅದ್ಭುತ ಪ್ರಯೋಗವಾಗಿತ್ತು ಎಂದು ನಂಬಲರ್ಹ ಮೂಲಗಳು ತಿಳಿಸಿಲ್ಲ. ಈ ಮಧ್ಯೆ, ಸಚಿನ್, ದ್ರಾವಿಡ್ ಮತ್ತು ಧೋನಿ ಅವರೆಲ್ಲ ಒಂದಷ್ಟು ಅನುಭವ ಹೊಂದಿದ್ದರಿಂದ ಎರಡಂಕಿ ನೆನಪಿಸಿಕೊಳ್ಳಲು ಸಮರ್ಥರಾಗಿದ್ದರು.
ಇಷ್ಟರ ನಡುವೆಯೂ ಅವರೆಲ್ಲರೂ ದಾಖಲೆಗೆ ಯತ್ನಿಸಿದ್ದರು ಎಂಬ ಅಂಶವೂ ಬಯಲಾಗಿದೆ. 82ರನ್ ಇರುವಾಗ ಅದಕ್ಕೆ 3 ರನ್ ಸೇರಿಸಲು 5 ಮಂದಿ ದಾಂಡಿಗರು ತಮ್ಮ ವಿಕೆಟ್‌ಗಳನ್ನು ದಾನ ಮಾಡಿದ್ದರು!
ಮಿತ್ರ ರಾಷ್ಟ್ರಕ್ಕೂ ದಾಖಲೆಗೆ ಅವಕಾಶ ಮಾಡಿಕೊಟ್ಟ ದಾಂಡಿದರು ಶತಕವೀರ ಕಾಲಿಸ್‌ನ 4 ಓವರುಗಳಲ್ಲಿ 3 ರನ್ ಮಾತ್ರವೇ ತಮ್ಮಲ್ಲಿ ಉಳಿಸಿಕೊಂಡು, 3 ವಿಕೆಟ್‌ಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
(ಸೂ: ಪ್ರಯಾಸ ಕಥನದ ಮುಂದುವರಿದ ಭಾಗ ಬೇಯುತ್ತಿರುವ ಕಾರಣದಿಂದಾಗಿ ನಾಳೆ ಪ್ರಕಟವಾಗುವ ನಿರೀಕ್ಷೆ ಇದೆ.)
7 ಕಾಮೆಂಟ್‌ಗಳು
ಅಬ್ಬ, ಈಗ ಈ ಸಂಖ್ಯೆ, ದ್ರವಿಡರ ದೂರವಾಣಿ ಸಂಖ್ಯೆಯೇ?
ಪ್ರತ್ಯುತ್ತರಅಳಿಸಿಶಾಲ ಮಕ್ಕಳು, ಅಂಕಿಗಳನ್ನು ಅಭ್ಯಾಸಿಸ್ವುದಕ್ಕ ಸುಲಭವಾಗಲಿ ಎಂದು, ಭಾರತ ತಂಡ ಹೀಗೆ ಆಡಿತು ಎಂಬ ವರದಿ ನಮ್ಮ ಭೂತ ಕ್ಷೇತ್ರದಲ್ಲಿ ಗುಸು ಗುಸು ತಿರಗುತ್ತಿದೆ.
ಸತ್ಯವೇ ಸಂಖ್ಯಾನ್ವೇಷಿಗಳೇ?
ಇಂತಿ
ರಕ್ತಪೀಪಾಸಿ
ನಗಿಸುವುದು ನಿಮ ಧರ್ಮ, ನಗುವುದು ನನ ಕರ್ಮ
ಪ್ರತ್ಯುತ್ತರಅಳಿಸಿನಾವಿಬ್ಬರು ಓಕೆ
ನಮ್ಮಬ್ಬರ ಮಧ್ಯೆ ಕ್ರಿಕೆಟ್ ಯಾಕೆ
ನಮ್ಮಿಬ್ಬರ ನಗುವಿನ ಕಾಯಕ
ಕ್ರಿಕೆಟಿಗರು ನುಗ್ಗಲು ಭಯಾನಕ
ಎಲೈ ವಿಕ್ರಮನೇ, ಇಂದು ಮುಕ್ಕಾಲು ಬರುವುದೆಂಬ ನನ್ನ ನಿರೀಕ್ಷೆ ಸುಳ್ಳಾಗಿಸಿದುದಕ್ಕೆ ಮತ್ತೆ ಮರವೇರುತ್ತಿರುವೆ.
ಭೂತರಮೆಯೇ,
ಪ್ರತ್ಯುತ್ತರಅಳಿಸಿನಿಮ್ಮ ರಕ್ತಪಿಪಾಸುತನಕ್ಕೆ ಜಯವಾಗಲಿ. ಮಕ್ಕಳನ್ನು ಬೆದರಿಸುವ ನೀವೇ ಕ್ರಿಕೆಟ್ ನೋಡಲು ಪ್ರೇರೇಪಿಸಿ ನೀಡಿದ ಸಲಹೆ ಕೇಳಿ ಮಕ್ಕಳು ಮತ್ತೂ ಬೆಚ್ಚಿದ್ದಾರಂತೆ.
ಮಾವಿನರಸರೆ,
ಪ್ರತ್ಯುತ್ತರಅಳಿಸಿಯಾರು ಉಗುಳಲಿ ಎಂದು
ನಾವು ಬೊಗಳುವುದಿಲ್ಲ
ಬೊಗಳುವುದು ಅನಿವಾರ್ಯ ಕರ್ಮ ನಮಗೆ !
(ಕವಿಯ ಕ್ಷಮೆ ಕೋರಿ)
ಮೂರೂ ಮುಕ್ಕಾಲು ಗಳಿಗೆಯೊಳಗೆ ಮರದಿಂದ ಇಳಿದು ಬಾರದಿದ್ದರೆ ಮೇಲಿರುವ ರಕ್ತಪಿಪಾಸು ಭೂತವನ್ನು ಛೂಬಿಡುತ್ತೇವೆ.
ಈ ಒಂದಂಕಿ, ಎರಡಂಕಿ ಕ್ರಿಕೆಟ್ ಆಟಕ್ಕೂ, ನಿಮ್ಮ ತೀರ್ಥಯಾತ್ರೆಗೂ ಏನೋ ಸಂಬಂಧವಿದೆಯೆಂದು ಇಲ್ಲೆಲ್ಲಾ ಶಂಕಿಸಲಾಗುತ್ತಿದೆ.
ಪ್ರತ್ಯುತ್ತರಅಳಿಸಿಸೋಲೇ ಗೆಲುವಿನ ಸೋಪಾನ್ ... ನಮ್ಮ ಸೋಲು ಇತರರ ಗೆಲುವಿಗೆ ಸೋಪಾನ್ ...
ಪ್ರತ್ಯುತ್ತರಅಳಿಸಿ(facing trouble typing sOpaana correctly, pls excuse)
ಶ್ರೀನಿಧಿ ಅವರೆ,
ಪ್ರತ್ಯುತ್ತರಅಳಿಸಿದ.ಆಫ್ರಿಕಾದವರು ಚೆನ್ನಾಗಿ ಸೋಪು ಹಾಕಿ ತೊಳೆದುಬಿಟ್ಟರು!
ನೀವು ಕನ್ನಡ ಟೈಪಿಂಗಿಗೆ ಇದನ್ನು ಪ್ರಯತ್ನಿಸಿ ನೋಡಿ.
http://service.monusoft.com/KannadaTypePad.htm
ಏನಾದ್ರೂ ಹೇಳ್ರಪಾ :-D