(ಬೊಗಳೂರು ಕನ್ನಡಹೋರಾಟ ಬ್ಯುರೋದಿಂದ)
ಬೊಗಳೂರು, ನ.1- ಇಂದು ಕನ್ನಡ ರಾಜ್ಯೋತ್ಸವ. ಅದರಲ್ಲೂ ಸುವರ್ಣ ವರ್ಷದ ಸಂಭ್ರಮದ ಉತ್ಸವ. ಹಾಗಂತ "ಕನ್ನಡ ಅಳಿಯುತ್ತಿದೆ, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂಬ ರಾಜಕಾರಣಿಗಳ ಬಾಯಲ್ಲಿ ಸವೆದುಹೋದ ಸಲಹೆಯನ್ನು ನಮ್ಮ ಬ್ಯುರೋ ಸರ್ವಥಾ ನೀಡುತ್ತಿಲ್ಲ.ಯಾಕೆಂದರೆ, ಯಾರು ಕೂಡ ಕನ್ನಡ ರಕ್ಷಣೆಗೆ, ಉಳಿಸುವಿಕೆಗೆ ಗಮನ ಕೊಡುತ್ತಿಲ್ಲ ಎಂಬ ನಮ್ಮ ಸಾಹಿತಿಗಳು, ಹೋರಾಟಗಾರರು, ಮತ್ತಿತರ ಕನ್ನಡದ ಕಟ್ಟಾಳುಗಳ ವಾದ ಸರಿಯಲ್ಲ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಅಸತ್ಯದ ಮೇಲೆ ಪ್ರಮಾಣ ಮಾಡಿ ಕಂಡುಕೊಂಡಿದೆ.
ಇದಕ್ಕೆ ಕಾರಣವಿದೆ. ಅಳಿಯುತ್ತಿರುವ ಕನ್ನಡವನ್ನು ಉಳಿಸಿ ಎಂದು ಯಾರು ಕೂಡ ಹೋರಾಟ ನಡೆಸಬೇಕಾಗಿಲ್ಲ. ಅದು ಉಳಿಯುತ್ತಿದೆ. ಸುಭದ್ರವಾಗಿ ಉಳಿಯುತ್ತಿದೆ. ನಮ್ಮ ನಿಮ್ಮೆಲ್ಲರ ಮನೆ-ಮನಗಳಲ್ಲಿ ಸುರಕ್ಷಿತವಾಗಿದೆ. ವಿಶೇಷವಾಗಿ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಅದು ಭದ್ರವಾಗಿದೆ. ಅದನ್ನು ಕಾಪಾಡಲಾಗುತ್ತಿದೆ.
ಇದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ:
ಬೊಗಳೆ ರಗಳೆ ಬ್ಯುರೋಗೆ ತ್ವರಿತವಾಗಿ ಕರ್ನಾಟಕದಿಂದ ಒಂದು ಮಾಹಿತಿ ಬೇಕಾಗಿತ್ತು. ಹಾಗಾಗಿ ನಮ್ಮೂರು, ಕನ್ನಡದ ಊರು ಎಂಬ ಕಾರಣಕ್ಕಾಗಿ ಬೆಂಗಳೂರಿನ ಕಂಪನಿಯೊಂದಕ್ಕೆ ದೂರವಾಣಿ ಹಚ್ಚಲಾಯಿತು. ಅಭಿಮಾನದಿಂದ ಕನ್ನಡದಲ್ಲೇ ಮಾತಿಗಾರಂಭಿಸಿ ನಮಸ್ಕಾರ ಎಂದಾಗ, ಗುಡ್ ಮಾರ್ನಿಂಗು ಎಂಬ ಪ್ರತಿ-ದಾಳಿ ನಡೆಯಿತು. "ಈ.... ವಿಷಯದ ಬಗ್ಗೆ ಒಂದಿಷ್ಟು ಮಾಹಿತಿ ಬೇಕಿತ್ತಲ್ಲಾ..." ಎಂದು ಪ್ರಶ್ನಿಸಿದಾಗ.... ತಳಮಳಗೊಂಡಂತೆ ಕಂಡು ಬಂದ ಆ ಹೆಣ್ಣು ಧ್ವನಿ, ಎನ್ನ ಎನ್ನ? ಎಂದು ತಡಬಡಾಯಿಸಿತು. ಬಹುಶಃ ಕನ್ನಡ ತಿಳಿದಿರಲಾರದು ಎಂದು ಗೊತ್ತಿದ್ದಷ್ಟು ಇಂಗ್ಲಿಷಿನಲ್ಲಿ ಕೇಳಲಾಯಿತು... ಊ ಹೂಂ... ಜಗ್ಗುವುದೇ ಇಲ್ಲ...ತಡಬಡಾಯಿಸುವಿಕೆಯೇ ಉತ್ತರವಾಯಿತು.
ಕೊನೆಗೆ, ಅನಿವಾರ್ಯವಾಗಿ ಕಲಿತಿರುವ ಅರೆಬರೆ ತಮಿಳಿನಲ್ಲಿ ಕೇಳಿದಾಗ... ಬದುಕಿದೆಯಾ ಬಡ ಜೀವವೇ ಎಂದು ಕೊಂಡ ಆ ಹೆಣ್ಣು ಧ್ವನಿ ಪಟಪಟನೆ ತಮಿಳಿನಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿತು. ಬ್ಯುರೋ ಸಿಬ್ಬಂದಿಗೆಷ್ಟು ಅರ್ಥವಾಯಿತೋ, ಏನನ್ನು ನಮ್ಮವರು ಬರೆದುಕೊಂಡರೋ... ಅದರಲ್ಲಿ ಎಷ್ಟು ಸರಿಯೋ ತಿಳಿಯಲೊಲ್ಲದು.
ಹಾಗಾಗಿ ಕರ್ನಾಟಕದಲ್ಲಿ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರು ತುಂಬಿ ಹೋಗುತ್ತಾ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡ ಹೆಚ್ಚು ಬಳಸಿದರೆ ಸವೆಯುತ್ತದೆ, ಹಾಗಾಗಿ ಅಲ್ಪಸ್ವಲ್ಪವೇ ಬಳಸಲಾಗುತ್ತದೆ. ಮತ್ತೆ ಅಳಿದುಳಿದ ಕನ್ನಡವನ್ನು ಹೆಚ್ಚು ಉಪಯೋಗಿಸದಂತೆ ಯಾವುದೋ ಸೇಫ್ ಲಾಕರಿನಲ್ಲಿ ಭದ್ರವಾಗಿ ಇರಿಸಲಾಗಿದೆ. ಕನ್ನಡವನ್ನು ಯಾರೂ ಬಳಸದಿದ್ದರೆ ಅದು ಸವೆಯುವುದಾದರೂ ಹೇಗೆ, ಅದು ಅಳಿಯುವುದು ಸಾಧ್ಯವೇ? ಮಿತ ಬಳಕೆಯೇ ಕನ್ನಡದ ರಕ್ಷಣೆಗಿರುವ ಏಕೈಕ ಮಾರ್ಗ ಎಂದು ಕಂಡುಕೊಂಡವರಿಗೊಂದು ದೊಡ್ಡ ನಮಸ್ಕಾರ.
ಇನ್ನೂ ಒಂದು ವಿಷಯವೆಂದರೆ, ಕನ್ನಡಿಗರು ಕೂಡ ಅಲ್ಪಸಂಖ್ಯಾತರಾದಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ಹೆಚ್ಚು ಹೆಚ್ಚು ಸೌಲಭ್ಯ ಪಡೆಯಬಹುದು ಎಂಬ ದೂರಾಲೋಚನೆಯೂ ಕೆಲವರಲ್ಲಿ ಸೇರಿಕೊಂಡುಬಿಟ್ಟಿದೆ.
ಆದುದರಿಂದ "ಎನ್ನಡ ಕನ್ನಡ" ಎಂದರೆ "ಎನ್ನಯ ಕನ್ನಡ" ಎಂದೇ ತಿಳಿದುಕೊಳ್ಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.
ಬೊಗಳೆ ರಗಳೆ ಬ್ಯುರೋದಿಂದ ಸುವರ್ಣ ಕರ್ನಾಟಕದ ಕೊಡುಗೆ ಇಲ್ಲಿದೆ:
ತಾವು ಸ್ವತಃ 'ಕನ್ನಡ ಕನ್ನಡ' ಎಂದು ಬಹಿರಂಗವಾಗಿ ಬೊಬ್ಬಿಡುತ್ತಿದ್ದರೂ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವರಿಗೆ ಮಾತ್ರವೇ ಕರ್ನಾಟಕದಲ್ಲಿ ಉದ್ಯೋಗ ನೀಡುವವರಿಗಾಗಿ ವಿಶೇಷವಾಗಿ ಈ ಕೊಡುಗೆಯನ್ನು ರೂಪಿಸಲಾಗಿದೆ.
ಆದುದರಿಂದ... ಉಳಿದವರು ಮತ್ತು ನಿಜವಾದ ಕನ್ನಡಾಭಿಮಾನಿಗಳಿಗೆ ಈ ಕೊಡುಗೆ ಅಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಇದು ಕನ್ನಡ ಗೊತ್ತಿಲ್ಲದ ಕನ್ನಡದ ಉಟ್ಚು ಓರಾಟಗಾರರಿಗಾಗಿ. ಮತ್ತು ವಿಶೇಷವಾಗಿ ಕನ್ನಡದ ರಾಜಧಾನಿಯಲ್ಲಿ ಕನ್ನಡವನ್ನು ಜತನದಿಂದ ಕಾಯ್ದುಕೊಳ್ಳುತ್ತಾ, ಇಂಗ್ಲಿಷನ್ನು ಬಳಸಿ ಬಳಸಿ ಆಂಗ್ಲ ಭಾಷೆಯನ್ನು ಸವೆಸುತ್ತಾ ನಾಶಪಡಿಸುತ್ತಾ ಇರುವವರಿಗಾಗಿಯೇ ಇದನ್ನು ರೂಪಿಸಲಾಗಿದೆ.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ ಕ್ಷ ತ್ರ ಜ್ಞ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ ಕ್ಷ ತ್ರ ಜ್ಞ
ಸಿರಿಗನ್ನಡಂ ಗೆಲ್ಗೆ I ಕನ್ನಡದಿಂದಲೇ ನಮ್ಮಯ ಏಳ್ಗೆ II
(ಸೂಚನೆ: ಬೇರಾವುದೇ ಕನ್ನಡ ಪತ್ರಿಕೆಗಳು ಮಾಧ್ಯಮ ಇತಿಹಾಸದಲ್ಲೇ ಇದುವರೆಗೆ ನೀಡಿರದ, ನೀಡಲಾರದ ಕೊಡುಗೆಯನ್ನು ನಾವು ಕೊಟ್ಟಿರುವುದರಿಂದ ನಮ್ಮ ಬೆನ್ನು ತಟ್ಟಬೇಕಾಗಿ ವಿನಂತಿ!)
ಮತ್ತಷ್ಟು ಕೊಡುಗೆಗಳು ಇಲ್ಲಿವೆ:
1. ಕನ್ನಡ ನಾಡಿಗೆ ಬಂದ ಪರರಾಜ್ಯದ ಪರಭಾಷಿಕರಿಗೆ ನಮ್ಮ ಭಾಷೆ ಕಲಿಸುವ ಬದಲು ಅವರ ಭಾಷೆಯನ್ನೇ ಕಲಿತು, ಅವರೊಂದಿಗೆ ಅವರಂತಾಗಿಬಿಡುವವರಿಗೆ ಒಂದು ಬಕೆಟ್ ಉಪ್ಪುನೀರು.
2. ಹೊರ ನಾಡಿಗೆ ಹೋಗಿ ಕನ್ನಡ ಮರೆತು, ಮನೆಯಲ್ಲೂ ಆ ಊರಿನ ಭಾಷೆಯಲ್ಲೇ ಬಡಬಡಾಯಿಸುವವರಿಗೆ ಒಂದು ತಂಬಿಗೆ ಮೆಣಸಿನ ಶರಬತ್ತು.
3. ಬೆಂಗಳೂರಿನಲ್ಲಿ ತಮಿಳರು ತಮಿಳಿನಲ್ಲಿ, ಆಂಧ್ರದ ಮಂದಿ ತೆಲುಗಿನಲ್ಲಿ, ಮರಾಠಿಗಳು ಮರಾಠಿಯಲ್ಲಿ, ಹಿಂದಿ ಭಾಷಿಗರು ಹಿಂದಿಯಲ್ಲಿ ಮಾತನಾಡುತ್ತಾರೆ, ಆದರೆ ಹೆಚ್ಚಿನ ಕನ್ನಡಿಗರು ಮಾತ್ರ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ ಎಂಬ ಸಂಗತಿಯನ್ನು ಪತ್ತೆ ಹಚ್ಚಿದ ಸಂಶೋಧಕನಿಗೆ ಕರ್ನಾಟಕ ರತ್ನ.
4. ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡ ಕನ್ನಡ ಎಂದು ಬೊಬ್ಬಿಡುತ್ತಾ, ರಾಜ್ಯೋತ್ಸವದ ಆಚರಣೆ ಮುಗಿದ ತಕ್ಷಣ ಪತಾಕೆ, ಬ್ಯಾನರು ಕಟ್ಟಿಟ್ಟು, ಮುಂದಿನ ವರ್ಷಕ್ಕಾಗಿ ಜತನವಾಗಿ ತೆಗೆದಿಟ್ಟು, ಗಡದ್ದಾಗಿ ನಿದ್ದೆ ಹೋಗುವ ಆಳುವ ಮಂದಿಗೆ ಒಂದು ಪೀಪಾಯಿ ಬೇವಿನ ರಸ.
5. ಪ್ರತಿವರ್ಷ ನವೆಂಬರ್ 1 ಹತ್ತಿರ ಬರುತ್ತಿದ್ದಾಗಲೇ ಕೆಲವರು "ಅಯ್ಯಯ್ಯೋ... ಕನ್ನಡವನ್ನು ಕಾಪಾಡಿ" ಎಂದುಕೊಳ್ಳುತ್ತಾ ದಿಗಿಲಿಗೆ ಬಿದ್ದವರಂತೆ ವರ್ತಿಸುತ್ತಿರುವುದೇಕೆ? ಇದು ಕೂಡ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಜಾರಿಯಲ್ಲಿರುತ್ತದೆ. ಮತ್ತೆ ಈ ಕೂಗಾಟ ಕೇಳಿಬರುವುದು ಮುಂದಿನ ವರ್ಷವೇ. ಹಾಗಿದ್ದರೆ ಮುಂದಿನ ವರ್ಷವೂ ಈ ಕೂಗು ಕೇಳಿಬರುವಂತೆ ಮಾಡುವುದಕ್ಕೆ ಕಾರಣರು ಯಾರು? ಅಂಥವರ ಮುಖಕ್ಕೆ ಬೆಳಗ್ಗೆ ಏಳುವ ಮೊದಲೇ ಬಿಸಿ ಬಿಸಿ ನೀರು ಎರಚಾಟ.
23 ಕಾಮೆಂಟ್‌ಗಳು
ನಮಸ್ಕಾರ
ಪ್ರತ್ಯುತ್ತರಅಳಿಸಿಅಸ್ತ್ಯ ಅನ್ವೇಷಿಗಳೇ , ಎರಡು ವಿಷಯ ಗಮನಿಸಿದ್ದೀರಾ?
೧. ಇವತ್ತು NDTV/CNNIBN ನಲ್ಲಿ ಬೆಂಗಳೂರು ಹೆಸರು ಕುರಿತಾದ ಒಂದು ಐಟಂ ಬರ್ತಾ ಇದೆ. ಅನಂತಮೂರ್ತಿಯವರು ಅದರಲ್ಲಿ ಬೆಂಗಳೂರು ಎನ್ನುವ ಹೆಸರು bangalore ಗೆ ಉ ಪ್ರತ್ಯಯ ಹಚ್ಚಿ ಕನ್ನಡೀಕರಣ ಆದ ಶಭ್ದ ಎಂದು ಹೇಳುವ ಹಾಗಿದೆ!
೨. ಮತ್ತೆ ಇನ್ನೊಂದು ವಿಷಯ ಏನೆಂದರೆ ಇಂಗ್ಲೀಷ್ ಕನ್ನಡಕ್ಕೆ ಶಾಪ ಎಂದು ಅನಂತಮೂರ್ತಿಗಳಿಗೆ ಜ್ಞಾನೋದಯ ಆದ ಹಾಗಿದೆ
ನಿನ್ನೆ/ಮೊನ್ನೆಯ ಪ್ರಜಾವಾಣಿಯಲ್ಲಿನ ಐಟಂ ನೋಡಿ . ಮುಂದೆ ಕನ್ನಡದಲ್ಲಿ ಬರೆವವರು ( ತಾವು ಬರೆದದ್ದನ್ನು ಓದುವವರು? ಎಂಬುದು ಅವರ ಉದ್ದೇಶವೇನೋ ?)
ಇರಲಿಕ್ಕೇ ಇಲ್ಲ. ಎಂದು ಕಳವಳ ವ್ಯಕ್ತಪಡಿಸಿದ್ದಾರೆ
ಈ ಬಗ್ಗೆ ನಿಮ್ಮಿಂದ ಒಂದು ಲೇಖನ ನಿರೀಕ್ಷಿಸಬಹುದೇ?
ಶ್ರೀಕಾಂತ ಮಿಶ್ರಿಕೋಟಿ:
ಕನ್ನಡಕ್ಕೆಂದೂ ಅಳಿವಿಲ್ಲ. ಅಳಿಸ ಹೋದವರಿಗೆ ಉಳಿವಿಲ್ಲ.
ಪ್ರತ್ಯುತ್ತರಅಳಿಸಿನಮ್ಮ ಜಾರಕಾರಣಿಗಳ ಕರಾಮತ್ತಿನಿಂದ ವರುಷವೆಲ್ಲವೂ ರಾಜ್ಯೋತ್ಸವ ನಡೆಯುತ್ತದೆ. ಹಾಗಾಗಿ, ನಾವೆಲ್ಲರೂ ವರುಷ ಪೂರ್ತಿ ಕನ್ನಡವನ್ನು ಮರೆಯುತ್ತಿದ್ದೇವೇನೋ ಅನ್ನಿಸುತ್ತಿದೆ.
ಇಂದಿನ ಬೊ-ರ ಬಹಳ ಸಮಂಜಸ ಲೇಖನ ನೀಡಿದ್ದಕ್ಕೆ ಧನ್ಯವಾದಗಳು
> ಬೆಂಗಳೂರಿನಲ್ಲಿ ತಮಿಳರು ತಮಿಳಿನಲ್ಲಿ, ಆಂಧ್ರದ ಮಂದಿ ತೆಲುಗಿನಲ್ಲಿ, ಮರಾಠಿಗಳು ಮರಾಠಿಯಲ್ಲಿ, ಹಿಂದಿ ಭಾಷಿಗರು ಹಿಂದಿಯಲ್ಲಿ ಮಾತನಾಡುತ್ತಾರೆ, ಆದರೆ ಹೆಚ್ಚಿನ ಕನ್ನಡಿಗರು ಮಾತ್ರ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ ಎಂಬ ಸಂಗತಿಯನ್ನು ಪತ್ತೆ ಹಚ್ಚಿದ ಸಂಶೋಧಕನಿಗೆ ಕರ್ನಾಟಕ ರತ್ನ.
ಪ್ರತ್ಯುತ್ತರಅಳಿಸಿಈ ಪ್ರಶಸ್ತಿಯು ಖಂಡಿತವಾಗಿ ವಿಶ್ವಕನ್ನಡಕ್ಕೇ ಸಿಗತಕ್ಕದ್ದು. ನೋಡಿ - http://vishvakannada.com/node/151 ಮತ್ತು http://vishvakannada.com/node/25
-ಪವನಜ
http://vishvakannada.com/node/25
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಹೇಗಿದ್ದಿರಾ ??
ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು..ಅಂತಾ ಪಾಪ ಕವಿ ಮಹಾನುಭಾವರು ಹೇಳಿ ಹೋದರು..ಆದರೆ ಈಗ ಕನ್ನಡಕ್ಕೆ ಕೈ ಎತ್ತಿದರೆ 'linguistic chuvinist' ಅಂತಾ ಹಣೆಪಟ್ಟಿ ಕಟ್ಟತಾರೆ.
ನೀವು ಕೊಡಬೇಕಿಂದಿರುವ ಎಲ್ಲ ಪ್ರಶಸ್ತಿಗಳ ಜೊತೆ ಒಂದೊಂದು ಕನ್ನಡ ಕಲಿಯಿರಿ-ಕಲಿಸಿರಿ ಪುಸ್ತಕ ಕೊಡಬಹುದೇನೋ..
ನವಂಬರ್ ಖನ್ನಡಿಗರಿಗೆ ಜಯವಾಗಲಿ !
ಶ್ರೀಕಾಂತರೇ,
ಪ್ರತ್ಯುತ್ತರಅಳಿಸಿನಿಮಗೆ ಸ್ವಾಗತ.
ಅನಂತಮೂರ್ತಿಗಳು ಜ್ಞಾನಪೀಠಾಧಿಪತಿಗಳಾದ ಬಳಿಕವಷ್ಟೇ ಜ್ಞಾನೋದಯವಾಗಿದೆ. ಹಾಗಾಗಿ ಅವರು ಕೂಡ ಊರಿನ ಬಗ್ಗೆ ಉರು ಹೊಡೆಯುತ್ತಿದ್ದಾರೆ. ಅವರನ್ನು ಉದ್ಧಾರ ಮಾಡಿದ ಇಂಗ್ಲಿಷನ್ನೇ ಶಾಪ ಎಂದಿದ್ದು ನವೆಂಬರಿಗೆ ಸೂಕ್ತವಾದ ಪದ.
ಮೂರು ನಾಮ ಹಾಕಿಸಿಕೊಂಡ ಶ್ರೀಗಳೇ,
ಪ್ರತ್ಯುತ್ತರಅಳಿಸಿಸಮಂಜಸ ಲೇಖನ ಎಂದು ಕ್ಯಾಕರಿಸಿ ದೂಷಿಸಿದ್ದೀರಿ. ಹಾಗಾಗಿ ಕನ್ನಡಕ್ಕಳಿವಿಲ್ಲ ಎಂದು ಕಳೆದ ವರ್ಷದ ಭಾಷಣವನ್ನೇ ಈ ಬಾರಿಯೂ ಓದಿ ಮರೆಯುವ ರಾಜಕಾರಣಿಗಳಿಗೆ ಕ್ಯಾಕರಿಕೆಯನ್ನು ತಲುಪಿಸಲಾಗುತ್ತದೆ.
ಪವನಜರೆ,
ಪ್ರತ್ಯುತ್ತರಅಳಿಸಿಕರ್ನಾಟಕ ರತ್ನ ಪ್ರಶಸ್ತಿಯನ್ನು ನಾವೇ ಬಗಲಿಗೆ ಹಾಕಿಕೊಳ್ಳಲು ಯತ್ನಿಸುತ್ತಿರುವಾಗ ದಿಢೀರನೇ ನೀವು ಪೇಟೆಂಟ್ ಮಂಡಿಸಿದ್ದು ನೋಡಿ ಆಘಾತವಾಯಿತು. ಹಾಗಾಗಿ ದಯವಿಟ್ಟು ಸುಮ್ಮನಿರಿ, ಕರ್ನಾಟಕ ರತ್ನ ಪಡೆಯಲು ರಾಜಕಾರಣಿಗಳಿಗೆ ಮಸ್ಕಾ ಹೊಡೆದು, ಇದ್ದಬದ್ದ ಪ್ರಭಾವವನ್ನೆಲ್ಲಾ ಬಳಸಿ ಯತ್ನಿಸುತ್ತೇವೆ, ನಿಮಗೂ ಪಾಲು ಕೊಡುತ್ತೇವೆ.
ಶಿವ್ ಅವರೆ,
ಪ್ರತ್ಯುತ್ತರಅಳಿಸಿಗಣಪತಿಯನ್ನು ನೀರಿಗೆ ಹಾಕಿ ಹೋದವರು ಕೋಲ್ಕತಾಗೂ ತೆರಳಿ ದುರ್ಗೆಯನ್ನೂ ನೀರಿಗೆ ತಳ್ಳಿ ಈಗ ಮರಳಿ ಬರ್ತಾ ಇದೀರಾ...
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕತ್ತರಿಸಲಾಗುತ್ತದೆ ಅಂತ ಬೆಳಗಾವಿಯಲ್ಲಿ ಖೂಳರು ಆಟಾಟೋಪ ಮಾಡುತ್ತಿದ್ದಾರೆ.
ಏನು ಹೇಳಿ.... ಮತ್ತೊಮ್ಮೆ ಹೇಳಿ... ಸರಿಯಾಗಿ ಕೇಳಿಸಲಿಲ್ಲ... ನವೆಂಬರ್ ಕನ್ನಡಿಗರಿಗೆ.... ಜೈಲಾಗಲಿ ಅಂದ್ರಾ? :)
ಕೊಡುಗೆಗಳು ಚೆನ್ನಾಗಿವೆ..ನವಂಬರ್ ನಾಯಕರನ್ನು ಪಕ್ಕದಲ್ಲಿಡಿ...ನಿಮ್ಮ ರಾಜ್ಯೋತ್ಸವ ಹೇಗಾಯಿತು?
ಪ್ರತ್ಯುತ್ತರಅಳಿಸಿಮನಸ್ವಿನಿ
ಪ್ರತ್ಯುತ್ತರಅಳಿಸಿಯಾರಿಗೂ ಹೇಳಬೇಡಿ, ಈ ಬಾರಿ ಕರ್ನಾಟಕ ರಾಜ್ಯೋತ್ಸವದಲ್ಲಿ ನಮ್ಮ ಬ್ಯುರೋ ಪಾಲ್ಗೊಂಡಿಲ್ಲ. ಯಾಕೆಂದರೆ ಅದೆಷ್ಟೋ ವರ್ಷಗಳಿಂದ ಆಚರಿಸ್ತಾ ಇದ್ದೆವಲ್ವಾ... ಕೇಳಿದ ಭಾಷಣವನ್ನೇ ಕೇಳಿ ಕೇಳಿ ಸಾಕಾಗಿದೆ. ಹಾಗಾಗಿ ಈ ಬಾರಿ ನಮಗೆ ಮಧ್ಯಪ್ರದೇಶದ ಕಾಡುಮೇಡುಗಳಲ್ಲಿ ರಾಜ್ಯೋತ್ಸವವಾಯಿತು. :(
ಕೊಡುಗೈ ದಾನಿಗಳಾದವರಿಗೆ,
ಪ್ರತ್ಯುತ್ತರಅಳಿಸಿಬಿಸಿನೀರು, ಬೇವಿನ ರಸ ತಯಾರಿಸುವುದರಲ್ಲಿ, ಇದ್ದ ಬದ್ದ ನೀರನ್ನೆಲ್ಲ ಹಾಳು ಮಾಡಿರುವ ಆಪಾದನೆ ನಿಮ್ಮ ಮೇಲೆ ಖಂಡಿತ.
ಭೂತ
ಕನ್ನಡ ಹಬ್ಬದ ಸಂದರ್ಭದಲ್ಲಿ ನಿಮಗೆಲ್ಲ ಒಂದು ಒಳ್ಳೆಯ ಹಾಡಿಗೆ ಕೊಂಡಿ:
ಪ್ರತ್ಯುತ್ತರಅಳಿಸಿhttp://niketana.com/akshara/index.html
ಶುಭಾಶಯಗಳು ಮತ್ತು ವಂದನೆಗಳು
neevu "ಋ" dara inuondu akshara bittu bitedeera davitu serpadisi
ಪ್ರತ್ಯುತ್ತರಅಳಿಸಿಹೌದು ಫ್ಯಾಂಟಮೇಶರೇ,
ಪ್ರತ್ಯುತ್ತರಅಳಿಸಿನಿಮಗೊಂದು ವಿಷಯ ಗೊತ್ತೇ? ಬೀರಿನಲ್ಲಿ ನೀರಿನಂಶ ಇರುವುದರಿಂದಲೇ ಅದು ಹಾಳಾಗಿರುವುದು! ಆದ ಕಾರಣ ಆ ಹಾಳು ನೀರು ಕುಡಿಯಬಾರದ ಅಂತಾನೇ ಅದನ್ನು ಹಾಳುಗೆಡವಲಾಗುತ್ತಿದೆ.
ಅನಾನಿಮಸರೆ
ಪ್ರತ್ಯುತ್ತರಅಳಿಸಿನಿಮ್ಮ ನಿಕೇತನಕ್ಕೆ ಭೇಟಿ ನೀಡಿದ್ದೇವೆ, ಚೆನ್ನಾಗಿಯೇ ಪಾಠ ಹೇಳಿ ಕೊಡುತ್ತಾ ಇದ್ದೀರಿ. ಧನ್ಯವಾದ.
ಆಗಾಗ ಬರುತ್ತಾ ಇರಿ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಎನಿಗ್ಮಾ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ತಾಣದಲ್ಲಿ ಕನ್ನಡ ನೋಡಿ ಖುಷಿಯಾಗಿದೆ...
'ಋ' ದೀರ್ಘಾಕ್ಷರ ಯುನಿಕೋಡ್ ಕನ್ನಡದಲ್ಲಿ ನನಗೆ ತಿಳಿದ ಮಟ್ಟಿಗೆ ಇಲ್ಲ ಮತ್ತು ಅದು ಬಳಸಬಹುದಾದ ಪದವೂ ಇಲ್ಲಾಂತ ಕಾಣುತ್ತೆ.
ಇಲ್ಲಿಗೆ ಭೇಟಿ ನೀಡುವವರಿಗೆ ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿಬಿಡಿ. ಋಗೆ ದೀರ್ಘಾಕ್ಷರ- ಋೂ !
ಕನ್ನಡದಲ್ಲಿ ೠ ಅಕ್ಷರ ಇಲ್ಲ. ಅದು ಸಂಸ್ಕೃತದಲ್ಲಿ ಮಾತ್ರ ಇರುವುದು. ಅದೇ ರೀತಿ ಕ್ಷ, ತ್ರ, ಜ್ಞ -ಇವುಗಳೂ ಮೂಲಾಕ್ಷರಗಳಲ್ಲ. ಅವು ಸಂಯುಕ್ತಾಕ್ಷರಗಳು. ಹಳೆಗನ್ನಡದಲ್ಲಿ ೞ ಮತ್ತು ಱ ಎಂಬ ಎರಡು ಅಕ್ಷರಗಳಿದ್ದವು. ಈಗ ಅವು ಬಳಕೆಯಲ್ಲಿಲ್ಲ.
ಪ್ರತ್ಯುತ್ತರಅಳಿಸಿ-ಪವನಜ
ತುಂಬಾ ತುಂಬಾ ಧನ್ಯವಾದ ಪವನಜ ಅವರೆ,
ಪ್ರತ್ಯುತ್ತರಅಳಿಸಿಆದರೆ ನೀವು ೠ ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಅಂತ ತಿಳಿಸುವಿರಾ?
ಮಿತವಾಗಿ ಕನ್ನಡ ಬಳಸಿ
ಪ್ರತ್ಯುತ್ತರಅಳಿಸಿಕನ್ನಡ ಉಳಿಸಿ. ಇದನ್ನು ವೇದವಾಕ್ಯ ಎಂದು ನಂಬಿರುವ
ನಮ್ಮ ಯುವ ಜನಾಂಗಕ್ಕೆ ಒಂದು ಪ್ರಶಸ್ತಿ ಇಲ್ಲದೇ ಇರುವುದು,
ನಿಮ್ಮ ತಾರತಮ್ಯ ತೋರಿಸುತ್ತದೆ. ಇದನ್ನು ಪ್ರತಿಭಟಿಸಿ
ಎಲ್ಲಾ ಶಾಲ-ಕಾಲೇಜು ಮುಂದಿನ ಭಾನುವಾರ ಬಂದ್ ಆಚರಿಸಲು ನಿರ್ಧರಿಸಿದೆ.
ೠ ಅಕ್ಷರ ಕುಟ್ಟುವುದು ಹೇಗೆ ಎಂಬುದನ್ನು ತಿಳಿಯಲು ಈ ಬ್ಲಾಗ್ ಓದಿ - http://vishvakannada.com/node/319
ಪ್ರತ್ಯುತ್ತರಅಳಿಸಿ-ಪವನಜ
ಪವ್ವಿ ಅವರೇ
ಪ್ರತ್ಯುತ್ತರಅಳಿಸಿತುಂಬಾ ಸಮಯದ ನಂತರ ಬಂದಿದ್ದೀರಿ.,.
ಹಾಗಾಗಿ ನೀವು ಕಾಲೇಜಿಗೆ ಬಂದ್ ಆಚರಿಸಲಿಕ್ಕೆಂದೇ ಹೋಗಿರುವಿರಿ ಎಂದು ನಂಬುತ್ತೇನೆ.
ಆದರೆ ಬಂದ್ ಇದ್ರೂ ಸ್ಪೆಶಲ್ ಕ್ಲಾಸ್ ಇದೆ ಅಂತ ಮನೇಲಿ ಹೇಳಿ ಕಾಲೇಜಿಗೆ ಹೋಗೋರಿರೋ ಈ ಕಾಲ್ದಲ್ಲಿ.... ನಿಮ್ಮ ಮಾತು ಕೇಳಿದ್ರೆ.... !!!
ಪವನಜರೆ
ಪ್ರತ್ಯುತ್ತರಅಳಿಸಿಮಾಹಿತಿಗೆ ತುಂಬಾ ಧನ್ಯವಾದಗಳು.
ಏನಾದ್ರೂ ಹೇಳ್ರಪಾ :-D