ಬೊಗಳೆ ರಗಳೆ

header ads

ಏಡ್ಸ್ "ವಿಕಾಸ" ವಾದ: ಮಂಗನಿಂದ ಮಾನವನಿಗೆ!

(ಬೊಗಳೂರು ಆರೋಗ್ಯ ಬ್ಯುರೋದಿಂದ)
ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರೋಗ ಕೂಡ ಡಾರ್ವಿನ್ನನ ವಿಕಾಸವಾದದಿಂದ ಪ್ರೇರಣೆಗೊಂಡು ಮಾನವನಿಗೆ ತಗುಲಿದೆ ಎಂಬ ಅಂಶ ಇಲ್ಲಿ ಬಯಲಾಗಿದೆ.

ಈ ವರ್ಷ ಎಚ್ಐವಿ ವೈರಸ್ ಪತ್ತೆಯಾದ ಬೆಳ್ಳಿ ಹಬ್ಬ (25ನೇ ವರ್ಷ) ಆಚರಿಸಲಾಗುತ್ತಿದೆ. ಇಂಥ ಶುಭ ಸಂದರ್ಭದಲ್ಲಿ ಚಿಂಪಾಂಜಿಯಲ್ಲೂ ಏಡ್ಸ್ ವೈರಸ್‌ಗಳು ಪತ್ತೆಯಾಗಿರುವುದು ಹೊಸ ಸಾಧ್ಯತೆಗೆ ನಾಂದಿ ಹಾಡಿದೆ.

ಮಂಗನಿಂದ ಮಾನವ ಎಂಬ ಡಾರ್ವಿನ್ನನ ವಿಕಾಸ ಸಿದ್ಧಾಂತವು ಕೇವಲ 25 ವರ್ಷಗಳ ಹಿಂದೆ ನಡೆದಿದ್ದೇ ಎಂಬ ಬಗ್ಗೆ ಇದೀಗ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.

ಹರಡಿದ್ದು ಹೇಗೆ?: ಅದಿರಲಿ, ಈ ಏಡ್ಸ್ ಎಂಬ ದಿವ್ಯೌಷಧಿಯು ಮಂಗನಿಂದ ಮಾನವನಿಗೆ ಹರಡಿದ್ದು ಹೇಗೆ ಎಂಬ ಅಂಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ವಿಜ್ಞಾನಿಗಳು, ವೈದ್ಯರ ಪ್ರಕಾರ ಈ ವೈರಸ್ ಕೇವಲ ತಟ್ಟಿದರೆ, ಮುಟ್ಟಿದರೆ ಬರುವುದಿಲ್ಲ. ಲೈಂಗಿಕ ಸಂಪರ್ಕ ಮತ್ತು ರಕ್ತದ ಸಂಪರ್ಕದಿಂದಲಷ್ಟೇ ಬರುತ್ತದೆ. ಇದೀಗ ಏಡ್ಸ್ ಹೇಗೆ ಮಂಗನಿಂದ ಮಾನವನಿಗೆ ಬಂತು ಎಂಬ ವಿಷಯವನ್ನು ಮರ್ಯಾದೆ ಕಾಪಾಡುವ ನಿಟ್ಟಿನಲ್ಲಿ ಗೌಪ್ಯವಾಗಿರಿಸಲಾಗಿದೆ ಎಂಬ ಮಾಹಿತಿ ಬೊಗಳೆ ರಗಳೆ ಬ್ಯುರೋಗೆ ಲಭಿಸಿದೆ. ಅದನ್ನು "ಸಂಬಂಧಿಕರ" ಗೌಪ್ಯತೆ ಕಾಪಿಡುವ ನಿಟ್ಟಿನಲ್ಲಿ ರಹಸ್ಯವಾಗಿರಿಸಲಾಗಿದೆ!

ಈ ಮಧ್ಯೆ, ಒಂದೆಡೆ ಚಿಂಪಾಂಜಿಗಳು ವೇಶ್ಯಾಗೃಹಕ್ಕೆ ಹೋಗುತ್ತಿದ್ದವೇ ಎಂಬ ಕುರಿತೂ ಶೋಧ ನಡೆಯುತ್ತಿದ್ದರೆ, ಇನ್ನೊಂದೆಡೆ, ಚಿಂಪಾಂಜಿಗಳಿಗೂ ಕಾಂಡೋಮ್ ವಿತರಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಏಡ್ಸ್ ಹರಡದಂತೆ ಮುಂಜಾಗ್ರತೆ ವಹಿಸಲು ಭಾರತ ಸರಕಾರದ ಮನವಿ ಮೇರೆಗೆ, ಕಾಡಿನಲ್ಲೂ ಕಾಂಡೋಮ್ ವೆಂಡಿಂಗ್ ಮೆಶಿನ್‌ಗಳನ್ನಿರಿಸಲು ಸಮಾಜಸೇವಾ ಸಂಸ್ಥೆಗಳು ಮುಂದೆ ಬಂದಿವೆ.

ಪರೀಕ್ಷೆ: ಇದೀಗ ಚಿಂಪಾಂಜಿಗಳಿಗೆ ಏಡ್ಸ್ ಬಂದಿದ್ದನ್ನು ದೃಢಪಡಿಸಿಕೊಳ್ಳಲು ವಿಜ್ಞಾನಿಗಳು ಸುಲಭ ಮಾರ್ಗವೊಂದನ್ನು ಪತ್ತೆ ಹಚ್ಚಿದ್ದಾರೆ. ರೋಗರಹಿತ ಮಾನವರನ್ನು ಕಾಡಿಗೆ ಕಳುಹಿಸುವುದು, ನಿರ್ದಿಷ್ಟ ಸಮಯದ ಬಳಿಕ ಅವರನ್ನು ಮರಳಿ ಕರೆಸಿ ರಕ್ತ ಪರೀಕ್ಷೆ ಮಾಡುವುದು ವಿಜ್ಞಾನಿಗಳು ಅನುಸರಿಸಿರುವ ವಿನೂತನ ವಿಧಾನ.
(ಸೂ: ಸುದ್ದಿಗೆ ಕತ್ತರಿ ಹಾಕಲಾಗಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

  1. ನಿಮ್ಮನ್ನೇ ನಂಬಿಕೊಂಡಿರುವ ಚಿಂಪಾಂಜಿಗೆ ರೋಗ ತಗುಲಿರುವುದನ್ನು ತಿಳಿದು ನನಗೆ ಬಹಳ ದು:ಖವಾಗುತ್ತಿದೆ. ಪಾಪದ ಪ್ರಾಣಿ ಅದಕ್ಕೂ ಹೀಗೆ ಮಾಡುವುದೇ? ಶಾಂತಂ ಪಾಪಂ.

    ವರದಿಯ ಪ್ರಕಾರ ನಾನು ಕಾಡಿಗೆ ಹೋಗಲು ಸಿದ್ಧನಿರುವೆ. ಮತ್ತೆ ಬರೋಲ್ಲ. ಅಲ್ಲಿಗೆ ಪ್ರತಿನಿತ್ಯ ನಿಮ್ಮ ಪತ್ರಿಕೆಯನ್ನು ರವಾನಿಸುವ ಸೌಲಭ್ಯ ಕಲ್ಪಿಸಿ.

    ನನಗೊಂದು ಸಣ್ಣ ಸಂದೇಹ. ಬೊಗಳೆ ರಗಳೆ ಪತ್ರಿಕೆಗೆ ಲಗ್ಗೆ ಹಾಕುತ್ತಿರುವವರಿಗೆಲ್ಲರಿಗೂ ಈ ರೋಗ ಬಂದಿರುವ ಸಾಧ್ಯತೆ ಇದೆಯೇ? ಈ ರೋಗ ಬಂದಿದೆ ಎಂದು ಹೇಗೆ ತಿಳಿದುಕೊಳ್ಳುವುದು? ಎಂದು ಉಚಿತ ಪರೀಕ್ಷೆಯನ್ನು ಅರೆಂಜ್ ಮಾಡುತ್ತಿದ್ದೀರಿ? ಎಲ್ಲ ಪ್ರಶ್ನೆಗಳಿಗೂ ಸಮಂಜಸ ಉತ್ತರ ಕೊಡತಕ್ಕದ್ದು. ಇಲ್ಲದಿದ್ದರೆ ಗೊತ್ತಲ್ಲ - ನಿಮ್ಮ ತಲೆ ...

    ಪ್ರತ್ಯುತ್ತರಅಳಿಸಿ
  2. ಇಲ್ಲ... ಇಲ್ಲ.... ನಾನೇನೂ ಮಾಡ್ಲಿಲ್ಲ...!

    ಅದಿರ್ಲಿ, ನೀವೇಕೆ ಕಾಡಿಗೆ ಹೋಗೋದು? ಹಳೆಯ ನೆನಪುಗಳು ಕಾಡುತ್ತಿವೆಯೇ? ಈಗ ಕಾಡು ಮತ್ತೆ ಬಾ ಅನ್ನುತ್ತಿದೆಯೇ?

    ಬೊಗಳೆ ರಗಳೆ ಪತ್ರಿಕೆ ಓದುಗರಿಗೆ ರಕ್ತ ಪರೀಕ್ಷೆ ಅಗತ್ಯವಿಲ್ಲ ಎಂದು ನಾನು ಶಿಫಾರಸು ಮಾಡುತ್ತೇನೆ. ಅದಕ್ಕೆ.... ಮತ್ತೇನಿಲ್ಲ.... ಹ್ಹಿ.. ಹ್ಹಿ... ಒಂದಿಷ್ಟು.... ಹ್ಹೆ... ಹ್ಹೆ... ಒಂದಿಷ್ಟು.. ಖರ್ಚಾಗುತ್ತದೆಯಲ್ಲ.... ಹ್ಹೆ... ಹ್ಹೆ...?

    ಉಚಿತ ಪರೀಕ್ಷೆಯ ಆರೆಂಜ್-ಮಿಂಟ್ ಇದೆ.

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಮೇ 31, 2006 7:40 PM

    Ref: "ರೋಗರಹಿತ ಮಾನವರನ್ನು ಕಾಡಿಗೆ ಕಳುಹಿಸುವುದು..." (ನಿಮ್ಮದೇ ಕೋಟು).

    ಆಗ ಆ ಮಾನವ ಮತ್ತು ಮಾನವಿಯರು "ಕಣ್ಣಿಗೆ ಅಂದ... ಕಾಡಿಗೆ ಚಂದ... ಹೆಣ್ಣಿಗೆ ಅಂದ..." ಹಾಡುತ್ತ ಮರಗಳನ್ನು ಸುತ್ತುತ್ತ ಇದ್ದರೆ 'ತಂದೆ ಮಕ್ಕಳು' ಸಿನೆಮಾ ಆಗಬಹುದು!

    ಪ್ರತ್ಯುತ್ತರಅಳಿಸಿ
  4. ಜೋಷಿ ಅವರೆ,
    ಚಿಂಪಾಂಜಿಗಳ ಬಣ್ಣವೂ ಕಾಡಿಗೆಯ ಬಣ್ಣವೇ ತಾನೇ? ಅಲ್ಲಿಗೆ ಮಾನವಿಯರಿಗೆ ಕಾಡಿಗೆ ಅತ್ಯಗತ್ಯವೆಂದಾಯಿತು.

    ಮಾನವ ಕಾಡಿಗೆ ಹೋದರೆ, ಅಲ್ಲಿ ಅಪ್ಪಿಕೋ ಚಳವಳಿ ಮುಂದುವರಿಸಿದರೆ ಕರಿ ಕಾಡಿಗೆಯ ಮಧ್ಯೆ ಉಡುಗಿ ಹೋಗುತ್ತಾನೆ.

    ಪ್ರತ್ಯುತ್ತರಅಳಿಸಿ
  5. ಸ್ವಾಮಿ ಅಸತ್ಯಾನ್ವೇಷಿಗಳೇ, ಮಾವಿನಯನಸರವರು ಮತ್ತು ಸಂಪದ ಬ್ಲಾಗಿನಲ್ಲಿ ಸುನಿಲ್ ಜಯಪ್ರಕಾಶ್ ಅವರು ಕಾಮೆಂಟಿಸಿದ ಹಾಗೆ ಏಡ್ಸ್ ಮೂಲ ನೀವೇ ಎಂಬ ಅನುಮಾನ.

    ಒಂದು ಪಕ್ಷ ನನ್ನ ಈ ಅನುಮಾನ ಸುಳ್ಳೆಂದು ಸಾಬೀತಾದಲ್ಲಿ, ಮತ್ತೊಂದು ಹೊಗೆಯಾಡಲಿದೆ. ನೀವು ಡಾರ್ವಿನ್ ಸಿದ್ಧಾಂತದಂತೆ ಮಂಗನಿಂದ ಮಾನವರಾಗಿದ್ದೀರೋ ಅಥವಾ ಮಾನವನಿಂದ ಮಂಗನಾಗಿ ಡಾರ್ವಿನ್ ವಿರುದ್ಧ ಸಿದ್ಧಾಂತವನ್ನು ಸೃಷ್ಟಿಸಿದ್ದೀರೋ?

    ಪ್ರತ್ಯುತ್ತರಅಳಿಸಿ
  6. @ಮಾವಿನಯನಸ
    ಸಾರಿ out of topic ಪ್ರಶ್ನೆ ಕೇಳ್ತಾಯಿದೀನಿ:
    ಮಾವಿನಯನಸ ಅನ್ನೋದು ನಿಮ್ಮ ಕುಟುಂಬ ನಾಮವೋ ?

    ಅದರ ಬಗ್ಗೆ ಸ್ವಲ್ಪ ಹೇಳಿ ..

    :)

    ಪ್ರತ್ಯುತ್ತರಅಳಿಸಿ
  7. ಹ್ಹ ಹ್ಹ ಹ್ಹ - ಕಾರ್ತಿಕ್ ನಾನು ನಿಮ್ಮ ಹಳೆಯ ಸ್ನೇಹಿತ. ನನ್ನ ಬ್ಲಾಗಿನೊಳಗೆ ಬಾಗಿ ನೋಡಿ. ಎಲ್ಲವೂ ತಿಳಿಯುತ್ತದೆ. ನಿಮ್ಮ ಬಗ್ಗೆ ತಿಳಿಯದೇ ನಾನು ನಿಮ್ಮ ಕಾಲೆಳೆಯುತ್ತಿದ್ದೆನೇ? ಅಮೆರಿಕೆಗೆ ಹೋದ ಮೇಲೆ ಪುಕ್ಕಟೆ ಸಮಯ ಜಾಸ್ತಿ ಇದೆ ಎಂದೆನಿಸುತ್ತಿದೆ. ಬೆಂಗಳೂರಿನಲ್ಲಿದ್ದಾಗ ನಿಮ್ಮನ್ನು ಚಾಟಿನಲ್ಲೂ ಕಾಣಲಾಗುತ್ತಿರಲಿಲ್ಲ.

    ಮಾವಿನಯನಸ - ಹೆಸರಿನ ಬಗ್ಗೆ ಬ್ಲಾಗಿನಲ್ಲೇ ಒಂದು ಸೂತ್ರವಿದೆ.

    ಒಳ್ಳೆಯದಾಗಲಿ.

    ಪ್ರತ್ಯುತ್ತರಅಳಿಸಿ
  8. ಸಾರಥಿ ಅವರೆ,
    ನೀವು ನಮ್ಮ ಮೂಲಕ್ಕೇ ಕೈ ಹಾಕಿಬಿಟ್ರಲ್ಲಾ....!

    ಮತ್ತೆ ಭೂಮಿ ಗುಂಡಗಿದೆ ಎಂಬ ಸಿದ್ಧಾಂತದವರು ನಾವು. ಒಂದಾದ ಮೇಲೊಂದರಂತೆ ನಡೆಯುತ್ತಲೇ ಇರುತ್ತದೆ. ಇವತ್ತು ಮಂಗನಿಂದ ನೀವು, ನಾಳೆ ನೀವು ಮಂಗನಿಂದ!.... ಹೀಗೆ ಕಾಲಚಕ್ರ ಸಾಗುತ್ತದೆ!

    ಪ್ರತ್ಯುತ್ತರಅಳಿಸಿ
  9. ನನಗೆ ಗೊತ್ತಿತ್ತು.... ಈ ಮಾವಿನ ರಸಾಯನ ಎಲ್ಲರನ್ನೂ ಗೊಂದಲದಲ್ಲಿ ಮುಳುಗಿಸುತ್ತಾರೆ ಅಂತ.

    ಮಾವಿನ ರಸ
    ಮಾವಿನ ಅರಸ
    ಮಾನ ಸವಿನಯ
    ಇತ್ಯಾದಿ ಎಲ್ಲವೂ ನುಸುಳುತ್ತದೆ.

    ಪ್ರತ್ಯುತ್ತರಅಳಿಸಿ
  10. ಮಂಗನಿಂದ ಏಡ್ಸ್ ಬಂತು ಮತ್ತು ಅದು ಆಫ್ರಿಕಾ ಖಂಡದಿಂದ ಬಂತು ಎಂಬುದು ಅಮೇರಿಕಾದ ವಿ-ಜ್ಞಾನಿಗಳ ಸಿದ್ಧಾಂತ. ಆದರೆ ಏಡ್ಸ್ ಆಫ್ರಿಕಾದಿಂದ ಬಂತು ಎಂಬ ಅಮೇರಿಕಾದವರ ವಾದವನ್ನು ಆಫ್ರಿಕಾದವರು ತೀವ್ರವಾಗಿ ಖಂಡಿಸುತ್ತಾರೆ. ಏಡ್ಸ್ ಪ್ರಾರಂಭವಾದುದರ ಬಗ್ಗೆ ಅವರ ವಾದ ಹೀಗಿದೆ- "ಆಮೇರಿಕಾ ದೇಶವು ಇತರೆ ದೇಶಗಳಿಗೆ ಅದರಲ್ಲೂ ಮುಖ್ಯವಾಗಿ ಮೂರನೆ ಜಗತ್ತಿನ ದೇಶಗಳಿಗೆ ಮಾಡುತ್ತಿರುವುದನ್ನೇ ಜನರು ಒಬ್ಬರಿಗೊಬ್ಬರಿಗೆ ಮಾಡತೊಡಗಿದಾಗ ಏಡ್ಸ್ ಪ್ರಾರಂಭವಾಯಿತು."

    -ಪವನಜ

    ಪ್ರತ್ಯುತ್ತರಅಳಿಸಿ
  11. ನಮಸ್ಕಾರ ವಾಯುಪುತ್ರರೇ, ಬೊಗಳೆ ತಾಣಕ್ಕೆ ಸ್ವಾಗತ.

    ಅಮೆರಿಕದ ಅಜ್ಞಾನಿಗಳು ಆಳುವವರ ಆಜ್ಞಾನುವರ್ತಿಗಳಾಗಿ ಬೇರೆಯವರ ಮೇಲೆ ಗೂಬೆ ಕೂರಿಸುವುದು ಶತಃಸಿದ್ಧ.

    ನೀವು ಹೇಳಿದಂತೆ- ಅಮೆರಿಕ ವಾದಿಸುವ ಪ್ರಕಾರ, ಅಮೆರಿಕವೇ ಏಡ್ಸ್ ಹರವುದರಲ್ಲಿ ವಿಶ್ವದ ದೊಡ್ಡಣ್ಣನಂತಾಗಿದೆಯಲ್ಲವೆ? ಬಹುಶಃ ಎಲ್ಲ ರಂಗಗಳಲ್ಲೂ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಚಾಳಿ ಇರಬಹುದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D