ಬೊಗಳೆ ರಗಳೆ

header ads

(ಹಿಂ)ಬಾಲಕರಿಗೂ ಸೈಕಲ್: ಸರ್ಕಾರಿ ಯೋಜನೆ ವಿಫಲ

[ಇದು ಚಿಕ್ಕ ಮತ್ತು ದೊಡ್ಡ ಮಕ್ಕಳ ದಿನಾಚರಣೆ ವಿಶೇಷ]
(ಬೊಗಳೂರು ಕಾಲೇಜು ಬ್ಯುರೋದಿಂದ)
ಬೊಗಳೂರು, ನ.14-  ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾದ ಸಂಗತಿ. ಇತ್ತೀಚೆಗೆ ಕರ್ನಾಟಕ ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದ ಆತಂಕಗೊಂಡಿರುವ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿದೆ.
 
ನಮಗೆ ಈ ಹುಡುಗಿಯರನ್ನು ಹಿಂಬಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಒಕ್ಕೊರಲ ಬೇಡಿಕೆಗೆ ಮಣಿದ ಸರಕಾರವು, ಹುಡುಗಿಯರನ್ನು ಹಿಂಬಾಲಿಸಲು ಅನುವಾಗುವಂತೆ ಹುಡುಗರಿಗೂ ಸೈಕಲ್‌ಗಳನ್ನು ವಿತರಿಸಲು ನಿರ್ಧರಿಸಿತ್ತು ಎಂದು ತಿಳಿದುಬಂದಿದೆ.
 
ಈ ಹಿನ್ನೆಲೆಯಲ್ಲಿ ಸೈಕಲೇರಿ ಹುಡುಗಿಯರನ್ನು ಹಿಂಬಾಲಿಸಲು ಹೊರಟ ಹುಡುಗರ ದಂಡು ಅಲ್ಲಲ್ಲಿ ಮುಗ್ಗರಿಸುತ್ತಾ ಮುಂದೆ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಎಷ್ಟು ಮುಂದುವರಿದಿದ್ದಾರೆ ಎನ್ನುವುದನ್ನು ಪರೀಕ್ಷಾ ಫಲಿತಾಂಶದಿಂದಲೇ ಅರಿಯಬಹುದಾಗಿರುವುದರಿಂದ ಈ ಕುರಿತು ಅವಸರ ಮಾಡಿದ ಬೊಗಳೆ ರಗಳೆಯು ಭವಿಷ್ಯ ವಾಣಿ ಬ್ಯುರೋದ ಮೊರೆ ಹೋಗಲಾಯಿತು.
 
ಈ ಭವಿಷ್ಯ ನುಡಿಯ ಪ್ರಕಾರ, ಹುಡುಗಿಯರ ಹಿಂದೆ ಬಿದ್ದ ಹುಡುಗ ವಿದ್ಯಾರ್ಥಿಗಳು ಸೈಕಲೇರಿ ಮುಂದೆ ನಡೆಯುವ ಬದಲು ಮತ್ತಷ್ಟು ಹಿಂದೆ ಬೀಳಲಿದ್ದಾರೆ. ಇದಕ್ಕೆ ಕಾರಣವನ್ನೂ ಪತ್ತೆ ಹಚ್ಚಲಾಗಿದ್ದು, ಅವರ "ಹುಡುಗಿಯರ ಹಿಂದೆ ಬೀಳುವಿಕೆ" ಪ್ರಕ್ರಿಯೆಯಿಂದಾಗಿ ಅವರು ಓದಿನಲ್ಲೂ ಹಿಂದೆ ಬಿದ್ದಿದ್ದರು!
 
ಈ ವರದಿಯನ್ನು ತೀವ್ರವಾಗಿ ಪ್ರತಿಭಟಿಸಿರುವ ಹುಡುಗ ವಿದ್ಯಾರ್ಥಿಗಳು, ತಾವು ಹಿಂದೆ ಬೀಳಲು ಕಾರಣವನ್ನೂ ನೀಡಿದ್ದಾರೆ.
 
"ಈ ಹುಡುಗಿಯರು ನಮ್ಮ ಸೈಕಲನ್ನು (ಮನಸ್ಸನ್ನು ಎಂದು ಓದಿಕೊಳ್ಳುವುದು) ಹಾಳು ಮಾಡುತ್ತಾರೆ, ಅವರು ನಮ್ಮ ಸೈಕಲ್ ಚಕ್ರದ (ಕನಸಿನ ಬಲೂನಿನ ಅಂತ ಓದಿಕೊಳ್ಳುವುದು) ಗಾಳಿ ಠುಸ್ಸೆಂದು ತೆಗೆದುಬಿಡುತ್ತಾರೆ. ಹಾಗಾಗಿ ಎದ್ದು ಬಿದ್ದು ಸರಿಪಡಿಸಿಕೊಂಡು ಮುಂದೆ ಬರುವಾಗ ವಿಳಂಬವಾಗಿದೆ!!!" ಎಂಬುದು ಅವರಿಂದ ದೊರೆತ ಉತ್ತರ.
 
ಒಟ್ಟಿನಲ್ಲಿ ಸರಕಾರದ ಯೋಜನೆಯೊಂದು ಅಸಫಲವಾಗುವ ಮೂಲಕ ಬಾಲಕರು ಹಿಂ-ಬಾಲಕರೇ ಆಗಿಯೂ, ಬಾಲಕಿಯರು ಮುಂ-ಬಾಲಕಿಯರೇ ಆಗಿಯೂ ಉಳಿಯುವಂತಾಗಿದೆ.
 
------------------
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!
ಎಂದೂ ಕಂಡು ಕೇಳರಿಯದ ಪ್ರಯಾಸ ಕಥನ ಶೀಘ್ರವೇ
ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

  1. ಈ ವರದಿ ಓದುವಾಗ ನನಗೆ ಒಂದೆರಡು ಸಂಶಯಗಳು ಉದ್ಭವವಾಗಿವೆ.

    ೧. ಹುಡುಗಿಯರ ಹಿಂದೆ ಏಕೆ ಹುಡುಗರು ಬೀಳಬೇಕು? ಅವರುಗಳ ಹಿಂದೆ ಗುಂಡಿ ಏನಾದರೂ ಇದೆಯಾ? ಅಥವಾ ಹಿಂದೆ ಬಿದ್ದರೆ ಏನಾದರೂ ಸಿಗುತ್ತದೆಯಾ? ಮುಂದೆ ಯಾಕೆ ಬೀಳಬಾರದು.

    ೨. ಹುಡುಗಿಯರೂ ಏಕೆ ಹುಡುಗರ ಹಿಂದೆ ಹೋಗಬಾರದು ಅಥವಾ ಬೀಳಬಾರದು?

    ೩. ಸೈಕಲ್ ಯೋಜನೆ ಏಕೆ ವಿಫಲವಾಗಿದೆ. ಸೈಕಲೇರಿ ಒಬ್ಬರನ್ನೊಬ್ಬರು ಹಿಂಬಾಲಿಸಿದರೆ ದೇಶದ ಪ್ರಗತಿ ಆಗುವುದು ಎಂದು ನಮ್ಮ ನಿಧಾನಿಗಳು ಹೇಳಿದ್ದು ನೆನಪಾಗ್ತಿದೆ.

    ಇವೆಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದಿದ್ದರೆ ...

    ಪ್ರತ್ಯುತ್ತರಅಳಿಸಿ
  2. ತನಿಖಾ ವರದಿ ಚೆನ್ನಾಗಿದೆ. ಒಟ್ಟಿನಲ್ಲಿ ಬಾಲಕಿಯರು ಅಬಲೆಯರಲ್ಲ ಎಂಬುದು ಮತ್ತೆ ಸಾಬೀತಾಗಿದೆ.

    ನಿನ್ನೆಯ ನನ್ನ ಪ್ರತಿಕ್ರಿಯೆಗೆ ನಿಮ್ಮ ಮರು ಪ್ರತಿಕ್ರಿಯೆ ನೋಡಿ ಅಚ್ಚರಿಗೊಂಡು ಪರಿಕಿಸಲಾಗಿ, settingsನಲ್ಲಿ ಆಗಿದ್ದ ಭಾರೀ ಗಂಡಾಂತರವನ್ನು ಸರಿಪಡಿಸಿದ್ದೇನೆ. ಹಾಗೆಯೇ, ನೀವು ಪ್ರತಿಭಟಿಸಲಾರಿರಿ ಎಂಬ ಭರವಸೆಯೊಂದಿಗೆ ನಿಮ್ಮ ಬ್ಲಾಗಿನ linkಅನ್ನೂ ನನ್ನ ಬ್ಲಾಗಿನಲ್ಲಿ ಸೇರಿಸಿದ್ದೇನೆ ಎಂದು ತಿಳಿಸಲಿಚ್ಚಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  3. ಶ್ರೀಗಳೆ,
    ನಿಮ್ಮ ಸಕಾಲಿಕ ಪ್ರಶ್ನೆಗಳಿಗೆ ಉತ್ತರಿಸಲು ತಲೆ ಕೆಳಗೆ ಕಾಲು ಮೇಲೆ ನಿಂತರೂ ಹೊಳೆಯುತ್ತಿಲ್ಲ.

    ಆದರೆ ವಿಕ್ರಮಾದಿತ್ಯನನ್ನು ಬೇತಾಳ ಕಾಡಿದ ನಾಡಿನಲ್ಲೇ ನಾವೀಗ ಇರೋದ್ರಿಂದ

    ಬಂದದ್ದೆಲ್ಲಾ ಬರಲಿ, ಬೇತಾಳನ ದಯವೊಂದಿರಲಿ... ಎಂದು ಬಾಯಿ ಮುಚ್ಚಿ ಕೂರುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  4. ಸುಶ್ರುತರೇ,
    ನೀವು ಮೌನವಾಗಿ ಗಾಳ ಹಾಕುತ್ತಾ ಇದ್ದದ್ದು ಇದುವರೆಗೆ ಗೊತ್ತೇ ಆಗಿಲ್ಲ ನೋಡಿ...

    ಹಾಗಾಗಿ ನಾವು ಕೂಡ ಒಂದು ಎರೆಹುಳವನ್ನು ನಮ್ಮ ಗಾಳಕ್ಕೆ ಸಿಕ್ಕಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  5. ಓ ಹೋ,

    ಸೈಕಲ್ ಓಡ್ಸಿದ್ದು ಮುಂ-ಬಾಲಕಿಯರು, ಹಿಂದೆ ಓಡಿಸ್ಕೊಂಡ್ ಹೋದದ್ದು/ಬಿದ್ದದ್ದು, ಹಿಂ-ಬಾಲಕರು.

    ಮದ್ಯೆ, ಬೇತಳನ್ನೆಕೆ ಕರೆತಂದಿರಿ :ಯೋ

    ಇಂತಿ
    ಭೂತೇಂದ್ರ

    ಪ್ರತ್ಯುತ್ತರಅಳಿಸಿ
  6. ಹುಡುಗಿಯರಿಗೆ...ಸೈಕಲ್ಲು....ಹುಡುಗರಿಗೆ...ಲೂನಾ ಕೊಡ್ಸಿದ್ರೆ...ಪರಿಸ್ಥಿತಿ ಸುಧಾರಿಸಬಹುದು ಅಂತ ನನ್ನ ಅಭಿಪ್ರಾಯ..!

    ಪ್ರತ್ಯುತ್ತರಅಳಿಸಿ
  7. ನಡೆದಾಡುವ ಭೂತ ಫ್ಯಾಂಟಮರೇ,

    ಬೇತಾಳ ಯಾವತ್ತೂ ಬೆಂಬಿಡನು ಎಂಬ ಕಾರಣಕ್ಕೆ ಹಿಂ-ಬಾಲಕರಿಗೊಂದು ಉಪಮೆಯಿದು.

    ನೀವು ಭೂತವಾದರೂ ಬೇತಾಳನ ಪರ ವಕಾಲತ್ತು ವಹಿಸುವುದೇಕೆ ಎಂದು ತಕ್ಷಣವೇ ತಿಳಿಸದಿದ್ದರೆ.... ಸಾವಿರ ಹೋಳು... :)

    ಪ್ರತ್ಯುತ್ತರಅಳಿಸಿ
  8. ಅನಾನಸ್ ರಸದವರೆ,

    ನಿಮ್ಮ ಸಲಹೆ ತಲೆ ಹೋಗುವಂಥದ್ದು. ಹುಡುಗರಿಗೆ ಲೂನಾ ಕೊಡಿಸಿದ್ರೆ ಅವರು ಸಿಕ್ಕಾಪಟ್ಟೆ ಮುಂದೆ ಹೋಗಿಬಿಡುತ್ತಾರೆ...
    ಆಮೇಲೆ ಅವರನ್ನು ಹಿಡಿಯೋರೇ ಇರುವುದಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿಲ್ಲ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D