(ಬೊಗಳೂರು ಓಟ್ ಬ್ಯಾಂಕ್ ಬ್ಯುರೋದಿಂದ)
ಬೊಗಳೂರು, ಅ.16- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಭಾರತದ ಪರಮೋನ್ನತ ಅಧಿಕಾರ ಕೇಂದ್ರವಾದ ಸಂಸತ್ತಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಜೈಶ್ ಎ ಮಹಮ್ಮದ್ ಉಗ್ರಗಾಮಿ ಮತ್ತು ಭಯೋತ್ಪಾದಕರ ಗುರುವೇ ಆಗಿಬಿಟ್ಟಿರುವ ಮಹಮದ್ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯವು ಆದೇಶ ನೀಡಿದ್ದರೂ, ಈ ಬಗ್ಗೆ ದಯಾಭಿಕ್ಷೆ ದೊರಕಿಸಲು ಯತ್ನಿಸುತ್ತಿರುವುದೇಕೆ ಎಂಬುದಾಗಿ ಮಾಡಲು ಬೇರೇನೂ ಕೆಲಸವಿಲ್ಲದ ಕಾರಣದಿಂದಾಗಿ ಬೊಗಳೆ ರಗಳೆ ಬ್ಯುರೋ ನಮ್ಮನ್ನಾಳುವ ಕೇಂದ್ರದ ವಕ್ತಾರನನ್ನು ಹಿಡಿದು ಪ್ರಶ್ನಿಸಿತು.
ಈ ಪ್ರಶ್ನೆಗೆ ಬಂದ ಉತ್ತರಗಳು ಯಾವುದೇ ಭಯೋತ್ಪಾದನೆಗೆ ಕಡಿಮೆಯಾಗಿರಲಿಲ್ಲವಾದ ಕಾರಣ, ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ ಎಂದುಕೊಂಡು ಸುಮ್ಮನಾಗಬೇಕಾಯಿತು.
ನೀವೇಕೆ ಗುರುವಿಗೆ ತಿರುಮಂತ್ರ ಹಾಕುವ ಬದಲು, ನೇಣಿನಿಂದ ರಕ್ಷಿಸಲು ಯತ್ನಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಅಂಥ ಮರಳುಗಾಡಿನ ಮುಸ್ಲಿಂ ರಾಷ್ಟ್ರಗಳಲ್ಲೇ ಕೊಂದವನಿಗೆ ಕೊಲೆಯೇ ಶಿಕ್ಷೆ ಎಂಬುದಿದೆ. ಮತ್ತು ತಪ್ಪು ಮಾಡಿದರೆ ಮಾತ್ರವೇ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈತ ಇಲ್ಲಿ ಯಾರನ್ನೂ ಕೊಂದಿಲ್ಲ. ಸಂಸತ್ ಭವನವನ್ನೇ ಸ್ಫೋಟಿಸಲು ಯತ್ನಿಸಿದ್ದು ಮಾತ್ರ. ಸ್ಫೋಟವಾಗಿದೆಯೇ? ನಾವೆಲ್ಲಾ ಇನ್ನೂ ಬದುಕುಳಿದಿಲ್ಲವೇ? ಹಾಗಾಗಿ ಈತ ತಪ್ಪು ಮಾಡಿದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಉತ್ತರ ಬಂತು.
ಮತ್ತೆ, ಅನಾದಿ ಕಾಲದಿಂದ ನಮ್ಮ ವೇದ ಶಾಸ್ತ್ರ ಪುರಾಣಗಳಲ್ಲೇ ಗುರು ಹತ್ಯೆ ಮಹಾಪಾಪ ಎಂದು ಹೇಳಲಾಗಿದೆ. ಈ ಅಫ್ಜಲ್ ಗುರು ಕೂಡ ಸಾಕಷ್ಟು ಮಂದಿಗೆ ಬಂದೂಕು ಹಿಡಿಯುವುದು ಹೇಗೆ, ಬಾಂಬ್ ಸ್ಫೋಟಿಸುವುದು, ಭಯವನ್ನು ಉತ್ಪಾದಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಶಿಕ್ಷಣ ನೀಡಿದ್ದಾನೆ. ಇಂಥ ಮಹಾನ್ ಗುರುವಿಗೆ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಪುರಸ್ಕಾರ ನೀಡುವುದು ಬಿಟ್ಟು ಗಲ್ಲು ಶಿಕ್ಷೆ ನೀಡಲು ಹೊರಟಿದ್ದಾರಲ್ಲಾ... ಇವರಿಗೆ ಯಾರಾದರೂ ಹೇಳೋರು ಕೇಳೋರು ಇಲ್ಲವೇ ಎಂದು ನಮ್ಮನ್ನೇ ಪುನರಪಿ ಪ್ರಶ್ನಿಸಲಾಯಿತು.
ಇನ್ನು, ಆತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾನೆ. ಈ ಸಮುದಾಯವೇ ನಮ್ಮನ್ನು ಇಂದು ಈ ಸ್ಥಾನದಲ್ಲಿ ಕುಳ್ಳಿರಿಸಿರುವುದು. ಅವರ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ನಾವು ಮತ್ತು ನಮ್ಮ ಪಕ್ಷ ಕೈಗೊಂಡಿದ್ದಕ್ಕಾಗಿಯೇ ಇಂದು ಅಧಿಕಾರಕ್ಕೇರಿದ್ದೇವೆ. ಅವರಿಗೆ ಕಲ್ಯಾಣ ಮಾಡಿಸುವುದು ಬಿಟ್ಟು ಅವರನ್ನೇ ಕೊಂದು ಹಾಕಿಬಿಟ್ಟರೆ, ನಮಗೆ ಓಟು ಹಾಕುವವರಾದರೂ ಯಾರು? ನಾವು ಮತ್ತೊಮ್ಮೆ ಅಧಿಕಾರದ ಕುರ್ಚಿಗೆ "ಗ್ರಹಣ" ಮಾಡುವುದಾದರೂ ಹೇಗೆ ಎಂದು ಈ ವಕ್ತಾರರು ವರಾತ ತೆಗೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುವವರೇ ಹೆಚ್ಚಾಗಿದ್ದಾರೆ. ನರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಕಲ ಕ್ರಮಗಳನ್ನು ಕೈಗೊಳ್ಳುವವರೇ ಇರುವುದರಿಂದ ಆ ಸಮುದಾಯದ ಮಂದಿಗೆ ನಾವು ಪ್ರೋತ್ಸಾಹ ನೀಡಬೇಕು. ಅವರ ಓಟಿನ ಬ್ಯಾಂಕ್ ಠೇವಣಿಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಗುಲಾಮನ ಬೀಜಾದ್ ಅವರೇ ಗುರುವಿಗೆ ಕ್ಷಮೆ ನೀಡುವಂತೆ ಹೇಳಿರುವುದರಿಂದ ಮುಖ್ಯಮಂತ್ರಿ ಮಾತಿಗಾದರೂ ಬೆಲೆ ಕೊಡಬೇಡವೇ ಎಂದು ಈ ವಕ್ತಾರ ಘೊಳ್ಳನೆ ನಕ್ಕಿದ್ದಾನೆ.
ಅಲ್ಲಿಗೆ ಬೊಗಳೆ-ರಗಳೆ ಬ್ಯುರೋದ ಬಾಯಿ ಬಂದ್! ಬಾಯಿಯಿಂದ ಒಂದು ಶಬ್ದ ಉದುರಿದ್ದರೆ ಮತ್ತೆ ಕೇಳಿ!!!!!
4 ಕಾಮೆಂಟ್‌ಗಳು
ಮನೆಯ ಕಂಪ್ಯೂಟರ್ ಹಾರ್ಡ್‍ಡಿಸ್ಕ್ ಕ್ರ್ಯಾಷ್ ಆಗಿದೆ. ಬ್ಯಾಂಕಿನಲ್ಲಿ ಕೆಲಸ ಜಾಸ್ತಿ ಆಗಿದೆ. ಸಮಯವಾದಾಗ ಬಂದು ಪ್ರತಿಕ್ರಿಯಿಸುವೆ.
ಪ್ರತ್ಯುತ್ತರಅಳಿಸಿಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಎಂದು ಹಾಡುವ ಸಮಯದಲ್ಲಿ ಗುರುಹತ್ಯೆಯಾ? ಶಾಂತಂ ಪಾಪಂ.
:ಓ,
ಪ್ರತ್ಯುತ್ತರಅಳಿಸಿಸಿಕ್ಷಿಸೋ ಕೈಗಳಿಗಿಂತ ರಕ್ಷಿಸೊ ಕೈಗಳು ದೊಡ್ದವು. ಬಿಡಿಸ್ಕೊಳ್ಳೊಕ್ಕೆ, ಒಂದು, ವಿಮಾನ ಇದೆ, ಅದನ್ನ ಕಂಧಾಹಾರ್ ಕಡೆ ತಿರುಗಿಸಿದ್ರೆ ಆಯ್ತು :)
ಭೂತ
ವೆಂಕಟೇಶರೇ,
ಪ್ರತ್ಯುತ್ತರಅಳಿಸಿಹಾರ್ಡ್ ಡಿಸ್ಕ್ ಕ್ರ್ಯಾಶ್ ಆದ್ರೂ ನೀವು ಪ್ರತಿಕ್ರಿಯಿಸಿದ್ದು ನೋಡಿದ್ರೆ ಶಾಂತಮ್ಮ ಪಾಪಮ್ಮನ ದಯೆಯೇ ಇರಬೇಕು ಅನ್ಸುತ್ತೆ.
ಈ ಗುರುವಿನ ಗುಲಾಮನಾದ್ರೆ ಖಂಡಿತಾ ಮುಕ್ತಿ ದೊರೆಯುತ್ತದೆ.
ಭೂತೋತ್ತಮರೇ,
ಪ್ರತ್ಯುತ್ತರಅಳಿಸಿಇತ್ತೀಚೆಗೆ ಭೂತ ಸಂಚಾರ ಕಡಿಮೆಯಾಗಿರುವುದರಿಂದಾಗಿ ಗುರುವನ್ನೇ ಕೊಲ್ಲುವ ಮತ್ತು ಉಳಿಸುವ ಕೆಲಸಗಳೆಲ್ಲಾ ನಡೆಯುತ್ತಿದೆ. ನಿಮ್ಮ ಸಲಹೆ ಕೇಳಿದ ಬಳಿಕ ಪಾಕಿಸ್ತಾನ ಚುರುಕಾಗಿದೆ ಎಂದು ತಿಳಿದುಬಂದಿದೆ.
ಏನಾದ್ರೂ ಹೇಳ್ರಪಾ :-D