(ಬೊಗಳೂರು ಭಯೋತ್ಪಾದನಾ ಆಗ್ರಹ ಬ್ಯುರೋದಿಂದ)
ಬೊಗಳೂರು, ಸೆ.11- ದೇಶಾದ್ಯಂತ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಎಲ್ಲಾ ಗೃಹ ಮಂತ್ರಿಗಳೂ ಕೈಜೋಡಿಸತೊಡಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಯಾರ್ಯಾರದೋ ಮನೆಗೆ ನುಗ್ಗಿದ ಬ್ಯುರೋ ಸಿಬ್ಬಂದಿ ಭಯೋತ್ಪಾದಕರ ಪತ್ತೆಗೆ ತೀವ್ರ ಸಹಕಾರ ನೀಡಿತು.
ಈ ದೇಶದಲ್ಲಿ ಅಂಟಿನಂತಹ... ರಬ್ಬರಿನಂತಹ... ಎಳೆದಷ್ಟೂ ಉದ್ದವಾಗುತ್ತಿರುವ ಕನ್ನಡ ಟಿವಿ ಧಾರಾವಾಹಿಗಳೇ ಸರ್ವಸ್ವ, ಅದು ಬಿಟ್ಟು ಬೇರೆ ಪ್ರಪಂಚವೇ ಇಲ್ಲ ಎಂದುಕೊಂಡಿದ್ದ ಮುಕ್ತಾಯಮ್ಮ, ರಂಗೋಲಿಯಮ್ಮ ಮತ್ತು ಕುಂಕುಮಭಾಗ್ಯವತಿಯರನ್ನು ಮಾತನಾಡಿಸಲೆಂದು ಹೋದಾಗ ಅವರೆಲ್ಲರೂ ಸೇರಿಕೊಂಡು ಒಬ್ಬಾತನನ್ನು ಕಟ್ಟಿ ಹಾಕಿದ್ದರು. ಇದರ ಹಿಂದಿನ ರಹಸ್ಯ ಭೇದಿಸಲು ಹೋದಾಗ ಆತ ಕೇಬಲ್ ಟಿವಿಯಾತ ಎಂಬುದು ತಿಳಿಯಿತು.
ಅಲ್ಲಮ್ಮಾ, ನೀವೇಕೆ ಆತನನ್ನು ತದುಕಬೇಕು ಎಂದು ಪ್ರಶ್ನಿಸಿದಾಗ.... ಧಾರಾವಾಹಿಯಂತೆಯೇ ಸರಾಗವಾಗಿ ಎಳೆದಷ್ಟೂ ಉದ್ದವಾಗುವ ಧಾಟಿಯಲ್ಲಿ ಮಾತನಾಡಿದ ಮೂವರೂ "ಅಲ್ಲಾ ಸ್ವಾಮಿ, ನೋಡಿ ಈತ ನಾವು ಕೇಬಲ್ ಬಿಲ್ ಕಟ್ಟದಿದ್ದರೆ ಮತ್ತು ಹೆಚ್ಚು ಹಣ ಪಾವತಿಸದಿದ್ದರೆ ನಾಳೆಯಿಂದ ಕನ್ನಡ ಚಾನೆಲ್ ಹಾಕೋದನ್ನು ನಿಲ್ಲಿಸ್ತಾನಂತೆ... ಇದು ನಮ್ಮಲ್ಲಿ ಭೀತಿ, ಆತಂಕ ಉತ್ಪಾದಿಸುವ ಸಂಚಲ್ಲವೇ? ಈತನೂ ಒಬ್ಬ ಭಯೋತ್ಪಾದಕನಲ್ಲವೇ?" ಎಂದು ಪ್ರಶ್ನಿಸಿದರು.
ಆದರೆ ಈ ಮಾತಿನ ಧಾರಾವಾಹಿಯ ಮಧ್ಯೆ ಜಾಹೀರಾತಿನ "ಒಂದು ಪುಟ್ಟ ಬ್ರೇಕ್"ಗೆ ಅವಕಾಶವೇ ಇರಲಿಲ್ಲ. ಯಾಕೆಂದರೆ ಅವರ್ಯಾರು ಕೂಡ ಕೇಬಲ್ ಟೀವಿಯಾತನಿಗೆ ಬಾಯಿ ತೆರೆಯಲು ಅವಕಾಶವನ್ನೇ ಕೊಡುತ್ತಿರಲಿಲ್ಲ!
ಪಕ್ಕದ ಮನೆಗೆ ಹೋದಾಗ ಕರೆಂಟ್ ಶಾಕ್ ಹೊಡೆದಂತಾಯಿತು. ಎಲ್ಲರೂ ಶಾಕ್ ಹೊಡೆಸಿಕೊಂಡವರಂತೆ ನಡುಗುತ್ತಿದ್ದರು. ಅವರೆಲ್ಲಾ ಪೊರಕೆ ಹಿಡಿದು ಭಯೋತ್ಪಾದಕನ ಆಗಮನಕ್ಕೆ ಕಾಯುತ್ತಿದ್ದರು. ತಿಂಗಳು ಆರಂಭವಾಗುವ ಮೊದಲೇ ಬಿಲ್ ಹೊತ್ತುಕೊಂಡು ಬರುವ ವಿದ್ಯುತ್ ಇಲಾಖೆಯ ಸಿಬ್ಬಂದಿಯೇ ಅವರ ಮನದಲ್ಲಿ ಭೀತಿ ಉತ್ಪಾದಿಸುವಾತ. ಈ ಭಯೋತ್ಪಾದಕನಿಗೆ ತಕ್ಕ ಶಾಸ್ತಿ ಮಾಡಲು ಅವರು ಕಾಯುತ್ತಿದ್ದರು.
ಹಾಗೆಯೇ ಮುಂದೆ ಮುಂದೆ ಹೋದಂತೆ ಹದಿಹರೆಯದ ಮಕ್ಕಳಿರುವ ಮನೆಗಳಲ್ಲಿ ಟೆಲಿಫೋನ್ ಬಿಲ್ಲಿಂಗ್ ಇಲಾಖೆಯಾತನ ಭಯೋತ್ಪಾದನಾ ಕೃತ್ಯ, ಪತ್ರಿಕಾಭ್ಯಾಸಿಗಳ ಮನೆಯಲ್ಲಿ ಪತ್ರಿಕಾ ವಿತರಕನ ಭೀತಿವಾದ, ದ್ರವ ಬಾಂಬ್ ಸಿಡಿಸುವ ಶಂಕೆಯಲ್ಲಿ ಹಾಲು ಮಾರುವವನ ಶಂಕಾಸ್ಪದ ಉಗ್ರವಾದ ಕೃತ್ಯಗಳ ವಿರುದ್ಧ ಗೃಹಿಣಿಯರು ಸಿಂಹಿಣಿಯರಾಗಿದ್ದರು. ಇದಲ್ಲದೆ ಮತ್ತೊಬ್ಬ ಪ್ರಮುಖ ವ್ಯಕ್ತಿ ಮನೆಯೊಡೆಯ. ಈತ ಯಾವತ್ತೂ ಬಾಡಿಗೆ ಬಂಟರ ಮೂಲಕವೇ ಬಾಡಿಗೆ ವಸೂಲಿಗೆ ಯತ್ನಿಸುತ್ತಾ ಗೃಹಶಾಂತಿ ಭಂಗ ಮಾಡುವ ಕಾರಣ ಭಯೋತ್ಪಾದಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾನೆ ಎಂಬುದು ತಿಳಿದುಬಂದಿದೆ.
ಇಷ್ಟೆಲ್ಲಾ ಕಿತಾಪತಿಗಳ ನಡುವೆ, ಬೊಗಳೆ ರಗಳೆ ಪತ್ರಿಕೆಯು ತನ್ನ ಚಂದಾದಾರರಿಗೆ ಬಿಲ್ ಕಳುಹಿಸದೆಯೇ ಹೇಗೆ ವಸೂಲಿ ಮಾಡುವುದು ಎಂಬ ಬಗ್ಗೆ ಚಿಂತಾಜನಕ ಸ್ಥಿತಿಯಲ್ಲಿ ಯಾಚನಾಮಗ್ನವಾಗಿದೆ ಎಂದು ತಿಳಿದುಬಂದಿದೆ.
11 ಕಾಮೆಂಟ್‌ಗಳು
ಓಹ್ ಇಷ್ಟೆಲ್ಲಾ ರಾದ್ಧಾಂತ ಆಗಿದೆಯೇ? ಓ ಮಹಿಳಾಮಣಿಗಳ ಗುಂಪಿನಲ್ಲಿ ನಮ್ಮ ಮನೆಯವರು ನಿಮ್ಮ ಮನೆಯವರೂ ಸೇರಿದ್ರಾ?
ಪ್ರತ್ಯುತ್ತರಅಳಿಸಿಮೊನ್ನೆ ನಮ್ಮೂರಿನಲ್ಲೂ ಹೀಗೆಯೇ ಆಯ್ತು - ನಿಮಗೆ ವಿಷಯ ತಿಳಿಸೋದು ಮರೆತುಹೋಗಿತ್ತು. ಕುಪಿತ ಭಾಮಿನಿ ಧಾರಾವಾಹಿ ಪ್ರಸಾರದ ಸಮಯದಲ್ಲಿ ಕೇಬಲ್‍ನವನು ತರಲೆ ಮಾಡಿದ ಅಂತ ಕೇಬಲ್ ಅನ್ನು ಕಿತ್ತು ಅದರಲ್ಲಿ ಅವನನ್ನು ಕಟ್ಟಿ ಚೆನ್ನಾಗಿ ಥಳಿಸಿದ್ರು. ಈಗ ನೋಡಿ, ಎಲ್ಲ ಭಾಮಿನಿ, ಮಾಮಣ್ಣಿಗಳ ಸೀರಿಯಲ್‍ಗಳು ಸರಿಯಾಗಿ ಬರುತ್ತಿವೆ. ಈ ಸಮರ ಮುಂದುವರೆದರೆ, ನಮಗೂ ಕಷ್ಟ ಅಲ್ವೇ? ಮನೆಗೆ ಬರೋದು ತಡವಾದರೆ ನಮ್ಮನ್ನೂ ಬೀದಿಯಲ್ಲಿ ಕಟ್ಟಿ ಹಾಕಿ ಥಳಿಸಿದ್ರೆ - ಗೃಹಿಣಿಯರ ಸಂಘಕ್ಕೆ ಧಿಕಾರ!
ಆಹಹ,
ಪ್ರತ್ಯುತ್ತರಅಳಿಸಿಅನ್ವೇಷಿಗಳೆ, ತವಿಶ್ರೀ ಧಿಕ್ಕಾರ ಹೇಳುವ ಮೊದಲು ನಿಮ್ಮ ದಿಕ್ಕನ್ನು ಖಚಿತ ಪಡಿಸಿಕೊಳ್ಳಿ :)
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಿಮ್ಮ ಮನೆಯವರಿಗೂ ಭಯೋತ್ಪಾದನೆ ವಿರುದ್ಧ ಹೋರಾಡಲು ನೋಟೀಸ್ ಬಂದಿದೆಯಂತೆ.
ಹಾಗಾಗಿ ಸ್ವಲ್ಪ ದಿನ ತಲೆಮರೆಸಿಕೊಳ್ಳಿ.
ಮತ್ತೆ ನಿಮ್ಮ ಧಿಕ್ಕಾರ ಕೂಗಿನಿಂದಾಗಿ ಮಹಿಳಾ ಸಂಘದಲ್ಲಿ ಚೀತ್ಕಾರ, ಫೂತ್ಕಾರಗಳು ಕೇಳಿಬರ್ತಾ ಇದೆಯಂತೆ.
:)
ಮನಸ್ವಿನಿ ಅವರೆ,
ಪ್ರತ್ಯುತ್ತರಅಳಿಸಿತವಿಶ್ರೀಗಳು ಗೃಹಿಣಿಯರ ಸಂಘಕ್ಕೆ ಧಿಕ್ಕಾರ ಹೇಳಿದ್ದಲ್ಲ ಅಂತ ನಮಗೆ ಬಹಳ ಹೊತ್ತು ಯೋಚನೆ ಮಾಡಿದ ಬಳಿಕ ಗೊತ್ತಾಗಿದೆ...
ಅವರದು ಸ್ವಲ್ಪ ಅಕ್ಷರಲೋಪದ ಪ್ರತಿಕ್ರಿಯೆ... ಅಲ್ಲಿ
ಪರಮಾ ಅಥವಾ ಸರ್ವಾ ಎಂಬೆರಡು ಅಕ್ಷರಗಳು ಲೋಪವಾಗಿ ಬರೇ ಧಿಕಾರ ಮಾತ್ರ ಪ್ರಕಟವಾಗಿದೆ... ಯಾರು ಕೂಡ ಎಡಿಟ್ ಮಾಡಿದ್ದಲ್ಲ.
ಅಸತ್ಯಾನೇಶಿ,ತವಿಶ್ರೀ ಮುಂತಾದ ಮಹನೀಯರೇ...
ಪ್ರತ್ಯುತ್ತರಅಳಿಸಿತಾವುಗಳು ಭಯೋತ್ಪದಕರ ಸಹವಾಸ ಮಾಡದೇ ಸದ್ಗೃಹಸ್ಥ
ರಾಗಿಯೇ ಉಳಿದಿದ್ದ ಪಕ್ಷದಲ್ಲಿ ಈ ಕುಂಬಳ ಕಾಯಿ ಕಳ್ಳನ
ಫೀಲಿಂಗೂ,ಧಿಕ್ಕಾರಗಳೂ ಏಕೆ?
ದಾಲ್ ಮೆ ಕುಚ್ ಕಾಲಾ...ಹೇ.....
ಮಾಲಾ ರಾವ್
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಮಾಲಾ ರಾವ್ ಅವರೆ,
ಪ್ರತ್ಯುತ್ತರಅಳಿಸಿಮೊದಲಾಗಿ ನಮ್ಮ ಬ್ಲಾಗಿಗೆ ನಿಮಗೆ ಸ್ವಾಗತ.
ಇಲ್ಲಿ ನಾವು ಬೊಗಳುತ್ತಿರುವುದು ಬರೇ ಬೊಗಳೆಯೇ ಹೊರತು ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ್ದಿಲ್ಲ ಅಂತ ಒಂದು ಕಳಕಳಿಯ ಮನವಿ.
ಇಲ್ಲಿ ಯಾರನ್ನೂ ನೋಯಿಸುವ ಉದ್ದೇಶ ನಮಗಿಲ್ಲ. ಈ ತಾಣಕ್ಕೆ ನಗುತ್ತಲೇ ಬಂದು ನಗುನಗುತ್ತಾ ಮರಳಬೇಕೆಂಬುದು ನಮ್ಮ ಸದಭಿಪ್ರಾಯ. :)
ಇಷ್ಟಕ್ಕೂ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ.
ಬರುತ್ತಾ ಇರಿ.
AnveshigaLe,
ಪ್ರತ್ಯುತ್ತರಅಳಿಸಿnim blog Odalu naanu yaavattu barteeni. nagOdakke maatra.
Kannada dalli comment maaDodu kashTa aagirOdrinda maaDtirlilla. aadre ivattu Mala Rao avra commentindaagi bareya bEkayitu.
DayaviTTu adannu sportive aagi tagonDu nimma kaayaka munduvarisi.
Dhanyavaada.
-Ramesh Vasu
ಬೊಗಳಾನ್ವೇಶಿಗಳೇ,
ಪ್ರತ್ಯುತ್ತರಅಳಿಸಿನಾನು ಬರೆದ ಯಾವ ವಾಕ್ಯದಿಂದ ನನಗೆ ಬೇಜಾರಾಗಿದೆ ಅಂತ
ನೀವು ಊಹಿಸಿದಿರೋ ನನಗಿನ್ನೂ ಗೊತ್ತಾಗಿಲ್ಲಾ
ನಿಮ್ಮ ಬೊಗಳೆ ಎಷ್ಟು ಕರ್ಣಕಟೋರವಾಗಿದೆಯೆಂದರೆ
ನಾನು ಪ್ರತಿದಿನ ತಪ್ಪದೇ ನಿಮ್ಮ ಕಛೇರಿ ಕೇಳಲು ಬರುತ್ತಿರುತ್ತೇನೆ
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ ಎಂಬಂಥಾ ಸಾಮಾನ್ಯ
ಹೇಳಿಕೆಗಳಿಂದ ನನ್ನ ಪರಿಚಯ ಮಾಡಿಕೊಟ್ಟು ನಂತರ ಇಂಥಾ
ಕಾಲೆಳೆಯುವ ಕಮೆಂಟ್ ಹಾಕಬೇಕಾಗಿತ್ತು ನಾನು.ಒಂದೇ ಸಾರಿಗೆ ಇಂಥಾ ಕಮೆಂಟ್ ಹಾಕಿಬಿಡುವುದೇ ನಾನು?
ಛೇ...ಛೇ....ವೆರಿ ಬ್ಯಾಡ್
ಎನಿವೇ, ನಮ್ಮ ಧೀರ್ಘ ಬೊಗಳು ರಾಗ ಹೀಗೇ ಮುಂದುವರೆಯಲಿ ಅಂತಾ ಆಶಿಸುವೆ
ಬಿಡುವಾದಾಗ ನನ್ನ ದುರ್ಗ ಕ್ಕೊಮ್ಮೆ ಭೇಟಿ ಕೊಡಿ
ರಮೇಶ್ ಅವರೆ,
ಪ್ರತ್ಯುತ್ತರಅಳಿಸಿಬನ್ನಿ ಬನ್ನಿ, ಸ್ವಾಗತ.
ನೀವೂ ಕೂಡ ನಮ್ಮನ್ನು ನೋಡಿ ನಗಲು ಬರುತ್ತೀರಿ ಅಂತ ಕೇಳಿ... ತುಂಬಾ...
ತುಂಬಾ..
ತುಂಬಾ...
ವಿಷಾದವಾಯಿತು... !
ನಮ್ಮನ್ನು ನೋಡಿ ಬೇಕಾದಷ್ಟು ನಗೆಯಾಡಿ :)
ಮಾಲಾ ರಾವ್ ಅವರೆ,
ಪ್ರತ್ಯುತ್ತರಅಳಿಸಿನೀವಾದ್ರೂ ನಮ್ಮ ಮೇಲೆ ದಯೆ ತೋರಿ ಬ್ಲಾಗು ಚೆನ್ನಾಗಿದೆ ಅಂತ ಉಗಿಯಲಿಲ್ಲವಲ್ಲಾ... ಅದವೇ ನಮಗೆ ಸಮಾಧಾನ.!
ನಮ್ಮ ಗಾರ್ದಭ ಗಾಯನ ಕಛೇರಿಗೆ ಶ್ರೋತೃಗಳಾಗಿರುವ ನಿಮ್ಮ ಕರ್ಣಗಳನ್ನು ರಕ್ಷಿಸಿಕೊಳ್ಳಿ
:)
ಏನಾದ್ರೂ ಹೇಳ್ರಪಾ :-D