ಬೊಗಳೆ ರಗಳೆ

header ads

ನರ್ಸರಿಯಿಂದಲೇ ಉಗ್ರವಾದ ಶಿಕ್ಷಣ

(ಬೊಗಳೂರು ಉಗ್ರವಾದ ತರಬೇತಿ ಬ್ಯುರೋದಿಂದ)
ಬೊಗಳೂರು, ಅ.3- ಮದರಸಾಗಳಲ್ಲಿ ಭಯೋತ್ಪಾದನಾ ತರಬೇತಿ ನೀಡಲಾಗುತ್ತದೆ ಎಂಬ ಬಗ್ಗೆ ಭಾರತದಲ್ಲಿ ಕೂಗೆದ್ದಿದ್ದು ಮಾತ್ರವಲ್ಲದೆ, ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ ಅವರೂ ಘೋಷಿಸಿರುವುದರಿಂದ ಕೆಂಡದಂತೆ ಬಿಸಿಯಾಗಿರುವ ಜನರೇಟರ್ ಮರ್ವೇಜ್ ಪುಷರಫ್ ಅವರು, ಭಾರತದ ರಕ್ಷಣಾ ಸಚಿವರ ಹೇಳಿಕೆಯಿಂದ ಸ್ವಲ್ಪಮಟ್ಟಿಗೆ ತಂಪಿನ ಅನುಭವ ಪಡೆದಿದ್ದಾರೆ.
 
ನಮ್ಮ ದೇಶದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಮಾತ್ರವೇ ಹಿಂಸಾಚಾರದ ಶಿಕ್ಷಣ ನೀಡಲಾಗುತ್ತದೆ ಎಂಬುದು ನಮ್ಮ ಮತಕ್ಕೆ ಬಗೆದ ಅವಮಾನ. ಜಾತ್ಯತೀತರೇ ಈಗ ಆಳ್ವಿಕೆ ನಡೆಸುತ್ತಿರುವ ಭಾರತದಲ್ಲಿ ನಮ್ಮ ಬಗ್ಗೆ ಹೆಚ್ಚು ಉತ್ತಮ ಅಭಿಪ್ರಾಯವಿದೆ ಎಂದು ತಿಳಿಸಿರುವ ಪುಷರಫ್, ಕೊನೆಗೂ ಭಾರತೀಯರಾದರೂ ನಮ್ಮಲ್ಲಿ ನರ್ಸರಿ ಮಟ್ಟದಿಂದಲೇ ಬಂದೂಕಿನ ತರಬೇತಿ ನೀಡಲಾಗುತ್ತದೆ ಎಂದು ತಿಳಿದುಕೊಂಡಿದ್ದಾರಲ್ಲಾ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಭಾರತದಲ್ಲಿ ಮಾತ್ರವಲ್ಲ ಎಲ್ಲೆಡೆಯೂ ಈಗ ಇಂಗ್ಲಿಷ್ ಶಿಕ್ಷಣ ಕಡ್ಡಾಯವಾಗತೊಡಗಿದೆ. ಆದರೆ ಕೆಲವರು ಮಾತ್ರ ಇಂಗ್ಲಿಷ್ ಕಲಿಸುವುದಕ್ಕೆ ಅಪಸ್ವರ ಎತ್ತುತ್ತಾರೆ. ಇದೇ ಕಾರಣಕ್ಕಾಗಿ ಆ ದೇಶ ಶಿಕ್ಷಣದಲ್ಲಿ ಹಿಂದುಳಿದಿರುವುದು ಎಂದು ವಿಶ್ಲೇಷಿಸಿರುವ ಅವರು, ನಾವೇ ಅವರಿಗೆ ಮಾರ್ಗದರ್ಶಕರಾಗುತ್ತೇವೆ, ನರ್ಸರಿ ಮಟ್ಟದಿಂದಲೇ ಬಾಂಬ್, ಬಂದೂಕು ಎಲ್ಲಾ ತರಬೇತಿ ನೀಡಲಾಗುತ್ತದೆ ಎಂದರು.
 
ಸಣ್ಣ ಸಣ್ಣ ಮಕ್ಕಳು ಕೂಡ ಬೆಳೆಯುತ್ತಿರುವ ಹಂತದಲ್ಲಿ ನಮ್ಮ ನೆರೆಯ ರಾಷ್ಟ್ರದ ಬಗೆಗೆ ದ್ವೇಷ ಭಾವನೆ ಬೆಳೆಸಿಕೊಳ್ಳಬೇಕಾದರೆ ಸಣ್ಣ ಪ್ರಾಯದಲ್ಲೇ ದ್ವೇಷದ ಬೀಜವನ್ನು ಬಿತ್ತಬೇಕು. ಇದಕ್ಕಾಗಿ ನಮಗೆ ಅಲ್ ಖೈದಾ ಮತ್ತು ಜೈಶ್ ಎ ಮೊಹಮ್ಮದ್ ಮುಂತಾದ ಸಂಘಟನೆಗಳು ಭಾರಿ ಪ್ರಮಾಣದಲ್ಲಿ ದ್ವೇಷದ ಬೀಜಗಳನ್ನು ಪೂರೈಸುತ್ತಿವೆ ಎಂದು ಪುಷರಫ್ ಹೇಳಿದ್ದಾರೆ.
 
ಅವುಗಳು ಪೂರೈಸುವ ದ್ವೇಷದ ಬೀಜಗಳು ಸಾಲದಿದ್ದರೆ ನಾವು ಇರಾಕ್, ಸೂಡಾನ್ ಮುಂತಾದೆಡೆಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳುವುದಾಗಿ ತಮ್ಮ ದೇಶದ ಪ್ರಜೆಗಳಿಗೆ ಅವರು ಭರವಸೆ ನೀಡಿದ್ದಾರೆ.
 
ಈಗಾಗಲೇ ನಮ್ಮ ಹಿರಿಯರು ಬೀಜದ ಬ್ಯಾಂಕಿನಲ್ಲಿ ಸಾಕಷ್ಟು ಬೀಜಗಳನ್ನು ಕಾಪಾಡಿಟ್ಟುಕೊಂಡಿದ್ದಾರೆ. ನಮಗೆ ಭಾರತವೇ ಇದಕ್ಕೆ ದಾರಿ ತೋರಿದೆ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅನ್ವೇಷಿಗಳೇ, ಪುಷರಫ್ ಕನ್ನಡ ಕಲಿತು, ನಿಮ್ಮ ಬ್ಲಾಗ್ ಓದುವ ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ. ನಿಮ್ಮ ಮೇಲೂ ಒಂದು ಬಾಂಬ್ ಬಿದ್ದೀತು!

    ಪ್ರತ್ಯುತ್ತರಅಳಿಸಿ
  2. ಈ ಬೀಜಗಳಿಂದಲೇ ಅಲ್ವೇ ಕರ್ಜಿಕಾಯಿ ಮಾಡಿ ಹಬ್ಬ ಮಾಡಿದ್ದು. ಹಾಲು ಕುಡಿದ ಮಕ್ಕಳೇ ಬದುಕೋಲ್ಲ ಇನ್ನು ವಿಷ ಕುಡಿದ ಮಕ್ಕಳು (ನರ್ಸರಿಯಿಂದ)ಬದುಕುತ್ತವೆಯೇ? ಆದರೂ ಸಾಯುವ ಮೊದಲು ಹತ್ತಾರು ನಿಶಕ್ತ ಜೀವಿಗಳನ್ನು ಕೊಲ್ಲುತ್ತವಲ್ಲಾ ಎಂಬುದೊಂದೇ ಖೇದದ ವಿಷಯ.

    ಯಾರೋ ತಿಳಿದವರು ಹೇಳಿದ್ದು - ಬದಲಾವಣೆಯೇ ಜಗದ ನಿಯಮ

    ಪ್ರತ್ಯುತ್ತರಅಳಿಸಿ
  3. ಶ್ರೀ ತ್ರೀ ಅವರೆ,
    ಬೊಗಳುವಿಕೆ ಎಲ್ಲಿಂದ ಕೇಳಿಬರುತ್ತಿದೆ ಅಂತ ನೀವು ಹೇಳಲ್ಲಾ ತಾನೇ?

    ಪುಷರಫ್ ಬಳಿ ಶಬ್ದ-ಭೇಧಿ ಅಣ್ವಸ್ತ್ರಗಳಿವೆಯೇ ಅಂತ ಸ್ವಲ್ಪ ಕೇಳಿ ತಿಳಿದುಕೊಳ್ಳಿ... ಮುಂದಕ್ಕೆ ಸೈಲೆನ್ಸರ್ ಅಳವಡಿಸಿ ಬೊಗಳಲು ಸಹಾಯವಾದೀತು.

    ಪ್ರತ್ಯುತ್ತರಅಳಿಸಿ
  4. ಅಲ್ಲಿನ ನರ್ಸರಿಗಳಲ್ಲಿ (ಉಗ್ರ ಕೋಳಿಯ)ಮೊಟ್ಟೆ, (ಹುಲಿಯ) ಹಾಲು ಇತ್ಯಾದಿಗಳನ್ನೂ ಕೊಡುತ್ತಿದ್ದಾರಂತೆ ಶ್ರೀನಿವಾಸರೆ.

    ಮತ್ತೆ...
    ನೀವು ಬದಲಾವಣೆಯೇ ಜಗದ ನಿಯಮ ಎಂಬ ನಮ್ಮ ಬ್ಯುರೋ ಬದ್ಧವಾಗಿ ದ್ವೇಷಿಸುವ ವಾಕ್ಯವನ್ನು ನರ್ಸರಿ ಶಿಕ್ಷಣ ಪದ್ಧತಿಯ ಬದಲಾವಣೆಗೆ ಸರಿಯಾಗಿಯೇ ಹೋಲಿಸಿದ್ದೀರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D