ಬೊಗಳೆ ರಗಳೆ

header ads

ಬಿಟ್ಟ ಕಾಯಿಯೂ, ಬಿಟ್ಟ ಬೆಳ್ಳುಳ್ಳಿಯೂ!

(ಬೊಗಳೂರು ಅಡುಗೆ ಬ್ಯುರೋದಿಂದ)
ಬೊಗಳೂರು, ಜೂ.2- ಹೆಂಡ್ತಿ ತವರು ಮನೆಗೆ ಹೋಗಿರುವ ಪುರುಷರ ಸಂಘದ ಒತ್ತಾಸೆ ಮೇರೆಗೆ ಅಡುಗೆ ಅಂಕಣವೊಂದನ್ನು ಆರಂಭಿಸಲು ಹೊರಟಾಗ ಎದುರಾದ ತೊಂದರೆ ತಾಪತ್ರಯಗಳು ಮೂರಾರು.

ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಸಬ್ಬಸಿಗೆ ಸೊಪ್ಪಿನ ವಿಚಿತ್ರಾನ್ನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಮಾಡಲು ಹೋದ ಬೊಗಳೆ ಪಂಡಿತರಿಗೆ ನೂರಾರು ಸಂಕಟಗಳು ಎದುರಾದ ಬಗೆಯಿದು.

ಮೊತ್ತ ಮೊದಲು, ಈ ಅಡುಗೆ ಮಾಡಬೇಕಿದ್ದರೆ ಹೆಂಡ್ತಿ ತವರು ಮನೆಗೆ ಹೋಗಿರಲಿ ಮತ್ತು ಬ್ರಹ್ಮಚಾರಿಯಾಗಿದ್ದರೆ, ಒಬ್ಬಂಟಿ ಜೀವನ ನಡೆಸುತ್ತಿದ್ದರೆ ಇನ್ನೂ ಒಳಿತು ಎಂಬ ಸಲಹೆಯಿಂದಲೇ ಅಡುಗೆ ಪಾಕ ಶುರು.

ಅದೇ ಪ್ರಕಾರ ಹೆಂಡತಿಯನ್ನು ತವರು ಮನೆಗೆ ತಳ್ಳಿದ ಬೊಗಳೆ ಪಂಡಿತರು, ದಿನಾ ಮಾಡಿ ಮಾಡಿ ತಿಂದು ಸುಸ್ತಾದ ಚಿತ್ರಾನ್ನವನ್ನೇ ವಿಚಿತ್ರಾನ್ನವಾಗಿಸಿ ಹೊಸರುಚಿ ಉಣಬಡಿಸುವವರನ್ನು ನೆನಪಿಸಿಕೊಂಡು ಮುಂದುವರಿದಾಗ ಮೊದಲು ಎದುರಾದದ್ದು ಬೆಳ್ಳುಳ್ಳಿ ಎಂಬ ಕಂಟೆಂಟ್ ಸಂಗ್ರಹಿಸುವ ಸಮಸ್ಯೆ.

ಬೇಕಾಗುವ ಸಾಮಾನುಗಳು ಎಂಬ ಪಟ್ಟಿಯಲ್ಲಿ ದಾಖಲಿಸಿದಂತೆ "1 ಬೆಳ್ಳುಳ್ಳಿ (ನಿಮಗೆ ಬಿಟ್ಟದ್ದು)" ಎಂಬುದು ಗೊಂದಲಕ್ಕೆ ಕಾರಣ. ಇದುವರೆಗೆ ಕೇಳಿರುವ ಪ್ರಕಾರ ಹಲಸಿನ ಮರದಲ್ಲಿ ಕಾಯಿ ಬಿಡುತ್ತದೆ, ಸೌತೆ ಬಳ್ಳಿಯಲ್ಲಿ ಸೌತೆಕಾಯಿ ಬಿಡುತ್ತದೆ, ತೆಂಗಿನ ಮರದಲ್ಲಿ ಕಾಯಿ ಬಿಡುತ್ತದೆ. ಆದರೆ ನಮ್ಮಲ್ಲಿ ಬಿಟ್ಟ ಬೆಳ್ಳುಳ್ಳಿಯೇ ಆಗಬೇಕೆಂಬ ಪ್ರಸ್ತಾಪ ಮಾತ್ರ ತಲೆ ಕೆರೆದುಕೊಳ್ಳುವಂತೆ ಮಾಡಿತು.

ಸರಿ ನಿಮಗೆ ಬಿಟ್ಟ ಬೆಳ್ಳುಳ್ಳಿಯನ್ನೇ ಬಿಟ್ಬಿಡೋಣ ಎಂದುಕೊಂಡು ಮುಂದುವರಿದರೆ, ಅನ್ನವನ್ನು ಉದುರಿಸಬೇಕು ಎಂದು ಸೂಚಿಸಲಾಗಿದೆ! ಆದರೆ ಅಕ್ಕಿಯನ್ನು ನೀರಿಗೆ ಹಾಕಿ ಬೇಯಿಸಬೇಕು ಎಂಬ ಸೂಚನೆಯೂ ಇರಲಿಲ್ಲ. ಅಕ್ಕಿ ನೀರಿಗೆ ಹಾಕಿದ ತಕ್ಷಣ ಅದು ಉದುರುವುದಾದರೂ ಹೇಗೆ?
 
ಸ್ವರ್ಗಕ್ಕೆ ಕಿಚ್ಚು: ಅದೆಲ್ಲಾ ಇರಲಿ, ಮಾನವರು ಬೆಳಗ್ಗೆ ತಲೆಗೂ ರಾತ್ರಿಯಾಗುತ್ತಿರುವಂತೆಯೇ ಹೊಟ್ಟೆಗೂ ಎಣ್ಣೆ ಹಾಕುವುದನ್ನು ಕೇಳಿರುವ ಬೊಗಳೆ ಪಂಡಿತರಿಗೆ ಬಾಣಲೆಗೆ ಎಣ್ಣೆ ಹಾಕಬೇಕು ಎಂಬ ನಿರ್ದೇಶನ ಮಾತ್ರ ಹೊಚ್ಚ ಹೊಸತು. ಇದು ಹೊಸ ರುಚಿಯೇ ಇರಬೇಕು ಎಂದು ಎಲ್ಲವನ್ನೂ ಬೆರೆಸಿ ತಿನ್ನಲೆಂದು ಕುಳಿತಾಗ ರುಚಿ ನೋಡಿದ ತಕ್ಷಣ ಎದ್ದೋಡುವಷ್ಟು ರೋಷ ಬಂದಿತ್ತು. ಹಸಿ ಹಸಿ ವಾಸನೆ, ಬೇಯದ ಅಕ್ಕಿ, ಸೊಪ್ಪು. ಇದರ ಹಿಂದಿನ ಅಸತ್ಯವೇನು ಅಂತ ಶೋಧಿಸಿದಾಗ ಗೊತ್ತಾದದ್ದು, ಎಲ್ಲೂ ಕೂಡ ಅಡುಗೆ ಮಾಡುವಾಗ ಒಲೆ ಹಚ್ಚಿ ಅಥವಾ ಉರಿಯುತ್ತಿರುವ ಒಲೆಯ ಮೇಲಿಡಿ ಅಂತ ಸೂಚನೆಯನ್ನೇ ನೀಡಲಾಗಿಲ್ಲ!

ಈ ನಳ ಪಾಕದ ಸೂಚನೆಯ ಕೊನೆಯಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸೂಚಿಸಲಾಗಿದೆ, ಆದರೆ ಒಲೆಗೆ ಕಿಚ್ಚು ಹಚ್ಚಲು ಹೇಳಿಕೊಟ್ಟಿರಲೇ ಇಲ್ಲ! ಈ ಬಗ್ಗೆ ಮಾಹಿತಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

16 ಕಾಮೆಂಟ್‌ಗಳು

  1. ನಿಮ್ಮ ಅಡುಗೆಮನೆಯ ಆಟ ನಗುತರಿಸುತ್ತಿದೆ. ಅಲ್ಲ! ಅಡುಗೆ ಮಾಡುವೆ ಎಂದು ಪತ್ನಿಯನ್ನು ಹೊರತಳ್ಳಿದ ಮೇಲೆ, ಮನೆಯಲ್ಲೇ ಏಕೆ ಕುಳಿತುಕೊಳ್ಳಬೇಕು. ಇದೊಂದು ಅವಕಾಶ ಸಿಕ್ಕಿದಾಗ ಹೊಟೆಲ್‍ಗೆ ಹೋಗಿ ತಿನ್ನಬಾರದೇ. ಇರಲಿ! ನಿಮಗೆ ಅಡುಗೆ ಮಾಡುವ ಅವಕಾಶ ಬೇಕಲ್ಲವೇ. ನಮ್ಮ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಒಮ್ಮೆ ನಿಮ್ಮನ್ನು ಅಡುಗೆ ಮಾಡಲು ಕರೆಸುವೆ. ನಾನು ಮಾತ್ರ ಊಟ ಮಾಡೋಲ್ಲ.

    ನನಗನ್ನಿಸಿದ ಹಾಗೆ ಇದು ಚಿತ್ರಾನ್ನವೂ ಅಲ್ಲ ವಿಚಿತ್ರಾನ್ನವಂತೂ ಮೊದಲೇ ಅಲ್ಲ. ತರಲೆ ಅನ್ನ. ಜೋಶಿಗಳು ನೋಡಿದರೆ, ನಿಮಗೆ ಪೂಜೆ ಗ್ಯಾರಂಟಿ. ಪ್ರಸಾದ ನಮಗೆ.

    ಈಗೇನು ನಿಮಗೆ ಹೊಟ್ಟೆ ನೋವು ಕಡಿಮೆ ಆಯ್ತೋ ಇಲ್ವೋ? ಜೋಶಿಗಳ ಮನೆಗೆ ಊಟಕ್ಕೆ ಹೋಗ್ಬೇಕು. ರಸಾಯನದೊಂದಿಗೆ ಚಪಾತಿ, ಪಲಾವ್, ಉಪ್ಪೇರಿ, ಜಾಮೂನ್ ಮಾಡಿ ನಮಗಾಗಿ ಕಾಯ್ತಿದ್ದಾರಂತೆ. ಅಡುಗೆ ಹಾಳಾಗಬಾರದಲ್ಲ, ಅದಕ್ಕೇ ನಾವು ಹೋಗಿಬರೋಣ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಮನೆಗೆ ಬರುವಾಗಲಂತೂ "ಹೊಸರುಚಿ-ಪ್ರೂಫ್"(water-proof ಇದ್ಹಾಗೆ) ಗುಳಿಗೆ ತಿಂದ್ಕೊಂಡು ಬರೋದು ಗ್ಯಾರಂಟಿ.

    ಆಮೇಲೆ ಜೋಶಿಯವರ ಮನೆಯ ಮೆನು ಹೇಳಿ ಹೊಟ್ಟೆ ಚುರುಗುಟ್ತೈತಿ...! ಆದ್ರೆ ಅಡುಗೆ ಹಾಳಾದ್ರೆ ತಿನ್ನೋದೆಂತು?

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಜೂನ್ 02, 2006 3:15 PM

    ರಸಾಯನ ಮಾಡಲು ಮಾವಿನಹಣ್ಣುಗಳನ್ನು 'ಮಾವಿನ'ಯನಸ ಅವರು ಮಹಾರಾಷ್ಟ್ರ ಮಾವಿನತೋಪುಗಳಿಂದಲೇ ಕಳಿಸುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ, ಅದಕ್ಕಾಗಿ ಕಾಯಲಾಗುತ್ತಿದೆ.
    ಅವು ಕಸ್ಟಮ್ಸ್ ನ ಕಷ್ಟಮ್ ಗಳನ್ನೆಲ್ಲ ದಾಟಿ ಬರುವ ಹೊತ್ತಿಗೆ ಚಪಾತಿಗೆ ಬೂಸ್ಟ್ ಹಿಡಿದು, ನೀವು "ಬೂಸ್ಟ್ ಈಸ ದ ಸೀಕ್ರೆಟ್ ಅಫ್ ಅವರ್ ಎನ(ಲ)ರ್ಜಿ!" ಎಂದು 'ಅನ್ನ'ಬೇಕಾಗುತ್ತದೆ! ಇದಿಷ್ಟು ಚಪಾತಿ-ರಸಾಯನಗಳ ಬಗ್ಗೆ.

    ಉಪ್ಪೇರಿ? ಅದರಲ್ಲಿ ಇರೋದು ಬರೀ ಉಪ್ಪೇ ರಿ! ಬೇರೆ ಏನೂ ಇಲ್ಲಾರಿ!

    'ಜಾಮೂನ್' ಅಮಾವಾಸ್ಯೆಯಂದು ಮಾತ್ರ ಮಾಡಬಹುದು, ಏಕೆಂದರೆ ಮಿಕ್ಕ ದಿನಗಳಲ್ಲಿ 'moon'ಗೆ ಎಷ್ಟು ಜಾ ಜಾ ಎಂದು ದಬಾಯಿಸಿದರೂ ಎಲ್ಲೋ ಇಣುಕಿನೋಡುತ್ತಿರುತ್ತಾನೆ.

    ಇನ್ನು, ಪಲಾವ್ - ಇದನ್ನು ಮಾಡಿ ನಿಮಗೆ ಬುಲಾವ್ ಕೊಡುವ ಕ್ರಮವಿಲ್ಲ, ಅಕಸ್ಮಾತ್ ಬಂದು ವಕ್ಕರಿಸಿದರೂ 'ಚಲೇ ಜಾವ್' ಎಂದು ಹೊರದಬ್ಬುವುದು!

    - ಪರಿಸ್ಥಿತಿ ಹೀಗಿರುವಾಗ ಜೋಶಿಗಳ ಮನೆಯ ಮೆನು ಕೇಳಿ ಇನ್ನೂ 'ಹೊಟ್ಟೆ ಚುರುಗುಟ್ತೈತಿ...' ಅಂತಿದ್ದರೆ 'ರಾಗಿಮುದ್ದೆ ಉಣ್ಣೋ ಹೊತ್ತು...' ಎಂದು ಕವಿರತ್ನಕಾಳಿದಾಸ(ಪೂರ್ವಾಶ್ರಮ)ನಂತೆ ನಕ್ಕುನಲಿಯಿರಿ.

    ಪ್ರತ್ಯುತ್ತರಅಳಿಸಿ
  4. ರಾಗಿ ಮುದ್ದೆ ಉಂಡ ಬಳಿಕ ರೈತರ ಮಕ್ಕಳು ಪ್ರಧಾನಿಯಾಗ್ತಾರೆ, ಸಭೆ ಸಮಾರಂಭಗಳಲ್ಲಿ ನಿದಿರಾದೇವಿಯನ್ನು ಸ್ಮರಿಸಿಕೊಂಡು ದೇಶದ ಒಳಿತಿಗಾಗಿ ಗೂಢಾಲೋಚನೆಯಲ್ಲಿ ಮುಳುಗಿರುತ್ತಾರೆ.

    ಆಮೇಲೆ ಕವಿ ರತ್ನರ ಖಾಲಿ ದೋಸೆಯನ್ನೂ ನಿಮ್ಮ ಮೆನುವಿನಲ್ಲಿ ಸೇರಿಸಿಬಿಡಿ. ಇವನ್ನೆಲ್ಲಾ ತಿನ್ನಲು ಸಿದ್ಧರಾಗಿರುವ ತವಿಶ್ರೀ ಅವರನ್ನು ನೋಡಿ ನನಗೆ ಹೊಟ್ಟೆ ಚುರುಗುಟ್ತೈತೆ ಜೋಷಿಯವರೆ.

    ನಿಮ್ಮ ಲಿಂಕ್ ಕ್ಲಿಕ್ ಮಾಡಿದ್ರೆ ಗೂಗ್ಲಿ ಬೌಲಿಂಗ್ ನಂತೆ ಗೂಗಲ್ ತಾಣಕ್ಕೆ ನೆಗೆದು ಬೀಳುವುದೇಕೆ?

    ಪ್ರತ್ಯುತ್ತರಅಳಿಸಿ
  5. ಅನಾಮಧೇಯಜೂನ್ 02, 2006 3:46 PM

    ಗೂಗಲ್ ಏಕೆಂದರೆ,

    ಗೂಗ್ಲಿಸದೆ ಬಲ್ಲವನು ರೂಢಿಯೊಳಗುತ್ತಮನು
    ಗೂಗ್ಲಿಸಿ ಅರಿತವನು ಮಧ್ಯಮನು ಅಧಮ ತಾ
    ಗೂಗ್ಲಿಸಿಯೂ ಗೊತ್ತಿಲ್ಲದವ ಅಲ್ಪಜ್ಞ ||

    ಅ(ಲ್ಪ)ಜ್ಞಾನಿ ಗೂಬೆಗಳು ಜದ ಅಗವನ್ನು ಅರಿಯುವುದು ಗೂಗಲ ದಿಂದಲೇ!

    ಪ್ರತ್ಯುತ್ತರಅಳಿಸಿ
  6. ಅನಾಮಧೇಯಜೂನ್ 02, 2006 6:42 PM

    ಬಾಣಲಿಗೆ ಎಣ್ಣೆನಾ? ಹಹಹ!!! ನಿಮ್ಮ ಕೀ ಬೋರ್ಡೂ ಎಣ್ಣೆ ಕುಡಿಯತ್ತಾ?

    ಪ್ರತ್ಯುತ್ತರಅಳಿಸಿ
  7. ಜೋಷಿಯವರೆ,
    ನಾನಿನ್ನು ಜಗದಗಲ ತಿಳಿಯಲು ಗೂಗಲ ತಪ್ಪಿಯೂ ಬಳಸುವುದಿಲ್ಲ.

    ಪ್ರತ್ಯುತ್ತರಅಳಿಸಿ
  8. sritri ಅವರೆ,
    ಮೊನ್ನೆ ಕೀಬೋರ್ಡ್ ಕೊರ ಕೊರ ಸದ್ದು ಮಾಡಿ ಬೋರ್ ಹೊಡೆಸ್ತು ಅಂತ ಚೆನ್ನಾಗಿ ಎಣ್ಣೆ ಹಾಕಿಬಿಟ್ಟಿದ್ದೆ.
    ಆ ಕಾರಣಕ್ಕೆ ಕೀಬೋರ್ಡ್ ಇನ್ನೂ ಪೂರ್ವಾವಸ್ಥೆಗೆ ಮರಳಿಲ್ಲ. ಹ್ಯಾಂಗೋವರ್ ನಲ್ಲಿದೆ.

    ಪ್ರತ್ಯುತ್ತರಅಳಿಸಿ
  9. ಅಯ್ಯೋ ಜೋಶಿಗಳೇ, ನನ್ನಂತಹ ಗೂಗ್ಲು ಗೂಬೆಗಳು ಯಾಹೂ ಎಂದು ಕೂಗೋದನ್ನೇ ಮರೆತುಬಿಡ್ತಿದ್ದಾರೆ-(ವಿಷಾದ).

    ಅನ್ವೇಷಿಗಳೇ ಲಾವಣಿ ಆಡಲು ಹೋಗಿ ಮೈಕೈ ಸುಟ್ಟುಕೊಂಡು ಅಡುಗೆ ಮನೆಗೆ ತೂರಿಕೊಂಡಿರೋದು ನೋಡಿದರೆ ಏನೋ ಸಂಚು ಇದೆ ಎನಿಸುತ್ತದೆ.

    ಪ್ರತ್ಯುತ್ತರಅಳಿಸಿ
  10. ಸಾರಥಿಯವರೆ, ಅಡುಗೆ ಮನೆಯಲ್ಲಿ ಸೌದೆ ಉರಿಯದಿದ್ದರೂ ಏನೋ ಒಂಥರಾ ಬೆಚ್ಚಗಿನ ಅನುಭವ.
    ದಾವಣಿ-ಗೀವಣಿ ಅಂತ ಹೇಳಿ ಹೆದ್ರಿಸಬೇಡಿ....!

    ಪ್ರತ್ಯುತ್ತರಅಳಿಸಿ
  11. ಅಡುಗೆ ಮನೆ, ಬೆಚ್ಚಗೆ, ದಾವಣಿ - ಇದೇನಿದು - ನಿನ್ನೆ ಇಲ್ಲಿಗೆ ಬಂದಿದ್ದ ಮೇಡಂ ಗಾಳಿ ಬೀಸ್ತಿದ್ಯಾ? (ಸುಮ್ಮನೆ ಕಾಲೆಳೆಯಿಂಗು) - ಮೇಡಂಗೆ ಈ ವಿಷಯ ಗೊತ್ತಾದ್ರೆ ನನ್ನ ಮೇಲೆ ಕೇಸ್ ಹಾಕಬಹುದು.

    ಪ್ರತ್ಯುತ್ತರಅಳಿಸಿ
  12. ಬರೇ ಗಾಳಿಯಲ್ಲ, ಬಿರುಗಾಳಿ ಸ್ವಾಮೀ....
    ಕೇಸು ಹಾಕುವ ಖುಷಿಯಲ್ಲಿ ನೀವ್ಯಾವಾಗ ತಲೆಮರೆಸಿಕೊಳ್ತೀರಿ?
    ನಿಮ್ಮ ಈ ಲೇಖನ ಕರೆಂಟಿಲ್ಲದಿದ್ದರೂ ನೀರಿನಿಂದ ಕರೆಂಟು ಹೊಡೆಸಿಕೊಂಡಂತೆ ಅನುಭವವಾಯಿತು!

    ಪ್ರತ್ಯುತ್ತರಅಳಿಸಿ
  13. ಅನಾಮಧೇಯಜೂನ್ 03, 2006 11:20 AM

    ಜೋಶಿಯವರೆ,

    ನೀವು ಅನ್ವೇಷಿಗಳಿಗೂ ಮಾವಿನ... ಅವರಿಗೂ ರಾಗಿಮುದ್ದೆ ತಿನ್ನಿ ಅಂದದ್ದಕ್ಕೂ, ಶ್ರೀತ್ರೀ ಅವರು ಸ್ವಲ್ಪ ದಿನಗಳ ಹಿಂದೆ 'ಕರ್ನಾಟಕದ ಜೈಲುಗಳಲ್ಲಿ ರಾಗಿಮುದ್ದೆ ಕೊಡ್ತಾರಂತೆ' ಅಂತ ಹೇಳಿದ್ದಕ್ಕೂ ಏನಾದ್ರೂ ಲಿಂಕ್ ಇದೆಯಾ ಅಂತ ಅನುಮಾನ.

    ಆಮೇಲೆ ಯಾವುದಿದು ಹೊಸಾ ಗಾಳಿ? ನಮ್ಗೆಲ್ಲಾ ಇಷ್ಟು ದಿನ 'ಸುಂಟರಗಾಳಿ' ಮಾತ್ರ ಗೊತ್ತಿತ್ತು..

    ಪ್ರತ್ಯುತ್ತರಅಳಿಸಿ
  14. ಇಲ್ಲಾ.... ಇಲ್ಲಾ.... ಜೈಲಿಗೆ ಹೋಗಿಲ್ಲಾ... ದಯವಿಟ್ಟು ನಂಬಿ... ಬಿಡಿ...!

    ಇದು ಸುಂಟರಗಾಳಿಯಲ್ಲ, ತುಂಟರಗಾಳಿ!

    ಪ್ರತ್ಯುತ್ತರಅಳಿಸಿ
  15. ಬಿರುಗಾಳಿ ಬಿರುಗಾಳಿ
    ಬಿರು ಬಿರು ಬಿರು ಬಿರು
    ಬಿರುಗಾಳಿ ಬಿರುಗಾಳಿ
    (ಕೃಪೆ: ಉಪೇಂದ್ರ-ಬಿಡಬ್ಯಾಡ)

    ಅನ್ವೇಷ್ ಮಹಾರಾಜ್, ಲಾವಣ್ಯವತಿಯ ಬಿರುಗಾಳಿ ಬೀಸುತ್ತಿದೆಯೇನ್ರೀ? ಒಂದು ಪೆಗ್ ಹಾಕಿ, ಇಲ್ಲಾಂದ್ರೆ ಒಂದು ಬಾಟ್ಲಿ ಬೀರ್ ಹಾಕಿ ಸಾಕು ಬಿರುಗಾಳಿ ಇಲ್ದಿದ್ರೂ ಗಾಳೀಲಿ ತೇಲಾಡ್ತೀರಾ.

    ಪ್ರತ್ಯುತ್ತರಅಳಿಸಿ
  16. ವಿಶ್ವಪುಟದಲ್ಲಿ ಒಂದು ಪಿಗ್ಗಿನ ಕಥೆ ನನಗೆ ಪೆಗ್ಗಿನ ಕಥೆ ನೆನಪಿಸಿದ್ದರಿಂದ ಪೆಗ್ ಹಾಕಲು ಖಂಡಿತಾ ಹೋಗಲಾರೆ.
    ಅಲ್ಲೊಂದು ಸೂಚನೆಯಿದೆ. ಹಂದಿ ತಿಂದ್ರೆ ಚುರುಕಾಗ್ತಾರಂತೆ. ಬೇಕಿದ್ದರೆ ಟ್ರೈ ಮಾಡಿ ನೋಡಿ! ಇನ್ನಷ್ಟು ಹಾರಾಡ್ತೀರಿ ಸಾರಥಿಯವರೆ!

    ಬೀರು ಗಾಳಿಯಂತೂ ಬೇಡ್ವೇ ಬೇಡ. ಅದನ್ನು ನಾನು ಕುಡಿಯಲು ಆರಂಭಿಸಿದ್ರೆ, ಬೇರೆಯವರಾರೂ ಕುಡಿಯೋದು ಬೇಡಾ ಅಂತ ನಿಮ್ಮ ಅನಿಸಿಕೆಯೇ? ಪಾಪ, ಬೇರೆಯೋರಿಗೂ ಒಂದಿಷ್ಟು ಬೀರು ಇರಲಿ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D