ಬೊಗಳೆ ರಗಳೆ

header ads

ರಾಶಿ ರಾಶಿ ಭವಿಷ್ಯ

[ಸೂಚನೆ: ತಮ್ಮ ರಾಶಿ ಎಲ್ಲೂ ಕಾಣಿಸುತ್ತಿಲ್ಲ ಎಂದು ಕೆಲವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ರಾಶಿಯ ಹೆಸರು ಹಾಕಿಲ್ಲ. ಯಾರು ಬೇಕಾದರೂ ತಮ್ಮ ತಮ್ಮ ರಾಶಿಯನ್ನು ಆಯ್ದುಕೊಂಡು ಭವಿಷ್ಯ ನಿರ್ಧರಿಸಿಕೊಳ್ಳಬಹುದು.]

1ನೇ ರಾಶಿ
ಮಂಗಗಳ ಕಾರ್ಯಗಳಿಗೆ ಹಣ ಖರ್ಚು. ಅವುಗಳನ್ನು ತೋಟದಿಂದ ಓಡಿಸಲು ಬಂದೂಕು ಖರೀದಿಸಬೇಕಾಗಬಹುದು.

2ನೇ ರಾಶಿ
ನೀವು ಹಳ್ಳಿಯಲ್ಲಿರುವವರಾದರೆ ದಿಢೀರನೆ ಕರೆಂಟ್ ಬಂದು ಆಶ್ಚರ್ಯ ಉಂಟುಮಾಡಬಹುದು. ನಗರವಾಸಿಗಳಾಗಿದ್ದರೆ, ದಿಢೀರನೆ ಕರೆಂಟ್ ಹೋಗಿ ತೊಂದರೆ ಕೊಡಬಹುದು.

3ನೇ ರಾಶಿ
ನೀವು ಮಾಡಿದ ಅಮಂಗಳ ಕಾರ್ಯಗಳೆಲ್ಲಾ ಬಯಲಾಗಿ, ಈ ಆರೋಪಗಳೆಲ್ಲಾ ಹುರುಳಿಲ್ಲದ್ದು, ಅಪವಾದ, ಬೊಗಳೆ ಎಂದೆಲ್ಲಾ ನೀವು ವಾದಿಸಬಹುದು.

4ನೇ ರಾಶಿ
ಅಪಘಾತದ ಭಯವಿರುವುದರಿಂದ 100ಕ್ಕಿಂತ ಹೆಚ್ಚು ಕಿ.ಮೀ. ದೂರ ಪ್ರಯಾಣ ಮಾಡಬೇಕಿದ್ದರೆ ನಡೆದೇ ಹೋಗಿ. ಚಲಿಸುವ ವಾಹನದಿಂದ ನೆಗೆಯದಿದ್ದರೆ ಯಾವುದೇ ಗಾಯವಾಗದು.

5ನೇ ರಾಶಿ
ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಖರ್ಚು ಹೆಚ್ಚಾಗಬಹುದು. ಕಾಣಿಕೆ ಹುಂಡಿ, ತಟ್ಟೆ ಮಾತ್ರವಲ್ಲದೆ ಭಿಕ್ಷುಕರ ತಟ್ಟೆಗೂ ಹಣ ಹಾಕಬೇಕಾಗಿರುವುದರಿಂದ ಇದರ ಜತೆಗೆ ಹೊರಗಿಟ್ಟ ನಿಮ್ಮ ಚಪ್ಪಲಿಯೂ ಕಾಣೆಯಾಗುವುದರಿಂದ ಖರ್ಚು ಹೆಚ್ಚಳ ಸಂಭವ.

6ನೇ ರಾಶಿ
ದೇವಸ್ಥಾನಕ್ಕೆ ಹೋಗುವುದರಿಂದ ದೇವರ ದರ್ಶನ ಮಾಡಬೇಕಾಗಬಹುದು. ಆದರೆ ಅರ್ಚನ, ಆರತಿ, ಪುಷ್ಪ, ಕುಸುಮ ಇತ್ಯಾದಿಗಳಿಂದಾಗಿ ಕಣ್ಣು ಕುಕ್ಕುವ ಸಾಧ್ಯತೆಗಳಿವೆ.

7ನೇ ರಾಶಿ
ಕಪ್ಪು ದಂಧೆಯಿಂದ ಸಂಪಾದಿಸಿದ ಹಣವನ್ನು ಇಂದು ಸ್ವಿಸ್ ಬ್ಯಾಂಕಿನಲ್ಲಿಡಲು ಸುದಿನ. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ದಿಢೀರ್ ಏರಬಹುದು.

8ನೇ ರಾಶಿ
ನೀವು 'ಏನು ಅಪರೂಪ?' ಎಂದು ಕೇಳಿದ್ದು 'ಏನು ವಿರೂಪ?' ಎಂದು ಕೇಳಿಸಿದ ಕಾರಣ ನಿಮಗೆ ಧರ್ಮದೇಟು ದೊರೆಯಬಹುದು.

9ನೇ ರಾಶಿ
ವಾಹನ ಚಲಾಯಿಸುವಾಗ ಫಸ್ಟ್ ಗೇರ್ ಬದಲು ರಿವರ್ಸ್ ಗೇರ್ ಹಾಕಿದರೆ ಎಡವಟ್ಟಾದೀತು. ಹಿಂದಿನ ವಾಹನದವರು ನಿಮ್ಮನ್ನು ಬೈದು ಪೊಲೀಸ್ ಠಾಣೆಗೆ ದರದರನೆ ಎಳೆದುಕೊಂಡುಹೋಗಬಹುದು.

10ನೇ ರಾಶಿ
ಈ ವಾರ ಯಾವುದೇ ಕೆಲಸಕ್ಕೆ ಕೈಹಾಕದಿರುವುದು ಒಳಿತು. ಕಾಲಿನಲ್ಲೇ ಎಲ್ಲವನ್ನೂ ಮುಗಿಸಿಬಿಡಿ.

11ನೇ ರಾಶಿ
ಈ ವಾರ ತಲೆಯ ಬದಲು ಹೊಟ್ಟೆಗೆ ಹೆಚ್ಚು ಎಣ್ಣೆ ಹಾಕಿಕೊಳ್ಳುವಿರಿ. ಆದರೂ ರಾತ್ರಿ ನಿಮ್ಮದೇ ಮನೆಯ ಬಾಗಿಲು ಬಡಿಯುವುದರಿಂದ ಪ್ರಾಣಕ್ಕೇನೂ ಅಪಾಯವಿರದು. ಯಾವುದಕ್ಕೂ ನಡೆದಾಡುವಾಗಲೂ, ಬಾಗಿಲು ಬಡಿಯುವಾಗಲೂ ಹೆಲ್ಮೆಟ್ ಹಾಕಿಕೊಂಡಿರುವುದು ಒಳಿತು.

12ನೇ ರಾಶಿ
ಕಚೇರಿಯಲ್ಲಿ ನೀವು ಖಾಸಗಿ ಕೆಲಸ ಮಾಡುತ್ತಿರುವಾಗ ಸಹೋದ್ಯೋಗಿಗಳ ಆಕ್ಷೇಪ ಮಾಡುವುದು ನಿಮಗೆ ಇದೊಂದು ದೊಡ್ಡ ತೊಂದರೆ ಎನಿಸಬಹುದು.

13ನೇ ರಾಶಿ
ಓಹ್.... ಹನ್ನೆರಡೇ ರಾಶಿ ಇರೋದಲ್ವಾ.... ಗೊತ್ತೇ ಇರ್ಲಿಲ್ಲ....

(ಸೂಚನೆ: ಬ್ಲಾಗರ್ ಬೀಟಾ ವರ್ಷನ್‌ಗೆ ಈ ಬ್ಲಾಗನ್ನು ಹಸ್ತಾಂತರಿಸಲಾಗಿರುವುದರಿಂದ ಕಾಮೆಂಟಿಂಗ್‌ಗೆ ಜಿ-ಮೇಲ್ ಐಡಿ ಕೇಳಿದರೆ ಹೆದರಬೇಕಾದ್ದಿಲ್ಲ.... others option ಬಳಸಿಕೊಳ್ಳಬಹುದಾಗಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. nanna rASi illilla. adyAvudeMdare jOLada rASi. adara BaviShya illi hAkuvirA? adara saMKye 14kkO athavA 15O gottilla.

    aMda hAge barahadalli bareyalAguttilla. turtina kelasada mEle nimmUralliruve. kare mADuve

    ಪ್ರತ್ಯುತ್ತರಅಳಿಸಿ
  2. ನಿಮ್ಮ ಜೋಳದ ರಾಶಿಯನ್ನು ಸುಟ್ಟು ಜೋಳದ ರೊಟ್ಟಿ ಮಾಡಿ ತಿನ್ನಲಾಗಿದೆ...

    ನಮ್ಮೂರಿಗೆ ಬಂದು ನಾಪತ್ತೆಯಾಗಿರುವ ನೀವು ಯಾವುದಾದರೂ ರಾಶಿಯೊಳಗೆ ಅಡಗಿ ಕುಳಿತಿದ್ದೀರಾ ಎಂಬ ಸಂದೇಹ!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D