(ಸೂಚನೆ: ನೆಟ್ಟೊದೆತಗಳ ಸಂಖ್ಯೆ 5000 ದಾಟಿದ ಪ್ರಯುಕ್ತ ಬಾಲ-ಕರುಗಳಿಗಾಗಿ ಆಯೋಜಿಸಲಾದ ಈ ಸ್ಪರ್ಧೆಗೆ ಪ್ರವೇಶ ಉಚಿತ. ಆದರೆ ಆ ತೆರಿಗೆ, ಈ ತೆರಿಗೆ, ಆ ಶುಲ್ಕ, ಈ ಶುಲ್ಕ ಅಂತ ಒಂದಿಷ್ಟು ಸಾವಿರ ನಗದನ್ನು ಮಾತ್ರ ನೀಡಿದರಾಯಿತು.)
(ನಮ್ಮ ಪ್ರೇತ ಪ್ರತಿನಿಧಿಯಿಂದ)
ಬೊಗಳೂರು, ಜು.6- ಬೊಗಳೆ ರಗಳೆ ಪತ್ರಿಕೆಯು ಮಕ್ಕಳ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪಾಲಕರು ಸುಪ್ರೀಂ ಕೋರ್ಟಿಗೆ ಮೊರೆ ಹೋಗುವುದಾಗಿ ಹೆದರಿಸಿದ ಹಿನ್ನೆಲೆಯಲ್ಲಿ ಇದೀಗ ಮಕ್ಕಳನ್ನು ಪ್ರೋತ್ಸಾಹಿಸಲು ಮತ್ತು ಅವರ ಪಾಲಕರನ್ನು ಖುಷಿ ಪಡಿಸಲು ಬ್ಯುರೋ ಒಂದು ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.
ಭವ್ಯ ನೆಟ್ ಲೋಕದ ಭಾವೀ ನೆಟ್ಟಿಗರೇ, ನಿಮ್ಮನ್ನು ಗಟ್ಟಿಗರಾಗಿಸಲು ಇದೊಂದು ರಗಳೆ ಬಾಕಿ ಇತ್ತು!. ಬಾಲದ ಕರುಗಳ "ಚಿಗುರುವ ಬಾಲ"ಪ್ರತಿಭಾ ಸ್ಪರ್ಧೆ ನಿಮಗಾಗಿ ಮತ್ತು ನಮ್ಮ ಜೇಬಿಗಾಗಿ ಆಯೋಜಿಸಲಾಗುತ್ತಿದೆ. ಇದಕ್ಕಿರುವ ನಿಬಂಧನೆಗಳಿಷ್ಟೇ: (ಓದಲು ಬರುತ್ತದೆಯಾದರೆ ಓದಿ, ಇಲ್ಲವೇ ಓದಿಸಿಕೊಳ್ಳಿ).
* ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಬೇಕಿದ್ದರೆ ಬಹುಮಾನ ಪಡೆಯುವುದೇ ಮುಖ್ಯ ಗುರಿಯಾಗಿರಬೇಕೇ ಹೊರತು ಬೊಗಳೆ-ರಗಳೆ ಬ್ಯುರೋಕ್ಕೆ ಮಾತ್ರ ಬಹು-ನಾಮ ಹಾಕಬಾರದು.
* ಮಕ್ಕಳನ್ನು ಕರೆತರುವ ತಾಯಂದಿರು ಉಡುವ ಪಟ್ಟೆ ಸೀರೆ, ತೊಡುವ ಅಪ್ಪಟ ಚಿನ್ನದ ಆಭರಣ, ಅವರ ತುಟಿಗೆ ಲಿಪ್ ಸ್ಟಿಕ್, ಸೆಂಟ್, ಪೌಡರ್ --- ಇತ್ಯಾದಿ ಅಲಂಕಾರ ಸಾಮಗ್ರಿಗಳೆಲ್ಲಾ ಅತ್ಯಂತ ದುಬಾರಿಯಾದಷ್ಟೂ ಅವರ ಮಕ್ಕಳಿಗೆ ಬಹುಮಾನ ದೊರೆಯುವ ಸಾಧ್ಯತೆ ಹೆಚ್ಚು. ಅವರ ಸೀರೆ, ಆಭರಣ ಪ್ರದರ್ಶನಕ್ಕೆ ವಿಶೇಷ ಆದ್ಯತೆ.
* ಮಕ್ಕಳಿಗಾಗಿ ಆಯೋಜಿಸುವ ಸ್ಪರ್ಧಾ ಸಾಮಗ್ರಿ (ಉಡುಗೆ, ತೊಡುಗೆ, ಬಣ್ಣ, ಪೇಪರ್, ಇತ್ಯಾದಿ) ತಂದುಕೊಡುವುದಕ್ಕಾಗಿ ತಮ್ಮ ಸ್ವಂತ (ಬೇರೆಯವರದಲ್ಲ) ಕಾರು, ಬೈಕುಗಳನ್ನು ಮಾರಾಟ ಮಾಡುವ ಅಪ್ಪಂದಿರಿಗೆ ಪ್ರೋತ್ಸಾಹಕ ಬಹುಮಾನ ಉಂಟು. ಇನ್ನು ಮನೆ ಮಾರಿ ಬರುವ ಅಪ್ಪಂದಿರು ತಮ್ಮ ಮಕ್ಕಳಿಗೆ ಮೂರು ಕಾಸಿನ ಪ್ರಥಮ ಬಹುಮಾನ ನಿರೀಕ್ಷಿಸಬಹುದು.
* ಪಕ್ಕದ ಮನೆ "ಬಾಲ" ಅಷ್ಟು ಚೆನ್ನಾಗಿ ಕುಣಿಯುತ್ತದೆ, ಹಾಡುತ್ತದೆ, ನಿನಗೇಕೆ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಬಾಲ-ಕರುಗಳಿಗೆ ದಬದಬನೆ ಬಡಿಯುವ ಅಮ್ಮಂದಿರಿಗೆ ವಿಶೇಷ ಬಹುಮಾನ ಉಂಟು. ಈ ಪರಿಸ್ಥಿತಿಯಲ್ಲಿ ಮಕ್ಕಳ ಮುಖ ಭಾವ ನೋಡಿ ಅಮ್ಮಂದಿರ ಕೋಪ ಎಷ್ಟರ ಮಟ್ಟಿಗಿತ್ತು ಎಂದು ಅಂದಾಜಿಸಲಾಗುತ್ತದೆ.
* ಹುಡುಗ ಚೆನ್ನಾಗಿ ತನ್ನ ಪ್ರತಿಭೆ ಪ್ರದರ್ಶಿಸಿದರೂ, ಆ ಬಾಲ-ಕರುವಿನ ತಾಯಿ ಜರಿ ಸೀರೆ ಇಲ್ಲದೆ, ಆಭರಣ ತೊಡದೆ, ಅಲಂಕಾರವಿಲ್ಲದೆ ಬಂದಿದ್ದರೆ ಅಂಕಗಳನ್ನು ನೀಡಲಾಗುವುದಿಲ್ಲ.
* ಪಕ್ಕದ ಮನೆ ಹುಡುಗ ಭಾರಿ ಪೋಕರಿ, ಅವನಿಗೊಂದು ಪಾಠ ಕಲಿಸುತ್ತೇನೆ ಎಂದು ಎಲ್ಲಾ ಪಾಠ ಕಲಿಸಲು ತಮಗೆ ಗೊತ್ತಿದೆ ಅಂದುಕೊಳ್ಳುವ ತಾಯಂದಿರು ತಮ್ಮ ಮಕ್ಕಳಿಗೆ ಪಾಠ ಕಲಿಸಲು ವಿಫಲರಾಗಿರುತ್ತಾರೆ. ಹಾಗಾಗಿ ಪರಸ್ಪರರ ಮಕ್ಕಳನ್ನು ಅಕ್ಕ ಪಕ್ಕದ ಮನೆಗಳಿಗೆ ಕಳುಹಿಸಿ ಪಾಠ ಕಲಿಸಿಕೊಡಲು ಯತ್ನಿಸಬಹುದು. ಆದರೆ ಏನೋ ಮಾಡಲು ಹೋಗಿ ಏನೋ ಆಗಿ, ಮುಖ ಊದಿಸಿಕೊಂಡು ಬರುವ ತಾಯಂದಿರಿಗೆ ವಿಶೇಷ ಗ್ರೇಸ್ ಮಾರ್ಕ್ಸ್ ಉಂಟು.
ತಕ್ಷಣ ಅರ್ಜಿ ಸಲ್ಲಿಸಿ:
14 ಕಾಮೆಂಟ್‌ಗಳು
ನಮ್ಮ ಮನೆಯಿಂದ ಎರಡು ಬಾಲಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಆದರೆ ಆ ಬಾಲಗಳನ್ನು ಹಿಡಿದುಕೊಂಡು ಬರುವುದು ನಾನಾದುದರಿಂದ, ನನಗೆ ಸೀರೆ, ಪಿಲ್‍ಸ್ಟಿಕ್ ಇತ್ಯಾದಿಗಳ ಅವಶ್ಯಕತೆ ಇಲ್ಲ. ಮತ್ತೆ ಕಾರು,ಸ್ಕೂಟರ್ ಇತ್ಯಾದಿಗಳ ವಿಲೇವಾರಿಯನ್ನು ನಾನು ಮಾಡುವೆನಾದರೂ ಅದು ನನ್ನ ಸ್ವಂತದ್ದಲ್ಲ, ಮಾಲಿಕರಿಗೆ ತಿಳಿಯದ ಹಾಗೆ ಮಾಡುವುದು (ಇದು ಗುಟ್ಟಿನ ವಿಷಯ - ಯಾರಿಗೂ ತಿಳಿಸಬೇಡಿ). ಇವೆರಡು ಕಾರಣಗಳಿಗೆ ನನಗೆ ಶುಲ್ಕ ತೆರುವುದರಿಂದ ಮಾಫ್ ಮಾಡ್ಬೇಕು, ಎಂದು ಅಹವಾಲು ಸಲ್ಲಿಸುತ್ತಿರುವೆ.
ಪ್ರತ್ಯುತ್ತರಅಳಿಸಿಇನ್ನೊಂದು ವಿಷಯವೇನೆಂದರೆ, ನಾನು ಮುಖ ಊದಿಸಿಕೊಂಡು ಬರೋಲ್ಲ ಆದರೆ ಮುಖ ಊದಿಸೋಕ್ಕೆ ಬರುವೆ, ಅದಕ್ಕೇನಾದರೂ ವಿಶೇಷ ಬಹುಮಾನ ಉಂಟೇ?
ವೆಂಕಟಾಚರ ಹಲ್ಲಿಗೆ ಸಾಕಷ್ಟು ಪ್ರಚಾರ ಕೊಟ್ಟ ನಂತರ ಇದೀಗ ಬಾಲಚಿಗುರಿಸುವ ಹಲ್ಲಿಗೆ ಪ್ರಚಾರ ಕೊಡಲು ಹೊರಟಿರುವಂತಿದೆ ಬೊಗಳೆರಗಳೆ!
ಪ್ರತ್ಯುತ್ತರಅಳಿಸಿಮುರಿದ ಬಾಲವನ್ನು ಚಿಗುರಿಸುವುದರಲ್ಲಿ ಬಹುಮಾನ ಪಡೆಯಲು ಹಲ್ಲಿ ಆದ ನಂತರವಷ್ಟೇ ಮಿಕ್ಕವರೆಲ್ಲ ಸಾಲಲ್ಲಿ ನಿಲ್ಲಿ!
ಮಾವಿನಯನಸರೆ,
ಪ್ರತ್ಯುತ್ತರಅಳಿಸಿನಿಮ್ಮ ಬಾಲ ಬಿಚ್ಚಿದರೆ ಜೋಕೆ ಅಂತ ಕಚೇರಿ ಎದುರು ಯಾರಾದರೂ ತಡೆದರೆ ನನಗೆ ಹೇಳಿ.
ಆ ಮೇಲೆ, ನಿಮಗೆ ಪ್ರವೇಶವೂ ಸ್ವಲ್ಪ ಡೌಟೇ, ಯಾಕಂದ್ರೆ ನಿಮ್ಮ ಮೈಮೇಲೆ ಸೀರೆ ಇರುವುದಿಲ್ಲವಲ್ಲ. ಅಂದ್ರೆ ಏನೂ ಇರುವುದಿಲ್ಲ ಅಂತವೂ ಅಂದುಕೊಳ್ಳುವ ಸಾಧ್ಯತೆಗಳಿವೆ!
ಮುಖ ಊದಿಸಲು ಬರುವವರಿಗೆ ವಿಶೇಷ ಟ್ರೀಟ್ ಮೆಂಟ್ ಏರ್ಪಡಿಸಲಾಗಿದೆ!
ಓಹೋಯ್ ವಿಚಿತ್ರಾನ್ನಿಗಳೇ,
ಪ್ರತ್ಯುತ್ತರಅಳಿಸಿನಿಮ್ಮ ಸಲಹೆಯನ್ನು ಶಿರಸಾ ಪಾಲಿಸಿದ ಬಾಲಗಳು ಇಲ್ಲಿ ಹಲ್ಲಿಗಳಂತೆ ಒಂದರ ಬಾಲ ಇನ್ನೊಂದು ಹಿಡಿದುಕೊಂಡು ಗಲಾಟೆ ಎಬ್ಬಿಸುತ್ತಿವೆ.
ನಿಮ್ಮ ಹೇಳಿಕೆಯನ್ನು ಅಂಡು (ctrl+Z) ಮಾಡಿರುವುದಾಗಿ ಮತ್ತೊಂದು ಹೇಳಿಕೆ ಕೊಟ್ಟುಬಿಡಿ ನೋಡೋಣ...!
ಹಲ್ಲಿಯ ಬಾಲ ಮುರಿದ್ರೆ ಆ ಬಾಲಗಳು 'ಶಿರಸಾ' ಪಾಲಿಸುವುದು ಹೇಗ್ರೀ? ಶಿರ ಬೇರೆ, ಬಾಲ ಬೇರೆ ಆದ ಹಲ್ಲಿಯ ಬಾಲಗಳ ಬಗ್ಗೆ ಹೇಳ್ತಿರೋದು ನಾನು!
ಪ್ರತ್ಯುತ್ತರಅಳಿಸಿಅನ್Do ಮಾಡುವ ಪ್ರಶ್ನೆಯೇ ಇಲ್ಲ, ಯಾಕಂದ್ರೆ ನಾನು ಕರ್ಣನ ಅಭಿಮಾನಿ. ಈ ಬಾಣಸಿಗ ಒಮ್ಮೆ ಬಾಣ ಬಿಟ್ಟನೆಂದರೆ ಅದನ್ನು ಹಿಂದೆಪಡೆಯುವುದಿಲ್ಲ. ಆ ಬಾಣಕ್ಕೆ ಅವನು ಸಿಗ!
========
ಮುಖ ಊದಿಸಲು ಬರುವವರಿಗೆ ವಿಶೇಷ ಟ್ರೀಟ್‍ಮೆಂಟ್? ಪೆಪ್ಪರ್‍ಮಿಂಟ್? ಮಿಂಟ್ with a hole?
ಜೋಷಿಯವರೆ,
ಪ್ರತ್ಯುತ್ತರಅಳಿಸಿನೀವು ಹೇಗೂ ಬಾಣವನ್ನು ಬಿಟ್ಬಿಟ್ಟಿದ್ದೀರಲ್ಲ...
ಅದನ್ನು ಪೂರ್ತಿಯಾಗಿ ಅದರ ಸುದ್ದಿಯನ್ನೇ ಬಿಟ್ಟು ಬಿಡಿ..
ಎಷ್ಟಾದರೂ ಬಾಲಗಳಲ್ಲವೇ? ಎಂದು ಕರುಣನಲ್ಲಿ ಪಾರ್ಥನೆ!
ಕೇವಲ ಬಾಲಕರಿಗೆ ಮಾತ್ರವೇ ಸ್ಪರ್ಧೆಗಳೇ? ಅಥವಾ ನನ್ನ ಮಗಳ ಶಾಲೆಯಲ್ಲಿ ಮಾಡಿದಂತೆ ಅಪ್ಪ ಅಮ್ಮಂದಿರಿಗೂ ಏನಾದರೂ ಸ್ಪರ್ಧೆಗಳಿವೆಯೇ?
ಪ್ರತ್ಯುತ್ತರಅಳಿಸಿ-ಪವನಜ
ಪಾವನರೇ,
ಪ್ರತ್ಯುತ್ತರಅಳಿಸಿಈ ಸ್ಪರ್ಧೆಯಲ್ಲಿ ಬಾಲ-ಕರುಗಳಿಗೆ ಪಾತ್ರವೇ ಇಲ್ಲ, ಎಲ್ಲ ನಿಬಂಧನೆಗಳೂ ಅಮ್ಮಂದಿರಿಗಾಗಿಯೇ ಇವೆ ಎಂದು ನಮ್ಮ ಕಚೇರಿ ಮುಂದೆ ಕೂಗಾಟ ಜೋರಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ನನಗೂ ಅವಕಾಶ ಮಾಡಿಕೊಡಬೇಕು..ನನಗೂ ಬಾಲವಿದೆ. ಪ್ರೂಪ್ ಅಂದರೆ ಕೆಲವೊಮ್ಮೆ ಬೆಂಕಿ ಹಚ್ಚಿದ ಬಾಲದ ಹನುಮಂತನಂತೆ ಆಡುತ್ತೇನೆ ಅಂತಾ ನನ್ನ ಮಿತ್ರರ ಅಭಿಪ್ರಾಯ :)
ಪ್ರತ್ಯುತ್ತರಅಳಿಸಿಬಾಲ ಸುಟ್ಟ ಹನುಮಂತನಲ್ವೇ?
ಪ್ರತ್ಯುತ್ತರಅಳಿಸಿಅಬ್ಬಾ.... ನಾನೇನಾದ್ರೂ ಬಾಲ ಸುಟ್ಟ ಬೆಕ್ಕಿಂನಂತೆ ಚಡಪಡಿಸ್ತಿದೀರಾ ಅಂದ್ಕೊಂಡಿದ್ದೆ.
ಇರಲಿ ಶಿವ್ ಅವರೆ, ಆದ್ರೆ ನೀವು ಬೊಗಳೆ ದಹನಕ್ಕೆ ಮಾತ್ರ ಹೊರಡದಿರಿ... ಆಯ್ತಾ?
shiv ಅವರೇ,
ಪ್ರತ್ಯುತ್ತರಅಳಿಸಿಹನುಮಂತನಂತೂ ಶ್ರೀರಾಮನ ಹೆಂಡತಿಯನ್ನು (ತನ್ನ ಸ್ವಂತ ಹೆಂಡತಿಯನ್ನಲ್ಲ) ಹುಡುಕಲು ಹೋಗಿ ಬಾಲ ಸುಟ್ಟುಕೊಂಡ. ನೀವು ಯಾರ ಹೆಂಡತಿ ಹುಡುಕಲು ಹೋಗಿ ಬಾಲ ಸುಟ್ಟುಕೊಂಡಿರಿ?
-ಪವನಜ
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿನಾನು ಬೊಗಳೆ ದಹನ ಮಾಡಿದರೂ.ಅದು ಬೊಗಳೆ ಆದ್ದರಿಂದ ಸುಟ್ಟ ಬೂದಿಯಿಂದ ಮೇಲೆದ್ದು ಬರುವ ಫೀನೀಕ್ಸ್ ಪಕ್ಷಿಯಂತೆ ಮತ್ತೆ ವಕ್ಕರಿಸುತ್ತದೆ ಅಂದು ನನ್ನ ಅಂಬೋಣ.
ಪವನಾಜ ಅವರೇ,
ಅಯ್ಯೋ ಇಲ್ಲಾರೀ, ನಾನು ಯಾರ ಹೆಂಡತಿಯನ್ನು ಹುಡುಕಿಕೊಂಡು ಹೋಗಿಲ್ಲ/ಹೋಗಲ್ಲ. ಅಸತ್ಯಿಗಳ ಅಸತ್ಯದ ಮೇಲಾಣೆ !
ಶಿವ್ ಅವರೆ,
ಪ್ರತ್ಯುತ್ತರಅಳಿಸಿದಹನಕ್ಕೆ ಹೋಗದಿರಿ....
ನಿಮ್ಮ ಬಣ್ಣ ಬಣ್ಣದ ಚಿಟ್ಟೆಗಳೆಲ್ಲಾ ಸುಟ್ಟಾವು... ಜೋಕೆ!
ಪವನಜರೆ,
ಶಿವ್ ಏನಾದ್ರೂ ದಹನಕ್ಕೆ ಹೊರಟ್ರೆ ನೀವು ಪವನ ಜೋರಾಗಿ ಬೀಸದಂತೆ ಮತ್ತು ಅದು ಹರಡದಂತೆ ನೋಡಿಕೊಳ್ಳೋ ಜವಾಬ್ದಾರಿ ವಹಿಸಿಕೊಳ್ಳುತ್ತೀರಾ? ಅಥವಾ ಅಗ್ನಿಶಾಮಕ ದಳಕ್ಕೆ ವಹಿಸುವಿರೇ? ಯಾಕೆಂದ್ರೆ ಈಗಲೇ ಎಲ್ಲ ಸಿದ್ಧತೆ ಮಾಡಿಟ್ಟುಕೊಳ್ಳೋದು ಒಳ್ಳೆಯದು.
Greets to the webmaster of this wonderful site. Keep working. Thank you.
ಪ್ರತ್ಯುತ್ತರಅಳಿಸಿ»
ಏನಾದ್ರೂ ಹೇಳ್ರಪಾ :-D