ಬೊಗಳೆ ರಗಳೆ

header ads

ಬೊಗಳಿಗರೇ, ನಿಮಗೊಂದು ಟೂಲ್!

(ಹಾಯ್ ಬೊಗಳೂರು ನೆಟ್ಗಳ್ಳರ ಬ್ಯುರೋ)
ಬೊಗಳೂರು, ಜೂ.15- ತಲೆ ಇದ್ದವರಿಗೆ ಬುರುಡೆಯೂ ಇರುತ್ತದೆ. ಅವರು ತಲೆ ಹರಟೇನೂ ಮಾಡ್ತಿರ್ತಾರೆ. ಅಂಥ ಜಾತಿಗೆ ಸೇರಿದ, ಕಡ್ಡಾಯವಾಗಿ ತಲೆ ಇರುವ ಬೊಗಳೆ (blog) ನಿರತರಿಗೆ ಆರಂಭದಿಂದಲೂ ಒಂದು ಸಮಸ್ಯೆ ಕಾಡುತ್ತಿರುವುದು ಬೊಗಳೂರು ಬ್ಯುರೋದ ಗಮನಕ್ಕೆ ಬಂದಿದೆ.

ಈ ಪ್ರಯುಕ್ತ, ತಲೆ ಇರುವ ಮತ್ತು ಬುರುಡೆಯೂ ಇರುವ ಬೊಗಳೆದಾರರಿಗಾಗಿಯೇ ವಿಶೇಷವಾಗಿ ಸಂಶೋಧನಾ ವರದಿಯೊಂದನ್ನು ಪ್ರಕಟಿಸಲು ನಮ್ಮ ಬ್ಯುರೋ ನಿರ್ಧರಿಸಿದ ಪರಿಣಾಮ ಈ ಸುದ್ದಿ.

ಬೊಗಳೆದಾರರು ಮೊದಲಿನಿಂದಲೂ ಒಂದು ಸಮಸ್ಯೆ ಹೇಳುತ್ತಾ ಬಂದಿದ್ದಾರೆ. ಏನು ಬರೆಯಲಿ, ಹೇಗೆ ಬರೆಯಲಿ ಎನ್ನೋದನ್ನು ಆರಿಸೋದೇ ದೊಡ್ಡ ತಲೆನೋವು. ಅವರ ಈ ಸಮಸ್ಯೆಗೆ ಅವರೇ ನೀಡುವ ಪ್ರಮುಖ ಕಾರಣ ತಲೆಯೊಳಗೆ ಬೇಕಾದಷ್ಟು ಸಂಗತಿಗಳು, ಘಟನಾವಳಿಗಳು, ಐಡಿಯಾಗಳು ಛಕ್ಕನೆ ಹೊಳೆ ಹೊಳೆದು ತಲೆಯಿಂದ ಹೊರಗೆ ನೆಗೆದು ಮಾಯವಾಗಿಬಿಡುತ್ತವೆ ಎನ್ನುವುದು.

ತಲೆ ಇರುವಾಗ ಇದೆಲ್ಲಾ ಸಹಜವಾದದ್ದಾರೂ, ಆಗಾಗ್ಗೆ ಛಕ್ಕನೆ ಸುಳಿಸುಳಿದು "ನಾನಿದ್ದೀನಿ, ತಾನಿದ್ದೀನಿ" ಅಂತ ಹೇಳುತ್ತಾ "ನನ್ನನ್ನು ಮೊದಲು ಬೊಗಳು, ನನ್ನನ್ನೇ ಮೊದಲು ಉಗುಳು" ಅಂತ ಮಂಡೆಗೆ ಆಜ್ಞಾಪಿಸುತ್ತಾ ಗಲಾಟೆ ಎಬ್ಬಿಸುತ್ತಿರುತ್ತವೆ ಈ ಐಡಿಯಾಗಳು. ಬೊಗಳದಿದ್ದರೆ ಅಥವಾ ಉಗುಳದಿದ್ದರೆ ಅವು ಕೋಪಿಸಿಕೊಂಡು ತಲೆಯೊಳಗಿಂದ ಹೊರಗೆ ಹಾರಿ ಮಾಯವಾಗಿಬಿಡುತ್ತವೆ.

ಬೊಗಳಿಗರ ಈ ಮನಸ್ಥಿತಿಯನ್ನು ಮನಗಂಡು ಹೊಸದಾಗಿ ಭಾರತಕ್ಕೆ ಪರಿಚಯಿಸಲಾಗಿದೆ ಕ್ರೇನಿಯೋಪ್ಲಾಸ್ಟಿ ಅನ್ನೋ ಅತ್ಯಾಧುನಿಕ ತಂತ್ರಜ್ಞಾನ. ಅಮೆರಿಕ, ಜಪಾನ್, ಆಸ್ಟ್ರೇಲಿಯಾಗಳಲ್ಲಿ ಮಾತ್ರ ದೊರೆಯುತ್ತಿದ್ದ ಅದನ್ನು ಭಾರತಕ್ಕೆ ಪರಿಚಯಿಸಿದ್ದು ಬೊಗಳೂರು ಅಂತ ಇಲ್ಲಿನ ಸಿಬ್ಬಂದಿ, ಇಲ್ಲದ ತಲೆಯ ಮೇಲ್ಮುಂಭಾಗದಲ್ಲಿರುವ ಹಣೆಗೆ ಚಚ್ಚಿಕೊಂಡರೂ ಇದು ಕೊಯಮತ್ತೂರಿನಲ್ಲಿ ಪತ್ತೆಯಾದ ಕಾರಣ ಸಿಬ್ಬಂದಿ ಮೊಂಡುವಾದಕ್ಕೆ ಪೇಟೆಂಟ್ ದೊರೆಯಲಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.

ಈ ತಂತ್ರಜ್ಞಾನದ ಪ್ರಕಾರ, ತಲೆಬುರುಡೆಯಲ್ಲಿರುವ ರಂಧ್ರಗಳನ್ನು, ಬಿರುಕುಗಳನ್ನು ಮುಚ್ಚಲಾಗುತ್ತದೆ ಎಂದು ಇಲ್ಲಿ ವರದಿಯಾಗಿದೆ.

ನಮ್ಮ ತಲೆಬುರುಡೆಯಲ್ಲಿರುವ ರಂಧ್ರಗಳಿಂದಾಗಿಯೇ ಐಡಿಯಾಗಳು ತಲೆಯಿಂದ ಹೊರಗೆ ಹೋಗುವುದರಿಂದ ಈ ರಂಧ್ರಗಳನ್ನು ಮುಚ್ಚಿಬಿಟ್ಟರೆ ಐಡಿಯಾಗಳು ಹೇಗೆ ಹೊರಗೆ ನೆಗೆಯುತ್ತವೆ ಅಂತ ಒಂದು ಕೈ ನೋಡಿಯೇಬಿಡೋಣವೆ?

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಓಹ್!ನಿಮ್ಮ ಪತ್ರಿಕೆಯ ಉಳಿವು ಅಳಿವು ಪತ್ರಿಕಾ ವರದಿಗಾರರ ತಲೆಯೊಳಗಿರುವ ಹುಳುಗಳ ಮೇಲೆ ಅವಲಂಬಿತವಾಗಿದೆಯೇ? ವರದಿಗಾರರಿಗೆ ಅಷ್ಟೊಂದು ಯೋಚನೆಗಳು ಬರುತ್ತವೆಯೇ? ಹುಷಾರಾಗಿರಿ, ಅವರನ್ನು ನಿಮ್ಮ ವೈರಿ ಪತ್ರಿಕೆಯವರು ಹಾರಿಸಿಕೊಂಡು ಹೋಗಿಯಾರು? ಚೆನ್ನಾಗಿ ತಿನ್ನಿಸಿ ಸಾಕಿರಿ.

    ಈ ತಲೆಹರಟೆಯ ಬಗ್ಗೆ ತ್ರಿಯವರ ಒಂದು ಲೇಖನವಿದೆ. ಅದರ ಕೊಂಡಿ ಇಲ್ಲಿ ಕೊಡಬಯಸುವೆ.

    ಕಡೆಯದಾಗಿ ನನ್ನದೊಂದು ಮಾತು. ಹೆಂಗಸರಿಗೆ ಐಡಿಯಾಗಳು ಬರೋಲ್ಲ ಎನ್ನುತ್ತಾರೆ. ಇದರ ಬಗ್ಗೆ ತನಿಖೆಯಾಗಲಿ. ಯಾರು ಎಲ್ಲಿ ಹೇಳಿದ್ದಾರೆ ಎಂದು ಕೇಳಿದ್ರಾ?
    ಇದು ತೆಲುಗುವಿನಲ್ಲಿರುವ ಒಂದು ಗಾದೆ ಮಾತು -
    ఐడియాలు గడ్డాలు పెరుగినష్టల పెరుగుతుంది. ఆడవాళ్ళకు అసలే లేవు - ಐಡಿಯಾಲು ಗಡ್ಡಾಲು ಪೆರುಗಿನಷ್ಟಲ ಪೆರುಗುತುಂದಿ. ಆಡವಾಳ್ಳಕು ಅಸಲೇ ಲೇವು.

    ಅರ್ಥ - ಐಡಿಯಾಗಳು ಗಡ್ಡದ ತರಹ ಬೆಳೆಯುತ್ತವೆ. ಬೋಳಿಸಿದಷ್ಟೂ ಮತ್ತೆ ಮತ್ತೆ ಬರುತ್ತವೆ. ಹೆಂಗಸರಿಗೆ ಅಸಲೇ ಇಲ್ಲ (ಗಡ್ಡ) - ಇನ್ನು ಐಡಿಯಾಗಳು ಎಲ್ಲಿಂದ ಬರುವುದು?

    ಹೆಂಗೆಳೆಯರು ಮನ್ನಿಸಬೇಕು. ಇದನ್ನು ತಮಾಷೆಗೆ ಬರೆದದ್ದು. ನನ್ನ ಮನೆಯವಳಿಗೆ ಮಾತ್ರ ಇದು ಗೊತ್ತಿಲ್ಲ. ನೀವೂ ಯಾರೂ ಅವಳಿಗೆ ಹೇಳಬೇಡಿ.

    ಪ್ರತ್ಯುತ್ತರಅಳಿಸಿ
  2. ಕ್ಷಮಿಸಿ ತ್ರಿಯವರ ಲೇಖನದ ಕೊಂಡಿ ಅಲ್ಲಿ ಕೊಡಲಾಗಲಿಲ್ಲ. ಇಲ್ಲಿದೆ - http://thatskannada.oneindia.in/column/triveni/140606haaLu_haraTe.html

    ಪ್ರತ್ಯುತ್ತರಅಳಿಸಿ
  3. ಹೌದು ಮಾವಿನರಸರೆ,
    ಯೋಚನೆಗಳು ಬಂದು ಬುರುಡೆ ಸ್ಫೋಟವಾಗುವ ಹಂತಕ್ಕೆ ತಲುಪಿದ ಕಾರಣ ಇದಕ್ಕೆ ಏನಾದ್ರೂ ಮಾಡಲೇಬೇಕು ಅಂದುಕೊಂಡಿದ್ದರ ಪರಿಣಾಮವೇ ಈ ಸಮ್-ಶೋಧನೆ. ಆದ್ರೆ ಹುಳಗಳು ಹೊರಬಂದು ಬೇರೆಯವರ ಪಾಲಾಗಿ ಗೌಪ್ಯತೆಯ ಕಾಯ್ದೆಗೆ ಹೊಡೆತ ಬೀಳದಂತೆ ಮತ್ತು ಅವು ಕೆಟ್ಟ ಹುಳಗಳಾಗದಂತೆ ರಕ್ಷಿಸಲು ಸರ್ವ ಪ್ರಯತ್ನ ಜಾರಿಯಲ್ಲಿದೆ.

    ಆಮೇಲೆ, ನಿಮ್ಮ ಗುಟ್ಟು ಗೊತ್ತಾಯಿತು. ಇನ್ನು ನಿಮ್ ಜುಟ್ಟು ನಮ್ ರಟ್ಟೆಯಲ್ಲಿ. ಹೆಂಡ್ತಿಗೇಳ್ತೀನಿ ಅಂದ್ರೆ ಅನಂತ್ ನಾಗ್ ಥರಾ ಹೆಂಡ್ತಿಗೇಳ್ಬೇಡಿ ಅಂತೀರಾ?

    ಶ್ರೀತ್ರಿಯವರು ದಟ್ಸ್ ಕನ್ನಡದಲ್ಲಿ ಜೋರಾಗಿ "ತಲೆಹರಟೆ" ಮಾಡಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಅನ್ವೇಷಿಗಳೇ,

    ಬುರುಡೆ ಸ್ಪೋಟವಾಗುವ ಹಾಗೆ ಬರೆದಿದ್ದೀರಿ, ರಂಧ್ರಗಳನ್ನೆಲ್ಲ ಮುಚ್ಚಿ ಬಿಟ್ಟರೆ ಮಿದುಳು ಗಾಳಿಯಾಡದೇ ಕೆಟ್ಟು ಹೋದೀತು!

    ಅಲ್ಲಾ, ನಿಮಗೇಕೆ ಬೇಕಿತ್ತು 'ಹಾಯ್' ಸಹವಾಸ (ಅಷ್ಟೂ ಮಾಡಿ 'ಹಾಯ್'ನಲ್ಲಿ ಅಂಥಾದ್ದೇನೂ ಇಲ್ಲ ಬಿಡಿ - ಇನ್ನೊಬ್ಬರು ಅನುಕರಿಸೋ ಹಾಗೆ)- ನಿಮ್ಮ ಸ್ವಂತಿಕೆಗೆ 'ಹಾಯ್' 'ಹಲೋ'ಗಳ ಮುಚ್ಚುಳ ಚೆನ್ನಾಗಿರೋಲ್ಲ, ನಿಮ್ಮದೇ ಬೊಗಳೆಗಳು ಹೇಗೆ ಯುನೀಕೋ ಹಾಗೇ ನಿಮ್ಮ ಬ್ಯೂರೋವೂ ಯುನೀಕ್ ಆಗಲಿ!

    ಪ್ರತ್ಯುತ್ತರಅಳಿಸಿ
  5. ಹೌದು ಅಂತರಂಗಿಗಳೆ,

    ನಿಮ್ಮ ಸಲಹೆ ಸರಿಯಾದದ್ದೇ.

    ನಾನಿನ್ನು ಯಾರಿಗೂ "ಹಾಯ್" ಹೇಳದೆ ಬೊಗಳೂರು ಬ್ಯುರೋದಲ್ಲೇ ರಗಳೆ ಮುಂದುವರಿಸಲು ನಿರ್ಧರಿಸಿದ್ದೇನೆ. ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  6. ಹಾಯ್ ಬಾಯ್ ಕಡಲೆಕಾಯ್
    ಬೊಗಳೆ ಬ್ಯೂರೋದಲ್ಲಿ ರಗಳೆ ಬಾಯ್
    ಓದುಗರು ಬಿಡುವರು ಬಾಯಿ ಬಾಯ್
    ಪ್ರಕಾಶಕರು ಹೇಳುವರು ಕನ್ನಡಕೆ ಜಯ್

    ಪ್ರತ್ಯುತ್ತರಅಳಿಸಿ
  7. ಮಾವಿನರಸರೆ,

    ಅಂತರಂಗಿಗಳ ಸಲಹೆ ಸರಿಯಾಗಿಯೇ ಇದೆ.
    ಇದಕ್ಕಾಗಿ ಹಾಯ್-ಗೆ ಬಾಯ್ ಬಾಯ್ ಹಾಡಿದ್ದೇನೆ.

    ನೀವು ನೋಡಿದ್ರೆ ಕನ್ನಡದ ತೇರಿಗೆ ಹಾಯ್ ಹಾಯ್ ಹೇಳುತ್ತಿದ್ದೀರಿ.
    ನಿಮ್ಮ ಕಡ್ಲೆಕಾಯಿ ಚೆನ್ನಾಗಿದೆ.
    :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D