(ಬೊಗಳೂರು ಸ್ವರ್ಗೀಯ ಬ್ಯುರೋದಿಂದ)
ಬೊಗಳೂರು, ಆ.22- ದೇವರಿಗೇ ನೀರು ಕುಡಿಸಲು ಯತ್ನಿಸಿದ ಮಾನವರ ಪ್ರಯತ್ನಗಳನ್ನು ಧಿಕ್ಕರಿಸಿದ ದೇವ ಸಮುದಾಯ, ನೀರು ಕುಡಿದು ಕುಡಿದು ಸಾಕಾಗಿ, ಹಾಲು ಕುಡಿಯಲು ಹಾತೊರೆದ ಪ್ರಸಂಗಗಳು ವರದಿಯಾಗುತ್ತಿರುವಂತೆಯೇ ಸ್ವರ್ಗವಾಸಿಯಾಗಿಬಿಟ್ಟ ಬೊಗಳೆ-ರಗಳೆ ಬ್ಯುರೋ ಸಿಬ್ಬಂದಿ ನೇರವಾಗಿ ದೇವರುಗಳನ್ನೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಏನು ದೇವ್ರೇ.... ಆವತ್ತು ಹಾಲಾಹಲ ಕುಡಿದು ವಿಷಕಂಠ ಅನ್ನೋ ಬಿರುದು ಹೊತ್ತುಕೊಂಡು ಪ್ರಚಾರ ಪಡೆದುಕೊಂಡೆ. ಇವತ್ತು ಹಾಲೂಂತ ಕುಡೀತೀಯಾ... ನಾಳೆ ಹತ್ತು ಗಂಟಲುಗಳನ್ನು ಹೊತ್ತು, ಕೋಲಾ ಬೇಕೂಂತ ಕುಡಿದು ದಶ ಕಂಠನಾಗುತ್ತೀಯಾ... ನೀನು ಎಲ್ಲಾ ಕಂಠಗಳ ಮಟ್ಟ ಕೋಲಾ ಕುಡಿದರೆ ಮತ್ತೆ ಎಳನೀರು ಕುಡಿಯುವುದಾದರೂ ಯಾರು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.
ಆದರೆ ಇದರ ಹಿಂದೆ ಮತ್ತಷ್ಟು ಅಸತ್ಯವನ್ನು ಕೆದಕಿದಾಗ ಕೆಲವೊಂದು ರೋಮಾಂಚಕಾರಿ ಸಂಗತಿಗಳು ಹೊರಬಿದ್ದವು.
ಮಾನವರಿಂದ ಬರೇ ನೀರು ಕುಡಿಸಿಕೊಂಡು ಸುಸ್ತಾಗಿದ್ದ ದೇವರು, ಅಲ್ಪಮತಿಗಳಿಗೆ ಸ್ವಲ್ಪವಾದರೂ ಬುದ್ಧಿ ಬರಲಿ ಎಂಬ ಕಾರಣಕ್ಕೆ ಒಂದು ದಿನದ ಮೊದಲೇ ಉಪಾಯ ಮಾಡಿದ್ದ. ಈಗ ಲಂಚವಿಲ್ಲದೆ ಏನೂ ನಡೆಯುವುದಿಲ್ಲ, ಲಂಚವನ್ನು ತಡೆಯುವುದು ತನ್ನಿಂದಲೂ ಸಾಧ್ಯವಿಲ್ಲ ಎಂಬುದನ್ನು ಅದಾಗಲೇ ದೃಢಪಡಿಸಿಕೊಂಡಿದ್ದ ದೇವ ವರ್ಗವು, ಇದಕ್ಕಾಗಿ ಭಾನುವಾರ, ಮಾವಿನ ರಸ ಹೆಚ್ಚಾಗಿ ದೊರೆಯುವ ಮುಂಬಯಿಯ ಕಡಲ ತೀರವನ್ನು ಮತ್ತು ಗುಜರಾತ್ ಸಮುದ್ರ ತೀರಗಳಲ್ಲಿ ಉಪ್ಪು ನೀರಿನ ಬದಲು ಸಿಹಿ ನೀರು ಕಳುಹಿಸಿಕೊಟ್ಟಿದ್ದ.
ಮಾನವ ಪ್ರಾಣಿಗಳಿಗೆ ಲಂಚ ಕೊಟ್ಟಂತೆಯೂ ಆಗಬೇಕು, ನೀರು ಕುಡಿಸಿದಂತೆಯೂ ಆಗಬೇಕು ಎಂಬುದು ಇದರ ಹಿಂದಿರುವ ಪರಮೋದ್ದೇಶ. ಆದರೆ ತಾವು ಸಿಹಿನೀರೆಂದು ಕುಡಿದದ್ದು ಸಮುದ್ರದ ಉಪ್ಪು ನೀರೇ ಎಂಬುದು ಮನುಜರ ಅರಿವಿಗೇ ಬರದಿರುವುದು ವಿಶೇಷ.
ಈ ಮಧ್ಯೆ, ಮುಂಬಯಿಯಲ್ಲಿ ಅನಾರೋಗ್ಯ ಇಲಾಖೆಯವರು ಬರುವ ಮೊದಲೇ ಸಮುದ್ರದ ಅರ್ಧದಷ್ಟು ನೀರು ಖಾಲಿಯಾಗಿತ್ತು ಎಂಬುದು ಬೊಗಳೆ ಬ್ಯುರೋಗೆ ಮಾತ್ರವೇ ಗೊತ್ತಾದ ದಿವ್ಯ ಸತ್ಯ.
1995ರಲ್ಲಿ ಗಣಪತಿ ಹಾಲು ಕುಡಿಯುತ್ತಿದ್ದಾಗ, ಮುಂಬಯಿಯ ದೇವಸ್ಥಾನವೊಂದರಲ್ಲಿ ಬೊಗಳೆ-ರಗಳೆ ಬ್ಯುರೋ ಕೂಡ ಇದೇ ರೀತಿ "ಇಂಥದ್ದೊಂದು ಬ್ಯುರೋ ಸೃಷ್ಟಿಯಾಗಲು ಸಹಾಯ ಮಾಡು" ಅಂತ ಕೋರಿ ಗಣಪತಿಗೇ ಹಾಲು ಕುಡಿಸಿತ್ತು. ಆದರೆ ಹಾಲಿಗೆ ನೀರು ಸೇರಿಸಿ ಕುಡಿಸಿದ್ದೋ ಅಥವಾ ಅಥವಾ ನೀರಿಗೇ ಹಾಲು ಸೇರಿಸಿ ಕುಡಿಸಿದ್ದೋ ಎಂಬುದು ಗುಟ್ಟಿನ ವಿಷಯ.
ಈ ಮಧ್ಯೆ, ದೇವರು ಹಾಲು ಕುಡಿಯುತ್ತಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣವೇ ಹಾಲು ಉದ್ಯಮಿಗಳು ಹಾಲು ಬಚ್ಚಿಟ್ಟ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.
6 ಕಾಮೆಂಟ್‌ಗಳು
ನಮ್ಮ ದೇಶದಲ್ಲಿ ವಿಷಕಂಠರು ಬಹಳವಾಗುತ್ತಿದ್ದಾರೆ. ದಶಕಂಠರೇನು ಶತಕಂಠರೂ ಬಹಳವಾಗುತ್ತಿದ್ದಾರೆ. ಏನೇ ಕುಡಿದರೂ ತಿಂದರೂ ಸಾವು ಹತ್ತಿರ ಬರದಂತೆ ಶಕ್ತಿಯುತರಾಗುತ್ತಿದ್ದಾರೆ. ಇದನ್ನು ಪರೀಕ್ಷಲೋಸುಗ ಆಗಾಗ ಗಟಾರದ ನೀರು, ಸಮುದ್ರದಲ್ಲಿ ದೊರೆಯುವ ಪ್ರಸಾದ ಸ್ವೀಕರಿಸಿ ಜೀರ್ಣವಾಗುವುದೋ ಇಲ್ಲವೋ ಎಂದು ನೋಡುತ್ತಿದ್ದಾರೆ.
ಪ್ರತ್ಯುತ್ತರಅಳಿಸಿಇದನ್ನು ಕಂಡ ಪಕ್ಕದ ದೇಶದವರು ತೀವ್ರ ಪೈಪೋಟಿ ನಡೆಸುವ ಹುನ್ನಾರ ನಡೆದಿದೆ. ಅದಕ್ಕೋಸ್ಕರವೇ ಬಾಂಬುಗಳನ್ನು ಸಿಡಿಸುತ್ತಿದ್ದಾರೆ. ಆದರೇನಂತೆ ನಮ್ಮಲ್ಲಿರುವ ಜನಸಂಖ್ಯಾ ಬಾಂಬಿನ ಮುಂದೆ ಇನ್ಯಾರ ಬಾಂಬೂ ಕೆಲಸ ಮಾಡೋಲ್ಲ.
ಪಕ್ಕದ ದೇಶದಲ್ಲಿ ಜೀವಿಸಲು ಶಕ್ತಿ ದೊರೆಯುತ್ತಿಲ್ಲ, ಭಾರತದಲ್ಲಿ ಮಾತ್ರವೇ ಸಿಗುವುದು, ಅದರ ಅವಶ್ಯಕತೆ ಬಹಳವಾಗಿದೆ ಎಂದು ದಬ್ಬೂರಾಮ್ ಮರಳಿ ಭಾರತಕ್ಕೆ ಬರಲು ಹವಣಿಸುತ್ತಿದ್ದಾನಂತೆ. ನೇರವಾಗಿ ಬರಲು ಅವಕಾಶ ಸಿಗುತ್ತಿಲ್ಲವೆಂದು ಆಫ್ರಿಕಾಗೆ ಹೋಗಿದ್ದಾನಂತೆ. ಅಲ್ಲಿಂದ ಚಂದಾಕಿನಿ ಜೊತೆ ದೋಣಿಯಲ್ಲಿ ಬರುವವನಿದ್ದಾನಂತೆ. ಇದರ ಬಗ್ಗೆ ಸ್ವಲ್ಪ ಅನ್ವೆಷಣೆ ನಡೆಯಬೇಕಾಗಿದೆ.
ಮಾವಿನಯನಸರೆ,
ಪ್ರತ್ಯುತ್ತರಅಳಿಸಿಸಮುದ್ರದಲ್ಲಿ ಪ್ರಸಾದ ದೊರೆಯುವಂತಾಗಲು ನಿಮ್ಮ ರಸಾಯನದ ಕೈವಾಡವೂ ಇದೆ ಎಂಬುದನ್ನು ಮರೆಯದಿರಿ...
ದಬ್ಬೂರಾಮ್ ಬಂದ ತಕ್ಷಣವೇ ಕೋಮ್ ಸೌಹಾರ್ದತೆಗಾಗಿ ಏನಾದ್ರೂ ಮಾಡಿ... ಇಲ್ಲವಾದಲ್ಲಿ ನಮ್ಮನ್ನೆಲ್ಲಾ ಕೋಮಾ ಸ್ಥಿತಿಗೆ ತಲುಪಿಸಬಹುದು!!!
:)
ಹಾಲು ಕುಡಿದು ಕುಡಿದು ಮನುಜರಿಗೆ ಹಾಲಿಲ್ಲದಂತೆ ಮಾಡಿದ ಆ ದೇವರು. ಅದಕ್ಕೆ ಜನರು ಆಲ್ಕೊಹಾಲಿನ ಕಡೆ ಗಮನ ಹಾರಿಸ್ತ ಇದ್ದಾರೆ.
ಪ್ರತ್ಯುತ್ತರಅಳಿಸಿನಾವೇನಿದ್ದರು ರಕ್ತ ಪೀಪಾಸಿಗಳು :)
ಓ ಭೂತೋತ್ತಮರೇ,
ಪ್ರತ್ಯುತ್ತರಅಳಿಸಿದೇವರಿಗೆ ಹಾಲು, ಮನುಷ್ಯರಿಗೆ ಆಲ್ಕೋಹಾಲು, ನಿಮ್ಮಂಥ ಭೂತಗಳಿಗೆ ರಕ್ತ.... ಹಾಗಿದ್ದರೆ ಮುಂಬಯಿಯ ಸಮುದ್ರತೀರದಲ್ಲಿ ದೊರಕುವ ಸಿಹಿ ನೀರು ಯಾರಿಗೂ ಬೇಡ್ವೇ....
ಹರ ಹರಾ ಶ್ರೀ ಫ್ಯಾಂಟಮೇಶ್ವರಾ....!!!!
ದೇವ್ರು ಜನಕ್ಕೆ ಸರಿಯಾಗಿ ನೀರು ಕುಡಿಸಿದ !
ಪ್ರತ್ಯುತ್ತರಅಳಿಸಿನೀರು ಸಿಹಿಯಾಗೋದರಲ್ಲಿ ಮಾವಿನಯಸರ ಪಾಲು ಎಷ್ಟು? ಅನಾನಸರ ಪಾಲು ಎಷ್ಟು?? ಇವರೆಲ್ಲರ ಹಸ್ತಗುಣದಿಂದ ನೀರು ಸಿಹಿಯಾಯಿತೆ?
ಹಂಗಾದರೆ ಅವರನ್ನು ಬೇಗ ಚಿನ್ನೈ ಕಡೆ ಕರೊಕೊಂಡು ಹೋಗಿ..ಸ್ಪಲ್ಪ ನೀರಿನ ಬವಣೆ ಕಡಿಮೆಯಾಗಲಿ..
ಶಿವ್ ಅವರೆ,
ಪ್ರತ್ಯುತ್ತರಅಳಿಸಿಅಸತ್ಯಾನ್ವೇಷಿಯನ್ನು ನೀರಿಲ್ಲದ ಜಾಗಕ್ಕೇ ತಳ್ಳಿರುವುದರಿಂದ ಅಲ್ಲಿ ನಮ್ಮ ಬ್ಯುರೋ ಇರೋವರೆಗೆ ಖಂಡಿತಾ ನೀರು ಇರಲಾರದು....
ಆದ್ರೂ ನಮ್ ಬ್ಯುರೋದವರು ತಮಿಳರ ನೀರಿಳಿಸುತ್ತಿದ್ದಾರೆ...
ಏನಾದ್ರೂ ಹೇಳ್ರಪಾ :-D