ಬೊಗಳೆ ರಗಳೆ

header ads

ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ

(ಬೊಗಳೂರು ಜನಪರ ಬ್ಯುರೋದಿಂದ)
ಬೊಗಳೂರು, ಜೂ.7- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಕೇಂದ್ರದಲ್ಲಿರುವ Unprecedented Price Agenda ಸರಕಾರ ಸ್ಪಷ್ಟನೆ ನೀಡಿದ್ದು, ಕೃಷಿ ಆಧಾರಿತ ರಾಷ್ಟ್ರವಾದ ಭಾರತದಲ್ಲಿ ಕೃಷಿ ಸಂಪನ್ಮೂಲ ರಕ್ಷಣೆಗೆ ಇದು ಪೂರಕ ಎಂದು ಸ್ಪಷ್ಟಪಡಿಸಿದೆಯಲ್ಲದೆ ಬಡವರ ನಿರ್ಮೂಲನೆಯೇ ಸರಕಾರದ ಗುರಿ ಎಂದು (ಜನಸಾಮಾನ್ಯರನ್ನು ಕಾಲಿನಿಂದ) ಒತ್ತಿ ಒತ್ತಿ ಹೇಳಿದೆ.

ನಾವು ಅಧಿಕಾರಕ್ಕೆ ಬಂದ ಎರಡು ವರ್ಷದೊಳಗೆ ಪೆಟ್ರೋಲಿಯಂ ಉತ್ಪನ್ನದ ಬೆಲೆಯನ್ನು ದಾಖಲೆ 7ನೇ ಬಾರಿ ಏರಿಸಿದ್ದೇವೆ ಎಂದು ಕೊಚ್ಚಿಕೊಂಡ ನಿಧಾನಿ ಮನಮೋಹಕ್ ಅವರು, ಇದರಿಂದ ಸರಕು ಸಾಗಾಟ ಬೆಲೆ ಏರಿಕೆಯೊಂದಿಗೆ ತರಕಾರಿ ಬೆಲೆಯೂ ಏರುತ್ತದೆ. ಮತ್ತೆ ರಿಕ್ಷಾ, ಟ್ಯಾಕ್ಸಿ, ಬಸ್ ಪ್ರಯಾಣದರ ಹೆಚ್ಚಳ ಅನಿವಾರ್ಯ. ಒಟ್ಟಿನಲ್ಲಿ ಜನಸಾಮಾನ್ಯರು ಬದುಕಲು ಬೇಕಾದ ಜೀವನಾವಶ್ಯಕ ವಸ್ತುಗಳನ್ನು ಆಕಾಶದೆತ್ತರಕ್ಕೆ ಯಾರಿಗೂ ಸಿಗದಷ್ಟು ಹಾರಿಸುವ ಸಾಧನೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದರಿಂದ ಈ ದೇಶದಲ್ಲಿ ಬಡವರೇ ಇನ್ನಿಲ್ಲದಂತೆ ಮಾಡುವ ನಮ್ಮ (ತುಳಿಯುವ) ಕಾರ್ಯಾಚರಣೆಗೆ ಆನೆ ಬಲ ಬಂದಂತಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಕೃಷಿ ಸಂಪನ್ಮೂಲ ಸುರಕ್ಷಿತ: ಪೆಟ್ರೋಲ್ ಬೆಲೆಯನ್ನು ಆಗಾಗ ಏರಿಸುತ್ತಲೇ ಇರುತ್ತೇವೆ, ತತ್ಪರಿಣಾಮವಾಗಿ ತರಕಾರಿ, ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರುತ್ತದೆ. ಏರಿದ ಬೆಲೆಯಿಂದಾಗಿ ಅದನ್ನು ಯಾರೂ ಖರೀದಿಸಲು ಅಸಾಧ್ಯ. ಹೀಗಿರುವಾಗ ದೇಶದ ಬೆಳೆಗಳು ಸಮೃದ್ಧವಾಗಿ ಕೃಷಿಕರ ಬಳಿಯಲ್ಲೇ ಸುರಕ್ಷಿತವಾಗಿ ಉಳಿಯುತ್ತವೆ. ಈ ರೀತಿ ಬೆಲೆ ಕೈಗೆಟುಕದಷ್ಟು ಎತ್ತರಕ್ಕೇರಿದರೆ ಯಾವ ನನ್ಮಗ ತಾನೇ ತರಕಾರಿ ತಿನ್ನುವ ದುಸ್ಸಾಹಸಕ್ಕಿಳಿಯುತ್ತಾನೆ? ಇದರಿಂದ ಕೃಷಿಯ ರಕ್ಷಣೆಯಾದಂತಾಗುವುದಿಲ್ಲವೇ? ಎಂದು ಪೆಟ್ರೋಲಿಯಂ ಸಚಿವ ಮುರಳಿ (ಅಯ್ಯೋ) ದೇವ್ರೇ ಪ್ರಶ್ನಿಸಿದ್ದಾರೆ.

ನರಕ ಶಿಕ್ಷೆಗೆ "ಅನುಭವ" ಅಗತ್ಯ: ಬೆಲೆ ಹೆಚ್ಚಳದಿಂದಾಗಿ ಜನ ಜೀವನ ನರಕ ಸದೃಶವಾಗುತ್ತದೆ. ಜನರು ಎಷ್ಟು ಚೆನ್ನಾಗಿ ನರಕಸದೃಶ ಜೀವನ ಅನುಸರಿಸುತ್ತಾರೆ ಎಂಬುದನ್ನು ನೋಡಲು ನಮಗೆ ತುಂಬಾ ಆಸೆಯಾಗಿದೆ. ಜನರಿಗೂ ಭೂಮಿಯಲ್ಲಿದ್ದುಕೊಂಡೇ ನರಕದಲ್ಲಿ ಯಾವ ರೀತಿಯೆಲ್ಲಾ ಶಿಕ್ಷೆ ಎದುರಿಸಬಹುದು ಎಂಬುದರ ಅನುಭವ ದೊರೆಯುತ್ತದೆ. ಮುಂದೆ ನರಕಕ್ಕೆ ಹೋದಾಗ ಈ Experience ಅವರಿಗೆ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಅಲ್ಲಿ ಕೂಡ ಅನುಭವವಿದ್ದವರಿಗೆ ಪ್ರಾಶಸ್ತ್ಯವಿರುವುದರಿಂದ ಭಾರತದಿಂದ ಬಂದವರಿಗೆ ಮನ್ನಣೆ ದೊರೆಯುತ್ತದೆ ಎಂದು ನಿಧಾನಿ ಕಾರ್ಯಾಲಯವು ಸ್ಪಷ್ಟನೆಯಲ್ಲಿ ತಿಳಿಸಿದೆ.

ಇದಲ್ಲದೆ, ಈ ಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಗೆ ಇಲ್ಲೇ ಶಿಕ್ಷೆ ಅನುಭವಿಸಿದರೆ, ನರಕಕ್ಕೆ ಹೋದ ಮೇಲೆ ಕುದಿಯುವ ಎಣ್ಣೆಯಲ್ಲಿ ತೇಲಾಡುವ ಶಿಕ್ಷೆಯಿಂದ ಕಡಿತ ದೊರೆಯಬಹುದು ಎನ್ನುವುದು ನಿಧಾನಿ ಕಾರ್ಯಾಲಯದ ವಿಶ್ವಾಸ.

ಬೆಲೆಗಳ ರಾಕೆಟ್: ಅಮೆರಿಕ, ರಷ್ಯಾ ಮುಂತಾದ ರಾಷ್ಟ್ರಗಳು ಮಂಗಳ ಗ್ರಹ, ಚಂದ್ರ ಮುಂತಾದ ಗ್ರಹಗಳಿಗೆ ರಾಕೆಟ್ ಹಾರಿಬಿಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮದು ಬೆಲೆಯನ್ನಾದರೂ ಬಾಹ್ಯಾಕಾಶಕ್ಕೆ ಹಾರಿಬಿಡುವ ಸಣ್ಣ ಪ್ರಯತ್ನವಷ್ಟೆ ಎಂದು ಪ್ರಧಾನಿ ಕಾರ್ಯಾಲಯದ ಪರವಾಗಿ ಪತ್ರಿಕಾ ಹೇಳಿಕೆ ಪ್ರಕಟಿಸಿರುವ ಸಾನಿಯಾ ಗಾಂಧಿ ಕಾರ್ಯ ಲಯ ತಿಳಿಸಿದೆ.

+++++++++++++

(ಕನ್ನಡದಲ್ಲಿ ಬ್ಲಾಗಿಸುವವರ ಬಗೆಗಿನ ಒಂದು ಲೇಖನ ಕನ್ನಡ ಸಾಹಿತ್ಯ ಡಾಟ್ ಕಾಂನಲ್ಲಿ ಇಲ್ಲಿ ಪ್ರಕಟವಾಗಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. ಸಮಯೋಚಿತ ಲೇಖನ. ಬಡಜನರ ಬಗೆಗಿನ ನಿಮ್ಮ ಕಾಳಜಿ ಮತ್ತು ಸರಕಾರದ ಕಾರ್ಯವೈಖರಿಯನ್ನು ಜಗಜ್ಜಾಹೀರು ಮಾಡಿ ಪುಕ್ಕಟೆ ಅಡ್ವರ್ಟೈಸ್‍ಮೆಂಟು ಕೊಡುತ್ತಿರುವ, ನಿಮಗೆ ಈ ವರ್ಷದ ಕೊರೆತರತ್ನ ಪ್ರಶಸ್ತಿ ದೊರಕಿಸಲು, ಮಾಮೂಲು ಸಿಂಗಣ್ಣರಿಗೆ ನಿವೇದಿಸಿಕೊಳ್ಳುವೆ.

    ಇದೇ ತರಹದ ಎಲ್ಲ ಪತ್ರಿಕೆಗಳೂ ಬರೆಯುತ್ತಿದ್ದರೆ ವಾರಕ್ಕೆ ಏಳು ಬಾರಿ ಎಣ್ಣೆಯ ಬೆಲೆಯನ್ನು ಏರಿಸಬಹುದು. ಜೊತೆ ಜೊತೆಗೆ ತರಕಾರಿ, ಹಾಲು, ಬಸ್ ದರ ಇತ್ಯಾದಿ ಆವಶ್ಯಕ ವಸ್ತುಗಳ ಬೆಲೆ ಏರಿಸಿದರೆ, ಆಟೋಮ್ಯಾಟಿಕ್ ಆಗಿ ಬಡವರು ನೆಲದೊಳಗೆ ಇಳಿದುಬಿಡುವರು. ನಂತರ ದೇಶದಲ್ಲಿ ಬಡತನವೇ ಇರುವುದಿಲ್ಲ.

    ಮೊನ್ನೆ ತಾನೆ ಈ ವಿಷಯದ ಬಗ್ಗೆ ನಾನು ಮತ್ತು ಮುರಳಿ (ಬೇವ್ಡಾ) ಚರ್ಚಿಸಿದೆವು. ಮುಂದಿನ ಬಾರ್ ಮೀಟಿಂಗಿನಲ್ಲಿ ರಾಕೆಟ್ ಬಗ್ಗೆ ಚರ್ಚಿಸುವೆ.

    ಪ್ರತ್ಯುತ್ತರಅಳಿಸಿ
  2. ಮೆತ್ತಗೆ ಹೇಳಿ ಮಾವಿನರಸರೇ, ನಿಮ್ಮಂತವರಿಗೆ ಜೀವನವೇ ದುಸ್ತರವಾಗಿಬಿಟ್ಟೀತು.

    ವಾಹನಗಳಿಗೆ ಚಲಿಸಲು ಎಣ್ಣೆ ಬೇಕು, ಅದೇ ರೀತಿ ನಮ್ಮ-ನಿಮ್ಮಂತವರಿಗೂ ಬೇಕಾಗಿರುವ ಎಣ್ಣೆಯ ಮೇಲೆ ಯುಪಿಎ ಕಣ್ಣು ಬಿದ್ದರೇನು ಗತಿ?

    ಹ್ಹಿ... ಹ್ಹಿ... ನಂಗೆ ತಲೆಗೆ ಮಾತ್ರ ಎಣ್ಣೆ. ಹೊಟ್ಟೆಗಲ್ಲ! ಆದ್ರೆ ನೀವು ಬಾರಿನಲ್ಲೇ ಮೀಟಿಂಗ್ ಅಂತ ಹೇಳ್ತಿದೀರಲ್ಲಾ...? ಏನ್ ಕಥೆ?

    ಪ್ರತ್ಯುತ್ತರಅಳಿಸಿ
  3. ಶಾಂತಮ್ಮ ಪಾಪಮ್ಮ! ನೀವು ನನ್ನನ್ನು ತಪ್ಪು ತಿಳ್ಕೊಳ್ತಿದ್ದೀರ. ಅದೇನೋ ಹೇಳ್ತಾರಲ್ಲ - ಬಿಳಿ ಸೀರೆ ಉಟ್ಟವರೆಲ್ಲಾ ...

    ಬಾರ್ ಅಂದ್ರೆ ಬಾರ್ ಕೌನ್ಸಿಲ್ - ಹೆಂಡಕುಡುಕರ ಬಾರ್ ಅಲ್ಲ. ಅಥವಾ ೫೦೧ ಬಾರ್ ಸೋಪ್ ಅಲ್ಲ. ವಕೀಲರ ಬಾರು. ಬೇವ್ಡಾ (ಕುಡುಕರಿಗೆ ಹಿಂದಿಯಲ್ಲಿ ಹೇಳೋದು) ಅಂತ ಹೆಸರಿದ್ರೂ ಅವರು ಹೆಂಡ ಕುಡಿಯೋಲ್ಲವಂತೆ. ನಾನು ಆಗಾಗ ಕೋರ್ಟಿಗೆ ಹೋಗ್ತಿರ್ತೀನಿ. ಅವರೂ ಬರ್ತಿರ್ತಾರೆ. ಅಲ್ಲಿ ನಮ್ಮ ಮಾತುಕತೆ. ವಕೀಲರ ಬಾರಲ್ಲಿ ಹೆಂಡ ಕುಡಿದರೆ ಡಿಬಾರ್ ಮಾಡ್ತಾರಂತೆ.

    ಪ್ರತ್ಯುತ್ತರಅಳಿಸಿ
  4. ಮಾವಿನರಸಾಯನರೆ,
    ಆಗಾಗ ನೀವು ಬಾರಿಗೂ ಕೋರ್ಟಿಗೂ ಹೋಗ್ತಿರ್ತೀರಾ?
    ಹೆಂಡ ಕುಡಿದ್ರೆ ಮಾತ್ರ ಡಿ-ಬಾರ್, ವಿದೇಶಿ ಬ್ರಾಂಡ್ ಕುಡಿದ್ರೆ ಇನ್-ಬಾರೋ?

    ಪ್ರತ್ಯುತ್ತರಅಳಿಸಿ
  5. ಎಷ್ಟಾದರೂ ನಮ್ಮ ಪ್ರ(ನಿ)ಧಾನಿ ಜಾಗತೀಕರಣದ ಹರಿಕಾರರಲ್ಲವೇ? ಅವರ ಹೋಲಿಕೆಯೇನಿದ್ದರೂ ಅಮೆರಿಕದ ಜೊತೆಗೇ. ನಿನ್ನೆ ನಿಧಾನಿ ಕಾರ್ಯಾಲಯದಿಂದ ಪ್ರಕಟಣೆಯೊಂದು ಬಂದಿದ್ದು, ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ತೈಲದ ಬೆಲೆ ಕಡಿಮೆ ಎಂದು ಮನಮೋಹಕ್ ಸಿಂಗ್ ಹೇಳಿದ್ದಾಗಿ ವರದಿಯಾಗಿದೆ. ಜೈ ಜಾಗತೀಕರಣ!
    ಕಾಂಗ್ರೆಸ್ ನ "ಜನಪರ" ನೀತಿಗೆ ಜಯವಾಗಲಿ!

    ಪ್ರತ್ಯುತ್ತರಅಳಿಸಿ
  6. ಹೌದು ವಿಶ್ವನಾಥ್,
    UPAಯದು ಜನ-ಹರ ನೀತಿ.
    ಅವರದು ಜಾಗತೀಕರಣ
    ನಮ್ಮದು sympathyಕರಣ!

    ಪ್ರತ್ಯುತ್ತರಅಳಿಸಿ
  7. ಡೇವಿಡ್ದ, ಚೊತ್ತ ಮತ್ತು ನಿಮ್ಮಂತಹ ಮಹನೀಯರ ಸಂಗ ಮಾಡಿರೋದ್ರಿಂದ ಆಗಾಗ್ಯೆ ಕೋರ್ಟಿಗೆ ಕಚೇರಿಗೆ ಹೋಗಿ ಅಟೆಂಡೆನ್ಸ್ ಹಾಕಿ ಬರ್ಬೇಕಾಗತ್ತೆ.

    ನಾನು ಕುಡಿಯೋದು, ವಿದೇಶೀಯಲ್ಲ, ದೇಶೀ. ಏನೇನೋ ಅರ್ಥೈಸ್ಬೇಡಿ. ಕಳಸದ ತೀರ್ಥ - ತುಳಸೀದಳದ ಜೊತೆಗೆ.

    ಇಂದಿನ ನಿಮ್ಮ ವರದಿಗೆ ಸಿಂಗಣ್ಣನಿಂದ ಏನಾದರೂ ಧಮಕೀ ಬಂದ್ರೆ ನನಗೆ ಹೇಳಿ. ಕೇವಲ ಮಾಮೂಲಿ ಕೊಟ್ರೆ ಸಾಕಷ್ಟೆ.

    ಪ್ರತ್ಯುತ್ತರಅಳಿಸಿ
  8. ಓಹ್, ನೀವು ತೀರ್ಥ ಸೇವಿಸುವವರೋ....

    ಸರಿ, ಮನಮೋಹಕ ಸಿಂಗಿಗೆ ಹೇಳಿ ತೀರ್ಥದ ಬೆಲೆ ಇಳಿಸಲು ತಾಕೀತು ಮಾಡುವೆ.

    ಸತ್ಯ ಬರೆದಿದ್ದೇಕೆ ಅಂತ ಸಿಂಗಣ್ಣನ ಕಡೆಯಿಂದ ಒಂದು ಆಕ್ಷೇಪದ ಕಾಮೆಂಟು ಆಕಾಶದಲ್ಲಿ ತೇಲ್ತಾ ಇತ್ತು.

    ಪ್ರತ್ಯುತ್ತರಅಳಿಸಿ
  9. ಅನಾಮಧೇಯಜೂನ್ 07, 2006 8:29 PM

    ಸರಕಾರವು ತೈಲಗಳ ಬೆಲೆಯನ್ನು ಏರಿಸಿದ್ದು ನಿಜಕ್ಕೂ ಜನೋಪಕಾರಿ ಕೆಲಸವೇ. ಅದರಲ್ಲಿ ಅನು-ಮಾನ-ವೇ ಇಲ್ಲ. ಬೆಲೆ ಏರಿಕೆಯಿಂದ ಆಗುವ ಜನಹಿತ ಕೆಲಸಗಳು:-
    1. ಪೆಟ್ರೋಲು ಸುರಿದು ವಧು/ಸೊಸೆ ದಹನ ಇನ್ನು ಕಡಿಮೆಯಾಗುವುದು.
    2. ಗಲಭೆ/ದೊಂಬಿ ಆದಾಗ ಪೆಟ್ರೋಲು ಸುರಿದು ಸುಡುವುದು ಕಡಿಮೆಯಾಗುವುದು.
    3. ಡೀಸಿಲ್ ಬೆಲೆ ಜಾಸ್ತಿಯಾಗುವುದರಿಂದ ಐಟಿ ಕಂಪೆನಿಗಳಲ್ಲಿ ಜನರೇಟರ್ ಕೆಲಸ ಮಾಡುವುದು ಕಡಿಮೆಯಾಗುವುದು. ಇದರಿಂದ ಐಟಿ ಹುಡುಗರು/ಹುಡುಗಿಯರು ಮನೆ ಕಡೆ ಹೋಗುವರು. ಇದು ಫ್ಯಾಮಿಲಿಗಳಿಗೆ ತುಂಬ ಒಳ್ಳೆಯದು.
    4. ಸಾರಿಗೆ ತುಂಬ ದುಬಾರಿಯಾಗುವುದರಿಂದ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮೆನಯಿಂದಲೇ ಕೆಲಸ ಮಾಡಲು ಅನು-ಮತಿ ನೀಡುವರು. ಇದರಿಂದ ಫ್ಯಾಮಿಲಿಗಳಿಗೆ ಒಳ್ಳೆಯದಾಗುವುದು.
    5. ಸಾರಿಗೆ ದುಬಾರಿಯಾಗುವುದರಿಂದ ಜನರು ಪಬ್‌ಗಳಿಗೆ ಹೋಗುವುದು ಕಡಿಮೆಯಾಗುವುದು.

    -ಪಬ್

    ಪ್ರತ್ಯುತ್ತರಅಳಿಸಿ
  10. ಓ ಅನಾನಸ್ ಪಬ್ಬಿಗರೇ,
    ಸರಕಾರದ್ದು ಜನ-ಹರ ಕೆಲಸ ಅನ್ನುವುದರಲ್ಲಿ ನಿಮಗೆ ಯಾವುದೇ ಅನು-ಮಾನ ಇಲ್ಲ ತಿಳಿಸಿದ್ದಕ್ಕೆ ಧನ್ಯವಾದ.

    ಸಾರಿಗೆ ದು-ಬಾರಿಯಾದರೆ ನೀವು ಸಾರಿನ ಜತೆ ಅನ್ನ ಕಲೆಸುವುದು ಬಿಟ್ಟು ಪಬ್ಬಿಗೆ ನಿಮ್ಮಂಥವರ ಆ-ಗಮನ ಕಡಿಮೆಯಾಗುತ್ತದೆ ಎಂದಿದ್ದು ಎಷ್ಟು ಸರಿ?

    ಪ್ರತ್ಯುತ್ತರಅಳಿಸಿ
  11. ಅಸತ್ಯಾನ್ವೇಷಿಗಳೇ,
    ನೀವು ಸಂಜಯಗಾಂಧಿ ಅವರ ಸಂಗದಲ್ಲಿ ಏನಾದರೂ ಇದ್ದ್ರ?
    'ಗಾರೀಬ್ ಕೊ ಹಟಾವ್' ಶೈಲಿಯಲ್ಲಿದೆ ನಿಮ್ಮ ಶೀರ್ಷಿಕೆ !

    ಒಂದು ಪ್ರಶ್ನೆ..ನರಕದಲ್ಲಿ ಕುದಿಯುವ ಎಣ್ಣೆ ಯಾವುದು ?

    ಪ್ರತ್ಯುತ್ತರಅಳಿಸಿ
  12. ಹೌದು ಶ್ಯೂ ಅವರೆ!
    ಗರೀಬೀ ಹಠಾವೋ ಅಲ್ಲ, ಗರೀಬ್ ಕೋ ಹೀ ದೇಶ್ ಸೇ ಹಠಾವೊ ಅನ್ನೋ ಕಾರ್ಯಾಚರಣೆ ನಡೀತಿದೆ.

    ಆಮೇಲೆ, ನರಕದಲ್ಲಿ ಎಣ್ಣೆ ಸಿಗುತ್ತೆ ಅಂದ ತಕ್ಷಣ ನೀವು ಆತುರದಿಂದ ನರಕದ ವಿಳಾಸ ಕೇಳೋದ್ಯಾಕೆ? ನಂಗೇನು ಗೊತ್ತಿಲ್ಲ ಅಂತ ತಿಳ್ಕೊಂಡಿದ್ದೀರಾ?

    ಕುದಿಯುವ =ಬಿಸಿ=hot ಎಣ್ಣೆ ಅಂತ ನಿಮ್ಮ ಲೆಕ್ಕಾಚಾರನಾ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D