(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಸೆ.22- ನೋಡಲು ಮುದ್ದು ಮುದ್ದಾಗಿದೆ ಎಂದುಕೊಂಡು ಅಪ್ಪಿಕೋ ಚಳವಳಿ ಮಾಡಲು ಹೋದರೆ ಏನಾಗುತ್ತದೆ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟ ದೇಶಗಳಲ್ಲಿ ಚೀನಾಕ್ಕೆ ಮೊದಲ ಸ್ಥಾನ ತಂದುಕೊಟ್ಟ ಪ್ರಕರಣವೊಂದು ಜಾಗತಿಕ ಮಟ್ಟದಲ್ಲಿ ಹೊಸ ಸಾಧ್ಯತೆಗಳಿಗೆ ನಾಂದಿ ಹಾಡಿದೆ.
ಬೀಜಿಂಗ್ ಪ್ರಾಣಿ ಸಂಗ್ರಹಾಲಯವೊಂದಕ್ಕೆ ತೆರಳಿದ್ದ ಈತ ಪ್ರಾಣಿ ಪ್ರಿಯ ಎಂಬುದು ಆ ಬಳಿಕ ಗೊತ್ತಾಯಿತು. ಪ್ರಾಣಿಗಳೆಂದರೆ ಈತನಿಗೆ ಭಾರಿ ಇಷ್ಟ. ಅದಕ್ಕಾಗಿಯೇ ಅವುಗಳನ್ನು ತಿನ್ನಲು ಹವಣಿಸುತ್ತಿದ್ದ. ಬೆಳ್ಳಗೆ ಐಸ್ ಕ್ರೀಮಿನಂತೆ ಕಂಡು ಬಂದ ಮುದ್ದಾದ ಪ್ರಾಣಿ ನೋಡಿದಾಗ ಆತನ ಬಾಯಲ್ಲಿ ನೀರೂರಿತ್ತು. ಅದು ಬೀಜಿಂಗ್ ಮೃಗಾಲಯದ ಇತರ ಪ್ರಾಣಿಗಳ ಬಾಯಾರಿಕೆ ತಣಿಸುವಷ್ಟು ಸಂಗ್ರಹವಾಗಿತ್ತು ಎಂದು ಪ್ರಾಣಿ ಸಂಗ್ರಹಾಲಯದ ಬೋನಿನೊಳಗೆ ಠಿಕಾಣಿ ಹೂಡಿರುವ ಬೊಗಳೆ ರಗಳೆ ಬ್ಯುರೋದ ವರದಿಗಾರರೊಬ್ಬರು ವರದಿ ಮಾಡಿದ್ದಾರೆ.
ಮೊದಲಿಗೆ ಆತ ಈ ಪ್ರಾಣಿಯ ಮೇಲೆ ಹಿಮ (ಮಂಜು) ಸುರಿದಿದ್ದು, ಅದು ಪಾಪ ಚಳಿಯಿಂದ ನಡುಗುತ್ತಿರಬಹುದು ಎಂದುಕೊಂಡು ಅದಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಅಪ್ಪಿಕೊಳ್ಳಲು ಹೋಗಿದ್ದ. ಬಿಸಿಯಾದರೆ ಬೆಣ್ಣೆ ಕರಗೀತು ಎಂಬುದರಲ್ಲಿ ಆತ ಬಲವಾದ ನಂಬಿಕೆ ಇರಿಸಿದ್ದ. ತಾನು ಕೂಡ ಸಾಕಷ್ಟು ಬಿಸಿ (ಹಾಟ್) ಆಗಿರೋ ಡ್ರಿಂಕ್ಸ್ ಸೇವಿಸಿದ್ದರಿಂದ ಅದು ಅಲ್ಲಿ ನೆರವಿಗೆ ಬಂದೀತೆಂಬುದು ಆತನ ಲೆಕ್ಕಾಚಾರವಾಗಿತ್ತು.
ಆದರೆ, ಆಗಿದ್ದೇನು? ಪಾಂಡಾ ಎಂಬ ಪಾಪದ ಪ್ರಾಣಿಯ ಮೈಮೇಲಿದ್ದ ಬೆಣ್ಣೆ ಕರಗಲೇ ಇಲ್ಲ. ಆ ಪ್ರಾಣಿಗೂ ಗೊತ್ತಿತ್ತು.... ಇಂಥವರಿಗೆ ಕೂಡ ಬಿಸಿಯಾಗದೆ ಬೆಣ್ಣೆ ಕರಗದು ಎಂಬುದು! ಅದಕ್ಕಾಗಿ ಅದು ತನ್ನ ಹಲ್ಲುಗಳನ್ನು ಆತನ ಚರ್ಮಕ್ಕೆ ತೂರಿಸಿಬಿಟ್ಟಿತು. ಇದರಿಂದ ಉತ್ತೇಜಿತನಾದ ಆತ ಕೂಡ ಪಾಂಡಾದ ದಪ್ಪ ಚರ್ಮಕ್ಕೆ ಹಿಂಭಾಗದಿಂದ ಕಚ್ಚಲು ನೋಡಿದನಾದರೂ, ತನ್ನ ಹಲ್ಲುಗಳು ಒಳಗೆ ಹೋಗಲೇ ಇಲ್ಲವಲ್ಲ ಎಂದು ಬಾಯಿ ಚಪ್ಪರಿಸಿಕೊಂಡನೆಂದು ಒದರಿಗಾರರು ಹೇಳಿದ್ದಾರೆ.
ತೀರಾ ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, ಆತ ಈಗ ಆಸ್ಪತ್ರೆಯ ಹಾಸಿಗೆಯಲ್ಲಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದಾನೆ. ಮೈಮೇಲೆಲ್ಲಾ ಅಲ್ಲಲ್ಲಿ ಬಿಳಿಯಾದ ಬಟ್ಟೆಯಿಂದ ಸುತ್ತಿ ಸುತ್ತಿ ಇರುವುದರಿಂದ ಮತ್ತು ಅಲ್ಲಲ್ಲಿ ಕಣ್ಣುಗಳಂತೆ ಕೆಂಪಾಗಿ ಗೋಚರಿಸುವ ರಕ್ತದ ಕಲೆಯಿಂದಾಗಿ ಆತನೂ ಪಿಳಿ ಪಿಳಿ ಕಣ್ಣು ಬಿಡುತ್ತಿರುವ ಪಾಂಡಾದಂತೆ ಗೋಚರಿಸುತ್ತಿದ್ದಾನೆ.
3 ಕಾಮೆಂಟ್‌ಗಳು
ಆ ಮನುಷ್ಯನ ಹೆಸರು ಪಾಂಡು ಅಂತಿರಬೇಕು ಅಲ್ವಾ? ಇವನ ಬಗ್ಗೆ ಬಹಳವಾಗಿ ಕೇಳಿರುವೆ,
ಪ್ರತ್ಯುತ್ತರಅಳಿಸಿಪಾಪ ಪಾಂಡ ಪಾಪ ಪಾಂಡು.
ಮಾವಿನರಸದವರೆ,
ಪ್ರತ್ಯುತ್ತರಅಳಿಸಿಪಾಪ ಪಾಂಡುವಿನ
ಮುಸುಂಡು ನೋಡಿದ್ರಾ?
ಅಲ್ಲಿ ಐಸ್ ಕ್ರೀಮ್ ಇತ್ತಾ?
ಐಸ್ ಕ್ರೀಮ್ ಅನ್ನು ಕನ್ನಡದಲ್ಲಿ ಯೇನಂದು ಕರೆಯುತಾರೆ
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D