ಬೊಗಳೆ ರಗಳೆ

header ads

ಸಾನಿಯಾ ತುಟಿಯಿಂದ ರಾಷ್ಟ್ರೀಯ ಬಿಕ್ಕಟ್ಟು!

(ಬೊಗಳೂರು ತಾರಾ ಬ್ಯುರೋದಿಂದ)
ಬೊಗಳೂರು, ಸೆ.21- ಕೈಯಲ್ಲಿ ರಾಕೆಟ್ ಬೀಸುತ್ತಲೇ ಹದಿಹರೆಯದ ಕುದಿ ಹೃದಯಗಳಲ್ಲಿ ruckus ಸೃಷ್ಟಿಸಿದ್ದ ಸಾನಿಯಾ ಮಿರ್ಜಾ ಮತ್ತೊಂದು ಬಾಂಬ್ ಸಿಡಿಸಿರುವುದರಿಂದ ಅದು ಎಲ್ಲಿ ಸ್ಫೋಟಗೊಂಡಿದೆ ಎಂದು ಹೆಕ್ಕಿಕೊಳ್ಳಲು ಹೋದ ಬೊಗಳೆ ಬ್ಯುರೋ ಸಿಬ್ಬಂದಿಗೆ ವಿಶೇಷ ಸುದ್ದಿಯೊಂದು ಸಿಕ್ಕಿದೆ.
 
ಭಾರತದಲ್ಲಿ ಭಯಂಕರವಾದ ರಾಷ್ಟ್ರೀಯ ಬಿಕ್ಕಟ್ಟೊಂದು ಸೃಷ್ಟಿಯಾಗಿರುವುದರ ಹಿನ್ನೆಲೆ ಏನು ಎಂದು ಅರಿಯಲು ಹೋದಾಗ ದೊರಕಿದ್ದು ಈ ಸುದ್ದಿ. ಸಾನಿಯಾ ಮಿರ್ಜಾ ಅವರ ತುಟಿಗಳೇ ಈ ಬಿಕ್ಕಟ್ಟಿನ ಹಿಂದಿರುವ ಚುಂಬಕ ಶಕ್ತಿ ಎಂಬುದು ತಿಳಿದುಬಂದಿದೆ.
 
ತನ್ನ ತುಟಿಗಳೇ ರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣ ಎಂದು ಆಕೆ ಕಟಕಟೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಕಾರಣಕ್ಕೆ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಸಿದ ಆಕೆಗೆ ಬೊಗಳೆ ರಗಳೆ ಬ್ಯುರೋ ಉದಾರವಾಗಿ ಕ್ಷಮಾದಾನ ಮಾಡಿದೆ.
 
ಇದಕ್ಕೆ ಈ ಹಿಂದೆ ಈಕೆಯ ತುಟಿಗಳ ಬಗ್ಗೆ ದೇಶಾದ್ಯಂತ ಎದ್ದ ಆತಂಕದ ಅಲೆಗಳೇ ಕಾರಣ ಎಂಬುದು ಇಲ್ಲಿ ಗೊತ್ತಾಗಿದೆ.
 
ತುಟಿ ಬಿಚ್ಚಿದರೆ ರಾಷ್ಟ್ರೀಯ ಬಿಕ್ಕಟ್ಟು, ಟೆನಿಸ್ ಅಂಗಣದಲ್ಲಿ ತುಂಡು ಲಂಗ ಹಾಕಿದರೆ ಫತ್ವಾ ಜತೆಗೆ ಸಾಮುದಾಯಿಕ ಬಿಕ್ಕಟ್ಟು, ಬಾಯಿ ಬಿಟ್ಟರೆ ಮತ್ತೇನೋ ಬಿಕ್ಕಟ್ಟು ಎಲ್ಲಾ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಕೆ ಇತ್ತೀಚೆಗಿನ ದಿನಗಳಲ್ಲಿ ಟೆನಿಸ್ ಆಡುವಾಗ ರಾಕೆಟ್ ಬಲವಾಗಿ ಬೀಸಲು ಹೆದರುತ್ತಿದ್ದಾರೆ ಎಂಬುದನ್ನು ಬ್ಯುರೋ ಕಂಡುಕೊಂಡಿದೆ.
 
ಈ ಕಾರಣಕ್ಕೆ ಆಕೆ ಇತ್ತೀಚೆಗೆ ವಿಶ್ವ ಡಬ್ಲ್ಯುಟಿಎ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಸ್ಥಾನಗಳ ಸಂಖ್ಯೆಯನ್ನು 30ರಿಂದ 70ಕ್ಕೆ "ಏರಿಸಿ"ಕೊಂಡಿದ್ದಾರೆ ಎಂಬುದು ಖಚಿತವಾಗಿದೆ. ಇದೂ ಅಲ್ಲದೆ, ಆಕೆಯ ಮೇಲೆಯೇ ಬೊಗಳೆ ರಗಳೆ ಬ್ಯುರೋ ಸೇರಿದಂತೆ ಮಾಧ್ಯಮಗಳೆಲ್ಲಾ ಬೆಳಕು ಚೆಲ್ಲುತ್ತಿರುವುದರಿಂದಾಗಿ ಇತರ ತಾರೆಗಳಿಗೆ ಬೆಳಕಿನ ಕೊರತೆಯುಂಟಾಗಿದೆ. ಇದರಿಂದಾಗಿ ಪ್ಲುಟೋ ಗ್ರಹವನ್ನು ಉದುರಿಸಿದಂತೆ ಈ ತಾರೆಯೂ ಮೂಲೆಗೆ ಸೇರಬಹುದು ಎಂದು ಇತರ ನಕ್ಷತ್ರಗಳು ಎಚ್ಚರಿಕೆ ನೀಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ನಿಮಗೊಂದು ವಿಷಯ ಗೊತ್ತಾ? ಸಾನಿಯಾ ಹತ್ತನೇ ತರಗತಿಯಲ್ಲಿದ್ದಾಗ ಹೊಲಿಸಿದ ಸ್ಕರ್ಟನ್ನೇ ಇನ್ನೂ ಹಾಕುತ್ತಿರುವುದು. ಆ ನಂತರ ಅವಳು ಸ್ಕರ್ಟು ಹೊಲಿಸಿಯೇ ಇಲ್ಲವಂತೆ. ಇದು ನನಗೆ ಗೊತ್ತಾದದ್ದು ಹೇಗೆ ಅನ್ನುತ್ತೀರಾ? ಅವಳ ಟೈಲರ್ ಮತ್ತು ನಾನು ಜೊತೆಯಲ್ಲೇ ಪಬ್ಬಿಗೆ ಹೋಗುವುದು!

    -ಪಬ್

    ಪ್ರತ್ಯುತ್ತರಅಳಿಸಿ
  2. ಓಹ್ ಪಬ್ಬಿಗರೇ,

    ಇದು ಆಕೆಯ 10ನೇ ತರಗತಿಯ ಸ್ಕರ್ಟಾ? ನಾನೇನೋ ಅಂಗನವಾಡಿಗೆ ಹೋಗುವ ಮೊದಲು ಮನೆಯಲ್ಲೇ ಗಡಿಗಡಿಗೆ ಹಾಕಿ ತೆಗೆಯುತ್ತಿದ್ದ ಉಡುಗೆ ಅಂತ ತಿಳ್ಕೊಂಡಿದ್ದೆ.

    ಇನ್ನೂ ಒಂದು ಸಂದೇಹ. ನಿಮ್ಮ ಜೊತೆ ಪಬ್ಬಿಗೆ ಹೋಗಿ ಬಂದ ಮೇಲೆಯೇ ಆ ಟೈಲರ್ ಹೊಲಿದ ಕಾರಣದಿಂದ ಲಂಗ ತುಂಡಾಗಿರಲೂಬಹುದು!

    ಪ್ರತ್ಯುತ್ತರಅಳಿಸಿ
  3. ಶಾಂತಂ ಪಾಪಂ. ಇಂತಹ ಲೇಖನಗಳನ್ನೆಲ್ಲಾ ನಾನೋದುವುದಿಲ್ಲ.

    ಪ್ರತ್ಯುತ್ತರಅಳಿಸಿ
  4. ಮಾವಿನ ರಸದವರೆ,
    ನೀವು ಪ್ರತಿಯೊಂದನ್ನೂ ಮೇಲಿಂದ ಕೆಳಗಿನವರೆಗೆ ಪೂರ್ತಿಯಾಗಿ ಓದಿದ ಬಳಿಕವೇ 'ಓದುವುದಿಲ್ಲ' ಎಂಬ ನಿರ್ಧಾರಕ್ಕೆ ಬರುತ್ತಿರುವುದು ಸ್ವಾಗತಾರ್ಹ.
    ಯಾವತ್ತೂ ಇದೇ ರೀತಿ ಸಹಕಾರವಿರಲಿ. :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D