ಬೊಗಳೆ ರಗಳೆ

header ads

ನರ್ಸರಿ... ಸಂದರ್ಶನವೇ ಸರಿ: ಪುಟಾಣಿ ಪರಿಷತ್ ಆಗ್ರಹ

(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ.
 
ಇಂದಿನ ಈ ಹೈ ಕೆಟ್ ಯುಗದಲ್ಲಿ ಪ್ರತಿಯೊಂದಕ್ಕೂ ಇಂಟರ್ವ್ಯೂ ನೀಡಬೇಕಾಗುತ್ತದೆ. ಹಾಗಿರುವಾಗ ನಮಗೆ ಇಂಟರ್ವ್ಯೂ ನಡೆಸದೆ ಅಪಮಾನ ಮಾಡಲಾಗುತ್ತಿದೆ ಎಂದು ಹೇಳಿರುವ ಪುಟಾಣಿ ಪರಿಷತ್ ಅಧ್ಯಕ್ಷ ಪುಟ್ಟು ಕುಮಾರ್, ನಮ್ಮ ಅಪ್ಪ ಅಮ್ಮಂದಿರಿಗೂ ಇಂಟರ್ವ್ಯೂ ನಡೆಸಬಾರದೆಂಬ ಆದೇಶ ಶುದ್ಧ ತಪ್ಪು ಎಂದು ಸಾರಿದ್ದಾರೆ.
 
ಇದೇ ರೀತಿಯಲ್ಲಿ ದೇಶ ವಿದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪುಟ್ಟು ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ನೇರವಾಗಿ ಪುಟ್ಟು ಮತ್ತು ಪುಟ್ಟಿಯರ ಕಿವಿ ಹಿಡಿದು ಸಂದರ್ಶನ ನಡೆಸಿತು.
 
ತಮ್ಮ ಚಿತ್ರ ಸಹಿತ ತೊದಲು ನುಡಿಗಳು ಬೊಗಳೆ ರಗಳೆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದು ತೀವ್ರವಾಗಿ ಉತ್ಸಾಹದಿಂದ ಕುದಿದು ಹೋದ ಈ ಪುಟ್ಟು-ಪುಟ್ಟಿಗೆ ಒಂದು ಪ್ರಶ್ನೆ ಹಾಕಲಾಯಿತು.
 
ನ್ಯಾಯಾಲಯವೇ ಇಂಟರ್ವ್ಯೂ ಮಾಡಬಾರದು ಎಂದು ಹೇಳಿದಾಗ ನೀವೇಕೆ ಬೇಕು ಅನ್ನುತ್ತಿದ್ದೀರಿ? ಎಂದು ಕೇಳಿದಾಗ ಉತ್ತರ ಬಂತು: "ನೋಡಿ, ಮೊದಲನೆಯದಾಗಿ ನೀವೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ನಮ್ಮ ಸಂದರ್ಶನ ಮಾಡುತ್ತಿದ್ದೀರಿ" ಎಂದು ರಪ್ಪನೆ ಪೀಪಿ ಊದಿತು ಪುಟ್ಟಿ.
 
ಆದರೂ ಸುಧಾರಿಸಿಕೊಂಡ ಬ್ಯುರೋ ಸಿಬ್ಬಂದಿ, ಪುಟಾಣಿ ಪುಟ್ಟುವಿನತ್ತ ಮುಖ ಮಾಡಿದಾಗ, ಅದರ ಬಾಯಿಯಿಂದ ಉದುರಿದ ಅಣಿಮುತ್ತುಗಳು: "ನೋಡಣ್ಣಾ... ನಮ್ಮದು ಇದು ಕಲಿಯುವ ವಯಸ್ಸಾ? ಏನಿದ್ದರೂ ಆಟವಾಡುತ್ತಾ ಇರಬೇಕಾದವರು ನಾವು. ನಮ್ಮನ್ನು ಸಂದರ್ಶನ ಮಾಡಿದ್ರೆ ನಾವು ತಪ್ಪು ತಪ್ಪಾಗಿ ಉತ್ತರಿಸಿ ಬಚಾವ್ ಆಗುತ್ತೇವೆ. ಹಾಗೆಯೇ ಅಪ್ಪ ಅಮ್ಮಂದಿರನ್ನೂ ಸಂದರ್ಶನ ಮಾಡುತ್ತಾರೆ. ಅವರಿಗೂ ಸರಿಯಾಗಿ ಠುಸ್ ಪುಸ್ ಇಂಗ್ಲಿಷ್ ಬರೋದಿಲ್ಲ. ಅವರೂ ಎಡವುತ್ತಾರೆ. ಮತ್ತೆ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಅಪ್ಪಂದಿರ ಜೇಬಿನ ಮೇಲೆಯೇ ಕಣ್ಣು ಇರೋದ್ರಿಂದ ನಮ್ಮಪ್ಪನ ಜೇಬು ಕೂಡ ಅಷ್ಟೇನೂ ದಪ್ಪವಿಲ್ಲ. ಹಾಗಾಗಿ ಸಂದರ್ಶನದ ವೇಳೆ ಅವರು ಫೇಲ್ ಆಗೋದು ಗ್ಯಾರಂಟಿ. ಹೀಗಾದರೆ ನಮಗೆ ಶಾಲೆಗೆ ಹೋಗುವ ಕೆಲಸವೇ ಉಳಿಯುತ್ತಲ್ಲಾ...?"
 
ಈ ಕಾರಣ ಕೇಳಿದ್ದೇ ತಡ, ನಮ್ಮ ಸಿಬ್ಬಂದಿ ಯಾರದ್ದು ಅಂತಾನೂ ನೋಡದೆ ಅಲ್ಲಿದ್ದ ಗಂಟುಮೂಟೆ ಕಟ್ಟಿಕೊಂಡು, ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರೆ ಎಂಬ ಭಯದಿಂದ ಅಲ್ಲಿಂದ ಕಾಲ್ಕಿತ್ತರು ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕಾ ವರದಿಗಾರರು ವರದಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಮಕ್ಕಳ ದಿನಾಚರಣೆ ಹತ್ತಿರವಾಯಿತೇ? ಇದ್ದಕ್ಕಿದ್ದಂತೆ ಮಕ್ಕಳ ನೆನಪೇಕಾಯಿತು. ಅದೂ ಅಲ್ಲದೇ ಮಕ್ಕಳ ಶಾಲಾ ಪ್ರವೇಶ ಪರೀಕ್ಷೆಗಳು ಏಪ್ರಿಲ್ ಮೇ ಮಾಹೆಯಲ್ಲಿ ಅಲ್ಲವೇ ನಡೆಯೋದು?

    ಮಕ್ಕಳು ಎಂದ ತಕ್ಷಣ ಒಂದು ಹಾಡು ನೆನಪಾಗುತ್ತಿದೆ.
    ಬಾರೋ ಬಾರೋ ಎಳೆ ಮಗುವೇ
    ಬಣ್ಣದ ಅಂಗಿಯ ನಾ ಕೊಡುವೆ
    ಬಾರೋ ಚಿಣ್ಣರ ದೊರೆಯೇ ಬಾ
    ಕನ್ನಡ ನಾಡಿನ ಮಣಿಯೇ ಬಾ

    ಬೊ-ರ ಸಂದರ್ಶನ ಎಂದಿನಂತೆ ಹೊಟ್ಟೆ ತುಂಬಿಸಿತು. ವಂದನೆಗಳು.

    ಪ್ರತ್ಯುತ್ತರಅಳಿಸಿ
  2. ಗ್ರಹದಿಂದ ಹೊರಹಾಕಲ್ಪಟ್ಟ ನೀವು ಪುನಃ ಅದರೊಳಗೆ ಸೇರಿಕೊಂಡದ್ದು ಹೇಗೆ? ಗ್ರಹದ ಉಸ್ತುವಾರರಿಗೆ ಎಷ್ಟು ಪೆಗ್ ಕುಡಿಸಿದಿರಿ?

    -ಪಬ್

    ಪ್ರತ್ಯುತ್ತರಅಳಿಸಿ
  3. ಪ್ರವೇಶ ಪರೀಕ್ಷೆ ನಡೆಯೋದು ದೂರವೇ ಇದೆಯಾದರೂ, ದೆಹಲಿ ಹೈಕೋರ್ಟ್ ಆರ್ಡರ್ ನಿನ್ನೆ ಕೊಟ್ಟಿತಲ್ಲಾ ಶ್ರೀನಿವಾಸರೇ,
    ಅದಕ್ಕಾಗಿ ಮಕ್ಕಳನ್ನು ಮೇಲೆತ್ತಿಟ್ಟಿದ್ದು.

    ನಿಮ್ಮ ಕಂದ ಪದ್ಯವನ್ನೇ

    ಬಾರೊ ಬಾರೊ ಅಂಗಿಯ ಎಳೆ ಮಗುವೆ
    ಬಣ್ಣದ ಅಂಗಿಯ ನಾ ತೊರೆವೆ
    ಬೊ.ರ. ಚಿಣ್ಣರ ಕಾಲೆಳೆಯೇ

    ಎಂದೂ ಹಾಡಬಹುದಾಗಿದೆ.!

    ಪ್ರತ್ಯುತ್ತರಅಳಿಸಿ
  4. ಓಹ್ ಪಬ್ಬಿಗರೇ,

    ನಿಮ್ಮ ಪ್ರಶ್ನೆ ಸಕಾಲಿಕವಾಗಿರುವುದರಿಂದ ಅದನ್ನು ಭವಿಷ್ಯತ್ ಕಾಲಕ್ಕೆ ವರ್ಗಾಯಿಸಲಾಗುತ್ತದೆ.

    ನಾವು ಅನ್ಯಗ್ರಹ ಜೀವಿಗಳಾದುದರಿಂದ (ಪಬ್ಬೇರಿಸಿ) ಹಾರುವ ತಟ್ಟೆಯಲ್ಲಿ ಎಲ್ಲೂ (ಮತ್ತು)ಇಳಿಯುವ ಅವಕಾಶವಿರುವುದರಿಂದಲೇ ಇದು ಸಾಧ್ಯವಾಯಿತು ಪಬ್ಬೇಶ್ವರರೇ

    ಆದ್ರೂ ನೀವು ಈ ಅಸತ್ಯಾಂಶವನ್ನು ಮೆಲ್ಲನೇ ಕೇಳಬೇಕಿತ್ತು. :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D