(ಬೊಗಳೂರು ಪ್ರಾಣಿ ಭಕ್ಷಣ ಬ್ಯುರೋದಿಂದ)
ಬೊಗಳೂರು, ಜೂ.29- ತಮ್ಮ ಸಂಘದ ಪಾಪದ ಸದಸ್ಯನೊಬ್ಬನನ್ನು ಬಂಧಿಸಿ ಕರೆದೊಯ್ದು ತಮ್ಮ ಕುಲಕ್ಕೇ ಅಪಮಾನ ಮಾಡಿದ ಪೊಲೀಸರ ವಿರುದ್ಧ ತೀವ್ರ ಕೆಂಡ ಕಾರಿರುವ ಅಖಿಲ ಭಾರತ ಗಾರ್ದಭ ಮಹಾಶಯರ (ಅಭಾಗಾಮ) ಸಂಘದ ಅಧ್ಯಕ್ಷ ಗಾರ್ದಭ ರಾಜ್ ಅವರು, ಇನ್ನುಮುಂದೆ ಮನುಷ್ಯ ಪ್ರಾಣಿಗಳು ತಮ್ಮ ಮೇಲೆ ಎಲ್ಲಾ ತಪ್ಪುಗಳನ್ನು "ಹೊರಿಸಿ" ಕೈತೊಳೆದುಕೊಳ್ಳುವಂತಿಲ್ಲ ಎಂದು ತೀವ್ರವಾಗಿ ಅರಚಿದ್ದಾರೆ.
ಇಷ್ಟು ಮಾತ್ರವಲ್ಲದೆ, ತಮ್ಮ ಅಭಾಗಾಮ ಸಂಘದ ಅಮೂಲ್ಯ ಸದಸ್ಯನನ್ನು ಪ್ರಾಣ ಇರುವ ಪ್ರಾಣಿ ಅಂತ ಪರಿಗಣಿಸದೆ, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಮಗೇನು ಪ್ರಾಣ ಇಲ್ಲವೆ? ಕೇಳುವವರು ಯಾರೂ ಇಲ್ಲವೆ? ನಮ್ಮನ್ನು "ಘಟನೆ ನಡೆದ ಸ್ಥಳ"ದಿಂದ "ವಶ"ಪಡಿಸಿಕೊಳ್ಳಲಾಗಿದ್ದು, ಒಂದು ತುಂಡು (!) ಸಾಕ್ಷ್ಯ (piece of evidence) ಅಂತ ಪರಿಗಣಿಸಿದ್ದೇಕೆ ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಅಮಾನವೀಯ ಹಕ್ಕುಗಳ ಆಯೋಗಕ್ಕೆ ಜೋರಾಗಿ ಅರಚಿ ದೂರು ನೀಡಲಾಗುವುದು ಎಂದರು.
ಆದರೆ, ಈ ಘಟನೆಯಲ್ಲಿ ಮಾನ್ಯ ನ್ಯಾಯಮೂರ್ತಿಗಳು ನಮ್ಮನ್ನು ಪ್ರಾಣಿ ಎಂದು ಪರಿಗಣಿಸಿ ಬಂಧಿತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದು ಮತ್ತು ಮರು ದಿನ ನ್ಯಾಯಾಲಯಕ್ಕೆ ಕರೆತರುವಂತೆ ಸೂಚಿಸಿರುವುದನ್ನು ಶ್ಲಾಘಿಸಿದ ಅವರು, ಭಾರತದಲ್ಲಿ ಇನ್ನೂ ನ್ಯಾಯಾಂಗ ವ್ಯವಸ್ಥೆ ಮನುಷ್ಯ ಪ್ರಾಣಿಗಳು ಬೊಬ್ಬಿರಿಯುವಷ್ಟು ಕುಲಗೆಟ್ಟು ಹೋಗಿಲ್ಲವೆಂಬುದಕ್ಕೆ ಇದು ಸಾಕ್ಷಿ ಎಂದು ಗಹಗಹಿಸಿ (ಮೇಲಿನ ಚಿತ್ರ ನೋಡಿ) ನಕ್ಕಿದ್ದಾರೆ.
ಪೊಲೀಸರಿಗೆ ಹೆದರಿಕೆ
ಈ ಮಧ್ಯೆ, ಮ್ಯಾಜಿಸ್ಟ್ರೇಟರ ತೀರ್ಪಿನಿಂದ ಬೆಚ್ಚಿ ಬಿದ್ದ ಪೊಲೀಸರು, ನಮಗೆ ಇದುವರೆಗೆ ಮನುಷ್ಯ ಪ್ರಾಣಿಗಳಿಗೆ ಮೂರನೇ ದರ್ಜೆಯ ಆತಿಥ್ಯ ನೀಡಿ ಗೊತ್ತಿದೆಯೇ ಹೊರತು ಜೋರಾಗಿ ಒದೆಯುವ ಪ್ರಾಣಿಗಳಿಗೆ ಗೊತ್ತಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಮಾನವರು ಪಾಪದ ಪ್ರಾಣಿಗಳು. ಅವರಿಗೆ ಎಷ್ಟನೇ ದರ್ಜೆಯ ಚಿಕಿತ್ಸೆ, ಆತಿಥ್ಯ ಕೊಟ್ಟರೂ ಅಷ್ಟೊಂದು ಜೋರಾಗಿ ಬಾಯಿ ಬಿಡಲಾರರು ಮತ್ತು ಪ್ರತಿಕ್ರಿಯೆಯನ್ನೂ ತೋರಲಾರರು. ಆದರೆ ಇದು..... ಒದ್ದರೆ ನಾವುಂಟೇ?, ಅರಚಾಟಕ್ಕೆ ಪೊಲೀಸ್ ಠಾಣೆಯಲ್ಲಿ ಒಬ್ಬ ನರಪಿಳ್ಳೆಯೂ ಇರುವುದು ಸಾಧ್ಯವುಂಟೇ? ಇದೇ ಕಾರಣಕ್ಕೆ ನಾವು ಈ ಕತ್ತೆಯನ್ನು ಅದರ ಮಾಲಿಕನಿಗೆ ಒಪ್ಪಿಸಲು ನ್ಯಾಯಾಧೀಶರನ್ನು ಕೋರಿದೆವು" ಎಂದು ಪೋಲಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬೊಗಳೆ ಬ್ಯುರೋಕ್ಕೆ ಪ್ರಶಂಸೆ
ಈ ಮಧ್ಯೆ, ತಮ್ಮ ಸಂತತಿಯ ಸುಂದರ ಭಾವಚಿತ್ರವನ್ನು ಪ್ರಕಟಿಸಿ, ನೆಟ್ಟೋದುಗರ 'ಪ್ರಾತಃಸ್ಮರಣೀಯ' ಕುಲಕ್ಕೆ ತಮ್ಮನ್ನು ಸೇರಿಸಿ ಪ್ರಾಣಿ ದಯೆ ಮೆರೆದ ಬೊಗಳೂರಿನ ಬೊಗಳೆ ರಗಳೆ ಬ್ಯುರೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಾರ್ದಭ ರಾಜ್, ಇನ್ನಷ್ಟು ಒದೆತಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೂ ಅಲ್ಲದೆ ಮಂಗನನ್ನು ಇಳಿಸಿ ಕತ್ತೆಯನ್ನೇರಿಸಿದ ಬಗ್ಗೆಯೂ ಅವರು ಬೆಚ್ಚುಗೆ ಸೂಸಿದ್ದಾರೆ.
ಈ ಹಿಂದೆಯೂ ನಿಮ್ಮ ಬ್ಯುರೋ ನಮ್ಮ ಅರಚಾಟದ ಧ್ವನಿಯಾಗಿ ಕಾರ್ಯನಿರ್ವಹಿಸಿದೆ ಎಂದವರು ಗಳಗಳನೆ ನೆನಪಿಸಿಕೊಂಡರು.
10 ಕಾಮೆಂಟ್‌ಗಳು
ನಿಮಗೆ "ಯೇನಕೇನ ಪ್ರಕಾರೇಣ..." ಸುಭಾಷಿತದ ಸಂಪೂರ್ಣ ರೂಪವನ್ನು ತಿಳಿಸುತ್ತೇನೆ:
ಪ್ರತ್ಯುತ್ತರಅಳಿಸಿಘಟಂ ಬಿಂಧ್ಯಾತ್ ಪಟಂ ಛಿಂದ್ಯಾತ್
ಕುರ್ಯಾದ್ವಾ ಗಾರ್ದಭರೋಹಣಂ
ಯೇನಕೇನ ಪ್ರಕಾರೇಣ ಪ್ರಸಿದ್ಧ ಪುರುಷೊ ಜಾಯತೆ ||
ಆ ಶ್ಲೋಕದಲ್ಲಿ, 'ಸುದ್ದಿಯಲ್ಲಿ ಬರಲಿಕ್ಕಾಗಿ' ಕತ್ತೆ ಮೇಲೆ (ಬೇಕಿದ್ದರೆ ಹಿಮ್ಮುಖವಾಗಿ ಕುಳಿತು) ಮೆರವಣಿಗೆ ಹೊರಟವನ ಪ್ರಸ್ತಾಪ ಬರುವುದು.
ಇವತ್ತಿನ ಸುದ್ದಿಯಲ್ಲಿ ನೀವು ಗಾರ್ದಭ ಬಂಧನವನ್ನೇ ಉಲ್ಲೇಖಿಸಿದ್ದೀರಿ!
"ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ..." ಇದ್ದಂತೆ "ಕತ್ತೆಗೂ ಒಂದು ಕಾಲ..."??
ಜೋಷಿಯವರೆ,
ಪ್ರತ್ಯುತ್ತರಅಳಿಸಿಪುರಾಣದಲ್ಲೂ ಗಾರ್ದಭ ಉಲ್ಲೇಖವಿರುವುದನ್ನು ಅಭಾ ಗಾರ್ದಭ ಸಂಘದ ಗಮನಕ್ಕೆ ತಂದು ನಿಮಗೂ ಲತ್ತೆ ಕೊಡಿಸಲಾಗುವುದು. ನಮಗೀಗಾಗಲೇ ಲತ್ತೆ ದೊರಕಿದೆ.
ಯೇನಕೇನ ಪ್ರಕಾರೇಣ ಪ್ರಸಿದ್ಧ ಗಾರ್ದಭೋ ಜಾಯತೇ ಎಂಬುದು ಖಂಡಿತ ಅನ್ವಯವಾಗದು ಅಲ್ಲವೆ? ಯಾಕೆಂದರೆ ಸುದ್ದಿಯಲ್ಲಿ ಬರಲಿಕ್ಕಾಗಿ ಯಾವತ್ತೂ "ಪ್ರಸಿದ್ಧ ಪುರುಷರು" (Read-ರಾಜಕಾರಣಿಗಳು) ಹಲುಬುತ್ತಿರುವಾಗ ಕತ್ತೆಯಗಳಿಗೆ ಅವಕಾಶ ಬಿಟ್ಟುಕೊಡುವರೇ?
ಗಾದಭಾನ್ವೇಷಿಗಳೆ
ಪ್ರತ್ಯುತ್ತರಅಳಿಸಿಈ ವಿಶಯವಾಗಿ ನಮ್ಮ ನೇಮಕ ಗಾಂಧಿ ಏನನ್ನುತ್ತರೆ ಎಂಬುದನ್ನು ಅನ್ವೇಷಿಸಿ ನೋಡ್ಬೇಕಿತ್ತು. ಈಗಲೆ ಅಭಾಗಾಮ ಗೆ ಪತ್ರ ಬರೆದು ತಿಳಿಸಿ, ನೇಮಕರಲ್ಲಿ ಮೊರೆಹೋಗಲು.
ಭೂತ
ಭೂತಾತ್ಮರೇ,
ಪ್ರತ್ಯುತ್ತರಅಳಿಸಿಅದು ನಿಮ್ಮದೇ ನೇಮಕ ಎಂದು ಈಗ ಗೊತ್ತಾಯಿತು.
ಇರಲಿ. ಮೇನಕೆಯ ಮನೆತನಕ ಇಂಥದ್ದೆಲ್ಲಾ ಹೋಗದಂತೆ ನ್ಯಾಯಾಧೀಶರೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರಲ್ವ!
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಆ ಬಂಧಿತ ಕತ್ತೆಯನ್ನು ಬಿಬಿಸಿ,ಸಿನನ ಅವರು ಸಂದರ್ಶಿಸಲು ಬಹಳ ಉತ್ಸುಕರಾಗಿದ್ದಾರಂತೆ. ಹಂಗೆ ಕರಣ್ ತಾಪರ್ ಜೊತೆ interviewನು ಇದೆಯಂತೆ..ಮಾನ್ಯ ಅರ್ಜುನ ಸಿಂಗ್ ರನ್ನು ಸಂದರ್ಶಿಸಿದ ನಂತರ ಕರಣ್‍ಗೆ ಯಾವ ಕತ್ತೆಯ ಜೊತೆಗೂ interview ಮಾಡಬಹುದು ಅಂತ ನಂಬುಗೆ ಬಂದಿದೆ ಅಂತೆ..
ಮಾವಿನಯನಸರು ಇತ್ತೀಚಿಗೆ ಬಹಳ ಪ್ರಶ್ನೆ ಕೇಳೋಕೆ ಶುರು ಮಾಡಿದ್ದಾರೆ.ಸಂಸದಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಹಾಗೆ ಇವರು ಎಲ್ಲಿಂದಾದರೂ ಹಣ ಪಡೆದು ಪ್ರಶ್ನೆ ಕೇಳುತ್ತಾರ??
ಜೋಶಿಗಳೇ,
ನ್ಯಾಯಾಂಗವೆಂಬ ಕೋಣನ ಸೀಮಂತದಲ್ಲಿ ಕತ್ತೆಗೊಂದು ಕಾಲ !
ಹೌದು, ಶಿವ್ ಅವರೆ,
ಪ್ರತ್ಯುತ್ತರಅಳಿಸಿಶ್ರೀನಿವಾಸ್ ಬದಲಾಗ್ತಿದಾರೆ.
ಬಹುಶಃ ಪಾರ್ಲಿಮೆಂಟ್ ಮೆಟ್ಟಿಲೇರೋ ಪ್ರಯತ್ನ ಈಗಲೇ ಆರಂಭಿಸಿದ್ದಾರೆ.
ಅದೂ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡ್ಕೊಳ್ತಿದಾರೆ.
ಅವರಿಗೆ ಜೈ.... ಲಾಗಲಿ,
ನಿಮ್ಮ ಓಟು ಯಾರಿಗೆ, ನಿಮ್ಮ ಓಟು ಯಾರಿಗೆ?....
ಶುರು ಮಾಡೋಣ...
ನನ್ನ ಮನೆಯೊಂದು ಪಾರ್ಲಿಮೆಂಟು
ಪ್ರತ್ಯುತ್ತರಅಳಿಸಿನನ್ನ ಪತ್ನಿಯೇ ಅಲ್ಲಿಯ ಪ್ರೆಸಿಡೆಂಟು
ವಿರೋಧಿಯಾದರೂ ಮನೆಯೊಳಗೆ ಎಂಟ್ರಿ ಉಂಟು
ಆಗಾಗ ಮಕ್ಕಳು ಕುಟುಕುವುದೂ ಉಂಟು
ಮಹನೀಯರೇ ಮಹಿಳೆಯರೇ, ಮುಂದಿನ ಚಿತಾವಣೆಯಲ್ಲಿ ನೀವೆಲ್ಲರೂ ನನಗೇ ಸಪೋರ್ಟ್ ಮಾಡಿ ನನ್ನನ್ನು ಅಳುವ ಪಕ್ಷಕೆ ಏರಿಸಬೇಕೆಂದು ಕೇಳಿಕೊಳ್ಳುವೆ.
"ಅಳುವ ಪಕ್ಷ"ದ ಅಧ್ಯಕ್ಷ ಶ್ರೀನಿವಾಸರಿಗೆ ಜೈ.ಲಾ(ಆ)ಗಲಿ
ಪ್ರತ್ಯುತ್ತರಅಳಿಸಿಗಾರ್ದಬನೇ ಅವರ ಪಕ್ಷದ ಚಿಹ್ನೆಯಾಗಲಿ
ನಮ್ಮ-ನಿಮ್ಮೆಲ್ಲರ ಓಟು ಅವರಿಗೇ ಮೀಸಲಿರಲಿ!
ಜೈ ಗಾರ್ದಭ!!!
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಬೊಗಳುತ್ತಿರುವ ಎಲ್ಲರೂ ನಿಮಗೆ ಓಟು ಕೊಡ್ತಾರೆ.
ಆದರೆ ನಿಮ್ಮನ್ನು ಆಳುವ ಪಕ್ಷಕ್ಕೆ ಏರಿಸಿದರೆ, ನಿಮ್ಮ ಮನೆಯವರೆಲ್ಲಾ ನಮ್ಮನ್ನು ಅಳುವ ಪಕ್ಷಕ್ಕೆ ಏರಿಸಿದರೆ ಏನು ಗತಿ?
ವಿಶ್ವನಾಥರೇ
ಪ್ರತ್ಯುತ್ತರಅಳಿಸಿಅಳುವ ಪಕ್ಷ, ಅಳುವ ಪಕ್ಷ ಅಂತ ಹೇಳಿ ಮತದಾರರನ್ನು ಗೊಂದಲದಲ್ಲಿ ಸಿಲುಕಿಸದಿರಿ.
ಮತ್ತೆ, ನಮ್ಮ ಗಾರ್ದಭನನ್ನು ನೀವು ಎಳೆದುಕೊಂಡು ಹೋದರೆ ಗಾರ್ದಭ ಸಂಘಕ್ಕೇ ದೂರು ನೀಡುತ್ತೇವೆ.
:)
ಏನಾದ್ರೂ ಹೇಳ್ರಪಾ :-D