(ಬೊಗಳೂರು ಸೊಂಪಾದ ಕೃಷಿ ಬ್ಯುರೋದಿಂದ)
ಬೊಗಳೂರು, ಆ.2- ವೀರಪ್ಪನ್‌ನ ಭೂತ-ಪ್ರೇತ-ಪಿಶಾಚಾದಿಗಳು ಸಿಕ್ಕಾಪಟ್ಟೆ ಉಪಟಳ ನೀಡುತ್ತಿವೆ ಎಂಬ ದೂರುಗಳು ಜೋರಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಈ ಬಾರಿ ಧಾವಿಸಿದ್ದು ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ.
ಅಲ್ಲಿಗೆ ಕಾಲಿಟ್ಟಾಗಲೇ ಮುಖವಿಡೀ ಕಪ್ಪಿಟ್ಟುಕೊಂಡಿದ್ದ ಮಂದಿ, ಕಾಡುಗಳಂತೆ ಬೆಳೆಯಲಾಗಿದ್ದ ತಮ್ಮದೇ ಸ್ವಂತ ಮೀಸೆ ತಿರುವಿಕೊಳ್ಳುತ್ತಾ ನಮ್ಮನ್ನು ಒಂಥರಾ ನೋಡುತ್ತಾ ಬೊಗಳುವವರಿಗೇ ಭಯ ಹುಟ್ಟಿಸುವ ಮಾದರಿಯಲ್ಲಿ ವಾರೆಗಣ್ಣ ನೋಟ ಬೀರುತ್ತಿದ್ದರೆ, ಏಕೈಕ ಸಿಬ್ಬಂದಿಯುಳ್ಳ ಬ್ಯುರೋದ ಎಲ್ಲರಿಗೂ ಎದೆಯೊಳಗೆ ಕಲ್ಲು ಕುಟ್ಟುವ ಅನುಭವ.
ಸರಿಯಾಗಿ ಗಮನವಿಟ್ಟು ನೋಡಿದಾಗ ಅವರೆಲ್ಲರಿಗೆ ಕಣ್ಣುಬಾಯಿ-ಮೂಗುಗಳಿಲ್ಲ, ಮುಖವಿಡೀ ಕಪ್ಪಿಟ್ಟು ಹೋಗಿದೆ, ಬಹುಶಃ ಅವರಿಗೆ ಉಪ್ಪಿಟ್ಟು ತಿನ್ನಲಾಗದು ಎಂಬುದು ನಮ್ಮ ಗಮನಕ್ಕೆ ಬಂತು. ಅಂದರೆ ಇಲ್ಲಿ ಇಎನ್‌ಟಿ(ಕಣ್ಣು ಕಿವಿ ನಾಲಿಗೆ) ಸ್ಪೆಶಲಿಸ್ಟ್‌ಗಳ ಭಾರೀ ಕೊರತೆಯಿರಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾ ಇನ್ನಷ್ಟು ಹತ್ತಿರ ಹೋದಾಗ ಉದ್ದಾನುದ್ದನೆಯ ದಟ್ಟ ಮೀಸೆಯ ರೋಮಗಳು ಮೆಲ್ಲಮೆಲ್ಲನೆ ಅಲ್ಲಾಡುವುದು ಕಂಡಿತು.
ಹೌದು ಸ್ವಾಮೀ.... ಅದು ಅಲುಗಾಡುತ್ತಿದ್ದುದು ಜೋರಾದ ಗಾಳಿಯಿಂದ. ಅಂದರೆ ಅಲ್ಲೇ ಎಲ್ಲೋ ಮೂಗಿನ ಹೊಳ್ಳೆಗಳಿರಬಹುದು, ದಟ್ಟವಾದ ಮೀಸೆಯ ಪೊದೆಯಲ್ಲಿ ಅವಿತು ಅದರೊಳಗಿಂದ ಹೊರಬರಲು ವಾಯುದೇವನೇ ಏದುಸಿರು ಬಿಡುತ್ತಿರಬಹುದು ಎಂದು ಖಚಿತವಾಯಿತು.
ಹಾಗಿದ್ದರೆ ಅದಕ್ಕೆ ಸ್ವಲ್ಪವೇ ಕೆಳಗಿನ ಅಂತರದಲ್ಲಿ ಬಾಯಿ ಇರಬೇಕಲ್ಲ ಎಂಬ ಸಂಶಯದ ಸುಳಿಯೊಂದು ಛಕ್ಕನೆ ಸುಳಿದು ಮಾಯವಾಯಿತು. 'ಯಾರು ನೀವು' ಎಂದು ಕೇಳಿಬಂದ ಧ್ವನಿಯ ಎಳೆಯನ್ನು ಹಿಡಿದು ಮೂಗಿನ ಕೆಳಗೆ ಆ ಎಳೆಯನ್ನು ಎಳೆದು ನಿಲ್ಲಿಸಿದಾಗ ಅಲ್ಲಿ ಬಿಲದಂತಹ ಬಾಯಿಯೂ ಕಂಡುಬಂದಿತ್ತು.
ಹುರ್‌ರೇ.... ಇದು ಮನುಷ್ಯನೇ ಎಂದು ತಿಳಿದಾಗ ಬ್ಯುರೋಗೆ ಸಂತಸವಾದರೂ ಒಳಗೆ ಅಕ್ಕಿ ಕುಟ್ಟುತ್ತಲೇ ಇತ್ತು. ಸರಿಯಾಗಿ ವಿಚಾರಿಸಿದಾಗ ಇವರು ವೀರಪ್ಪನ್ ಪ್ರೇತಗಳಲ್ಲ, ವೀರಪ್ಪನ್ ಮಟ್ಟ ಹಾಕಲು ಕಾಯುತ್ತಿದ್ದ ಪೊಲೀಸರು ಎಂಬುದು ತಿಳಿಯಿತು. ಆಗ ಧೈರ್ಯ ಬಂದು ಮಾತು ಮುಂದುವರಿಸಲಾಯಿತು.
ಹೀಗೇ ಮಾತಿಗೆ ಮಾತು ಬೆಳೆದು ನಿಮ್ಮ ಸಂಬಳ ಎಷ್ಟು ಎಂದು ಕೇಳುವ ಹಂತಕ್ಕೆ ಬಂದು ಮುಟ್ಟಿತು. ಸಂಬಳ 1000 ರೂ. ಎಂದು ಕೇಳಿದಾಗ ಅಷ್ಟೇಯಾ ಎಂದುಕೊಳ್ಳುವಷ್ಟರಲ್ಲಿ, ಅವರ ಪೊದೆ ಮಧ್ಯೆ ಇದ್ದ ಗುಹೆಯೊಳಗಿಂದ ಇನ್ನೂ ಮುಗಿದಿಲ್ಲ ಎಂಬ ಧ್ವನಿಯೂ ಹೊರಟಿತು.
ಇನ್ನೇನು, ಗಿಂಬಳವೇ ಇರಬಹುದು ಎಂದು ಸುಮ್ಮನಾಗುವ ಮುನ್ನವೇ ಪೊದೆಯನ್ನು ಅಗಲಿಸಿದ ಆ ಪೊಲೀಸರು, ಮೀಸೆ ಸಾಕುವುದಕ್ಕೆ 10 ಸಾವಿರ ರೂ. ಭತ್ಯೆಯೂ ಇದೆ ಎಂದಾಗ ಖಂಡಿತಾ ಇವರು ಪೊಲೀಸ್ ಇಲಾಖೆಯಲ್ಲಿರಲು ಸಂಪೂರ್ಣ ಲಾಯಕ್ಕು ಅಂತ ತಿಳಿದು ಬೊಗಳೆ ರಗಳೆ ಬ್ಯುರೋ ಕೂಡ ಮೀಸೆ ಬೆಳೆಸುವ ನಿರ್ಧಾರ ಮಾಡಿಕೊಂಡು ಅಲ್ಲಿಂದ ಮೀಸೆ... ಅಲ್ಲಲ್ಲ ಕಾಲು... ಕಿತ್ತಿತು.
10 ಕಾಮೆಂಟ್‌ಗಳು
ಅದ್ಯಾಕೆ ನಿಮಗೂ ಈ ಮೀಸೆಗೂ ನಂಟು!
ಪ್ರತ್ಯುತ್ತರಅಳಿಸಿಹಂಗೂ ನಿಮ್ ಫೋಟೋನೂ ಬದಲಾದಂಗ್ ಇದೆ ಪ್ರೊಫೈಲ್‌ನಲ್ಲಿ...ಈ ಬಾರಿ ಕಂಬಿ ಹಿಂದಕ್ಕೆ ಹೋಗಿದೆಯಲ್ಲಾ!
ಉಪೇಂದ್ರ 'ಕಾಡಿನಲ್ಲಿ ಮೀಸೆ ಇಟ್ಟೇ...' ಅಂತ ಹಾಡಿದ್ದಕ್ಕೆ ಆ ಮೀಸೆಗೆ ಆ ಕತೆ ಆಯ್ತು, ಲಕ್ನೋದಲ್ಲಿ ಇನ್ನೂ ಮಹಾ ಮೀಸೆಗಳಿವೆ ನೋಡಿಲ್ಲಾ?
ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೊ ಡಿಮಾಂಡು" ಎಂಬುದನ್ನ ಅಕ್ಷರಶಃ ನಿಜ ಎನ್ನುದನ್ನ ಪ್ರೂಫ ಮಾಡತ ಇರೋರ
ಪ್ರತ್ಯುತ್ತರಅಳಿಸಿಹಿಂದೆ ಬೊಗಳೆ ಬಿದ್ದ ರಹಸ್ಯವೇನು????
ಸಾನಿಯಾ-ಸೋನಿಯಾ,ಸಾಕಿ-ಸಾವಂತರ ವಿಷ್ಯಗಳಲ್ಲಾ ಮುಗಿದುಹೊದ್ವಾ?????
ಇಲ್ಲಾ ಬೊಗಳೆನು ಸಕ್ಕತ ಮೀಸೆ ಬಿಟ್ಟು ಮಾರುವ-ಕಟ್ಟೆಯಲ್ಲಿ ಡಿಮಾಂಡು ಹೆಚ್ಚಸಿಕೊಳ್ಳವ ಯತ್ನವಾ????
ಕಾಳು ಅವರೆ, :)
ಪ್ರತ್ಯುತ್ತರಅಳಿಸಿನಾವೇನೂ ಕಂಬಿ ಎಣಿಸ್ತಾ ಇಲ್ಲ, ಕಂಬಿಯೇ ನಮ್ಮನ್ನು ಎಣಿಸುತ್ತಿದೆ!!!
ಮಹಾಂತೇಶರೇ
ಪ್ರತ್ಯುತ್ತರಅಳಿಸಿಮೀಸೆ ಬಿಟ್ಟ ಗಂಡ-ಸರಿಗೆ ಡಿಮ್ಯಾಂಡ್ ಇದೆಯಾ?
ಯಾವ ರೀತಿಯ ಡಿಮ್ಯಾಂಡ್ ಅಂತ ಗೊತ್ತಿಲ್ಲ.
ಇರ್ಬೋದು, ಮೀಸೆ ಬಿಟ್ಟ ಗಂಡಸರಿಗೆ ಹೆಚ್ಚು ಭತ್ಯೆ ದೊರಕುತ್ತಿದೆಯಲ್ಲ...!!
ಮೀಸೆ ಬೆಳೆಸೋಕ್ಕೂ ಭತ್ಯೆಯೇ? ಭಲಾ! ನನಗೂ ಸ್ವಲ್ಪ ಮೀಸೆ ಇದೆ. ಅಂದ ಹಾಗೆ ಹೊಟ್ಟೆ ಬೆಳೆಸೋಕ್ಕೆ ಎಷ್ಟು ಭತ್ಯೆ ಸಿಗುತ್ತದೆ. ಸಾಮಾನ್ಯವಾಗಿ ಪೋಲಿಸಪ್ಪರಿಗೆ ಹೊಟ್ಟೆ ಮೀಸೆ ಇದೇ ಇರುತ್ತದೆ.
ಪ್ರತ್ಯುತ್ತರಅಳಿಸಿಇದರ ಬಗ್ಗೆ ನಿಮ್ಮ ಹತ್ತಿರ ಭತ್ಯೆಯ ಪಟ್ಟಿ ಇದೆಯಾ?
ಮೀಸೆ ಬಿಟ್ಟ ಹೆಂಗಸರಿಗೆ ಎಷ್ಟು ಭತ್ಯೆ ಇದೆ ಎಂದು ಇಲ್ಲೊಬ್ಬರು ಕೇಳ್ತಿದ್ದಾರೆ (ಸಣ್ನ ಮೀಸೆ ಬಂದ ೫೦ರ ತರುಣಿ :P).
ಈರಪ್ಪ ಇನ್ನೇನು ಹೇಳ್ದ. ಈರಬಾಉ ಜೊತೆ ಸಂದಾಕವ್ನಂತಾ?
"ವೀರಪ್ಪನ್‌ನ ಭೂತ-ಪ್ರೇತ-ಪಿಶಾಚಾದಿಗಳು ಸಿಕ್ಕಾಪಟ್ಟೆ ಉಪಟಳ ನೀಡುತ್ತಿವೆ"
ಪ್ರತ್ಯುತ್ತರಅಳಿಸಿಅಂದರೆ ಒಬ್ಬ ವೀರಪ್ಪನ್ ಸತ್ತ ಮೇಲೆ ಈಗ ಅವನ ಒಂದು ಭೂತ, ಒಂದು ಪ್ರೇತ, ಒಂದು ಪಿಶಾಚಿ - ಇಷ್ಟು ಹುಟ್ಟಿಕೊಂಡಿವೆಯೇ!!?
ಭೂತ,ಪ್ರೇತ,ಪಿಶಾಚಿ ಇವುಗಳಿಗೆ ಇರುವ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಕರಾರುವಾಕ್ಕಾಗಿ ಗುರುತಿಸುವುದು ಬೊಗಳೆರಗಳೆ ಬ್ಯೂರೋದ ನೆಕ್ಸ್ಟ್ ಎಸೈನ್‌ಮೆಂಟ್ ಎಂದು ನಂಬಲರ್ಹ ವರ್ಜಿನ್‍ಗಳಿಂದ ತಿಳಿದುಬಂದಿದೆ.
ಬೊಗಳೆರಗಳೆಗೆ ಆಗಾಗ ಭೇಟಿ ಕೊಡುವ 'ಭೂತ' ಇದಕ್ಕೆ ನೆರವಾಗಬಹುದು ಅಥವಾ ಪ್ರಯೋಗಪಶುವೂ ಆಗಬಹುದು!
ಇವತ್ತಿನ ರಗಳೆಯ ಮೊದಲ ವಾಕ್ಯವೇ ಇಷ್ಟುದ್ದ ಪ್ರತಿಕ್ರಿಯೆಯನ್ನು ಹುಟ್ಟಿಸಿದೆಯಾದ್ದರಿಂದ ಇಡಿಯ ರಗಳೆಯನ್ನೋದುವುದನ್ನು ಮತ್ತು ಪ್ರತಿಕ್ರಿಯಿಸುವುದನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.
ಹೌದು ಮಾವಿನರಸರೆ,
ಪ್ರತ್ಯುತ್ತರಅಳಿಸಿಪೊಲೀಸರು ಮೀಸೆಗೆ ಅಂತ ಭತ್ಯೆ ತೆಗೆದುಕೊಂಡು ಅದನ್ನು ಹೊಟ್ಟೆಗೇ ಹಾಕಿಕೊಳ್ಳುತ್ತಾರೆ.... ಮೀಸೆ ಬೆಳೆಯೋದಿಲ್ಲ, ಹೊಟ್ಟೆ ಬೆಳೆಯುತ್ತೆ...
ಮೀಸೆ ಬಿಟ್ಟ ಹೆಂಗಸರಿಗೆ ಭತ್ಯೆ ಇಲ್ಲ. ಆದರೆ ಮೀಸೆಯ ಸಹವಾಸ ಬಿಟ್ಟ ಹೆಂಗಸರಿಗೆ ಇದೆ ಅಂತೆ....
ಜೋಷ್ಇ ಅವರೆ,
ಪ್ರತ್ಯುತ್ತರಅಳಿಸಿನಭೂತೋ ನಭವಿಷ್ಯತಿ
ಅಂದರೆ ಭೂತವೂ ಅಲ್ಲ, ಭವಿಷ್ಯವೂ ಅಲ್ಲ ಎಂದರ್ಥವಿರಬಹುದೇ?
ಅದಿರಲಿ, ಈಗ ಕಾವ್ಯಸುಧೆ ಹರಿಸುತ್ತಿರುವ ಅಥವಾ ಹರಿಯುತ್ತಿರುವ ಭೂತವನ್ನು ಇಲ್ಲಿ ಬಂದಾಗ ಹಿಡಿದಿಟ್ಟುಕೊಳ್ಳೋಣ... ನೀವು ಚಿತ್ರಾನ್ನ ಮಾಡಿ, ನಾನು ಅದರೆದುರು ಬೊಗಳುತ್ತೇನೆ.... ಓಡಿ ಹೋಗದೇ ಎಂದು ನೋಡೋಣ.
ಮೀಸೆಯ ಮೇಲೆ ಯಾಕೇ ನಿಮ್ಮ ಬೊಗಳೆ ಕಣ್ಣು ?
ಪ್ರತ್ಯುತ್ತರಅಳಿಸಿಪೊದೆ ಮೀಸೆ,ಟ್ರಿಮ್ ಮೀಸೆ,ಚೈನೀಸ್ ಮೀಸ್..ಬೇರೆ ಬೇರೆ ತರದ ಮೀಸೆಗೆ ಬೇರೆ ಬೇರೆ ಭತ್ಯೆ ಇದೆಯೇ??
ಹಂಗೆ ಈ ಮೀಸೆ ದೆಸೆಯಿಂದ ಯಾವುದಾದರೂ ಮಿಸ್‍ಗಳು ಮಿಸಸ್ ಆದವಾ ಅಂತ ನಿಮ್ಮ ಹತ್ತಿರ ಮಾಹಿತಿ ಇದೆಯೇ?
ಶಿವ್ ಅವರೆ
ಪ್ರತ್ಯುತ್ತರಅಳಿಸಿಟ್ರಿಮ್ ಮೀಸೆಗೆ ಭತ್ಯೆಯನ್ನು ಟ್ರಿಮ್ ಮಾಡಿಸಿಕೊಳ್ಳುವವರೇ ತೆರಬೇಕಾಗುತ್ತದೆ. ಮೀಸೆ, ಗಡ್ಡ ಪೂರ್ತಿ ಬೋಳಿಸಲು saloonನಲ್ಲಿ ಕ್ಷೌರಿಕರು ಜೇಬು ಬೋಳಿಸುತ್ತಾರಲ್ಲಾ... ಹಾಗೆನೇ...
ಮಿಸ್‌ಗಳು ಮಿಸೆಸ್ ಆಗೋದು ಯಾವತ್ತಿದ್ದರೂ ಮೀಸೆಗಳ ದೆಸೆಯಿಂದಲೇ ಎಂಬುದು universal truth ಮಾರಾಯ್ರೇ... :)
ಏನಾದ್ರೂ ಹೇಳ್ರಪಾ :-D