ಬೊಗಳೆ ರಗಳೆ

header ads

ಚಳ್ಳೆ ಹಣ್ಣು ರುಚಿಯಾಗಿತ್ತು, ತಿಂದೆವು:


ಕೈದಿ ಪರಾರಿಗೆ ಕನಿಷ್ಠಬಿಲ್ಲೆ ಪ್ರತಿಕ್ರಿಯೆ

(ಬೊಗಳೂರು ರಗಳೆ ಬ್ಯುರೋದಿಂದ)

ಬೊಗಳೂರು, ಏ.29- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೈದಿ ಪರಾರಿ ಎಂಬ ವರದಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪೊಲೀಸರು, ತಮಗೆ ಚಳ್ಳೆಹಣ್ಣು ತಿನ್ನಿಸಲಾಗಿಲ್ಲ, ತಾವಾಗಿಯೇ ತಿಂದೆವು ಎಂದು ಬೀಗಿಕೊಂಡಿದ್ದಾರೆ.

ವರದಿ ಬಗ್ಗೆ ಪ್ರತಿಕ್ರಿಯೆ ಕೇಳಿದ ನಮ್ಮ ಅಸತ್ಯಾನ್ವೇಷಿಗೆ ಅವರು ಉತ್ತರಿಸಿದ್ದು ಹೀಗೆ: "ವಾರೆವ್ಹಾ.... ಚಳ್ಳೆ ಹಣ್ಣು ಇಷ್ಟೊಂದು ರುಚಿಕರವಾಗಿರುತ್ತದೆಯೇ? ಮೊದಲೇ ಗೊತ್ತಿದ್ದರೆ ಇನ್ನಷ್ಟು ಚಳ್ಳೆಹಣ್ಣು ತಿನ್ನುತ್ತಿದ್ದೆವು, ಛೆ.... ತಡವಾಗಿಬಿಡ್ತು!" ಎಂದು ಈಗಾಗಲೇ ಸಾಕಷ್ಟು ಕೋಟ್ಯಂತರ ರೂ. ಸಂಪಾದಿಸಿ ಸುದ್ದಿ ಮಾಡಿದ್ದ ರಾಜ್ಯದ ಪೊಲೀಸ್ ಇಲಾಖೆಗೆ ಸೇರಿದ ಈ ಕನಿಷ್ಠಬಿಲ್ಲೆಗಳು ಚಳ್ಳೆಹಣ್ಣಿನ ವಾಸನೆ ಸೂಸುತ್ತಿದ್ದ ಕೈಗಳನ್ನು ಅವರು ಹಿಸುಕಿಕೊಂಡಿದ್ದಾರೆ.

ಈ ಮಧ್ಯೆ, ಅನ್ವೇಷಿಯ ಕಾರ್ಯಾಚರಣೆ ವೇಳೆ ಇನ್ನಷ್ಟು ಕುತೂಹಲಕರ ವಿಷಯಗಳು ಬೆಳಕಿಗೆ ಬಂದಿವೆ. ಕೈದಿಯ ಜತೆ ಪೊಲೀಸರು ಲೋಕಾಭಿರಾಮ ಮಾತನಾಡುತ್ತಾ ರಿಕ್ಷಾದಲ್ಲಿ ತೆರಳುತ್ತಿದ್ದರು. ಬಸ್ ನಿಲ್ದಾಣ ಬಳಿ ರಿಕ್ಷಾ ಅಡ್ಡಗಟ್ಟಿದ ಕೈದಿಯ ಸಹಚರರು (ಅವರೂ ಈ ಹಿಂದೆ ಪೊಲೀಸರಿಗೆ ಸಾಕಷ್ಟು ಚಳ್ಳೆಹಣ್ಣುಗಳನ್ನು ತಂದು ಕೊಟ್ಟವರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ), ಈ "ಕನಿಷ್ಠಬಿಲ್ಲೆ"ಗಳಿಗೆ ಪೆನ್ಸಿಲೊಂದನ್ನು ರಿವಾಲ್ವರ್ ತರಹ ತೋರಿಸಿದ್ದಾರೆ. ಆಗ ಪೊಲೀಸರು "ಅರೆ.... ಇಷ್ಟು ಚಿಕ್ಕ ಸಾಧನವನ್ನು ತಮಗೆ ತೋರಿಸಿ ಬೆದರಿಸಿದಂತೆ ತೋರುತ್ತಿದೆಯಲ್ಲ... ನಮ್ಮ ಬಳಿಯೂ ಉದ್ದನೆಯ ಹೆಣಭಾರದ ಓಬೀರಾಯನ ಬಂದೂಕು ಇದೆ. ಇದ್ಯಾವ ಕರ್ಮಕ್ಕೆ.... ಕೆಲಸಕ್ಕೆ ಬಾರದ್ದು..." ಅಂತ ಹಾಡಿ ಹೊಗಳುತ್ತಾ ತಮ್ಮಲ್ಲಿದ್ದ ವೀರಪ್ಪನ್ ಬಂದೂಕನ್ನು ಬಿಸಾಕಿದ್ದಾರೆ.

ಅಷ್ಟರಲ್ಲಿ ಕೈದಿ ತನ್ನನ್ನು ಕರೆದೊಯ್ಯಲು ಬಂದ ಸ್ನೇಹಿತರ ಜತೆ ಹೋಗಿದ್ದಾನೆ. ಹೋಗುವ ವೇಳೆಗೆ "ಆಟೋ ಚಾರ್ಜ್ ನಾವೇ ಕೊಡುತ್ತೇವೆ, ನೀವೇನೂ ಕೊಡಬೇಕಾಗಿಲ್ಲ" ಎಂದು ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ."ಅಯ್ಯೋ ಪಾಪ.... ಆತ ನಮ್ಮ ಆಟೋ ಚಾರ್ಜನ್ನೂ ಕೊಡುತ್ತಿದ್ದಾನೆ" ಎಂದುಕೊಂಡ ಪೊಲೀಸರು, ಕೈದಿ ಮತ್ತು ಸ್ನೇಹಿತರು ಹೋದದ್ದು ಯಾರೋ ಪಾಪದವನ ಆಟೋದಲ್ಲಿ, ಅದರ ನಂಬರ್ ಕಟ್ಟಿಕೊಂಡು ನಮಗೇನಾಗಬೇಕು, ಈ ಕೈದಿಗಳೆಲ್ಲಾ ನಮ್ಮನ್ನೇ ನಂಬಿಕೊಂಡಿದ್ದಾರಲ್ಲ, ಅವರ ನಂಬಿಕೆಗೆ ನಾವು ದ್ರೋಹ ಬಗೆಯುವುದಾದರೂ ಎಂತು ಎಂದು ತಮ್ಮಲ್ಲೇ ಪ್ರಶ್ನಿಸಿಕೊಂಡಿದ್ದಾರೆ.

ಇತ್ತ ಪೊಲೀಸರು, ಈ ಕೈದಿ ಮತ್ತವರ ಸ್ನೇಹಿತರು ತಮ್ಮ ಬಳಿಗೆ ಮರಳಿ ಬರಬಹುದು., ಈಗ ಬರಬಹುದು, ಮತ್ತೆ ಬರಬಹುದು ಎಂದು ಕೋರ್ಟಿನ ಮೆಟ್ಟಿಲಲ್ಲಿ ನಿರೀಕ್ಷೆಯಲ್ಲಿದ್ದರು. ಕೈದಿ ಬಾರದಿದ್ದಾಗ ಮನೆಗೆ ಹೋಗಿ ಗಡದ್ದಾಗಿ ನಿದ್ರಾದೇವಿಯನ್ನು ಅಪ್ಪಿಕೊಂಡಿದ್ದಾರೆ.ಇದೀಗ ಕೈದಿಯ ವಿಷಯ ಕೈಬಿಟ್ಟಿರುವ ಉನ್ನತ ಪೊಲೀಸರು, ಪರಾರಿಯಾಗಿರುವ ಈ ಕನಿಷ್ಠಬಿಲ್ಲೆಗಳಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

______________________________

Re: Forwarded message attached:

ರಜಾ ಅರ್ಜಿ

ಇಂದ

ಅಸತ್ಯಾನ್ವೇಷಿ

ಬೊಗಳೂರು ಬ್ಯುರೋ ಮುಖ್ಯಸ್ಥ

ರಿಗೆ

ಬೊಗಳೆ ರಗಳೆ ಓದುಗ ಬ್ಯುರೋ

ಇಂಟರ್ನೆಟ್ ವಿಭಾಗ


ವಿಷಯ: ಎರಡು ದಿನದ ರಜೆಯ ಕುರಿತು

ಮಾನ್ಯರೆ,

ನನಗೆ ಭಾನುವಾರ ಮತ್ತು ಸೋಮವಾರ ಅನಾರೋಗ್ಯ ಕಾಡುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಎರಡು ದಿನಗಳ ರಜೆಯನ್ನು ದಯಪಾಲಿಸಬೇಕಾಗಿ ಕೋರುತ್ತೇನೆ.

ಇಂತಿ ತಮ್ಮ ವಿಶ್ವಾಸಿ

sd/ಅಸತ್ಯಾನ್ವೇಷಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

16 ಕಾಮೆಂಟ್‌ಗಳು

  1. ಬೆಳಿಗ್ಗೆ ಕಛೇರಿಗೆ ಬಂದ ಹಾಗೆ ನಿಮ್ಮ ಬ್ಲಾಗ್ ಮತ್ತು ಮಜವಾಣಿ ಬ್ಲಾಗ್ ನೋಡಿದೆ.ಇನ್ನೂ ಯಾಕೆ ಈ ಪ್ಯಾದೆಗಳ ಬಗ್ಗೆ ಬರೀಲಿಲ್ಲ ಅಂತ ಯೋಚಿಸುತಿದ್ದೆ.ಅಂತು ನಮ್ಮ ಸಿನೆಮಾಗಳಲ್ಲಿ ತೋರಿಸೋದು ಎಲ್ಲಾ ಸುಳ್ಳಲ್ಲ.
    ನೀವು ಅಂತು ಅಸತ್ಯದ ಹಿಂದೆ ಬಿದ್ದಿದ್ದೀರ."ತಾಳಲಾರೆ ಈ ಅಸತ್ಯಾನ್ವೇಷಿಯ ಕಾಟ" ಎಂದು ಅಸತ್ಯ ಗೊಣಗುತ್ತಿರಬಹುದು..

    ಪ್ರತ್ಯುತ್ತರಅಳಿಸಿ
  2. ಬೊಗಳೆ ಆಲಿಸಲು ಕಿವಿ ಕೊಟ್ಟಿರುವ ಎಸ್‌ಪಿ ಅವರಿಗೆ ಸ್ವಾಗತ.

    ಅಸತ್ಯದ ಹಿಂದೆ ಬಿದ್ದಿದ್ದೇನೆ ಅನ್ನೋದನ್ನು ಮೆತ್ತಗೆ ಹೇಳಿ. ಯಾರಾದ್ರೂ ಕೇಳಿಸಿಕೊಂಡಾರೂ... ಎಲ್ಲಾದ್ರೂ ಪ್ಯಾದೆಗಳೇ ತಗಾದೆ ತೆಗೆದು ಒದೆ ಕೊಟ್ಟರೆ?

    ಹಾಂ... ಇನ್ನೊಂದು ವಿಷ್ಯ. ನಮ್ಮ ಕನ್ನಡ ಸಿನಿಮಾಗಳಲ್ಲಿ ಇಂಥದ್ದನ್ನೂ ತೋರಿಸ್ತಾರೆಯೇ? ಮಚ್ಚು-ದೊಣ್ಣೆ-ಲಾಂಗು ಭರಿತ ಸಮೃದ್ಧ ಮತ್ತು "ಮಚ್ಚಿನ" ಚಿತ್ರಗೀತೆಗಳ ಸಹಿತ ಇರುವ ಚಿತ್ರಗಳು ಮಾತ್ರ ಇರೋದು ಅಂತ ಕೇಳಿದ್ದೆ...???!!!

    ಪ್ರತ್ಯುತ್ತರಅಳಿಸಿ
  3. :)
    numma parichaya agalilla. nimma parichaaya aada nantara heluthene. nimma mail id kodi

    ಪ್ರತ್ಯುತ್ತರಅಳಿಸಿ
  4. ಸದ್ಯಕ್ಕೆ ನಿಮ್ಮ ಸೇವೆಯ ಅವಶ್ಯಕತೆ ಬಹಳವಾಗಿರುವುದರಿಂದ ರಜೆಯನ್ನು ಮಂಜೂರು ಮಾಡಲಾಗುವುದಿಲ್ಲ. ನಿಮ್ಮ ಅನಾರೋಗ್ಯವನ್ನು ಒಂದು ವಾರಗಳ ಮಟ್ಟಿಗಾದರೂ ಮುಂದೂಡಿ. ಇಲ್ಲದಿದ್ದರೆ ನಿಮ್ಮ ಕೈಕಾಲುಗಳು ನೆಟ್ಟಗಾಗದು ಎಂದು ಆಡಳಿತ ಮಂಡಳಿಯವರು ನನ್ನ ಮೂಲಕ ತಿಳಿಸಲಿಚ್ಛಿಸುತ್ತಾರೆ.

    ಪ್ರತ್ಯುತ್ತರಅಳಿಸಿ
  5. ಪೊಲೀಸರಿಗೆ ಅವರ ಸತ್ಯವನ್ನು ಅವರಿಗೇ ತಿಳಿಸಿದುದ್ದಕ್ಕೆ ನಿಮಗೆ ಅವರೇನೂ ತೊಂದರೆ ಕೊಡರು. ಇದಕ್ಕಾಗಿ ಹೆದರಿ ನೀವು ರಜೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಹಿಂದೆ ಓಡಿಬರಲು ನಾವೂ ಸಿದ್ಧ. ಆದ್ದರಿಂದ ನೀವು ಮುಂದಿರಲೇ ಬೇಕು.

    ಅಂದ ಹಾಗೆ ಪ್ರತಿದಿನವೂ ನೀವು ನಮಗೆ ತಿನ್ನಿಸುತ್ತಿರುವುದೇ ಚಳ್ಳೆಹಣ್ಣನ್ನು ಪೊಲೀಸರು ತಿಂದಿದ್ದಾ? ಅದು ಬಲು ರುಚಿ. ಬೆಲೆಯೂ ಕಡಿಮೆ.

    ಪ್ರತ್ಯುತ್ತರಅಳಿಸಿ
  6. ಅಸತ್ಯವನ್ನು ಆಸಕ್ತಿಯಿಂದ ಹುಡುಕುವವರೇ,

    ನಿಮಗೆ ರಜೆಯನ್ನು ನಿರಾಕರಿಸಲಾಗಿದೆ, ಎಂದಿನಂತೆ ಕೆಲಸಕ್ಕೆ ಹಾಜರಾಗದಿದ್ದರೆ ಕೈ-ಕಾಲು ಮುರಿಸಬೇಕಾದೀತು ಎಚ್ಚರ!

    ಅಲ್ಲಾ, ನಿಮ್ಮ ಪುಟದಲ್ಲಿ ಕಷ್ಟ ಪಟ್ಟು ಬರೆದವರನ್ನೆಲ್ಲ 'ಅಸುರ'ರನ್ನಾಗಿ ಮಾಡಿದ್ದೀರಲ್ಲಾ, ನಿಮಗೆ ಮಹರ್ಷಿಯ ಪಟ್ಟವನ್ನು ಕೊಟ್ಟುಕೊಂಡು ಉಳಿದವರನ್ನು ಬ್ಲಾಗಾಸುರರು ಎನ್ನುವುದು ಯಾವ ಅಸತ್ಯದ ನ್ಯಾಯ? :-)

    ಇತಿ,
    ನಿಮ್ಮವ

    ಪ್ರತ್ಯುತ್ತರಅಳಿಸಿ
  7. ಅನಾಮಧೇಯಮೇ 02, 2006 10:00 AM

    ಬೊಗಳೆ ಪಂಡಿತರು ಮತ್ತು ಕಿಲಾಡಿ ಸಾರಥಿಗಳು ಒಟ್ಟಿಗೆ ರಜೆ ಕೇಳಿರುವ ಹಿಂದಿರುವ ರಹಸ್ಯವೇನು?? ಇದನ್ನು ಪತ್ತೆ ಹಚ್ಚುವ ಕಾರ್ಯವನ್ನು "ಮಜಾವಾಣಿ"ಗೆ ವಹಿಸಿದರೆ ಹೇಗೆ?

    ಪ್ರತ್ಯುತ್ತರಅಳಿಸಿ
  8. ಶ್ರೀತ್ರೀಯವರೇ, ಅಮೆರಿಕದಲ್ಲಿ ತಪ್ಪಿಸಿಕೊಂಡು ಜನರ ಮೇಲೆ ಪ್ರಹಾರ ಮಾಡುತ್ತಿದ್ದ 20 ಚಿಂಪಾಂಜಿಗಳಲ್ಲಿ ಒಂದು ಚಿಂಪಾಂಜಿಯು ನಮ್ಮ ಅಸತ್ಯಾನ್ವೇಷಿಗಳನ್ನು ಹೋಲುತ್ತಿದೆ ಎಂಬ ಭೂತಾನುಮಾನ ಬಂದಿತ್ತು. ಅದಕ್ಕೆ ಅನ್ವೇಷಿಗಳ ಜಾಡನ್ನು ಪತ್ತೆ ಹಚ್ಚಲು ನಾನೂ ರಜೆ ಹಾಕಬೇಕಾಯಿತು, ಅಷ್ಟೇ.

    ಪ್ರತ್ಯುತ್ತರಅಳಿಸಿ
  9. ಮಾವಿನ ಸವಿಯವರೆ

    ನೀವು ರಜೆ ಮಂಜೂರು ಮಾಡಿಲ್ಲ ಎಂಬ ಕಾರಣಕ್ಕೆ ನಿನ್ನೆ ಮತ್ತು ಮೊನ್ನೆ ಮತ್ತೊಮ್ಮೆ ರಜೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣೀಕರಿಸುತ್ತೇನೆ. ಮತ್ತು ನನ್ನ ರಜೆಯನ್ನು ಒಂದು ವಾರ ಕಾಲದಷ್ಟು ದೀರ್ಘವಾಗಿ ಖಂಡಿತವಾಗಿಯೂ ಇನ್ನೊಮ್ಮೆ (ಇನ್ನೆರಡು ವಾರಗಳೊಳಗೆ) ಮುಂದೂಡುತ್ತೇನೆ.

    ಪೊಲೀಸರಿಗೆ ಹೆದರಿ ಓಡಿಹೋದದ್ದು ಹಾಗೂ ಉಳಿದ ಎಲ್ಲ ವಿಷಯಗಳನ್ನೂ ಅಸತ್ಯವಾಗಿಯೇ ಹೇಳುತ್ತೇನೆ ಎಂಬ ವಾಗ್ದಾನ ನೀಡುತ್ತೇನೆ. ದಯವಿಟ್ಟು ಕೈಕಾಲು ನೆಟ್ಟಗಾಗಿಸಿ.

    ಚಳ್ಳೆ ಹಣ್ಣು ಚೆನ್ನಾಗಿತ್ತೆಂಬ ವಿಷಯ ಕೇಳಿ ತುಂಬಾ ಕಸಿವಿಸಿಯಾಯಿತು. ಈಗ ಚಳ್ಳೆಹಣ್ಣು ಸೀಸನ್ ಅಲ್ವೇ....? ಸ್ವಲ್ಪ ಅದರಲ್ಲೂ ರಸಾಯನ ಮಾಡಿ ಪೊಲೀಸರಿಗೆ ಕುಡಿಸದಿದ್ರೆ ಹೇಗೆ?

    ಪ್ರತ್ಯುತ್ತರಅಳಿಸಿ
  10. ನಿಮ್ಮಾವನವರೆ,
    ಬ್ಲಾಗಿನೊಳಗೆ ಇಣುಕಿದ್ದಕ್ಕೆ ಧನ್ಯವಾದ.
    ನೀವೇನು ಹಳೆ ಕಾಲದವ್ರಾ ಅಂತ ಡೌಟು. ಈಗ ಎಲ್ಲಾ ಮನೆಗಳಲ್ಲಿ ಗ್ಯಾಸ್ ಸ್ಟವ್ ಬಂದಿರುವುದರಿಂದ ಒಲೆ ಉರಿಸಲು ನನ್ನ ಕೈಕಾಲುಗಳ ಅಗತ್ಯ ಖಂಡಿತ ಇಲ್ಲ ಎಂದು
    ನಾನು ಹಣೆಚಚ್ಚಿಕೊಂಡು ಗೋಗರೆಯುತ್ತಿದ್ದೇನೆ. ಕಾಣಿಸುತ್ತಿದೆ ತಾನೆ?

    ಆಮೇಲೆ ಬ್ಲಾಗಾಸುರರ ವಿಷಯ. ನಮ್ಮ ಪುಟದ ಉಪಶೀರ್ಷಿಕೆಯ ಪ್ರಭಾವವಿದು ಸ್ವಾಮಿ. ಸತ್ಯವ ನೆಚ್ಚಿದ್ರೆ ಪರಮಾತ್ಮ ಮೆಚ್ಚನು ಎಂದು ಬಲವಾಗಿ ನಂಬಿದವ್ರು ನಾವು.

    ಬ್ಲಾಗಾಸುರ ಪದವನ್ನೊಮ್ಮೆ ಸರಿಯಾಗಿ ನೋಡಿ. ಬ್ಲಾಗ್ ಮಾಡಿ 'ನೆಟ್ಟಿ'ಗರಿಗೆ ಸುರೆ ಉಣಿಸಿದಂತೆ ಮಾಡುವವರ್ ಬ್ಲಾಗಾ-ಸುರರ್ಗಳ್ ಅಂತ ಅಪಾರ-ಅರ್ಥ.

    ಪ್ರತ್ಯುತ್ತರಅಳಿಸಿ
  11. ಶ್ರೀ ಶ್ರೀ ಶ್ರೀ (3)ಅವರೆ
    ಈ ಬಗ್ಗೆ ಕಿಲಾಡಿ ಕಿಟ್ಟಿ ಅವರ ಮೇಲೆ ಭೀಕರವಾದ ಕ್ಷಮೆ ಕೈಗೊಳ್ಳಲಾಗುವುದು. ಬೊಗಳೆ ಪಂಡಿತನ ಹಿಂದೆ ಕಿಲಾಡಿ ಕಿಟ್ಟಿ ಬಿದ್ದದ್ದು, ಕಿಲಾಡಿ ಕಿಟ್ಟಿ ಮುಂದೆ ಬೊಗಳೆ ಪಂಡಿತ ಬಿದ್ದದ್ದು ಎಲ್ಲ ತಾಳಿ ಕಾಕೀಯ ! ದಯವಿಟ್ಟು ಮಜಾವಾಣಿಯ ತನಿಖಾ ತಂಡಕ್ಕೆ ವಿಷಯ ಹೇಳದಿರಿ...!

    ಪ್ರತ್ಯುತ್ತರಅಳಿಸಿ
  12. ಓಯ್ ಕಿಲಾಡಿ ಸಾರಥಿ ಕಿಟ್ಟಿ ಅವರೆ,
    ಬನ್ನಿ ಬನ್ನಿ, ನಾನಿಲ್ಲಿ ನಿಂತೆ, ನೀವೇ ಸ್ವಲ್ಪ ಮುಂದೆ ಓಡಿಬಿಡಿ. ಇಬ್ಬರೂ ಒಟ್ಟಿಗೇ ಓಡಿದರೆ ಈ ಜನಾ ಅಪಾರ್ಥ ಮಾಡಿಕೊಳ್ಳುತ್ತಾರೆ.

    ನೀವು ಮುಂದೋಡದಿದ್ದರೆ ನಿಮ್ಮ ಮಿಕಗಳ ಬೇಟೆಯ ಧಾಟಿ ಯಾವುದು ಎಂದು ಊರೆಲ್ಲಾ ಟಾಂ ಟಾಂ ಮಾಡುವೆ....!
    ನೀವೂ ನಿಮ್ಮ ಸೊಂಪಾದ ಕರುಗೆ ರಜೆ ಅರ್ಜಿ ಬರೆದು ಚಿಂಪಾಂಜಿನಿಯ (ಮಿಕ) ಹುಡುಕಾಟದಲ್ಲಿದ್ದೀರಾ ಅಂತ ಕಾಣಿಸುತ್ತೆ.

    ಪ್ರತ್ಯುತ್ತರಅಳಿಸಿ
  13. Enigma ಅರ್ಥಾತ್ ಒಗಟು ಅವರೆ,
    ನಮ್ಮ 'ಇ'- ಕಸದ ಬುಟ್ಟಿ ಇರುವ ವಿಳಾಸವನ್ನು ಮುಖಪುಟದಲ್ಲಿ ಪ್ರಕಟಿಸಿದಾಗ ಚೀನಾ, ವಿಯೆಟ್ನಾಂ ಮುಂತಾದೆಡೆಗಳಿಂದ ಚೈನೀಸ್ ಅಕ್ಷರಗಳ ಸಂದೇಶವುಳ್ಳ ಚಿತ್ರ ವಿಚಿತ್ರ ಅನರ್ಥಕಾರಿ ಸಂದೇಶಗಳು ಬರಲಾರಂಭಿಸಿದ್ದರಿಂದ ಮತ್ತು ಬಂಡವಾಳ ಬಟಾಬಯಲಾಗುವ ಭೀತಿಯೂ ಜತೆಗಿರುವುದರಿಂದ ವಿಳಾಸವನ್ನು ಅಲುಗಿಲ್ಲದ ಕತ್ತರಿಯಿಂದ ಕತ್ತರಿಸಬೇಕಾಯಿತು.
    ಕಸದ ಬುಟ್ಟಿ ಯಾವಾಗಲೂ ಇಲ್ಲಿರುತ್ತದೆ: Asatya.Anveshi@gmail.com

    ಪ್ರತ್ಯುತ್ತರಅಳಿಸಿ
  14. ನೀ ಓಡು ಮುಂದೆ
    ನಾ ನಿನ್ನ ಹಿಂದೆ...

    ಅಸತ್ಯಾನಂದ ಅನ್ವೇಷ್ ಸ್ವಾಮಿಗಳೇ, ನಾನು ಮುಂದೋಡುವುದು, ನೀವು ಬೇಸ್ತು ಬಿದ್ದು (ಅಥವಾ ಬೆನ್ನು ಬಿದ್ದು) ಹಿಂಭಾ(ಬಾ)ಲಿಸುವುದು ಬೇಡವೇ ಬೇಡ.

    ಪ್ರತ್ಯುತ್ತರಅಳಿಸಿ
  15. ಹಾಗಿದ್ರೆ, ನಿಮ್ಮ ಬೊಗಳೆ ತಾಣದಲ್ಲಿ ನಿಮ್ಮ ಫೋಟೋವನ್ನು ದೂರದಿಂದ ತೆಗೆದು ಹಾಕಿದ್ದೇಕೆ? ಒಂದ್ವಿಷ್ಯ ಗೊತ್ತಾ? ಅದು ನೀವು ಬೀಳುವ ಕೆಲವೇ ಕ್ಷಣ ಮೊದ್ಲು ತೆಗೆದ ಫೋಟೋ... ನಿಮ್ಮ ಕಿಲಾಡಿ ಕಿಟ್ಟಿ ಕೈಯಲ್ಲೇ ತೆಗೆಸಿದ್ದು. ಸರಿಯಾಗಿ ನೋಡಿ... ಅದ್ರೂನೂವೆ... ಕಿಲಾಡಿ ಕಿಟ್ಟಿ ತೆಗೆದ ಫೋಟೋ ನನ್ನದೇ ಇರಬಹುದೇ ಎಂಬ ಶಂಕೆಯೂ ಇದೆ.... ಅದಿರ್ಲಿ, ಇಲ್ಲದಿದ್ದರೂ ಆ ಫಿಲ್ಮ್ ರೋಲ್ ತಂದುಕೊಡದಿದ್ರೆ, ರೋಲ್ ಕಾಲ್ ಮಾಡಲಾಗುವುದು ಎಂದು ಕಟುಕನಪ್ಪಣೆ ವಿಧಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  16. ಚಳ್ಳೆ ಹಣ್ಣು ಮಹಾತ್ಮೆ
    ಸಖತ್ ಮಾರಾಯ್ರೇ...!!
    ಅದನ್ನು ಪೇಪರ್ನಲ್ಲಿ ಓದುತ್ತಾ ಇರುವುದು ಮಾಮೂಲಿ...
    ಆ ಬಗ್ಗೆ ನಗೆ ಬರಹ ಸೂಪರ್..

    ಇನ್ನು ನಿಮ ರಜೆ ಬಗೆ- ನಾವ್ ರಜಾ ಕೊಡೋರ್ ಅಲ್ಲ...??

    ಸಜಾ ಕೊಡೋರ್...!:(((

    ಶುಭವಾಗಲಿ...

    ನನ್ನಿ

    \|/

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D