ಬೊಗಳೆ ರಗಳೆ

header ads

ಬಾಟ್ಲಿಯೊಳಗೆ ಕಾಂಡೋಮ್: ಪೆಪ್ಸಿ ಸಮರ್ಥನೆ

ಬ್ರೇಕಿಂಗ್ ನ್ಯೂಸ್
ಬೊಗಳೂರು, ಏ.27- ಅತ್ಯಂತ ಭಯಂಕರ ವಿದ್ಯಮಾನವೊಂದರಲ್ಲಿ, ಪೆಪ್ಸಿ ಬಾಟಲಿಯಲ್ಲಿ ಕಾಂಡೋಮ್ ದೊರೆತಿದ್ದಕ್ಕೆ ನ್ಯಾಯಾಲಯ ಲಕ್ಷಾಂತರ ರೂ. ದಂಡ ವಿಧಿಸಿದ ಸುದ್ದಿಯನ್ನು ವಿಶ್ವಪುಟ ಸ್ಫೋಟಿಸಿದ ತಕ್ಷಣ ಅಸತ್ಯಾನ್ವೇಷಿಗೆ ಸ್ಪಷ್ಟನೆ ನೀಡಿದ ಪೇಯ ಕಂಪನಿಯ ಮಹಾ-ಮಹಾನ್ ವ್ಯವಸ್ಥಾಪಕ'ರಬ್ಬರು', ಬಾಟಲಿಯೊಳಗೆ ಕಾಂಡೋಮ್ ಹಾಕುವುದು ಮತ್ತು ಕಾಂಡೋಮ್‌ನೊಳಗೆ ಪೇಯ ತುಂಬುವ ತಮ್ಮ ಉದ್ದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶೇಷತಃ ಮಕ್ಕಳು ಮತ್ತು ಯುವಜನಾಂಗದವರು ಏಡ್ಸ್ ಮುಂತಾದ ಸೆಕ್ಸೀ ರೋಗಗಳಿಗೆ ಈಡಾಗುತ್ತಿರುವುದರ ವಿರುದ್ಧ ನಮ್ಮ ಕಂಪನಿಯು ಹೋರಾಟಕ್ಕೆ ಕೈಜೋಡಿಸಿದೆ. ಕಾಂಡೋಮ್ ಕೊಳ್ಳುವವರಿಗೆ ಪೇಯ ಉಚಿತ ಮತ್ತು ಪೇಯ ಕೊಳ್ಳುವವರಿಗೆ ಕಾಂಡೋಮ್ ಉಚಿತ ಎಂಬ ವಿನೂತನ ಧ್ಯೇಯ ನಮ್ಮದಾಗಿತ್ತು. ಇದರ ಪರಿಣಾಮ ನಾವು ಪೆಪ್ಸಿ ಪಾಟಲಿಯಲ್ಲಿ ಕಾಂಡೋಮ್ ಮತ್ತು ಕಾಂಡೋಮ್‌ನೊಳಗೆ ಪೆಪ್ಸಿ ತುಂಬಿಸಿ ವಿತರಿಸುತ್ತೇವೆ. ಇದು ಗ್ರಾಹಕಸ್ನೇಹಿ ನಿರ್ಧಾರ. ಗ್ರಾಹಕರು ಎರಡನ್ನೂ ಪ್ರತ್ಯೇಕವಾಗಿ ಒಯ್ಯುವ ಅಥವಾ ಪ್ರತ್ಯೇಕವಾಗಿ ಖರೀದಿಸುವ ಸಂಕಷ್ಟ ಎದುರಿಸಬೇಕಿಲ್ಲ. ಕಾಂಡೋಮ್ ಬಳಸದವರು ಅದನ್ನು ತಮ್ಮ ಮಕ್ಕಳಿಗೆ ಬಲೂನಿನ ರೀತಿ ಆಟವಾಡಲು ಕೊಡುಗೆ ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಬಹೂಪಯೋಗಿ ಪೇಯ: ವಾಸ್ತವವಾಗಿ ಜನಸಂಖ್ಯಾ ಸ್ಫೋಟ ತಡೆಯುವುದಕ್ಕಾಗಿಯೇ ನಮ್ಮ ಕಂಪನಿಯು ಭಾರತದಲ್ಲಿ ಪೆಪ್ಸಿ ವಿತರಿಸುತ್ತಿದೆ. ಈಗಾಗಲೇ ನಮ್ಮ ಪೆಪ್ಸಿಯಲ್ಲಿ ಕೀಟನಾಶಕವಿದೆ ಎಂಬ ವರದಿಗಳು ಬಂದಿವೆ. ಅವುಗಳನ್ನು ಆಂಧ್ರ ಪ್ರದೇಶದ ರೈತರು ತಮ್ಮ ಬೆಳೆಗಳಿಗೂ ಸಿಂಪಡಿಸಿ ಕೀಟಗಳಿಂದ ಬೆಳೆ ರಕ್ಷಿಸಿಕೊಂಡಿದ್ದಾರೆ. ಅಂತೆಯೇ ಪೆಪ್ಸಿಯಲ್ಲಿ ಸಂತಾನೋತ್ಪತ್ತಿ ಕ್ರಿಯೆ ತಡೆಯುವ ರಾಸಾಯನಿಕವೂ ಸೇರಿದೆ. ಮತ್ತು ಈ ಕೀಟನಾಶಕ ಕುಡಿದರೆ ಸಂತಾನ ನಿಯಂತ್ರಣವಾಗುತ್ತದೆ, ಹೊಟ್ಟೆಯೊಳಗಿರುವ ಕ್ರಿಮಿ ಕೀಟಗಳು ನಾಶವಾಗುತ್ತವೆ. ಇಷ್ಟೆಲ್ಲಾ ಬಹೂಪಯೋಗಿ ಪೇಯದ ವಿರುದ್ಧ ಯಾರೋ ಸಂಚು ಮಾಡುತ್ತಿದ್ದಾರೆ ಎಂದು ಕಂಪನಿ ದೂರಿದೆ.

ಪೆಪ್ಸಿ ಇದ್ದರೆ ಕಾಂಡೋಮ್ ಯಾಕೆ?: ಈ ಮಧ್ಯೆ, ಇದೇನು ದೊಡ್ಡ ವಿಷಯವೇ ಅಲ್ಲ ಎಂದು ತಳ್ಳಿಹಾಕಿರುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧದ ಹೋರಾಟಗಾರರೊಬ್ಬರು, ಜನಸಂಖ್ಯಾ ತಡೆಗೆ ಮತ್ತು ಮಾರಕ ರೋಗ ತಡೆಗೆ ಕಾಂಡೋಮನ್ನೇ ಏಕೆ ವಿತರಿಸಬೇಕು, ಪೆಪ್ಸಿ ಮಾತ್ರ ಕುಡಿಸಿದರೆ ಸಾಲದೇ? ಎಂದು "ಮಾರ್ಮಿಕ"ವಾಗಿ ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ನೋಡಿ ಅವನ ಪುಣ್ಯವ. ಸರ್ಕಾರ ಬಿಟ್ಟಿಯಾಗಿ ಕಾಂಡೊಮ್ ಕೊಡುವ ಯಂತ್ರಗಳನ್ನು ಇಟ್ಟರೆ, ಈ ಭೂಪ ಕಾಂಡೊಮ್ ಜೊತೆ ೧ಲಕ್ಷ ರೂಪಾಯಿ ಬೇರೆ ಜೋಬಿಗಿಳಿಸಿದ.

    ಪ್ರತ್ಯುತ್ತರಅಳಿಸಿ
  2. ಬೊಗಳೆ ಲೋಕದಲ್ಲಿ ಬೊಗಳೆ ಬಿಡಲು ಬಂದ ನಿಮಗೆ ಸ್ವಾಗತ.

    ಅಲ್ಲಾ ಚುಂ-ಬನವಾಸಿಗಳೆ, ನೀವು ಚುಂಬನವೇ ವಾಸಿ ಅನ್ನುವವರು. ಅಂದ್ರೆ ಜನಸಂಖ್ಯಾ ನಿಯಂತ್ರಣಕ್ಕೆ ಅಥವಾ ಸೆಕ್ಸೀ ರೋಗಗಳ ತಡೆಗೆ ಕಾಂಡೋಮ್ ಏಕೆ ಬೇಕು, ಚುಂಬನವೇ ಸಾಕು ಎನ್ನುವವರೇ ನೀವು?

    ಪ್ರತ್ಯುತ್ತರಅಳಿಸಿ
  3. ಬಹುಶಃ ಕಾಂಡೋಮ್ ನಲ್ಲಿರುವ ಕ್ರಿಮಿಕೀಟಗಳನ್ನು ನಿಯಂತ್ರಿಸಲು ಪೆಪ್ಸಿ ಬಾಟಲಿಯಲ್ಲಿ ಹಾಕಿರಬೇಕು!

    ಪ್ರತ್ಯುತ್ತರಅಳಿಸಿ
  4. ಸ್ವಾಮಿ ಅನ್ವೇಷ್ ಅವರೇ, ನಿಮ್ಮ ಬ್ಲಾಗಿಗೆ ಪ್ರಪ್ರಥಮ ಚುಂಬನ ಮಾಡಿದ ಚುಂ-ಬನವಾಸಿ ಪವ್ವಿ ಅವರಿಗೆ ಮಾರುಹೋಗಿ ಚುಂಬನವೇ ವಾಸಿ ಎಂದು ಹೇಳುತ್ತಿದ್ದೀರೇನು?

    ಪ್ರತ್ಯುತ್ತರಅಳಿಸಿ
  5. ಅಲ್ಲಲ್ಲ ಗಿರೀಶ್, ಪೆಪ್ಸಿಯಲ್ಲಿ ಬೆಳೆಯುತ್ತಿರುವ ಕ್ರಿಮಿ ಕೀಟಗಳನ್ನು ಹತ್ತಿಕ್ಕಲು ಕಾಂಡೋಮ್ ಹಾಕಿದ್ದಿರಬಹುದು. ಅಂದರೆ ಕ್ರಿಮಿ ಕೀಟಗಳನ್ನು ರಬ್ಬರ್ ನೊಳಗೆ ಸಂಗ್ರಹಿಸಲು...

    ಪ್ರತ್ಯುತ್ತರಅಳಿಸಿ
  6. ಅಹುದಹುದು ಸಾರಥಿ,
    "ಮಿನಿ" ಕವಿ ಡುಂಡಿರಾಜ್ ಅವರೇ ತಮ್ಮ ಕವನದಲ್ಲಿ ಇಂಥ ಚುಂಬನಕ್ಕೆ ಮಾರುಹೋಗಿ ಚುಂಬನವನ್ನೇ ಹನಿಸಿ ನೆನೆವುದೆನ್ನ ಮನಂ ಚುಂ-ಬನವಾಸಿ ದೇಶಮಂ ಎಂದಿದ್ದಾರಲ್ಲ....!

    ಪ್ರತ್ಯುತ್ತರಅಳಿಸಿ
  7. ಸಂಪಾದಕರೇ,
    ವ್ಯವಸ್ಥಾಪಕ 'ರಬ್ಬರ' ವಾದದ ಜಾಡು ಹಿಡಿದ ಪ್ರಕಟಿಸಿದ ಸುದ್ದಿ ಸ್ಫೋಟ ಗಮ್ಮತ್ತಾಗಿತ್ತು. ಮಾಲಕರ ನಿಲುವನ್ನೂ ಸಮರ್ಥಿಸುವ ಮೂಲಕ 'ಬೊ-ರ' ಕೇವಲ ಸಾರ್ವಜನಿಕರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನೂ ಸಾಬೀತುಪಡಿಸಿದ್ದೀರಿ!

    ಪ್ರತ್ಯುತ್ತರಅಳಿಸಿ
  8. ಬೊಗಳೆ ಪಂಡಿತರೆ, planetkannaDa ಒಮ್ಮೆ ನೋಡಿ. fonts ವ್ಯತ್ಯಾಸವಾದಂತಿದೆ.

    ಪ್ರತ್ಯುತ್ತರಅಳಿಸಿ
  9. ಹೌದು ವಿಶ್ವಪುಟದೊಡೆಯರೆ,
    ಬರೇ ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸುತ್ತಾ ಕೂತರೆ ಕಂಪನಿ ಮಾಲೀಕರನ್ನು ಕೇಳುವವರಾರು? ಅಸತ್ಯವೇ ನಮ್ಮ ತಾಯಿತಂದೆ, ಅಸತ್ಯವೇ ನಮ್ಮ ಬಂಧುಬಳಗ ಅಂತೆಲ್ಲಾ ನಮ್ಮನ್ನು ನಂಬಿದವರು ಅವರು. ನಂಬಿದವರಿಗೆ ಇಂಬು ನೀಡಬೇಕಾದದ್ದು ನಮ್ಮ ಕರ್ಮಗಳಲ್ಲೊಂದು ಅಲ್ಲವೇ?

    ಪ್ರತ್ಯುತ್ತರಅಳಿಸಿ
  10. ಓಹ್ ಶ್ರೀ ತ್ರೀ ಅವರೆ, ನೀವು ಆ ಗ್ರಹಕ್ಕೆ ಹೋಗಲಾರಂಭಿಸಿದ್ದು ಯಾವಾಗ?
    ಅದಿರಲಿ, ಈ ಕನ್ನಡಗ್ರಹದಲ್ಲಿ ಕನ್ನಡದ ಬ್ಲಾಗ್ ನಕ್ಷತ್ರಗಳೆಲ್ಲಾ ಚದುರಿ, Unidentified Foreign Object (UFO) ಗಳಾಗಿಬಿಟ್ಟಿವೆ.ಆ ಪ್ಲಾನೆಟ್‌ನಲ್ಲಿ ಸಣ್ಣ ಸಮಸ್ಯೆ ಇರಬೇಕು. ಸರಿಯಾಗುತ್ತದೆ ಎಂಬ ಭರವಸೆ ಇದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D