ಬೊಗಳೆ ರಗಳೆ

header ads

ಕೋಲಾಯುಕ್ತರಿಗೆ ಹಲ್ಲು ಕೊಟ್ಟರೆ, ಮೇಯಲು ಹುಲ್ಲು ಎಲ್ಲಿ?

(ಬೊಗಳೂರು ಲೋಕಾ-ಹಲ ಬ್ಯುರೋದಿಂದ)
ಬೊಗಳೂರು, ಜು.4- ಕೋಲಾಯುಕ್ತರಿಗೆ ಹಲ್ಲು ಕೊಡುವುದಿಲ್ಲ ಎಂದು ಹೇಳುವ ಮೂಲಕ ಕರ್ನಾಟಕ ಮುಖ್ಯಮಂತ್ರಿ ಕುಮಾರ ಮಹಾಶಯರು, ಆಗಾಗ್ಗೆ ದಾಳಿಗೆ ತುತ್ತಾಗುತ್ತ ಕಂಗೆಟ್ಟಿರುವ ಬಡಪಾಯಿ ಸರಕಾರಿ ನೌಕರ ವರ್ಗಕ್ಕೆ "ಬೆದರದಿರಿ ಮಕ್ಕಳೇ" ಎಂಬ ಅಭಯವನ್ನು ನೀಡಿದ್ದಾರೆ.

ಕೋಲಾಯುಕ್ತರು ಕರ್ನಾಟಕದ ಸರಕಾರಿ ಅಧಿಕಾರಿಗಳಲ್ಲಿ ಕೋಲಾಹಲ ಮೂಡಿಸುತ್ತಿದ್ದಾರೆ. ಅವರು ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಕೆಲವು ಅಧಿಕಾರಿಗಳು ದೂರು ನೀಡಿರುವುದು ತಮ್ಮ ಗಮನಕ್ಕೂ ಬಂದಿದೆ ಎಂದು ಅವರು ಅಸತ್ಯಾನ್ವೇಷಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸರಕಾರಿ ಅಧಿಕಾರಿಗಳಿಗೆ ನೆಮ್ಮದಿಯಿಂದ ನಿದ್ದೆ ಮಾಡಲೂ ಬಿಡುವುದಿಲ್ಲ ಎಂಬುದು ಕೋಲಾಯುಕ್ತರ ಮೇಲಿರುವ ಪ್ರಮುಖ ಆರೋಪಗಳಲ್ಲೊಂದು. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈ ತನಿಖಾ ಸಮಿತಿಗೆ ನಿಮ್ಮನ್ನು ಬೇಕಾದರೂ ನಾಮನಿರ್ದೇಶನ ಮಾಡಲಾಗುತ್ತದೆ ಎಂದು ಅವರು ಆಮಿಷ ನೀಡಿದರು.

ಏನೋ ಪಾಪ, ಥರ್ಡ್ ಕ್ಲಾಸ್‌ ಕೆಲಸ ಮಾಡುತ್ತಾ ಥರ್ಡ್ ಕ್ಲಾಸ್ ಪಾಸ್ ಆಗುತ್ತಾ ಇದ್ದ ಸರಕಾರಿ ಮಿಕಗಳು, ಅದೇನೋ ಮಾಡ್ಕೊಂಡು ಮೂರು ಕಾಸಿನವರಾಗಿ ಸಂಪಾದನೆ ಮಾಡುತ್ತಿರುತ್ತಾರೆ. ಮೂರು ಕಾಸಿಲ್ಲದಿದ್ದರೂ ಎರಡು ಕಾಸಾದರೂ ಸಿಗುತ್ತಿರುತ್ತದೆ. ಈಗ ಕೋಲಾಯುಕ್ತರ ಕೋಲಾಹಲದಿಂದಾಗಿ ಈ ಸರಕಾರಿ ಪಾಪಿಗಳ (ಹ್ಹೆ, ಹ್ಹೆ, ಇದು ಪಾಪದವರು ಎಂಬುದರ "ಅಲ್ಪ" ರೂಪ ಎಂದೂ ಮುಮ ಸಮರ್ಥಿಸಿಕೊಂಡರು.) ಹೊಟ್ಟೆಗೆ ಕಲ್ಲು ಬಿದ್ದಿದೆ. ಅವರಿಗೆ ಮೇಯಲು ಏನೂ ದೊರೆಯದ ಕಾರಣ ಅವರ ಹೆಂಡತಿ ಮಕ್ಕಳು ಬರೇ ಈಗ ರಾಶಿ ಹಾಕಿರುವ ಇಡುಗಂಟನ್ನೇ ಕರಗಿಸುತ್ತಾ ಹೊಟ್ಟೆ ತುಂಬಾ ಉಂಡು ತೇಗಿ ಉಪವಾಸ ಬೀಳುತ್ತಿದ್ದಾರೆ ಎಂದು ಅವರು ಕನಿಕರ ತೋರಿದರು.

ಕೋಲಾಯುಕ್ತರಿಗೆ ಹೆಚ್ಚುವರಿ ಅಧಿಕಾರ ನೀಡಿ ಹಲ್ಲು ಕೊಟ್ಟರೆ ಅವರ ಕಚ್ಚುವಿಕೆಯ ಪ್ರಮಾಣ ತೀವ್ರವಾಗುತ್ತದೆ. ಹೀಗೆ ಸರಕಾರದ ಎಲ್ಲ ಇಲಾಖೆಗಳಿಗೂ ಅವರು ಭೇಟಿ ನೀಡಿದರೆ ಸರಕಾರ ಎಂಬುದೇ ಶೂನ್ಯವಾಗುತ್ತದೆ. ಯಾಕೆಂದರೆ ಎಲ್ಲಾ ಅಧಿಕಾರಿಗಳು ಸಸ್ಪೆಂಡ್ ಆದರೆ ಸರಕಾರ ನಡೆಸುವವರಾದರೂ ಯಾರು? ಅರಾಜಕತೆ ಉದ್ಭವಿಸುವುದಿಲ್ಲವೇ ಎಂದೂ ಅವರು ಪ್ರಶ್ನಿಸಿದರು.

ಈಗ ನಿವೃತ್ತರಾಗಿರುವ ಕೋಲಾಯುಕ್ತರು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲಿ. ಅವರ ಅವಧಿ ಖಂಡಿತಾ ವಿಸ್ತರಿಸುವುದಿಲ್ಲ. ನಂತರದ ದಿನಗಳಲ್ಲಿ ಅವರ ವಿರುದ್ಧವೂ ಕೆಲವೊಂದು ಕೇಸುಗಳನ್ನು ರಾಶಿ ಹಾಕಲಾಗುತ್ತದೆ ಎಂದು ಅವರು ಸುದ್ದಿಗಾರರ ದಯನೀಯ ಮುಖ ನೋಡುತ್ತಾ, ಮುಖಮುಚ್ಚಿಕೊಂಡು ಹೇಳಿದರು.

ಇದೇಕೆ ಎಂದು ಬೆಪ್ಪುತಕ್ಕಡಿಯಂತೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಮ, ಅಷ್ಟೂ ತಿಳಿಯೋದಿಲ್ವೆ? ಅವರು ನಮ್ಮದೇ ಜನರ (ಅಧಿಕಾರಿವರ್ಗ) ಮೇಲೆ ಕೇಸುಗಳ ರಾಶಿ ಹಾಕಿದ್ದು, ಅದರ ಅಡಿಯಲ್ಲಿ ಅಧಿಕಾರಿಗಳೇ ಕಾಣಿಸುತ್ತಿಲ್ಲ. ಹೀಗಿರುವಾಗ ಇಷ್ಟೊಂದು ಕೇಸು ಹಾಕುವುದು ಸಮಂಜಸವಲ್ಲ, ರಾಶಿ ಹಾಕಿದರೆ ಏನಾಗುತ್ತದೆ ಎಂಬುದು ಅವರ ಅರಿವಿಗಾದರೂ ಬರೋದು ಬೇಡ್ವೆ ಎಂದು ಮತ್ತೊಮ್ಮೆ ಕರವಸ್ತ್ರದಿಂದ ಬೆವರೊರಸಿಕೊಳ್ಳುವ ನೆಪದಲ್ಲಿ ಮುಖ ಮುಚ್ಚಿಕೊಂಡು ಅವರು ನುಡಿದರು.

ಈಗ ನೆನಪಾಗಿದ್ದು, "ಮಾನವ ಜನ್ಮ ದೊಡ್ಡದು.... ಅದ... ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂಬ ದಾಸವಾಣಿ ನೆನಪಾಯಿತು.

ಕೊನೆಗೆ ವರದಿಗಾರರಿಗೇ ಮು.ಮ. ಕೇಳಿದ ಪ್ರಶ್ನೆ:

"ಕೋಲಾಯುಕ್ತರಿಗೆ ಹಲ್ಲು ಕೊಟ್ಟರೆ ಹುಲ್ಲೆಗಳಿಗೆ ಮೇಯಲು ಹುಲ್ಲು ಸಿಗುವುದಾದರೂ ಎಲ್ಲಿ?"

ಅಲ್ಲಿಗೆ... "ಹುಟ್ಟಿಸಿದ (ಕುಮಾರ !) ಸ್ವಾಮಿ ತಾ ಹೊಣೆಗಾರನಾದ ಮೇಲೆ ಘಟ್ಟಿಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ" ಎಂಬ ದಾಸವಾಣಿ ನೆನಪಿಸಿಕೊಂಡು ಅಸತ್ಯಾನ್ವೇಷಿಯ ಇಂಟರ್ವ್ಯೂ ಬಂದ್!

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

  1. ಹಲ್ಲು ಹಲ್ಲೆಂದೇಕೆ ಗೋಳಾಡುವರು ಹಲ್ಲು ಕಿತ್ತ ಲೋಕಾಯುಕ್ತರು? ಹಲ್ಲಿಲ್ಲದವರಲ್ಲವೇ ಈ ನಾಡ ತುಂಬ?

    -ಪವನಜ

    ಪ್ರತ್ಯುತ್ತರಅಳಿಸಿ
  2. ಹಲ್ಲು ಕಿತ್ತವರೇ ಅಲ್ಲವೇ
    ಕೋಲಾಯುಕ್ತರು ಹಲ್ಲು ಕಿತ್ತವರೇ ಅಲ್ಲವೇ
    ಹಲ್ಲಿದ್ದವರ ಕೊಲ್ಲದಿಹರೇ
    ಸರಕಾರದವರು ಹಲ್ಲಿದ್ದವರ ಹಲ್ಲು ಕೀಳಲಾರರೇ

    ಈ ನಾಣ್ನುಡಿಯನ್ನು (ನಾಡು ನುಡಿ) ಸರಕಾರದವರು ಪಾಲಿಸಿದ್ದರೆ ಇಂತಹ ಕೋಲಾಯುಕ್ತರನ್ನು ಎದುರಿಸುವ, ಹೆದರುವ ಸಂದರ್ಭ ಬರುತ್ತಿತ್ತೇ? ಈಗಲೂ ಹಲ್ಲು ಕಿತ್ತ ಕೋಲಾಯುಕ್ತರ ಕೈಗೆ ಹುಲ್ಲಿನ ಕೋಲು ಕೊಟ್ಟರೆ ತಾವು ಸುಖವಾಗಿ ಹುಲ್ಲು ಮೇಯಬಹುದು. ಇದನ್ನೆಲ್ಲಾ ತಿಳಿಯದವರು ಅದು ಹೇಗೆ ಸರಕಾರ ನಡೆಸುತ್ತಾರೋ ಏನೋ? ಯಾಲೂ ಬಾದವ್ ಹತ್ತಿರ ತರಬೇತಿ ಕೊಡಿಸಬೇಕು.

    ಈ ಐಡಿಯ ಕೊಡುತ್ತಿರುವ ನನಗೆ ಏನು ಕೊಡಿಸುತ್ತೀರಿ :P

    ಪ್ರತ್ಯುತ್ತರಅಳಿಸಿ
  3. ಪವನಜರೆ,
    ಅಕ್ಕರಕ್ಕರ ಸತ್ಯ ನಿಮ್ಮ ಮಾತು.
    (ಖಂಡಿತಾ ನಮ್ಮ ವ್ಯಾಪ್ತಿಗೆ ಬರುವ ಅಸತ್ಯವಲ್ಲವಿದು)
    ಹುಲ್ಲು ಮೇಯುವ ಹುಲ್ಲೆಗಳಿಗೆ ಕೋಲು ತೋರಿಸಿ ಬೆದರಿಸುವುದೇಕೆ ಎಂಬುದು ಪಾಪಿಗಳ ಒಕ್ಕೊರಳ ಪ್ರಶ್ನೆ.

    ಪ್ರತ್ಯುತ್ತರಅಳಿಸಿ
  4. ಮಾವಿನಯನಸರೆ,

    ಹಲ್ಲಿದ್ದವರನು ಕೊಲ್ಲಿಸುವರು
    ಹಲ್ಲಿಲ್ಲದವರನೇ ತೋರಿಸಿ ಬೆದರಿಪರು
    ಈ ಜಗದೊಳಗೆ...
    ಹಲ್ಲಿಲ್ಲದೆಯೂ ಹುಲ್ಲು ತಿಂಬವರಿಂಗೆ
    ಕಾಲವಹುದು ಇದು... ಅಲ್ಲವೇ ಸರ್ವಜ್ಞ?

    ಪ್ರತ್ಯುತ್ತರಅಳಿಸಿ
  5. ಅನಾಮಧೇಯಜುಲೈ 04, 2006 5:10 PM

    "ಹಲ್ಲು ಕೊಡದಿದ್ದರೆ ಅಷ್ಟೇ ಹೋಯ್ತು, ಟೂತ್‍ಪೇಸ್ಟ್ ಖರ್ಚಾದರೂ ಉಳಿಯಿತು!" - ವೆಂಕಟ ಅಚಲ ನಿಲುವು.

    ಪ್ರತ್ಯುತ್ತರಅಳಿಸಿ
  6. ದಂತಾನ್ವೇಶಿಗಳೆ,

    ಹಲ್ಲು ಇಲ್ಲದವರು, ಕುಟಣಿಯಲ್ಲಿ ಕುಟ್ಟಿ ದವಡೆಯಲ್ಲಿ ಕಚ್ಚಿದರೆ?

    ನಮ್ಮ ಮನೆಯಲ್ಲಿ ಹಿರಿಯರೊಬ್ಬರು, ಚಕ್ಕಲಿಯನ್ನು ಹೀಗೆ ತಿನ್ನುತ್ತಲಿದ್ದರು, ನೆನಪಾಗಿ ಹೇಳಿದೆ:)



    ಭೂತ

    ಪ್ರತ್ಯುತ್ತರಅಳಿಸಿ
  7. ಜೋಷಿ ಅವರೆ,
    ವೆಂಕಟರು ಅಷ್ಟು ಅಚಲರಾಗಿ ತಪ್ಪಿಸಿಕೊಳ್ಳುವಂತಿಲ್ಲ.
    ಟೂತ್ ಪೇಸ್ಟ್ ಉಳಿಸಿದ ಅವರ ಮೇಲೆ
    ಐಟಿ ರೈಡ್ ಗ್ಯಾರಂಟಿ...!

    ಪ್ರತ್ಯುತ್ತರಅಳಿಸಿ
  8. ಭೂತಿಗಳೇ,
    ಕೋಲಾಯುಕ್ತರು ಹೀಗೆ ಮಾಡೋಕೇನಾದರೂ ಹೋದ್ರೆ,
    ದಂತಗಳನ್ನು ಲೆಕ್ಕ ಮಾಡಲು ಕೈಯಲ್ಲಿ ತೆಗೆದು ಕೊಟ್ಟಾರು..!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D