(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.11- ಕಿಸ್ ಕೊಟ್ಟವರಿಗೆ ಜೈಲು ಶಿಕ್ಷೆ ಎಂಬ ವರದಿಯು ಭಾರತದಾದ್ಯಂತ 100 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಈ ತಾಪಮಾನ ಏರಿದ್ದು ಯುವಜನತೆಯ ನೆತ್ತಿಯಲ್ಲೋ ಅಥವಾ ಅವರ ಹೃದಯದೊಳಗೋ ಎಂಬ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಇದರಿಂದ ಆತಂಕ ಮತ್ತು ಭಯ ಜತೆಗೆ ಸಿಟ್ಟು ಕೂಡ ಈ ಉಷ್ಣತೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇಂಡೋನೇಷ್ಯಾದಲ್ಲಿ ಪ್ರಸ್ತಾಪಿಸಿರುವ ಈ ಹೊಸ ಕಾನೂನಿನ ಪ್ರಕಾರ, ಬಹಿರಂಗವಾಗಿ ಕಿಸ್ ಕೊಡುವುದು ಇಸ್ಲಾಂ ವಿರೋಧಿಯಾಗಿದ್ದು, ಅದಿನ್ನು ಕಾನೂನು ಬಾಹಿರವಾಗಲಿದೆ. ಅದಕ್ಕೂ ಸಮಯದ ಮಿತಿ ವಿಧಿಸಲಾಗಿದ್ದು, ಐದು ನಿಮಿಷಕ್ಕಿಂತ ಹೆಚ್ಚು ದಂಪತಿಗಳು ತುಟಿಗಳನ್ನು ಬಿಸಿಬಿಸಿಯಾಗಿ ಬೆಸೆದುಕೊಂಡಿರುವುದು ಅಪರಾಧವಂತೆ.
ಈ ಕಾನೂನಿನ ಪ್ರಸ್ತಾಪದ ಹಿನ್ನೆಲೆಯಲ್ಲಿ ದಂಪತಿಗಳು ಮಾತ್ರವಲ್ಲದೆ ಅಧಿಕೃತವಾಗಿ ದಂ ಇಲ್ಲದ ಪತಿಗಳು ಕೂಡ ಕಳವಳಗೊಂಡಿದ್ದಾರೆ. ತಮ್ಮದೇ ಹೆಂಡತಿಯರನ್ನು ಮುದ್ದಿಸಿದರೆ ಶಿಕ್ಷೆ ವಿಧಿಸಬಾರದು ಎಂದು ಗಂಡಭೇರುಂಡ ಸಂಘವು ಕೋರ್ಟಿಗೆ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ಪತ್ನಿ ಪೀಡಿತ ಸಂಘದವರು ತಮ್ಮದೇ ವಾದವನ್ನು ಮುಂದಿರಿಸಿಕೊಂಡು, ಈ ದಂಡ ಸಂಹಿತೆಯು ಗಂಡ-ಹೆಂಡತಿಯರ ಚುಂಬನಕ್ಕೆ ಮಾತ್ರವೇ ಸೀಮಿತವಾಗಿರಬೇಕು, ಗಂಡನೂ ಅಲ್ಲದ, ಹೆಂಡತಿಯೂ ಆಗಿರದವರು ಪರಸ್ಪರ ಮುದ್ದಿಸಿಕೊಂಡರೆ ಅದನ್ನು ಅಪರಾಧ ಎಂದು ಪರಿಗಣಿಸಬಾರದಾಗಿ ಮನವಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಹೊಸ ಕಾನೂನು ಪ್ರಸ್ತಾಪದಿಂದಾಗಿ ಭಾರತೀಯ ಚಿತ್ರರಂಗವಂತೂ ಆಕಾಶವೇ ಕಳಚಿ ಬಿದ್ದಂತೆ ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟಿದೆ. ಕಿಸ್ ನಿಷೇಧವು ಭಾರತಕ್ಕೂ ಬಂದು, ಇಲ್ಲಿನ ಮನರಂಜನಾ ಕ್ಷೇತ್ರಕ್ಕೂ ಲಗಾವು ಆದಲ್ಲಿ, ತಮ್ಮ ಚಿತ್ರಗಳೆಲ್ಲಾ ನೆಲಕಚ್ಚಿಯೇಬಿಡುತ್ತವೆ ಎಂಬುದು ಅವರ ಅಂಬೋಣ.
ಆದರೆ ಈ ಸುದ್ದಿಯಿಂದ ಕರೀನಾ ಕಪೂರ್, ಶಹೀದ್ ಕಪೂರ್ ತೀರಾ ಕಳವಳಗೊಂಡು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
0 ಕಾಮೆಂಟ್‌ಗಳು
ಏನಾದ್ರೂ ಹೇಳ್ರಪಾ :-D