ಬೊಗಳೆ ರಗಳೆ

header ads


ಪೂರ್ವ'ಗ್ರಹ' ಕಾಟ: ವಿಶ್ವ ಸುಂದರ್ಯಾ ರೈಗೇ

ಕೈ ಕೊಡುವತ್ತ ಛೋಟಾ ಬಚ್ಚಾನ್‌ ಕುಟುಂಬ

ಮುಂಬಯಿ (ರ)ಗೆಳೆಯ ಬ್ಯುರೋದಿಂದ
ಬೊಗಳೂರು, ಮೇ 2- ಬಾಲಿವುಡ್‌ನ ಭಾರಿ ವುಡ್-ಬಿ ಜೋಡಿ ಎಂಬ ಖ್ಯಾತಿವೆತ್ತಿದ್ದ ಛೋಟಾ "ಬಚ್ಚಾ"ನ್ ಮತ್ತು ವಿಶ್ವ ಸುಂದರ್ಯಾ ರೈ ನಡುವಣ ಸಂಬಂಧ ಐಶ್ಚರ್ಯಕರವಾಗಿ ಶೇಕ್ ಆಗತೊಡಗಿದೆ ಎಂಬ ಮಾಹಿತಿ ಮಾವಿನ ರಸಾಯನ ಉಣಬಡಿಸುವವರೊಬ್ಬರಿಂದ ದೊರೆತಿದೆ.

ಸೂಪರ್‌ಸ್ಟಿಶನ್ ಎಂಬ ಇದೀಗ ಜಾಗತೀಕರಣಗೊಳ್ಳುತ್ತಿರುವ ಭಾರತದ ಮಹಾನ್ ಸಂಪ್ರದಾಯವೊಂದಕ್ಕೆ ತೀವ್ರವಾಗಿ ಕಟ್ಟುಬಿದ್ದಿರುವ ಬಚ್ಚಾನ್ ಕುಟುಂಬ, ಆಶ್ಚರ್ಯಳ ಜಾತಕದಲ್ಲಿ ಮಂಗಳ ಯೋಗ ಇರುವುದರಿಂದಾಗಿ ಸಂಬಂಧ ಜೋಡಿಸಲು ಹಿಂದೆ ಮುಂದೆ ನೋಡುತ್ತಿದೆ. ಇದಕ್ಕೆ ಹಿಂದಿನ ಜನ್ಮದ ಅಂದರೆ ಪೂರ್ವಗ್ರಹಗಳ ಪೀಡೆಯೇ ಕಾರಣ ಎಂದು ಶಂಕಿಸಲಾಗಿದೆ.

ಈ ಮಧ್ಯೆ, ಪೂರ್ವಗ್ರಹ ಎನ್ನುವುದು 10ನೇ ಗ್ರಹವೇ ಆಗಿರಬಹುದೇ ಎಂಬ ಬಗ್ಗೆ ಅಸತ್ಯಾನ್ವೇಷಿಯಿಂದ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆದಿದೆ.

ಇದರಿಂದಾಗಿ ಈ ಹಿಂದೆ ತನಗೆ "ಸಲ್ಲುವ ಮಾನ" ಹರಾಜಿಗೆ ಕಾರಣವಾದ ಸಲ್‌ಮಾನ್‌ಗೆ ಕೈಕೊಟ್ಟಿದ್ದಲ್ಲದೆ, ತನ್ನ ಮೋಹಿನಿ ಕಾಟಕ್ಕೆ ಸಿಲುಕಿ "ನಾವಿಬ್ಬರೂ ಮದುವೆಯಾಗುತ್ತೇವೆ" ಎಂದು ಅ-ವಿವೇಕದಿಂದ ಬೊಗಳೆ ಬಿಟ್ಟಿದ್ದ ಕ್ಯಾಬೇ...?ರಾಯ್‌ಗೂ ತಣ್ಣೀರು ಕುಡಿಸಿ ಸುಮ್ಮನಾಗಿಸಿದ್ದ ವಿಶ್ವಸುಂದರ್ಯಾ ರೈಗೇ ಈಗ ಬಡಾ-ಛೋಟಾ ಬಚ್ಚಾ ಕುಟುಂಬ ಕೈಕೊಡಲು ಸಿದ್ಧತೆ ನಡೆಸಿರುವುದು ಸಿನಿಮಮಸಾಲ ಪತ್ರಿಕೆಗಳಿಗೆ ಒಳ್ಳೆಯ ಚಿಕನ್ ಮಸಾಲೆ ನೀಡಿದೆ.

101 ವರ್ಷ ಹೀರೋಯಿನ್: ಈ ಸುದ್ದಿ ತಿಳಿದ ವಿಶ್ವಸುಂದರ್ಯಾ, ತನಗೆ ಸದ್ಯಕ್ಕೆ 101 ವರ್ಷದ ಅವಧಿಗೆ ಮದುವೆಯೇ ಬೇಡ. ಅಲ್ಲಿಯವರೆಗೆ ಬಾಲಿವುಡ್, ಅವಕಾಶ ಸಿಕ್ಕರೆ ಹಾಲಿವುಡ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮುಂದುವರಿಯುವುದಾಗಿ ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ.

ಭೀಕರ ಅಪಘಾತ: ಅತ್ತ ಹೀಗಿರಲು, ಇತ್ತ ಬಾಗಿಲ ಕೋಟೆಯಲ್ಲಿ ಈ ಬೆಕ್ಕಿನ ಕಣ್ಣಿನ ಹಕ್ಕಿ ಜತೆಗೆ ಗಾಂಧರ್ವ (ತೆರೆ) ವಿವಾಹವನ್ನೂ ನೆರವೇರಿಸಿಕೊಂಡಿರುವ ಛೋಟಾ ಬಚ್ಚಾನ್, ಆಕಾಶವೇ ಕಳಚಿಬಿದ್ದಂತೆ ತಲೆ ಮೇಲೆ ಕೈಹೊತ್ತು ಕುಳಿತಿರಲು, ಇತಿಹಾಸ ಕಂಡು ಕೇಳರಿಯದ ಭೀಕರ ಸೈಕಲ್ ಅಪಘಾತಕ್ಕೆ ತುತ್ತಾಗಿರುವ ಆಶ್ಚರ್ಯಳ ಕೈಗೆ ತರಚು ಗಾಯವಾಗಿರುವ ಬಗ್ಗೆ ವಿಶ್ವಾದ್ಯಂತ ಭಾರೀ ಕೋಲಾಹಲಕಾರಿಯಾದ ಸುದ್ದಿಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸುದ್ದಿಯಾಗದ ನಾಯಿ: ಆದರೆ ಈ ಸಂದರ್ಭ ಆಕೆಯೊಡನಿದ್ದ ನಾಯಿಮರಿಗೂ ಭೀಕರವಾದ, ರುದ್ರಭಯಾನಕವಾದ ತರಚುಗಾಯಗಳಾದ ಬಗ್ಗೆ ಯಾವುದೇ ಪತ್ರಿಕೆಗಳು ಚಕಾರವೆತ್ತದಿರುವುದು ಪ್ರಾಣಿಗಳ ಪರ ಕತ್ತಿ ಕಾಳಗ ನಡೆಸುತ್ತಿರುವ ನೆಹರೂ ಕುಟುಂಬದ ಉಚ್ಚಾಟಿತ ಕುಡಿ ಸೋನಿಕಾ ಗಾಂಧಿ ಅವರ ಕಣ್ಣು ಕುಕ್ಕಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಈ ಬೆಕ್ಕಿನ ಕಣ್ಣಿಗೂ ಆ ನಾಯಿ ಮರಿಗೂ ಸ್ನೇಹವಿದೆಯಾ? ನಾಯಿಮರಿಯ ಮೇಲೆ ಬಚ್ಚಾಗೆ ಹೊಟ್ಟೆ ಉರಿಬಂದಿರಬೇಕು. ಅದಕ್ಕೇ ಬೆಕ್ಕಿನ ಕಣ್ಣನ್ನು ನೋಡಿದವರ ಹೊಟ್ಟೆ ಉರಿಯೋದು ಅನ್ನಿಸುತ್ತಿದೆ. ಹೋಗ್ಲಿ ಬಿಡಿ, ನೋಡಿದವರ ಪಾಪ ಆಡುವವರಿಗೆ ಯಾಕೆ ಬೇಕು.
    ಈ ವರುಷದ ಅಸತ್ಯ ಪ್ರಶಸ್ತಿಗೆ ನಿಮಗೇ ಕೊಡಿಸುವೆ. (ಇದು ಗುಟ್ಟಿನ ವಿಷಯ - ಯಾರಿಗೂ ತಿಳಿಯದ ಹಾಗೆ ನೋಡಿಕೊಳ್ಳಿ)

    ಪ್ರತ್ಯುತ್ತರಅಳಿಸಿ
  2. ಬೆಕ್ಕಿನ ಕಣ್ಣಿಗೆ ಅಪಘಾತವಾಗಿದ್ದೂ ಪೂರ್ವ ಗ್ರಹದ ಕಾಟದಿಂದ ಅಂತೆ.
    ಅಸತ್ಯ ಪ್ರಶಸ್ತಿ ಕೊಡಿಸಲು ನಿಮಗೆಷ್ಟು ಕೊಡಬೇಕು? (ವಿಷಯ ಯಾರಿಗೂ ಹೇಳಲ್ಲ.) ಮತ್ತೆ ಪ್ರಶಸ್ತಿ ಜತೆ ಹಣದ ಗಂಟು (ದೊಡ್ಡ ಮೊತ್ತದ್ದು) ಗ್ಯಾರಂಟಿ ಇದೆಯೇ... ಎಲ್ಲವನ್ನೂ ಕೇಳಿ ಮೊದಲೇ ತಿಳಿದಿಟ್ಟುಕೊಳ್ಳಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D