ಬೊಗಳೆ ರಗಳೆ

header ads

ಶ್ರೀಮಂತಿಕೆ: ಅಂಬಾನಿಗಳಿಗಿಂತಲೂ ಶ್ರೀಮಂತರು!

(ಬೊಗಳೂರು ಕಾಳದಂಧೆ ಬ್ಯುರೋದಿಂದ)
ಬೊಗಳೂರು, ನ.20- ದೇಶದ ಧೀರ-ಭಾಯಿ ಭಾಯಿ ಖ್ಯಾತಿಯ ಅಂಬಾನಿದ್ವಯರು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿಯವರನ್ನು ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದರೂ, ತಮ್ಮನ್ನು ಹಿಂದಿಕ್ಕಲು ಅವರಿಗೆ ಸಾಧ್ಯವೇ ಇಲ್ಲ, ನಾವೇ ನಂಬರ್ 1 ಎಂದು ಬಡ ಬೋರೇಗೌಡ ಹೇಳಿಕೊಂಡಿದ್ದಾನೆ.
 
ಅಂಬಾನಿ ಸಹೋದರರನ್ನು ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿರುವ ಬಗ್ಗೆ ಜನಸಾಮಾನ್ಯರ ಪ್ರತಿನಿಧಿಯಾದ ಬಡಬೋರೇಗೌಡನನ್ನು ಬೊಗಳೆ ರಗಳೆ ಬ್ಯುರೋ ಮಾತನಾಡಿಸಿದಾಗ ಕಂಡು ಕೇಳರಿಯದ ತನಿಖಾ ವರದಿಗೆ ಅರ್ಹವಾದ ಹತ್ತು ಹಲವು ಅಂಶಗಳು ದೊರೆತವು.
 
ಅಂಬಾನಿ ಸಹೋದರರಿಗೆ ಅಷ್ಟೊಂದು ಶ್ರೀಮಂತಿಕೆಯಿದೆ. ಆದರೆ ಅವರು ನಮ್ಮಂತೆ ಅರೆ ಹೊಟ್ಟೆಯಲ್ಲಿ ಇರುವುದು ಸಾಧ್ಯವೇ? ಅಥವಾ ಅರೆಬಟ್ಟೆಯಲ್ಲಿ ಕಾಲ ಕಳೆಯುವುದು ಸಾಧ್ಯವೇ ಎಂದು ಪ್ರಶ್ನಿಸಿರುವ ಬಡ ಬೋರೇಗೌಡ, ಆದರೂ ನಾವೆಷ್ಟು ಸಂತೋಷವಾಗಿದ್ದೇವೆ, ನೆಮ್ಮದಿಯಿಂದಿದ್ದೇವೆ, ಅವರು ನೆಮ್ಮದಿಯಿಂದಿದ್ದಾರಾ ಎಂದು ಪ್ರಶ್ನಿಸಿದ್ದಾನೆ. ಮಾತ್ರವಲ್ಲ ಹೃದಯಶ್ರೀಮಂತಿಕೆಯಲ್ಲೂ ನಾವೇ ಮುಂದಿದ್ದೇವೆ ಎಂಬುದನ್ನೂ ಖಚಿತಪಡಿಸಿದ್ದಾನೆ.
 
ಈ ವಿಷಯದ ಕುರಿತು ಅಸತ್ಯಾನ್ವೇಷಿಯ ಬದ್ಧವೈರಿಯಾದ ಸತ್ಯಾನ್ವೇಷಿಯನ್ನು ಪ್ರಶ್ನಿಸಲಾಯಿತು.
 
ಫೋರ್ಬ್ಸ್ ಪತ್ರಿಕೆಗೆ ಅವರೆಲ್ಲ ಹಣ ಕೊಟ್ಟು ಈ ರೀತಿ ಅಚ್ಚು ಹಾಕಿಸಿದ್ದಾರೆ ಎಂಬಲ್ಲಿಂದ ಮಾತಿಗಾರಂಭಿಸಿದ ಸತ್ಯಾನ್ವೇಷಿ, ಅವರಿಗಿಂತ ಹೆಚ್ಚು ಶ್ರೀಮಂತರ ಹೆಸರು ನಾನು ಹೇಳಬಲ್ಲೆ ಎಂದು ಎದೆತಟ್ಟಿಕೊಂಡು ಉಗುಳಿಬಿಟ್ಟ.
 
ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತೀ ಎಂದು ಪ್ರಶ್ನಿಸಿದಾಗ, "ಈಗ ಕೇಂದ್ರದಲ್ಲಿ ಸರಕಾರದ ಕೈಗೊಂಬೆಯಾಗಿ ಕಾರ್ಯಾಚರಿಸುತ್ತಿದೆ ಎಂಬ ಆರೋಪ ಹೊತ್ತಿರುವ ಸಿಬಿಐಯಲ್ಲಿರುವ ರಾಜಕೀಯ ರಹಿತ ಅಧಿಕಾರಿಗಳನ್ನು ತನಿಖೆಗೆ ಬಿಡಿ, ಅವರು ಎಲ್ಲ ರಾಜಕಾರಣಿಗಳ ಆಸ್ತಿ ಸಂಶೋಧಿಸಲಿ, ಆಗ ಗೊತ್ತಾಗುತ್ತೆ, ಯಾರು ಹೆಚ್ಚು ಶ್ರೀಮಂತರು ಎಂದು" ಎಂಬ ಉತ್ತರ ಬಂದಿತು.
 
ಈ ಕಾರಣಕ್ಕೆ ಕಪ್ಪು ಹಣ ಮತ್ತು ಬಿಳಿ ಹಣ ಎಂಬ ಎರಡು ವಿಭಾಗಗಳನ್ನು ಮಾಡಿ ಎರಡೂ ವಿಭಾಗಗಳ ಶ್ರೀಮಂತರನ್ನು ಗುರುತಿಸುವ ಪ್ರಯತ್ನವಾಗಬೇಕು ಎಂದು ಆತ ಫೋರ್ಬ್ಸ್ ಪತ್ರಿಕೆಗೆ ಸಲಹೆ ನೀಡಿದ್ದಾನೆ.
 
ಉದ್ಯಮಪತಿಗಳೆಲ್ಲ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣರಾಗಿ ಆಸ್ತಿಪಾಸ್ತಿ ಮಾಡುತ್ತಿದ್ದರೆ, ರಾಜಕಾರಣಿಗಳು ಸಂಪನ್ಮೂಲಗಳ ಗಣಿ ಅಗೆದು, ಮೇವು ತಿಂದು, ಪ್ರಜೆಗಳನ್ನು ಹಿಂಡಿ ಹಣ ಮಾಡುತ್ತಿದ್ದಾರೆ, ಹಾಗಾಗಿ ಇದು ಹೆಚ್ಚು ಸಾಧನೆಯಿಂದ ಸಂಪಾದಿಸಿದ ಹಣ ಎಂಬುದು ಸತ್ಯಾನ್ವೇಷಿಯ ಅಭಿಮತ.
 
ಹೀಗಾಗಿ ಉದ್ಯಮಿಗಳ ಶ್ರೀಮಂತಿಕೆಯನ್ನು ನಗಣ್ಯ ಎಂದು ಪರಿಗಣಿಸಬಹುದಾಗಿದೆ ಎಂದಾತ ಹೇಳಿದ್ದಾನೆ.
 
-----------
ಸೂಚನೆ: ಉಜ್ಜಯಿನಿಗೆ ತೆರಳುವ ವಾಹನ ಕೈಕೊಟ್ಟಿದೆ. ಪ್ರಯಾಸ ಕಥನ ಶೀಘ್ರವೇ ಪ್ರಕಟವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಯಾರಿಂದಲೂ ನನ್ನನ್ನು ಹಿಂದಿಕ್ಕಲು ಸಾಧ್ಯವಿಲ್ಲ.

    -ಪೆದ್ದ ಮೂರ್ಖ

    ಪ್ರತ್ಯುತ್ತರಅಳಿಸಿ
  2. ಸತ್ಯವನ್ನು ಉಗುಳಿದವರಲ್ಲಿ,

    ಚುಣಾವಣೆ ಮುಂಚೆ ಸ್ವಯಂ ಘೋಷಣೆ, ಮಾಡುವವರು ಕಡಿಮೆ ಘೋಷಿಸುತ್ತಾರೆ ಎಂಬುದು ನಿಮ್ಮ ಅನಿಸಿಕೆಯೇ?

    ಇಂತಿ
    ಭೂತ

    ಪ್ರತ್ಯುತ್ತರಅಳಿಸಿ
  3. ಅಂಬಾರಿಯವರು ಅಜ್ಜಮ್ಮಿಯನ್ನೂ ಹಿಂದಕ್ಕೆ ಹಾಕಿದರೇ? ಹಾಗಿದ್ದರೆ ಅಜ್ಜಪ್ಪನವರೆಲ್ಲಿ? ಅವರೇನು ಕಡಲೇಕಾಯಿ ತಿನ್ನುತ್ತಿದ್ದಾರಾ? (ಹೇಗಿದ್ದರೂ ಪರಿಷೆ ಪ್ರಾರಂಭವಾಗಿದೆ).
    ಅಸತ್ಯರೇ ನೀವೇನೂ ಯೋಚಿಸಬೇಡಿ. ಸತ್ಯರು ಎಷ್ಟೇ ಮುಂದೆ ಹೋಗಲಿ, ನಿಮಗೇ ಜಯ. ಇದು ಕಲಿಗಾಲ, ನಿಮ್ಮದೇ ಕಾಲ.

    ಪ್ರತ್ಯುತ್ತರಅಳಿಸಿ
  4. ಅನಾನಿಸ್ಮಸ್ ಅವರೆ
    ಪೆದ್ದ ಮೂರ್ಖನನ್ನು ಇತ್ತ ಕಳಿಸಿಕೊಟ್ಟರೆ, ನಮಗೂ ಉಪಕಾರವಾಗಬಹುದು

    ಪ್ರತ್ಯುತ್ತರಅಳಿಸಿ
  5. ಭೂತವೇ,
    ಮತ್ತೆ ಎಲ್ಲಾ ಘೋಷಣೆ ಮಾಡಿಬಿಟ್ಟರೆ ಅವರನ್ನು ಹಿಡಿಯುವುದಾದರೂ ಹೇಗೆ.
    ಮಾತ್ರವಲ್ಲ ಆದಾಯ ತೆರಿಗೆ ಅಧಿಕಾರಿಗಳಿಗೆ ಕೆಲಸ ಹೆಚ್ಚಾಗುವುದಿಲ್ಲವೇ? ಹಾಗಾಗಿ ಅವರು ಎಲ್ಲವನ್ನೂ ಘೋಷಿಸುವುದಿಲ್ಲ.

    ಪ್ರತ್ಯುತ್ತರಅಳಿಸಿ
  6. ಹೌದು ಮಾವಿನರಸರೆ,

    ಸತ್ಯವಂತರಿಗಿದು ಕಾಲವಲ್ಲಾ ಅಂತ ದಾಸರು ಹಾಡಿಲ್ಲವೇ? ಅದುವೇ ನಮಗೆ ಪ್ರೇರಣೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D