ಬೊಗಳೆ ರಗಳೆ

header ads

ರೈತರ విరుద్ధ తిరుగి బిద్ద Pesti ಕಂಪನಿ!

(ಬೊಗಳೂರು Some-ಶೋಧನಾ ಬ್ಯುರೋದಿಂದ)
ಬೊಗಳೂರು, ಸೆ.1- ತೆಲುಗು ರೈತರನ್ನು ಕೊಚ್ಚಿ ಕೊಚ್ಚಿ ಕೊಲ್ಲಲು ಬಹುರಾಷ್ಟ್ರೀಯ ಪೆಸ್ಟ್ ಕೋಲಾಟ ಕಂಪನಿಗಳು ಶಪಥ ತೊಟ್ಟಿವೆ.
ಮೊನ್ನೆ ಮೊನ್ನೆವರೆಗೂ ತಮ್ಮ ಕಂಪನಿಯ ಉತ್ಪನ್ನಗಳನ್ನು ಗದ್ದೆಗೆ, ಬೆಳೆಗಳಿಗೆ ಉಣಿಸುತ್ತಾ, ಕೀಟಗಳಿಂದ ರಕ್ಷಿಸಿಕೊಳ್ಳುವ ಹೊಸ ಅದ್ಭುತ ಸಂಶೋಧನೆ ಮಾಡಿ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಈ ಪೇಯಗಳ ಭರ್ಜರಿ ಮಾರಾಟಕ್ಕೆ ಕಾರಣವಾಗಿದ್ದ ಇದೇ ರೈತರನ್ನು ಈ ಪೆಸ್ಟಿ ಕೋಲಾಟ ಕಂಪನಿಗಳು ಕ್ಯಾಕರಿಸಿ ಹೊಗಳುತ್ತಿದ್ದವು.
 
ಅಷ್ಟು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸುತ್ತಿದ್ದ ಇದೇ ಕಂಪನಿಗಳು, ಈಗ ಕಡಿದು ಕಡಿದು ಕಡಿದು ಕೊಲೆ ಮಾಡುವುದಾಗಿ ಘೋಷಣೆ ಮಾಡಲು ಕಾರಣ ಇಲ್ಲಿ ಪ್ರಕಟವಾಗಿರುವ ವರದಿ.
 
ಇದೀಗ ತಮ್ಮ ಪೇಯ ಉತ್ಪನ್ನಗಳ ಬದಲು ದೇಶೀ ನಿರ್ಮಿತ ಕ್ವಾರ್ಟರ್ ಬಾಟಲಿಗಳನ್ನೇ ರೈತರು ತಮ್ಮ ಹೊಲದ ರಕ್ಷಣೆಗೆ, ಕೀಟನಾಶಕದ ರೂಪದಲ್ಲಿ ಬಳಸತೊಡಗಿರುವುದು ಈ ಬಹು-ನಾಮ ಹಾಕುವ ಕಂಪನಿಗಳ ಕಣ್ಣು ಕೆಂಪುಕೆಂಪಾಗಿಸಿದೆ.
 
"ನಮ್ಮದು ಸ್ವದೇಶೀ ಚಳವಳಿಯ ಭಾಗ"
 
ಈ ಬಗ್ಗೆ ರೈತರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು: ಬಹುರಾಷ್ಟ್ರೀಯರು ಬಹುಮಾನ ಕೊಡುತ್ತೇವೆ ಎನ್ನುತ್ತಾ ನಮ್ ಜನಗಳಿಗೆ ಬಹು ನಾಮ ಹಾಕಿಬಿಡುತ್ತಿದ್ದಾರೆ. ನಮ್ಮ ನೀರನ್ನೇ ಬಳಸಿಕೊಂಡು ನಮಗೇ ಮಾರಾಟ ಮಾಡುತ್ತಾ ಹಣ ಮಾಡುತ್ತಾರೆ. ಈ ಕಾರಣಕ್ಕೆ ನಾವು ದೇಶೀ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳ್ಳು-ಹೆಂಡಗಳ ಬಳಕೆಗೆ ಮುಂದಾಗಿದ್ದೇವೆ ಎಂದು ಉತ್ತರಿಸಿದ್ದಾರೆ.
 
ನೋಡಿ, ರಾಸಾಯನಿಕ ಕೀಟನಾಶಕ ಬಳಕೆಗೆ ನಮಗೆ ಒಂದು ಎಕರೆಗೆ 3000 ರೂ. ಖರ್ಚಾಗುತ್ತದೆ, ಅದೇ ಪೆಸ್ಟಿ-ಕೋಲಾಟಗಳನ್ನು ಬಳಸಿದಲ್ಲಿ ಸ್ವಲ್ಪ ಕಡಿಮೆ ಸಾಕಾಗುತ್ತದೆ. ಆದರೆ ಈ ಕ್ವಾರ್ಟರ್ ಹೆಂಡ ತುಂಬಾ ಅಗ್ಗ. ಒಂದೆಕರೆಗೆ 4 ಕ್ವಾರ್ಟರ್ ಇದ್ದರಾಯಿತು ಎಂದು ಹೇಳಿದವರು ರೈತಾಪಿ ವರ್ಗದವರು.
 
ಹಾರಾಡಲಾರದೆ ತೂರಾಡುವ ಕೀಟಗಳು
 
ಇದೇ ಸಂದರ್ಭ, ರೈತರ ಹೊಲಗಳಿಗೆ ಭೇಟಿ ನೀಡಿದಾಗ ಅಲ್ಲಿ ದೀಪಾವಳಿ ಸಂದರ್ಭ ದುಂಬಿಗಳು ಹಾರಾಡುತ್ತಿರುವಂತಹ ದೃಶ್ಯಾವಳಿ ಕಂಡುಬಂತು. ಈ ಕೀಟಗಳ ಸಮೂಹದಲ್ಲಿ ಎರಡು ವಿಧದ ಚಲನಶೀಲತೆಯಿತ್ತು. ಒಂದು ಗುಂಪು ಗುಂಯ್ ಎಂದು ಸದ್ದು ಮಾಡುತ್ತಾ ಎಲ್ಲಿ ಮದ್ಯದ ಬಾಟಲಿ ಇಟ್ಟಿದ್ದಾರೆ ಎಂಬ ಶೋಧದಲ್ಲಿದ್ದರೆ, ಇನ್ನು ಕೆಲವು ಹಾರಾಡಲಾಗದೆ ತೂರಾಡುತ್ತಾ, ಅಲ್ಲಲ್ಲಿ ಮುಗ್ಗರಿಸಿ ಬೀಳುತ್ತಾ ಹೇಗೆ ಹೇಗೋ ಹಾರಾಡುತ್ತಿದ್ದವು.
 
ಹೆಚ್ಚಿನ ಕೀಟಗಳು ರೈತರ ಪೈರಿನ ಮೇಲೆ ಕುಳಿತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ತಲೆ ತಿರುಗಿ ಬೀಳುತ್ತಿದ್ದವು.
 
ಮಾನವರ ಮೇಲೂ ಪ್ರಯೋಗ ಸಾಧ್ಯತೆ
 
ಇದೀಗ Pesti cola ಪರಿಣಾಮವನ್ನೇ ಮದ್ಯವೂ ನೀಡುತ್ತಿರುವುರಿಂದ ಅದೇ ರೀತಿಯ "ಉತ್ತೇಜನ" ಪಡೆಯುವ ನಿಟ್ಟಿನಲ್ಲಿ ಮದ್ಯವನ್ನೇ ಮಾನವರ ಮೇಲೂ ಪ್ರಯೋಗಿಸಬಾರದೇಕೆ, ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸುವವರಿಗೆ, ನಿಧಾನ ವಿಷ ಸೇವಿಸಿ ವಿಳಂಬಸಾವು ಬಯಸುವವರಿಗೆ ಇದು ಸೂಕ್ತವಲ್ಲವೇ ಎಂದು ಬೊಗಳೆ ರಗಳೆ ಬ್ಯುರೋದ ಸಂಶೋಧನಾ ವಿಭಾಗವು ಅನ್ವೇಷಣೆ ಮಾಡಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಕೀಟಗಳು ಸಾಯುತ್ತಿರುವುದಕ್ಕೆ ಕಾರಣವನ್ನು ಒಬ್ಬರು ನೀಡಿದ ನೆನಪು. ಅವು ಮತ್ತೇರಿ ಬೀಳುತ್ತಿರುವುದಲ್ಲ. ಪೆಪ್ಸಿ, ಕೋಕ್ ಅಥವಾ ಮದ್ಯವೇ ಇರಲಿ -ಎಲ್ಲವೂ ಇರುವೆಗಳನ್ನು ಆಕರ್ಷಿಸುತ್ತವೆ. ಗಿಡವೇರಿ ಕುಳಿತ ಇರುವೆಗಳು ಕೀಟಗಳನ್ನೂ ಕೊಂದು ಹಾಕುತ್ತವೆ.

    -ಪವನಜ

    ಪ್ರತ್ಯುತ್ತರಅಳಿಸಿ
  2. ఇదేమి వ్రాసిన్నారు. చదువేదానికి అవుతూ లేదు.

    ಇನ್ಮೇಲೆ ಪೆಪ್ಸಿ, ಟಿಪ್ಸಿಗಳನ್ನು ಕುಡಿಸಿ, ಯುದ್ಧಗಳಲ್ಲಿ ಎದುರಾಳಿಗಳನ್ನು ಕೊಲ್ಲುವರಂತೆ. ಇದನ್ನೆಲ್ಲಾ ತಯಾರಿಸುತ್ತಿರುವುದು ಅಮೆರಿಕೆಯ ಕಂಪನಿಗಳು. ಆದ ಕಾರಣ ದೇಶೀ ಪೇಯಗಳನ್ನೇ ಕುಡಿಯುವವರು ಹೆಚ್ಚು ಕಾಲ ಸುಖವಾಗಿ ಬಾಳಬಲ್ಲರು. ಇದನ್ನು ನಮ್ಮ ತೆಲುಗು ಮಿತ್ರರಿಗೂ ಹೇಳುತ್ತಿರುವೆ.

    విరుద్ధ తిరుగి బిద్ద = ವಿರುದ್ಧ ತಿರುಗಿ ಬಿದ್ದ
    ಹೀಗಿರಬೇಕಿತ್ತಲ್ವಾ?

    ಇಂದು ಕನ್ನಡದವರ ಅಲ್ಲದೇ ತೆಲುಗರ ಕಣ್ಣುಗಳನ್ನೂ ತೆರೆಸಿದ್ದೀರಿ. ನಾಳೆ ಇನ್ಯಾವ ಭಾಷೆ. ಹೀಗೆಯೇ ಸ್ವಲ್ಪ ದಿನಗಳಲ್ಲಿ ನೀವು ವಿಶ್ವ ವಿಖ್ಯಾತ ಬೊ-ರಣ್ಣನವರು ಆಗುವುದರಲ್ಲಿ ಅನುಮಾನವೇ ಇಲ್ಲ.

    ಪ್ರತ್ಯುತ್ತರಅಳಿಸಿ
  3. ಪವನಜರೆ,
    ಇರುವೆಗಳಿಗೂ ಮದ್ಯವೇ ಆಕರ್ಷಣೆ ಅಂತಾಯ್ತು....
    :)

    ಪ್ರತ್ಯುತ್ತರಅಳಿಸಿ
  4. ಮಾವಿನರಸರೆ,
    ತೆಲುಗು ದೇಶ ಆದುದರಿಂದ ತೆಲುಗಿನಲ್ಲಿ ಶೀರ್ಷಿಕೆ...
    ಆದ್ರೆ ಕನ್ನಡಕ್ಕೂ ಅನ್ಯಾಯವಾಗಬಾರದಲ್ಲ... ಕನ್ನಡಿಗರಿಗೂ ಅರ್ಥವಾಗಬೇಕು... ಹಾಗಾಗಿ ಟು ಇನ್ ಒನ್.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D