ಬೊಗಳೆ ರಗಳೆ

header ads

ಕರೀಂ ತಲೆತೆಗಿ ಬಾಯ್ಬಿಟ್ಟಾಗ ಮಂಪರಿನಲ್ಲಿರಲಿಲ್ಲ !

(ಬೊಗಳೂರು ಮಂಪರು ಶೋಧ ಬ್ಯುರೋದಿಂದ)
ಬೊಗಳೂರು, ಸೆ.16- ಕಳೆದ ವಾರ ಛಾಪಿತ ಲೋಕದಿಂದ ಅಬ್ದುಲ್ ಕರೀಂ ತಲೆತೆಗಿ ಬಾಯಿ ಬಿಟ್ಟಾಗ ಅರಾಜಕೀಯ ಲೋಕವು ಗಡಗಡನೇ ನಡುಗಿದ್ದು ಹಳೆಯ ಸುದ್ದಿಯಾದರೂ ಅದು ನಮಗೆ ರದ್ದಿಯಾಗದೇ ಇರುವುದರಿಂದ ಕಸದ ಬುಟ್ಟಿಯನ್ನು ಮತ್ತೆ ಕೆದಕಲು ನಮ್ಮ ಬ್ಯುರೋ ನಿರ್ಧರಿಸಿದೆ.
 
ತತ್ಪರಿಣಾಮವಾಗಿ ಈ ಕಸದ ಬುಟ್ಟಿಯಿಂದ ದೊರೆತ ಮಾಹಿತಿಯ ಅನ್ವಯ, ತಲೆತೆಗಿಯು ಭರ್ಜರಿಯಾಗಿ ಅಸತ್ಯ ಹೇಳುವಂತೆ ಮಾಡಲು ಆತನ ಮಂಪರು ಪರೀಕ್ಷೆ ನಡೆಸಿದ್ದೇ ಅಸತ್ಯ ಎಂಬ ದಿವ್ಯ ಮಾಹಿತಿ ದೊರಕಿದೆ.
 
ಹಲವಾರು ವರ್ಷಗಳಿಂದ ಛಾಪಕೂಪದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಅಬ್ದುಲ್ ಕರೀಂ ತಲೆತೆಗಿಯು ಯಾವಾಗ ಯಾರ ತಲೆ ತೆಗೆಯುತ್ತಾನೋ ಎಂಬ ಪಾಪಪ್ರಜ್ಞೆಯು ರಾಜಕಾರಣಿಗಳಿಗೆ ಮತ್ತು ಪೊಲೀಸರಿಗೆ ಇದ್ದ ಕಾರಣದಿಂದಾಗಿ ತಲೆತೆಗಿಯ ಪ್ರಜ್ಞೆ ತಪ್ಪಿಸುವ ನಿಟ್ಟಿನಲ್ಲಿ ಆತನಿಗೆ ಮಂಪರು ಬರಿಸುವ ದ್ರಾವಣ ಕುಡಿಸಲಾಗಿತ್ತು.
 
ಆದರೆ, ಈಗ ಎಲ್ಲರ ಜುಟ್ಟು ತನ್ನ ಕೈಯಲ್ಲಿರುವುದರಿಂದ ಅವರಿಂದ ಜೀವಬೆದರಿಕೆ ಇರಬಹುದೆಂದು ಆಲೋಚಿಸುತ್ತಿದ್ದ ತಲೆತೆಗಿಯು, ನಿದ್ರಾಹೀನತೆ ರೋಗದಿಂದ ಬಳಲುತ್ತಿದ್ದ. ಈ ಕಾರಣಕ್ಕೆ ಆತನ ಮೇಲೆ ಈ ಮಂಪರು ಔಷಧಿಯು ಯಾವುದೇ ಕೆಲಸ ಮಾಡಿರಲಿಲ್ಲ. ಅಂದರೆ ಆತ ಬಾಯಿ ಬಿಡುವಾಗ ಮಂಪರಿನಲ್ಲಿರಲಿಲ್ಲ. ಟಿವಿ ಚಾನೆಲ್‌ಗಳಲ್ಲಿ ಆತನ ಮಂಪರು ಪರೀಕ್ಷೆಯ ನೇರವಲ್ಲದ ಪ್ರಸಾರ ಮಾಡಿದ ಸಂದರ್ಭದಲ್ಲಿ ಆತ ತೊದಲುತ್ತಿದ್ದುದು ವಿದೇಶೀ ಮದ್ಯದ ಪ್ರಭಾವ ಎಂಬುದು ದೃಢಪಟ್ಟಿದೆ.
 
ಈ ವಿದೇಶೀ ಮದ್ಯ ಪೂರೈಸಿದ್ದು ಮಹಾರಾಷ್ಟ್ರ ರಾಜಕಾರಣಿ ಪರದ್ ಶವಾರ್, ಭುಜನ್ ಛಗಬಲ್ ಮತ್ತು ಕರ್ನಾಟಕದ ಭೇಷನ್ ರೋಗ್ ಎಂಬ ಸುಳಿವು ಸಿಕ್ಕಿದ್ದು, ಇದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ.
 
ಈ ವಿಶ್ಲೇಷಣೆ ಪ್ರಕಾರ, ಈಗಾಗಲೇರಾಜಕೀಯ ಕ್ಷೇತ್ರದಲ್ಲಿ ತಮ್ಮ ಹೆಸರಿನ ಮಿಂಚುವಿಕೆ ಕಡಿಮೆಯಾಗುತ್ತಿದೆ. ಹಾಗಾಗಿ ಹೆಸರು ಮಾಡಬೇಕಿದ್ದರೆ, ವೀರಪ್ಪನ್‌ಗಳು, ತೆಲಗಿಗಳು ಮತ್ತಿತರ ಕುಖ್ಯಾತರ ಬಾಯಲ್ಲಿ ತಮ್ಮ ಹೆಸರು ಬರಬೇಕು. ಈ ದುರಾಲೋಚನೆ ಪರಿಣಾಮವೇ ತಲೆತೆಗಿಯ ಬಾಯಲ್ಲಿ ಈ ಅರಾಜಕರ ಹೆಸರು ಸ್ಫೋಟವಾಗಿದ್ದು. ಇದಕ್ಕಾಗಿ ತಲೆತೆಗಿ ಬಾಯಿಬಿಟ್ಟ ತಕ್ಷಣ ಆ ಬಾಯಿಗೆ ವಿದೇಶೀ ಮದ್ಯ ಸುರಿಯಲಾಗಿತ್ತು ಎಂಬ ಅಂಶ ಬಯಲಾಗಿದೆ.
 
ಈ ಪ್ರಕರಣದ ಮುಂದುವರಿದ ಭಾಗವಾಗಿ, ತಲೆತೆಗಿಯಿಂದ ಪರದ್ ಶವಾರ್, ಛಗಬಲ್ ಮುಂತಾದವರಿಗೆ ನೀಡಿದ ಗುಣನಡತೆಯ ಸರ್ಟಿಫಿಕೆಟ್. ಅವರು ಅದನ್ನು ತಮ್ಮ ತಮ್ಮ ಮನೆ ಗೋಡೆಗಳಲ್ಲಿ ಫ್ರೇಮ್ ಹಾಕಿ ಒಪ್ಪವಾಗಿ ಇರಿಸಿಕೊಂಡಿದ್ದಾರೆ.
 
ಈ ಅರಾಜಕರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಮೈನಸ್ ಇಂಟು ಮೈನಸ್ ಈಸ್ ಈಕ್ವಲ್‌ಟು ಪ್ಲಸ್ ಅನ್ನೋ ನಿಯಮವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಂದರೆ ಆರೋಪಿಯೊಬ್ಬ ಮತ್ತೊಬ್ಬ ಆರೋಪಿ ಮೇಲೆ ಆರೋಪ ಮಾಡಿದರೆ ಅದು ಅನ್-ಆರೋಪ. ಸತ್ಯ ಮತ್ತು ಸತ್ಯ ಸೇರಿದರೆ ಸುಳ್ಳು ಎಂಬುದೂ ಅವರ ವಾದಕ್ಕೆ ಪುಷ್ಟಿಕೊಡುವ ಒಂದು ಸಮೀಕರಣ ಸೂತ್ರವಾಗಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

  1. ಬದಲಾವಣೆಯೇ ಜಗದ ನಿಯಮ ಅಂತ ನನ್ನೊಬ್ಬ ಸ್ನೇಹಿತರು ಹೇಳ್ತಿರ್ತಾರೆ. ಹಾಗೆ ಸಮಾಜವನ್ನು ತೊಳೆಯಲು ಇಂತಹ ಒಬ್ಬಿಬ್ಬ ಮಹಾತ್ಮರು ತಮ್ಮ ಕೈಂಕರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಇಂತಹ ಮಹನೀಯರಿಗೆ ಕುಖ್ಯಾತ ಎಂಬ ಬಿರುದು ಯಾಕೋ ಸರಿ ಹೊಂದಲ್ಲ. ವಿಖ್ಯಾತ ಅನ್ನಬಹುದು. ಇಂತಹವರಿದ್ದರೇ ಜಾರಕಾರಣಿಗಳ ಅಲ್ಲಲ್ಲ ರಾಜಕಾರಣಿಗಳ ನೈಜಬಣ್ಣ ಬಯಲಾಗೋದು.

    ಈ ತೆಲಿತೆಗಿಗೆ ಈ ವರ್ಷದ ಕರ್ನಾಟಕ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವೆ.

    ಪ್ರತ್ಯುತ್ತರಅಳಿಸಿ
  2. ಯಾರದು ಬದಲಾವಣೆ ಜಗದ ನಿಯಮ ಅಂದಿದ್ದು? ಬದಲಾವಣೆ ಮಾಡ್ಕೊಳೋದು ನಮ್ ಕೈಯಲ್ಲೇ ಇರೋದಲ್ವಾ? ಜಗದ ನಿಯಮ ಹೇಗಾಗುತ್ತೆ ಅಂತ ಬ್ಯುರೋದೊಳಗೆ ಗುಸುಗುಸು ಪಿಸುಪಿಸು ಕೇಳಿಸ್ತಾ ಇದೆ...

    ಕರ್ನಾಟಕದ ರತ್ನ ಎಲ್ಲಿ ಸಿಗೋದು, ಸಿಗಬೇಕಿದ್ರೆ ಏನು ಮಾಡ್ಬೇಕು? ಎಷ್ಟು ಕೊಡ್ಬೇಕು ಅಂತ ಹೇಳ್ತೀರಾ ಮಾವಿನಯನಸರೆ!?

    ಪ್ರತ್ಯುತ್ತರಅಳಿಸಿ
  3. ಬದಲಾವಣೆ ... ಹೇಳಿದ್ದು ನನ್ನ ಸ್ನೇಹಿತರು. ನಿಮಗೆ ಅವರ ಪರಿಚಯವಿಲ್ಲಬಿಡಿ. ಅವರು ಅತಿ ಮೇಧಾವಿಗಳು.
    ನಿಮ್ಮ ಬ್ಯುರೋದಲ್ಲಿ ಗುಸು ಗುಸು ಪಿಸು ಪಿಸು ಇದ್ದೇ ಇರತ್ತೆ. ಎಲ್ಲರ ಗಂಟಲಿನಲ್ಲೂ ಚ್ಯುಯಿಂಗ್ ಗಮ್ ಅಂಟಿಕೊಂಡಿದ್ದು, ಗಟ್ಟಿಯಾಗಿ ಮಾತನಾಡಲು ಆಗ್ತಿಲ್ಲ.

    ಕರ್ನಾಟಕದ ರತ್ನ ಮಹಾರಾಷ್ಟ್ರದಲ್ಲಿ ಸಿಗತ್ತೆ. ಕರ್ನಾಟಕದಲ್ಲಿ ಎಲ್ಲರೂ ಮಣ್ಣಿನ ಮಕ್ಕಳು ಮೊಮ್ಮಕ್ಕಳು ಅಂತ ಹೇಳ್ಕೊಂಡು ತಿರುಗುತ್ತಿರೋದ್ರಿಂದ, ಅಲ್ಲಿಯ ರತ್ನ ಇಲ್ಲಿಗೆ ಓಡಿ ಬಂದಿದ್ದಾಳೆ. ನಿಮಗೆ ಬೇಕಿದ್ರೆ ಹೇಳಿ, ನಾನು ಅವಳ ವಿಳಾಸ ಕಳುಹಿಸಿಕೊಡುವೆ. ಆದ್ರೆ ಒಂದು ಷರತ್ತು, ನೀವು ಕರ್ನಾಟಕ ಬಿಟ್ಟು ಮಹಾರಾಷ್ಟ್ರದಲ್ಲಿ ಮನೆಯಳಿಯ ಆಗೋಕ್ಕೆ ತಯಾರಾಗಿರ್ಬೇಕು :P

    ಪ್ರತ್ಯುತ್ತರಅಳಿಸಿ
  4. ತಲೆತೆಗಿ ತನಿಖಾ ವರದಿಗೆ ಧನ್ಯವಾದಗಳು ಅಸತ್ಯಾನ್ವೇಷಿಯವರೆ. ಈ ನಾಟಕಗಳು ಯಶಸ್ವಿಯಾಗಿ, ಒಬ್ಬೇ ಒಬ್ಬ ಭ್ರಷ್ಟನಿಗೆ ಶಿಕ್ಷೆಯಾದರೂ ನನಗೆ ತುಂಬಾ ಸಂತೋಷವಾಗುತ್ತದೆ.

    ಪ್ರತ್ಯುತ್ತರಅಳಿಸಿ
  5. ಶ್ರೀತ್ರೀ ಅವರೆ,

    ಈ ವರದಿಯಿಂದ ಯಾರಾದ್ರೂ ಆಕ್ರೋಶಗೊಂಡು ದೊಣ್ಣೆ ಹಿಡಿದುಕೊಂಡು ಬಂದ್ರೆ ನೀವು ಹೇಳಿದ್ದಕ್ಕೆ ಬರೆದದ್ದು ಅಂತ ನಾವು ಮಂಪರಿಲ್ಲದೆಯೇ ಬಾಯಿಬಿಡುತ್ತೇವೆ...!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D