ಬೊಗಳೆ ರಗಳೆ

header ads

ವಿರೋಧ ಪಕ್ಷಗಳಿಗೆ ಎಣ್ಣೆ ಕುಡಿಸುವ ಚಾಣಾಕ್ಷ ಸರ್ಕಾರ

(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೂರು, ಜೂ.10- ವಾಹನಕ್ಕೆ ಹಾಕುವ "ಎಣ್ಣೆ"ಯ ದರ ಏರಿಕೆ ವಿರುದ್ಧ ದೇಶಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆಯಿಂದ ಸ್ವಲ್ಪವೂ ವಿಚಲಿತವಾಗದ ಕೇಂದ್ರದ Unprecedented Price Agenda ಸರಕಾರ, गरीबों को देश से हटावो ಎಂಬ ನಿಲುವಿಗೆ ಬದ್ಧವಾಗಿರುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಈ ಖಚಿತ ಭರವಸೆಯ ಹಿನ್ನೆಲೆಯನ್ನು ಕೆದಕಲು ಹೋದಾಗ ಹೊಸ ಹೊಸ ಅಸತ್ಯಗಳು ಗೋಚರಿಸತೊಡಗಿವೆ.

ಮೊದಲನೆ ಕಾರಣ, ಯುಪಿಎ ಸರಕಾರ "ಆಡಿದ್ದೇ ಆಟ, ಮಾಡಿದ್ದೇ ಮಾಟ" ಎಂಬ ಪರಮಾನಂದ ಸ್ಥಿತಿಯನ್ನು ಅನುಭವಿಸುತ್ತಿದೆ. ಅಂದರೆ ಸರಕಾರ ಸಮರ್ಪಕವಾಗಿ, ಜನಪರವಾಗಿ ಮುನ್ನಡೆಯಲು ಪ್ರತಿಪಕ್ಷದ ಅಗತ್ಯವಿದೆ. ಆದರೆ ಪ್ರತಿಪಕ್ಷಗಳೇ ಇಲ್ಲದಂತಹ ಪರಿಸ್ಥಿತಿ ಇದೆ ಎನ್ನುವುದೇ ಯುಪಿಎ ಭರವಸೆಯ ಮೇಲೆ ಭರವಸೆ ನೀಡಲು ಪ್ರಧಾನ ಕಾರಣ.

ಇದ್ದ ಪ್ರತಿಪಕ್ಷಕ್ಕೆ ಏನಾಗಿದೆ ಎಂಬ ವಿಷಯ ಕೆದಕಿದಾಗ, ಪ್ರತಿಪಕ್ಷಕ್ಕೂ ಜನಪರ ಹೋರಾಟ ಮಾಡಲು ಮನಸ್ಸಿದೆ. ಅದಕ್ಕಾಗಿ ರಥಯಾತ್ರೆ, ತೀರ್ಥಯಾತ್ರೆ ಇತ್ಯಾದಿಗಳನ್ನು ಕೈಗೊಳ್ಳುವ ಹಂತದಲ್ಲಿರುವಾಗ ರಥದ ಟಯರ್ ಆಗಾಗ್ಗೆ ಪಂಕ್ಚರ್ ಆಗುತ್ತದೆ. ಸರಕಾರದ ವಿರುದ್ಧ ಬ್ರಹ್ಮಾಸ್ತ್ರ ಇನ್ನೇನು ತೊಡಬೇಕು ಎಂಬ ಹಂತದಲ್ಲಿರುವಾಗ ಪಕ್ಷದ ಮನೆಯೊಡೆಯುತ್ತದೆ. ತೊಟ್ಟ ಬಾಣವ ಮತ್ತೆ ತೊಡದಿರು ಅಂತ ಪ್ರತಿಪಕ್ಷಗಳು ಯಾರಿಗೋ ಮಾತುಕೊಟ್ಟಿರುವುದರಿಂದ ಅಲ್ಲಿಗೇ ಪ್ರತಿಭಟನೆಯ ಬಾಂಬ್ ಠುಸ್sssssssssss ಆಗುತ್ತಿದೆ. ಆದ ಕಾರಣದಿಂದ ವಿರೋಧ ಪಕ್ಷಗಳ ವಿರೋಧವೇ ಇಲ್ಲ !

ಇನ್ನು ಸರಕಾರದೊಳಗೇ "ಉಭಯವಾಸಿ"ಯಂತಿರುವ ವಿರೋಧಪಕ್ಷಗಳ ವಿಷಯ. ಹುಟ್ಟಿದಾರಭ್ಯ ಕಾಂಗ್ರೆಸ್ ನೀತಿಗಳನ್ನು ಟೀಕಿಸುತ್ತಲೇ ಬಂದಿರುವ ಎಡಚ ಪಕ್ಷಗಳು, ಬಲ ಕೈಗಳಿಂದ ಸರಕಾರವನ್ನು ಎತ್ತಿ ಹಿಡಿಯುತ್ತಾ ಎಡ ಕೈಗಳಿಂದ ಸರಕಾರವನ್ನು ಆಟವಾಡಿಸುತ್ತಾ ಸ್ವಲ್ಪಮಟ್ಟಿಗೆ ಪ್ರತಿಪಕ್ಷಗಳ ಸ್ಥಾನ ತುಂಬಲು ಪ್ರಯತ್ನಿಸುತ್ತಿವೆ.

ಆದರೆ ಈ ಎಡಚಪಕ್ಷಗಳದು ವಿರೋಧ ಅತಿರೇಕಕ್ಕೇರಿದರೆ ಎರಡು ಉಪಾಯಗಳನ್ನು ಕೇಂದ್ರ ಕಂಡುಕೊಂಡಿದೆ.

ಒಂದು: ಕಮ್ಯೂನಿಸ್ಟರು ಎಲ್ಲೆಲ್ಲಾ ಇದ್ದಾರೋ (ರಷ್ಯಾ, ಚೀನಾ, ನೇಪಾಳ) ಮತ್ತಿತರ ಕಡೆಗಳಲ್ಲಿ ಅವರ ಪರವಾಗಿ ಒಂದೆರಡು ಅಣಿಮುತ್ತುಗಳನ್ನು ಉದುರಿಸಿದರೆ ಅವುಗಳನ್ನು ಹೆಕ್ಕಿಕೊಂಡು ಎಡಚರು ಆಟವಾಡುತ್ತಾ ಸುಮ್ಮನಿರುತ್ತಾರೆ. ಕೆಲವರಿಗೆ ಈ ಅಣಿಮುತ್ತುಗಳು ಸಾಲದು ಅಂತ ಗೊತ್ತಾದರೆ, ಮತ್ತು ವಿರೋಧ ಹೆಚ್ಚಾಗುತ್ತದೆ ಎಂದು ಗೊತ್ತಾದ ಎರಡನೆ ಉಪಾಯ: ತಕ್ಷಣ ಪೆಟ್ರೋಲ್ ಬೆಲೆಯನ್ನು 10-20 ಪೈಸೆ ಇಳಿಸಿ ಕೈತೊಳೆದುಕೊಳ್ಳುವುದು. 20 ಪೈಸೆ ಇಳಿಸಿದರೂ ಪೆಟ್ರೋಲ್ ಮಾರಾಟ ಕಂಪನಿಗಳು ಟ್ಯಾಕ್ಸ್-ಸುಡುಗಾಡು ಅಂತ ಅದರಲ್ಲೂ ಮುರಿದುಕೊಂಡು 10 ಪೈಸೆ ಮಾತ್ರ ಇಳಿಸುತ್ತವೆ.

ಅಲ್ಲಿಗೆ ಸರಕಾರಕ್ಕೆ ಪೆಟ್ರೋಲ್ ದರ ಏರಿಸಿದ ಖುಷಿ, ವಿರೋಧ ಪಕ್ಷಗಳಿಗೆ ತಮ್ಮ ಪ್ರತಿಭಟನೆ ಫಲ ನೀಡಿದ ಖುಷಿ!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಸದ್ಯ ವಾಹನಕ್ಕೆ ಹಾಕುವ ಎಣ್ಣೆಯ ಬೆಲೆ ತಾನೆ ಜಾಸ್ತಿ ಆಗಿರೋದು? ನಾನಿನ್ಯಾವುದೋ ಎಣ್ಣೆ ಅಂತ ಹೆದರಿದ್ದೆ. ಎಡಚರು ಮಾಡೋದೆಲ್ಲಾ ಎಡಗೈ ಕೆಲಸಗಳೇ ಅಂತ ಈಗಲಾದರೂ ಗೊತ್ತಾಯ್ತಲ್ಲ. ಇಷ್ಟೆಲ್ಲಾ ಬರೆದವರು ಸರಕಾರಕ್ಕೆ ಒಂದು ಐಡಿಯಾ ಕೊಡಕೂಡದೇ? ೧೦ ರೂಪಾಯಿ ಏರಿಸಿ ೫ ರೂಪಾಯಿ ಇಳಿಸಿದರೆ मैं भी खुश वह भी खुश

    ಅಂದ ಹಾಗೆ ಈಗೆ ಲಾರ್ಜಣ್ಣನಿಂದ ಏನೂ ತೊಂದರೆ ಇಲ್ವಾ? ಹಾಗೇನಾದರೂ ಇದ್ದರೆ ನನ್ನ ಹೆಸರು ಹೇಳಿ ಸಾಕು, ಬಾಲ ಮುದುರಿಕೊಂಡು ಓಡಿ ಹೋಗ್ತಾನೆ.

    ಪ್ರತ್ಯುತ್ತರಅಳಿಸಿ
  2. ಅನ್ವೇಷಿಗಳೇ,

    ನೀರು ಅಥವಾ ಮರಳಿನಿಂದ 'ಎಣ್ಣೆ' ತೆಗೆಯುವ ಉಪಾಯದ ಬಗ್ಗೆ ಹುಡುಕಿ ಬರೆಯುತ್ತೀರೆಂದರೆ ಬರೇ ಐದ್ ಹತ್ತು ಪೈಸೆ ಏರಿಸಿ ಇಳಿಸುವ ಲೆಕ್ಕದಲ್ಲೇ ಇದ್ದೀರಲ್ಲಾ?!

    ಪ್ರತ್ಯುತ್ತರಅಳಿಸಿ
  3. ಅಸತ್ಯಿಗಳೇ,

    ಈ ವರದಿಯಲ್ಲಿ ಇಷ್ಟೆಲ್ಲ ನಿಜ ಹೇಳಿಬಿಟ್ಟರೆ ಹೆಂಗೆ ?
    ನಿಮ್ಮ ಹೆಸರಿಗೆ ಬೆಲೆ ಬೇಡವೇ?

    ಇರಲಿ..ಈ ಪೆಟ್ರೋಲ್ ಬೆಲೆ ಹೆಚ್ಚಳ ಪರಿಸರಹಾನಿ ತಪ್ಪಿಸಲು ಮಾಡಿದ್ದು ಅಂತಾ ಗುಮಾನಿ.

    ಇನ್ನೊಂದು ಮೂಲದ ಪ್ರಕಾರ, ಈ ಪೆಟ್ರೋಲ್ ಯಾವಾಗ ಕೈಗೆ ಎಟುಕಲಾರದ ಸ್ಥಿತಿ ತಲುಪಿದಕೂಡಲೆ ಸರಕಾರದವ್ರು ಅಲ್ಲಿಯೂ ಮೀಸಲಾತಿ ತರುವ ಯೋಜನೆ ಇದೆಯಂತೆ.ಪೆಟ್ರೋಲ್ ಹಾಕಿಸಿಕೊಳ್ಳುವಾಗ ನಿಮ್ಮ ಜಾತಿ-ಪಂಗಡ ಅನುಗುಣವಾಗಿ ಪೆಟ್ರೋಲ್ ಹಾಕುತಾರಂತೆ..

    ಪ್ರತ್ಯುತ್ತರಅಳಿಸಿ
  4. ಮಾವಿನಯನಸ ಅವರೆ,
    ನಿಮ್ಮ ಎಣ್ಣೆ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು.

    ಮತ್ತೆ ನಿಮ್ಮ ಐಡಿಯಾ ದುಬಾರಿಯಾಯಿತು. ಅದ್ಕೆ 10 ಪೈಸೆ ಇಳಿಸುವ ಬಗ್ಗೆ ಯೋಚನೆ ಮಾಡಲಾಗುತ್ತೆ ಅಂತ ಮನಮೋಹಕರು ಪತ್ರ ಬರೆದಿದ್ದಾರೆ.

    ಲಾರ್ಜ್ ಬುಷ್ ಈಗ ಅಸತ್ಯಾನ್ವೇಷಿ ಹೆಸ್ರು ಕೇಳಿದ್ರೆ ಓಡಿ ಹೋಗೋ ಥರಾ ಮಾಡಿಟ್ಟು ಬಂದಿದ್ದೇವೆ.

    ಪ್ರತ್ಯುತ್ತರಅಳಿಸಿ
  5. ಅಂತರಂಗಿಗಳೆ,
    ಭಾರತದ ಜನಾ ಈಗ 5, 10 ಪೈಸೆ ಎಲ್ಲವನ್ನೂ ಮರೆಯತೊಡಗಿದ್ದಾರೆ. ಅದಕ್ಕಾಗಿ, ಜನರೇ ಅದನ್ನು ಕಸದ ಡಬ್ಬಿಗೆ ಹಾಕುವ ಮೊದಲು ಜನಮಾನಸದಲ್ಲಿ ಸವಿನೆನಪಾಗಿಯೇ ಉಳಿದಿರಲಿ ಅಂತ ಸರಕಾರದ ಉದ್ದೇಶ.

    ಪ್ರತ್ಯುತ್ತರಅಳಿಸಿ
  6. ಪರಿಸರ ಹಾನಿ ತಡೆ ಕಾರ್ಯಕ್ರವಾಗಿರಲೂ ಬಹುದು ಶಿವ್ ಅವರೆ,
    ಯಾಕಂದ್ರೆ ಮಲ್ಟಿ ನ್ಯಾಶನಲ್ ಕಂಪನಿಗಳು ಭಾರತದ ವಿವಿಧೆಡೆ ಪರಿಸರ ವಿನಾಶಕ ಯೋಜನೆಗಳನ್ನೆಲ್ಲಾ ಹಾಕಲು ಕೇಂದ್ರದಲ್ಲಿರುವ ಸರಕಾರಗಳೇ ಹೊಣೆಯಲ್ಲವೆ? ಅದಕ್ಕಾಗಿ
    ಪಾಪ ಪರಿಹಾರಾರ್ಥಂ....

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D