ಬೊಗಳೆ ರಗಳೆ

header ads

ಲೋಕಾಯುಕ್ತ ವಿರುದ್ಧ Inhuman Rights Commissionಗೆ ದೂರು

(ಹಾಯ್ ಬೊಗಳೂರು ಬ್ಯುರೋದಿಂದ)
ಬೊಗಳೂರು, ಜೂ.12- "ಇದು ಅನ್ಯಾಯ, ಇದು ಅಕ್ರಮ, ಇದು ಭ್ರಷ್ಟಾಚಾರ-ಅಮಾನವೀಯ ಹಕ್ಕುಗಳ ಉಲ್ಲಂಘನೆ" ಎಂದು ಬೊಬ್ಬಿಟ್ಟವರು ಭಾರಿ ಪ್ರಮಾಣದ ಆಸ್ತಿ ಕೂಡಿಸಿಟ್ಟ ಹೊರತಾಗಿಯೂ ಅಲ್ಪ ಪ್ರಮಾಣದ ಸೊತ್ತು ಮಾತ್ರ ಬಯಲಾಗಿಸಿ ಸಿಕ್ಕಿಬಿದ್ದ ಕರ್ನಾಟಕದ ಸರಕಾರೀ ಅಧಿಕಾರಿಗಳು.

ಈ ಬಗ್ಗೆ ಇಲ್ಲಿ ವರದಿ ಪ್ರಕಟವಾದ ತಕ್ಷಣ ಹಾಯ್ ಬೊಗಳೂರು ಬ್ಯುರೋದ ನೆಟ್ಗಳ್ಳರ ತಂಡವು ನೇರವಾಗಿ ರಾಜ್ಯ ರಾಜಧಾನಿಗೆ ಧಾವಿಸಿ ಲೋಕಾಯುಕ್ತ ಪೊಲೀಸರು ಸೆರೆ ಹಿಡಿದ, ಅಯ್ಯೋ ಪಾಪ ಮುಖಭಾವ ಹೊತ್ತ ಮತ್ತು ಅಧಿಕವಾಗಿಯೇ ಕಾರಿದ ಅಧಿಕಾರಿಗಳನ್ನು ಸಂದರ್ಶಿಸಿತು.

ನಾವೆಲ್ಲರೂ ಥರ್ಡ್ ಕ್ಲಾಸ್ ಸರಕಾರಿ ಗುಮಾಸ್ತರು ಎಂದು ಅಳಲು ತೋಡಿಕೊಂಡ ಈ ಅಧಿಕಾರಿಗಳು, ಅಂದ್ರೆ ನಾವು ಓದಿದ್ದು ಮೂರನೆ ತರಗತಿಯಾಗಿದ್ದರೂ, ಅದರರ್ಥ ಅದಲ್ಲ. ಥರ್ಡ್ ಕ್ಲಾಸ್ ಅಂದ್ರೆ ನಾವು ಮೂರನೇ ದರ್ಜೆ ಗುಮಾಸ್ತರು ಎಂದು ಅದರ ಕನ್ನಡೀಕರಣವನ್ನೂ ಬ್ಯುರೋದ ತಂಡದ ಎದುರೇ ಮಾಡಿ ತೋರಿಸಿದರು.

ನಾವು ವೃತ್ತಿ ಜೀವನ ಆರಂಭಿಸಿದ್ದೇ ಥರ್ಡ್ ಕ್ಲಾಸ್ ಆಗಿ ಎಂದು ಸ್ಪಷ್ಟಪಡಿಸಿದ ಅವರು, ನಮ್ಮಲ್ಲಿ ಪ್ರತಿಭೆ ಇಲ್ಲದಿದ್ದರೂ ಸರಕಾರಿ ಕೆಲಸ ಪಡೆಯಲು ಎಷ್ಟೊಂದು ದುಡ್ಡು ಸುರಿದಿದ್ದೇವೆ, ಅವನ್ನೆಲ್ಲಾ ಮರಳಿ ಪಡೆಯೋದು ಬೇಡ್ವಾ ಎಂದು ಪ್ರಶ್ನಿಸಿದರು.

ಲೋಕಾಯುಕ್ತರಿಂದ ಅವಮಾನ: ಬರೇ ಜನಸೇವೆ ಅಂತ ಕೂತರೆ ಆಯಿತಾ? ನಮ್ಮ ಬಹುಪತ್ನಿಯರು, ಪುತ್ರರತ್ನರು ಎಲ್ಲ ತಿಂದುಂಡು, ಮಕ್ಕಳು, ಮರಿಮಕ್ಕಳಿಗೂ ಅನ್ನಾಹಾರ ಬೇಡವೆ? ಅದಕ್ಕಾಗಿ ಈಗಲೇ ನಾವು ಕೂಡಿಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡ ಈ ಅಧಿಕ-ಕಾರಿಗಳು, ನಾವೆಷ್ಟು ಶ್ರೀಮಂತರೆಂದು ಜಗತ್ತಿಗೆ ತೋರಿಸೋದು ಬೇಡ್ವೆ ಎಂದು ಪ್ರಶ್ನಿಸಿದರು.

ಲೋಕಾಯುಕ್ತರು ಕೇವಲ ನಮ್ಮ ಅಲ್ಪ ಸಂಪತ್ತನ್ನು ಮಾತ್ರ ಬಹಿರಂಗಪಡಿಸಿ ಅವಮಾನ ಮಾಡಿದ್ದಾರೆ. ನಮ್ಮ ಮನೆಯ ನೆಲಮಾಳಿಗೆಯಲ್ಲಿ, ವಿದೇಶೀ ಬ್ಯಾಂಕ್‌ಗಳಲ್ಲಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಇರಿಸಿದ ಶೇರುಗಳಲ್ಲಿ ನಾವು ಹೂಡಿರುವ ದುಡ್ಡನ್ನು ಲೋಕಾಯುಕ್ತರು ಗಣನೆಗೇ ತೆಗೆದುಕೊಂಡಿಲ್ಲ ಎಂದವರು ಲೋಕಾಯುಕ್ತರ ವಿರುದ್ಧ ಕಿಡಿ ಕಾರಿದರು.

Inhuman Rights Commissionಗೆ ದೂರು: ಕೇವಲ ನಾವು ವಾಸಿಸುವ ಮತ್ತು ನಮ್ಮ ಹೆಂಡಿರು ಮಕ್ಕಳು ಮೈತುಂಬಾ ಧರಿಸಿರುವ ಆಭರಣಗಳ ಮೇಲೆ ಕಣ್ಣು ಹಾಕಿ ಲೋಕಾಯುಕ್ತರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಅಮಾನವೀಯ ಹಕ್ಕುಗಳ ಆಯೋಗಕ್ಕೆ (Inhuman Rights Commission) ದೂರು ನೀಡಲಾಗುತ್ತದೆ ಎಂದು ಲೋಕಾಯುಕ್ತರಿಗೆ ಅವರು ಧಮಕಿ ಹಾಕಿದರು.
 
------------------
ಸೂಚನೆ: "coffee wrong" ಸಮಸ್ಯೆಯಿಂದಾಗಿ ನಮ್ಮ ಬರೇ ಬೊಗಳೂರು ಬ್ಯುರೋಗೆ ಹಾಯ್ ಬೊಗಳೂರು ಬ್ಯುರೋ ಅಂತ ಮರು ನಾಮ ಹಾಕಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಇದು ಅನ್ಯಾಯ. ಲೋಕಾಯುಕ್ತರ ಹಾವಳಿಯ ಬಗ್ಗೆ ಪ್ರತಿಭಟಿಸುವ ಸುಸಮಯ ಈಗ ಬಂದಿದೆ. ಅಕಸ್ಮಾತ್ ಆ ಹೆಣ್ಣುಮಕ್ಕಳು ಮೈಮುಚ್ಚುವಂತೆ ಆಭರಣಗಳನ್ನು ಧರಿಸಿದೇ ಇದ್ದಿದ್ರೆ ಕಥೆ ಏನಾಗಿರೋದು. ಮಾನ ಮರ್ಯಾದೆ ಇಲ್ಲದ ಲೋಕಾಯುಕ್ತರ ಬಗ್ಗೆ ನಾನೂ ಮುಂಚಿತವಾಗಿ ಈಗಲೇ ದೂರು ಕೊಡುವೆ.

    ನಾನ್ಯಾಕೆ ಕೆಂಡ ಕಾರ್ತಿದ್ದೀನಿ ಅಂತ ಸಂಶಯವೇ? ಸ್ವಾಮಿ ಈ ಲೋಕ ಅಯೋಗ್ಯರು ನಾಳೆ ನನ್ನ ಮನೆಗೂ ಬರ್ತಾರೆ. ನಾನೂ ಥರ್ಡ್ ಕ್ಲಾಸ್ ನವನು.

    ಅಂದ ಹಾಗೆ ನೀವು ಹಾಕಿರುವುದು ಪಂಗನಾಮವೋ ಗೂಟನಾಮವೋ?

    ಅಂದ ಹಾಗೆ ನಿಮ್ಮ ವರದಿಗಾರರಿಗೆ ಲೋಕಾಯುಕ್ತದವರು ಎಷ್ಟು ಕೊಟ್ರಂತೆ. ಪಕ್ಕಕ್ಕೆ ಬರುವೆ - ನನಗೆ ಮಾತ್ರ ಹೇಳಿ. ಇದೆಲ್ಲವನ್ನೂ ತಿಳಿದುಕೊಂಡಿರುವುದು ನನಗೆ ಒಳ್ಳೆಯದು.

    ಪ್ರತ್ಯುತ್ತರಅಳಿಸಿ
  2. ಮಾವಿನರಸರೆ,
    ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ಹಿಂದೆಯೇ ಏಕೆ ಬೀಳಬೇಕು, ಪ್ರಾಮಾಣಿಕ ಅಧಿಕಾರಿಗಳನ್ನು ಅವರೇಕೆ ಮುಟ್ಟೋದಿಲ್ಲ ಎಂಬ ಬಗ್ಗೆ ಭ್ರಷ್ಟ ಅಧಿಕಾರಿಗಳ ಸಂಘದವರು ಪರಮೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಲಿರುವುದಾಗಿ ಫಿ-ಮೇಲ್ ಸಂದೇಶ ಕಳಿಸಿದ್ದಾರೆ.

    ನಮ್ಮ ನಾಮ ಕರಣವು ಖಂಡಿತವಾಗಿಯೂ ಪಂಗನಾಮವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

    !^$&*(((&)&(_(_*)^$##@&
    ಕೇಳಿಸಿತಲ್ಲಾ.... ಎಷ್ಟು ಕೊಟ್ಟಿದ್ದಾರೆ ಅಂತ!!
    ನಾನು ಕೀ ಬೋರ್ಡ್ ಗುದ್ದುತ್ತಿದ್ದಾಗ ಈ ಥರ ಬಂತು ಮಾರಾಯ್ರೇ....!!!

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಜೂನ್ 12, 2006 1:39 PM

    ನಿಮ್ಮ ಸ್ಪಷ್ಟೀಕರಣಕ್ಕೆ ಪಂಗನಾಮಗಳು. ಈ ತರಹ ಕೊಟ್ಟಿರುವುದರಲ್ಲಿ ನನಗೆ ಪಾಲು ಬೇಡ.

    ನನ್ನ ಸ್ನೇಹಿತ ಈ ಕೋಡನ್ನು ಡಿಕೋಡಿಸಿದಾಗ ಕೇಳಿ ಬಂದ ಮಾತು - ಎಂಚಿನ ಮಾರಾಯ ಉಣುಸ್ ಆಂಡಾ? ತುಳುವ ಭಾಷೆಗೆ ಹೊಸದಾಗಿ ಲಿಪಿ ಕಂಡುಹಿಡಿದಿದ್ದಾರಂತೆ. ನಿಮಗೆ ಗೊತ್ತಾ?

    ಪ್ರತ್ಯುತ್ತರಅಳಿಸಿ
  4. ಬೊಗಳೂರು ಬ್ಯೂರೋಗೆ ನೀವು ಹಾಯ್ ಹೇಳಲು ಶುರುಮಾಡಿರುವುದು ನೋಡಿದರೆ ಏನೋ ಒಳ ಸಂಚು ಇದೆ ಎಂದು ತೋರುತ್ತದೆ. ಮಾನ್ಯ ರವಿ ಬೆಳಗೆರೆ ಅವರ ಪರವಾಗಿ ನಾನು ಇದನ್ನು ಪ್ರತಿಭಟಿಸುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  5. ಅನಾನಸ್ ಅವರೆ,

    ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಹೆಸರಿನಲ್ಲಿ ಅನೇಕ ಕಾಮನ್ ಮೆಂಟ್ ಗಳು ಬರುತ್ತಿರುವುದರಿಂದ ನಿಮಗೂ ಹೊಸ ಪಂಗ ನಾಮ ಹಾಕಲಾಗುತ್ತದೆ.

    ಈ ಕೋಡಿನ ಡೀಕೋಡ್ ಪ್ರಕಾರ, ಅದು "ಕಾಂಡೆದ ಪಲಾರ ಆಂಡಾ?" ಅಂತ ಆಗಿದ್ದು, ನಿಮ್ಮ ತಪ್ಪು ಡೀಕೋಡಿಂಗಿಗೆ ಧನ್ಯ(ವಿತಂಡ)ವಾದಗಳು!

    ಅದ್ಸರಿ, ನಿಮ್ಮನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ.... ಧ್ವನಿ ಕೇಳಿದ ಹಾಗಿದೆ ಶೀ ಫೀ ಭಟ್ರೆ! ಸರಿಯಾ?
    ಅಂದಾಜಿಗೆ ಗುಂಡ್ ಹಾಕಿದ್ದು ಮಾರಾಯ್ರೆ.

    ಪ್ರತ್ಯುತ್ತರಅಳಿಸಿ
  6. ಸಾರಥಿಯವರೆ,
    ದಯವಿಟ್ಟು
    ಬೆಳಗೆರೆಯವರಲ್ಲಿಗೆ ಬೆಳೆಸದಿರಿ ನಿಮ್ಮ ಪಾದವನು
    ಅವರು ಬೆಂಗಳೂರಿಗರು, ನಾವು ಬೊಗಳಿಗರು

    ನಿಮ್ಮ ಪ್ರತಿಭಟನೆಗೆ ನಮ್ಮದೂ ಪ್ರತಿಭಟನೆಗಳು!

    ಪ್ರತ್ಯುತ್ತರಅಳಿಸಿ
  7. ಅಸತ್ಯಾನ್ವೇಷಿಗಳೇ, ಸಾರಥಿಯವರು ನಿಮ್ಮ ಮಿತಚಿಂತಕರು. ನಿಮ್ಮ ಈ ಕೃತ್ಯದ ಬಗ್ಗೆ ಹಾಯ್ ರವಿಗೆ ಹೇಳಿದರೆ ಕ್ರೈಮ್ ಡೈರಿಗೊಂದು ಹೊಸ ವಸ್ತು ಸಿಕ್ಕ ಹಾಗಾಗುವುದು. ಹಾಯ್ ಬೊಗಳೂರು ಪತ್ರಿಕೆಯನ್ನು ಹೋಯ್ ಬೊಗಳೂರು ಮಾಡಿದರೆ ಹೇಗೆ ಎಂದು ಚಿಂತಿಸಿನೋಡಿ. ಶೀ ಶೀ ಭಟ್ರು ಇಲ್ಲಿಗೂ ಬಂದ್ರಾ? ಅಥವಾ ಅವರು ಸೂ ಸೂ ಪುಟ್ರುನೋ?

    ಬೊಗಳೆಯ ಓಟದ ಗತಿಯನ್ನು ನೋಡಲಾಗದೇ ಕನ್ನಡ ಗ್ರಹವು ಮೂಗಿನೊಳಗೆ ಬೆರಳಿಟ್ಟುಕೊಂಡು ಸ್ತಬ್ಧವಾಗಿದೆ. ನಿಮ್ಮ ಓಟದ ಗತಿ ಇನ್ನೂ ಹೆಚ್ಚಾಗಿ ಇಡೀ ವಿಶ್ವವೇ ಸ್ತಬ್ಧವಾಗಲೆಂದು ಆಶಿಸುವೆ.

    ಪ್ರತ್ಯುತ್ತರಅಳಿಸಿ
  8. ಹೌದಲ್ಲಾ ಅರಸರೆ ಅಥವಾ ರಸರೇ,
    ಈ ಪಾಪ ಕೃತ್ಯದ ಬಗ್ಗೆ ಸಾರಥಿಯವರು ಹಾಯ್ ರವಿಗೆ ಹೇಳಿದ್ರೆ, ನಾವಿಲ್ಲಿ ಬಾಯ್ ಬಾಯ್ ಬಿಟ್ಟುಕೊಂಡು, ಆಯ್ ಆಯ್... ಅಯ್ಯಯ್ಯೋ ಅನ್ನೋ ಸ್ಥಿತಿಗೆ ಬಂದ್ರೆ?

    ಪ್ಲಾನೆಟ್ ಕನ್ನಡ ಬೆರಳಿಟ್ಟುಕೊಂಡಿದ್ದು ಮೂಗಿನೊಳಗಡೆಯೋ.... ತಪ್ಪಾಯಿತಲ್ಲ...!!!
    ----------
    ಕನ್ನಡ ಗ್ರಹಕ್ಕೆ ಹೊಸಬರನ್ನು ಎಳೆದು ತಂದು ಸೇರಿಸುತ್ತಿರುವ ನಿಮ್ಮ ಶ್ರಮ, ಅದರ ಹಿಂದಿರುವ ನಿಸ್ವಾರ್ಥ ಮನೋಭಾವ ಯಶಸ್ವಿಯಾಗಲಿ ಅನ್ನೋದು ನಮ್ಮ ನಿಜ ಬೊಗಳೂರಿನ ಆಶಯ.

    ಪ್ರತ್ಯುತ್ತರಅಳಿಸಿ
  9. ಇದೀಗ ಬಂದ ಸುದ್ದಿ..

    ಲೀಕಾಯುಕ್ತರ ಮುಂದಿನ ದಾಳಿ ಅಸತ್ಯಾನ್ವೇಷಿಗಳ ಮನೆ-ಕಛೇರಿಯ ಮೇಲೆ ಏಕಕಾಲದಲ್ಲಿ ನಡೆಯಲಿವೆ ಎಂದು ನಂಬಲರ್ನಹ ಮೂಲಗಳಿಂದ ತಿಳಿದುಬಂದಿದೆ.

    ಹಾಗೆಯೇ ನಿಮ್ಮ ಹೆಸರನ್ನು ಹಾಯ್ ಬೊಗಳೂರು ಮಾಡಿದಕ್ಕೆ ಸಂತಸವಾಗಿ ಹಾಯ್ ಬೆಂಗಳೂರ್‍ನವರು ನಿಮ್ಮ ಸವಿನೆನಪಿನಲ್ಲಿ ಒಂದು ವರ್ಣಮಯ ಸಂಚಿಕೆ ತರಲಿದ್ದಾರೆ ಅಂತೆ..

    ಪ್ರತ್ಯುತ್ತರಅಳಿಸಿ
  10. ಬೆಳಗೆರೆ ಎಲ್ಲಿ ಬೊಗಳೂರು ಎಲ್ಲಿ....!

    ಮತ್ತೆ, ನಮ್ಮದು ಸಮ್-ಗೀತ ಕಛೇರಿ ಆಗಿರುವುದರಿಂದ ಲೀಕಾಯುಕ್ತರು ಖಂಡಿತಾ ಓಡಿ ಹೋದಾರು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D