(ಬೊಗಳೂರು ರಾಕ್ಷಸತಾ ಬ್ಯುರೋದಿಂದ)
[ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷೆ ನೀಡುವವರ ಕುರಿತ ವಿಶೇಷ ವರದಿ]
ಬೊಗಳೂರು, ಸೆ.5- ನಾವೂ ಅಕ್ಷರ ಕಲಿತು 'ವಯಸ್ಕರ' ಶಿಕ್ಷಣ ಪಡೆದು ಈ ಸಮಾಜದಲ್ಲಿ ರಾಕ್ಷಸರಾಗೋಣ... ಅಲ್ಲಲ್ಲ.... ಸಾಕ್ಷರರಾಗೋಣ, ಗೌರವ ಗಳಿಸಿಕೊಳ್ಳೋಣ ಎಂದು ಹೊರಟರೆ ಇವರೆಲ್ಲಾ ನಮ್ಮನ್ನು ದೂರ ತಳ್ಳುವ ಸಂಚು ರೂಪಿಸುತ್ತಿದ್ದಾರೆ ಎಂಬುದು ಬಿಹಾರದಲ್ಲಿ ಪೊಲೀಸರ ಅಳಲು.
ಚಿಕ್ಕವರಿರುವಾಗ ಅಪ್ಪ ಅಮ್ಮ ಕಷ್ಟಪಟ್ಟು ನಾಲ್ಕಕ್ಷರ ಕಲಿಯಲಿ ಎಂಬ ಕಾರಣ ನೀಡಿ ನಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಚಿಕ್ಕವರಿರುವುದೇ ಆಟವಾಡುವುದಕ್ಕೆ, ದೊಡ್ಡವರಾದ ಮೇಲೆ ಆಡಲಾಗುತ್ತದೆಯೇ ಎಂಬುದು ನಮಗೆ ಅಂದಿನ ಕಾಲದಲ್ಲೇ ಹೊಳೆಹೊಳೆದಿರುವುದರಿಂದ ನಾವು ಚಿನ್ನಿದಾಂಡು (ಕುಟ್ಟಿ-ದೊಣ್ಣೆ), ಬುಗರಿ, ಗೋಲಿ, ಕಾಲೆಳೆಯುವಿಕೆ ಮುಂತಾದ ಆಟದಲ್ಲಿ ಪರಿಣತಿ ಪಡೆದಿದ್ದೆವು.
- ಇದು ಅಸತ್ಯಾನ್ವೇಷಿಯ ಏಕೈಕ ಸದಸ್ಯರ ತನಿಖಾ 'ತಂಡ'ವು ಇಲ್ಲಿ ಪ್ರಕಟವಾಗಿರುವ ಸುದ್ದಿಯಿಂದ 'ಥಂಡಾ' ಹೊಡೆದು ಬೆಚ್ಚಿಬಿದ್ದು ಅಡ್ಡಾದಿಡ್ಡಿ ಚಲಿಸದೆ ನೇರವಾಗಿ ಬಿಹಾರಕ್ಕೆ ಧಾವಿಸಿ ಪೊಲೀಸರನ್ನೇ ವಿಚಾರಣೆಗೆ ಗುರಿಪಡಿಸಿದಾಗ ಕಂಡುಕೊಂಡ ಅಸತ್ಯ.
ಅಲ್ಲಾ ಸ್ವಾಮಿ, ಕಾಲ ಕಳೆದಂತೆ ಈ ಮಹಾನ್ ಕ್ರೀಡೆಗಳನ್ನು ದೇಶದ ಕ್ರೀಡೆಗಳ ಪಟ್ಟಿಯಿಂದಲೇ ಕಾಲಕಸ ಮಾಡಿ ತಳ್ಳಿ ಹಾಕುತ್ತಾರೆ ಅಂತ ನಮಗೇನು ಕನಸು ಬಿದ್ದಿತ್ತೇ? ಗೊತ್ತಿದ್ದರೆ ಸುಮ್ಮನೇ ನಾವು ಶಾಲೆಗೆ ಹೋಗಿ ಮಾಸ್ಟರರ ಕೈಲಿ ಪೆಟ್ಟು ತಿಂದರೂ ಅಕ್ಷರ ಕಲಿಯುತ್ತಿರಲಿಲ್ಲವೇ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಿಚ್ಚಿಟ್ಟವರು ಬಿಹಾರದ ಪೊಲೀಸರ ಒಂದು ಗುಂಪು.
ಆದರೂ ಓಟ, ಕಾಲೆಳೆದಾಟ, ಲಂಚ ನೀಡುವಿಕೆಯ ಕಸರತ್ತು, ರಾಜಕಾರಣಿಗಳ ಪ್ರಭಾವ ಮುಂತಾದ ಸಣ್ಣ ಪುಟ್ಟ ಆಟಗಳನ್ನು ಚಿಕ್ಕಂದಿನಿಂದಲೇ ಕರಗತ ಮಾಡಿಕೊಂಡ ಆಟಗಳಿಂದಾಗಿ ನಮಗೆ, ನಮ್ಮ ಕುಟುಂಬಿಕರಿಗೆ ಮೇಯಲು ಒಂದು ಕೆಲಸ ಅಂತ ಸಿಕ್ಕಿದೆ. ಈ ಕೆಲಸದಿಂದಾಗಿಯೇ ನಾವು ಬಾಚಿ ಬಾಚಿಕೊಳ್ಳುತ್ತಿದ್ದೇವೆ. ಆದರೆ ನಮಗೀಗ ಅದೆಲ್ಲಿತ್ತೋ... ಆ-ಜ್ಞಾನ... ಅದೀಗ ಉದಯವಾಗುತ್ತಿದೆ. ಈಗಾಗಲೇ ರಾಕ್ಷಸರಾಗಿರುವ ನಾವು, ವಯಸ್ಕರ ಶಿಕ್ಷಣ ಪಡೆದು ಸಾಕ್ಷರರಾಗೋಣ ಅಂತ ಮನಸ್ಸು ಮಾಡಿದ್ದೇವೆ. ಅದಕ್ಕಾಗಿ ಶಾಲೆಯಿಂದ ಮಕ್ಕಳನ್ನು ಹೊರಗೆ ಹಾಕಿ ನಾವು ಓದು ಬರಹ ಕಲಿಯಲು ನಿರ್ಧರಿಸಿದ್ದೇವೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಆ ಮಕ್ಕಳಿಗೇನು, ಇನ್ನೂ ಸಾಕಷ್ಟು ಅಂದರೆ 50-60 ವರ್ಷ ಇದೆ, ಆ ಅವಧಿಯಲ್ಲಿ ಕಲಿತುಕೊಳ್ಳುತ್ತಾರೆ ಎಂದು ಹೇಳಿರುವ ಪೊಲೀಸರು, ನಾವೇನೂ ಅವರನ್ನು ಹೊರಹೊಕಲಿಲ್ಲ, ನಮ್ಮ ನಮ್ಮ ಬಂದೂಕು ನಮ್ಮಷ್ಟಕ್ಕೇ ತೋರಿಸ್ತಾ ಇದ್ದೆವು, ಜೋರಾಗಿ ನಮ್ಮ ನಮ್ಮೊಳಗೇ ಕೂಗಾಡುತ್ತಿದ್ದೆವು, ನಿದ್ದೆ ಬಂದಾಗ ಗಟ್ಟಿಯಾಗಿ ಬಾಗಿಲು ಹಾಕಿ ನಿದ್ದೆ ಮಾಡುತ್ತಿದ್ದೆವು... ಹಾಗಾಗಿ ಈ ಮಕ್ಕಳೇ ಒಳಗೆ ಬರಲಿಲ್ಲ... ಎಂದು ಒತ್ತಿ ಒತ್ತಿ ಸಮರ್ಥನೆ ಮಾಡಿಕೊಂಡರು. ಮಾತ್ರವಲ್ಲ, ನಾವಿಲ್ಲಿ ಎಷ್ಟೊಂದು ಶಾಂತಿಯಿಂದ ನಿದ್ದೆ ಮಾಡುತ್ತೇವೆ ಎಂದೂ ಕೇಕೆ ಹಾಕಿದರು!
ಮತ್ತೊಬ್ಬ ಪೊಲೀಸ್ ಪೇದೆ ಸ್ವಲ್ಪ ಸ್ವಲ್ಪವೇ ತೂರಾಡುತ್ತಿದ್ದ. ಸತ್ಯವಾಗಿಯೂ ಆತ ಪೂರ್ತಿ ತೂರಾಡುತ್ತಿರಲಿಲ್ಲ ಎಂದು ಬ್ಯುರೋ ಸ್ಪಷ್ಟಪಡಿಸುತ್ತದೆ. ಆತನನ್ನು ವಿಚಾರಿಸಿದಾಗ ಆತನ ನಿರೀಕ್ಷೆಯೇ ಮುಗಿಲು ಮುಟ್ಟುವಂತಿತ್ತು..... ಆತ ಅರೆಬರೆ ಪ್ರಜ್ಞೆಯಲ್ಲಿ ಹೇಳಿದ್ದೇನು? "ಸ್ವಾಮೀ, ಇಲ್ಲಿ ಪ್ರವೇಶ ಇರುವುದು ವಯಸ್ಕರಿಗೆ ಮಾತ್ರ.... ಅದಕ್ಕೇ ಭಾರೀ ನಿರೀಕ್ಷೆಯಲ್ಲಿದ್ದೇನೆ"!!!
5 ಕಾಮೆಂಟ್‌ಗಳು
ವಯಸ್ಕರು ಅಂದ್ರೆ ಯಾರು? ಎಷ್ಟು ವಯಸ್ಸಾದ್ರೆ ಅವರನ್ನು ವಯಸ್ಕರು ಎನ್ನಬಹುದು. ಯಾಕೆ ಕೇಳ್ತಿದ್ದೀನಿ ಅಂದ್ರೆ ಕೆಲವು ವೇಳೆ, ಬಿಳಿ ಕೂದಲು ಇದ್ದು, ಮೈ ಕೈ ನಡುಗುತ್ತಿರುವವರನ್ನೂ ಎಳಸು ಎಂದು ಹೇಳುತ್ತಾರೆ.
ಪ್ರತ್ಯುತ್ತರಅಳಿಸಿಮತ್ತೆ ವಯಸ್ಕ ಶಿಕ್ಷಣಕ್ಕೂ ವಯಸ್ಕರ ಚಲನಚಿತ್ರಗಳಿಗೂ ಏನಾದರೂ ನಂಟು ಇದೆಯೇ?
ವಯಸ್ಕ ಶಿಕ್ಷಣ ಪಡೆದವರು ಯಾಕೆ ರಾಕ್ಷಸರಾಗಬೇಕು? ಹಾಗೆ ರಾಕ್ಷಸರಾದರೂ ಅವರು ಇತರರನ್ನು ತಿಂದು ಬಿಡುವರೇ? ಹಾಗಿದ್ದರೆ ಅವರುಗಳು ನಮ್ಮೂರಿನಲ್ಲೂ ಇದ್ದಾರೆಯೇ? ಹಾಗಿದ್ದರೆ ನಾನು ಈಗಲೇ ಈ ಊರು ಬಿಟ್ಟು ಬೇರೆಡೆಗೆ ಹೋಗುವೆ.
ಸರಿ ಉತ್ತರ ನೀಡದಿದ್ದರೆ ... ಉತ್ತರ ನೀಡಿದರೆ ...
ಮಾವಿನಯನಸರೆ,
ಪ್ರತ್ಯುತ್ತರಅಳಿಸಿಈಗಿನ ಕಾಲದಲ್ಲಿ ಹುಟ್ಟಿದಾರಭ್ಯವೇ ವಯಸ್ಕರು ಅಂತ ಅನ್ನಿಸಿಕೊಳ್ತಿದ್ದಾರೆ.... :)
ವಯಸ್ಕ ಶಿಕ್ಷಣವೂ ವಯಸ್ಕ ಚಲನಚಿತ್ರಕ್ಕೂ ಸಂಬಂಧವಿದೆ ಎಂಬುದನ್ನು ಈ ಹಿಂದಿನ ಸರ್ವ ಶಿಕ್ಷಾ ಅಭಿಯಾನ ಕುರಿತ ವರದಿಯೊಂದರಲ್ಲಿ ಪ್ರಕಟಿಸಲಾಗಿದೆ.
ಮತ್ತೆ ರಾಕ್ಷಸರು ಎಲ್ಲಾ ಕಡೆ ಇರುವುದರಿಂದ ನಿಮಗೆ ಯಾವುದೇ ತೊಂದರೆಯಿರಲಾರದು. :)
ಉತ್ತರ ಸರಿಯಾಗಿದ್ದರೆ ಈಗ ಬನ್ನಿ, ಇಲ್ಲದಿದ್ದರೆ ಒಂದು ನಿಮಿಷ ಬಿಟ್ಟು ಬನ್ನಿ.
ಸರಿಯಾಗಿಯೇ ಇದೆಯಲ್ಲ? ರಕ್ಷಿಸುವವನೇ ರಾಕ್ಷಸ.
ಪ್ರತ್ಯುತ್ತರಅಳಿಸಿ-ಪಬ್
ಪಬ್ಬರೇ,
ಪ್ರತ್ಯುತ್ತರಅಳಿಸಿಈ ರಕ್ಷಿಸುವವರಿಗೂ ಪ್ರೇಮ್ ನ ರಕ್ಷಿತಂಗೂ ಏನಾದರೂ ಲಿಂಕ್
ಇದ್ಯಾ?
-ಕಾಕಿ
ಅರೆ, ಅರೆ...
ಪ್ರತ್ಯುತ್ತರಅಳಿಸಿರಮ್ಯಾ ರಕ್ಷಿಸಲು ಇತ್ಯಾದಿಗಳಿಗಾಗಿ ಅನಾನಿಮಸರೆಲ್ಲಾ ಪಣ ತೊಟ್ಟಂತಿದೆಯಲ್ಲಾ?
ಪಬ್ಬಿಗರು ನಮ್ಮವರೆ, ಆದರೆ ಕಾಕಿ ಕೀಕೋ ಕೋಕೈ ಎಂಬಿತ್ಯಾದಿ ನಾಮಧೇಯರು ಹೊಸಬರಾದುದರಿಂದ ಅವರಿಗೆ ಸ್ವಾಗತ.
ಏನಾದ್ರೂ ಹೇಳ್ರಪಾ :-D